ಕೋವಿಡ್ ಬಿಕ್ಕಟ್ಟಿನ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಚಿತ್ರಮಂದಿರ ನೇಪಥ್ಯಕ್ಕೆ ಸರಿಯುತ್ತಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಬಾಗಿಲು ಮುಚ್ಚಿರುವ ಚಿತ್ರಮಂದಿರಗಳ ಸಂಖ್ಯೆ ಮೂರಕ್ಕೇರಿದೆ.
ಡಾ.ರಾಜ್‌ಕುಮಾರ್ ಕುಟುಂಬಕ್ಕೆ ಆಪ್ತವಾದ ಚಿತ್ರಮಂದಿರವೆಂದೇ ಖ್ಯಾತವಾಗಿದ್ದ, ಮೈಸೂರು ಅತಿದೊಡ್ಡ ಚಿತ್ರಮಂದಿರವೆಂದೂ ಕರೆಸಿಕೊಂಡಿರುವ ಸರಸ್ವತಿ ಚಿತ್ರಮಂದಿರವನ್ನು ಮುಚ್ಚುವುದಾಗಿ ಚಿತ್ರಮಂದಿರದ ಮಾಲೀಕ ನಾರಾಯಣ್ ಹೇಳಿದ್ದಾರೆ.
ಒಂದೂವರೆ ವರ್ಷಗಳಲ್ಲಿ ನೇಪಥ್ಯಕ್ಕೆ ಸರಿದ ಚಿತ್ರಮಂದಿರಗಳಲ್ಲಿ ಸರಸ್ವತಿ ಚಿತ್ರಮಂದಿರ ಮೂರನೇಯದಾಗಿದ್ದು, ಈ ಮೊದಲು ಶಾಂತಲಾ ಹಾಗೂ ಲಕ್ಷ್ಮಿ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ.
ಸ್ಥಳೀಯ ಸುದ್ದಿ ವಾಹಿನಿಗಳೊಂದಿಗೆ ಮಾತನಾಡಿರುವ ನಾರಾಯಣ್, “ಕೊರೊನಾ ಆರಂಭವಾದಾಗಿನಿಂದ ಚಿತ್ರಮಂದಿರದಿಂದ ಯಾವುದೇ ಆದಾಯವಿಲ್ಲ. ಕಾರ್ಪೋರೇಷನ್ ತೆರಿಗೆ ಹೆಚ್ಚಾಗಿದೆ. ಸೂಪರ್ ಕಮರ್ಷಿಯಲ್ ಎಂದು ತೆರಿಗೆ ವಿಧಿಸುತ್ತಿದ್ದಾರೆ. ವರ್ಷಕ್ಕೆ ನಾಲ್ಕೂವರೆ ಲಕ್ಷ ರೂ. ತೆರಿಗೆ ಕಟ್ಟಬೇಕು ಎಂದರೆ ಹುಡುಗಾಟವೇ” ಎಂದು ಕೇಳಿದ್ದಾರೆ.
“ನಾವು ಪಾಲುದಾರರೇ ಅಷ್ಟೊಂದು ಹಣವನ್ನು ತೆಗೆದುಕೊಂಡು ಹೋಗುವುದಿಲ್ಲ. ಜಿಎಸ್‌ಟಿ ಟ್ಯಾಕ್ಸ್ ಕೋಟಿಗಟ್ಟಲೆ ಕಟ್ಟಿದ್ದೇವೆ. ಮನರಂಜನಾ ಟ್ಯಾಕ್ಸ್ ಇದ್ದಾಗ ಕೋಟಿಗಟ್ಟಲೆ ಕಟ್ಟಿದ್ದೇವೆ. ಅಷ್ಟು ದೊಡ್ಡ ಸಂಸ್ಥೆಯನ್ನು ಮುಚ್ಚುವುದು ನಮಗೂ ಬೇಸರ ತಂದಿದೆ” ಎಂದಿದ್ದಾರೆ.
ಚಿತ್ರಮಂದಿರದ ಪಾಲುದಾರರಾಗಿರುವ ಮತ್ತೊಬ್ಬರು ನಾರಾಯಣ್ ಅವರ ನಿರ್ಧಾರವನ್ನು ವಿರೋಧಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಸಾಲು ಸಾಲು ಚಿತ್ರಮಂದಿರಗಳು ಮುಚ್ಚುತ್ತಿರುವುದನ್ನು ನೋಡಿದರೆ, ಚಿತ್ರಮಂದಿರಗಳನ್ನೇ ನಂಬಿಕೊಂಡಿದ್ದ ಜನರ ಪಾಡು ಏನಾಗಬೇಕು ಎಂಬುದನ್ನು ಸರ್ಕಾರ ಯೋಚಿಸಬೇಕು ಎನ್ನುತ್ತಾರೆ ಚಿತ್ರಮಂದಿರಗಳ ಮಾಲೀಕರು.
‘ನಾನು ಗೌರಿ’ ಮೀಡಿಯಾದೊಂದಿಗೆ ಮಾತನಾಡಿದ ನಾರಾಯಣ್, “ಒಂದೂವರೆ ವರ್ಷ ಯಾವುದೇ ಆದಾಯವಿಲ್ಲದಿದ್ದರೂ ಇಲ್ಲಿನ ಸಿಬ್ಬಂದಿಗೆ ಸಂಬಳ ನೀಡಿದ್ದೇವೆ. ನಾವು ಎಷ್ಟೇ ಬೇಡಿಕೆ ಇಟ್ಟರೂ ಸರ್ಕಾರ ಸ್ಪಂದಿಸುತ್ತಿಲ್ಲ” ಎಂದರು.
ಇದನ್ನೂ ಓದಿ: ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ


