ಭಾರತದ ಅತಿದೊಡ್ಡ ಐಟಿ ಸೇವಾ ಪೂರೈಕೆದಾರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಇದು ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇಕಡ 2ರಷ್ಟು. ಈ ಸಾಮೂಹಿಕ ವಜಾ ಪ್ರಾಥಮಿಕವಾಗಿ ಕಂಪನಿಯ ಮಧ್ಯಮ ಮತ್ತು ಹಿರಿಯ ಶ್ರೇಣಿಯಲ್ಲಿ ಕೆಲಸ ಮಾಡುತ್ತಿರುವವರ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಗಳು ಹೇಳಿವೆ.
ಮನಿ ಕಂಟ್ರೋಲ್ ಸುದ್ದಿ ಸಂಸ್ಥೆಯ ಜೊತೆಗಿನ ಸಂದರ್ಶನದಲ್ಲಿ ಟಿಸಿಎಸ್ ಸಿಇಒ ಕೃತಿವಾಸನ್ ಅವರು ಉದ್ಯೋಗ ಕಡಿತದ ಬಗ್ಗೆ ಘೋಷಣೆ ಮಾಡಿದ್ದಾರೆ. ಪ್ರಸ್ತಕ ಹಣಕಾಸು ವರ್ಷದಲ್ಲಿ (ಏಪ್ರಿಲ್ 2025 ರಿಂದ ಮಾರ್ಚ್ 2026) ಹಂತ ಹಂತವಾಗಿ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಕಂಪನಿಯು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸುತ್ತಿದೆ. ಹೊಸ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತಿದೆ ಮತ್ತು ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಆದ್ದರಿಂದ ಸಿಬ್ಬಂದಿಗೆ ಮರು ತರಬೇತಿ ಮತ್ತು ಮರು ನಿಯೋಜನೆ ಮಾಡುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿ ಸುಮಾರು 12,200 ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕೃತಿವಾಸನ್ ಹೇಳಿದ್ದಾರೆ.
“ಗ್ರಾಹಕ ಸೇವಾ ವಿತರಣೆಯ ಮೇಲೆ ಯಾವುದೇ ಪರಿಣಾಮ ಬೀರದಂತೆ ಈ ಪರಿವರ್ತನೆಯನ್ನು ಸರಿಯಾದ ಕಾಳಜಿಯೊಂದಿಗೆ ಯೋಜಿಸಲಾಗುತ್ತಿದೆ” ಎಂದಿದ್ದಾರೆ.
ತಂತ್ರಜ್ಞಾನ ಮತ್ತು ವ್ಯವಹಾರ ಕಾರ್ಯಾಚರಣೆಗಳಲ್ಲಿನ ಬದಲಾವಣೆಗಳು ಆಂತರಿಕ ಬದಲಾವಣೆಗಳಿಗೆ ಕಾರಣವಾಗುತ್ತಿವೆ ಎಂದು ಕೃತಿವಾಸನ್ ಒಪ್ಪಿಕೊಂಡಿದ್ದಾರೆ.
“ನಾವು ಹೊಸ ತಂತ್ರಜ್ಞಾನಗಳನ್ನು, ವಿಶೇಷವಾಗಿ ಎಐ ಕಾರ್ಯಾಚರಣಾ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಇದರಿಂದ ಕೆಲಸ ಮಾಡುವ ವಿಧಾನಗಳು ಬದಲಾಗುತ್ತಿವೆ. ನಾವು ಭವಿಷ್ಯಕ್ಕೆ ಸಿದ್ಧರಾಗಿರಬೇಕಿದೆ ಮತ್ತು ಚುರುಕಾಗಬೇಕಿದೆ. ಆದ್ದರಿಂದ ಎಐ ಅಳವಡಿಸಿಕೊಳ್ಳುತ್ತಿದ್ದೇವೆ. ಭವಿಷ್ಯದಲ್ಲಿ ನಮಗೆ ಅಗತ್ಯವಿರುವ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ” ಎಂದಿದ್ದಾರೆ.
ವರದಿಗಳ ಪ್ರಕಾರ, ಜೂನ್ ತ್ರೈಮಾಸಿಕದಲ್ಲಿ ಕಂಪನಿಯು 5 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು.
ಅಕ್ರಮ ಸಾಮೂಹಿಕ ವಜಾ ನಿಲ್ಲಿಸಿ: ಕೆಐಟಿಯು
ಟಿಸಿಎಸ್ ಉದ್ಯೋಗ ಕಡಿತವನ್ನು ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಖಂಡಿಸಿದೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಕೆಐಟಿಯು “ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)ನಲ್ಲಿ ಬೃಹತ್ ಪ್ರಮಾಣದ ಉದ್ಯೋಗ ಕಡಿತವಾಗಿದೆ. ಸಾವಿರಾರು ಉದ್ಯೋಗಿಗಳು ಕಂಪನಿ ಬಲವಂತವಾಗಿ ರಾಜೀನಾಮೆ ಕೊಡಿಸುತ್ತಿದೆ. ಟಿಸಿಎಸ್ ಆಡಳಿತ ಮಂಡಳಿಯ ಈ ಕಾನೂನುಬಾಹಿರ ಕ್ರಮವನ್ನು ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಬಲವಾಗಿ ಖಂಡಿಸುತ್ತದೆ ಎಂದಿದೆ.
ಕೈಗಾರಿಕಾ ತಕರಾರು ಕಾಯ್ದೆಯ ಪ್ರಕಾರ, ಉದ್ಯೋಗದಾತ ಉದ್ಯೋಗಿಯನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸುವುದು ಅಪರಾಧವಾಗಿದೆ. ರಾಜೀನಾಮೆಗೆ ಸಹಿ ಹಾಕಲು ನಿರಾಕರಿಸುವ ಎಲ್ಲಾ ಕಾನೂನುಬದ್ಧ ಹಕ್ಕನ್ನು ಉದ್ಯೋಗಿ ಹೊಂದಿರುತ್ತಾನೆ ಎಂದು ಹೇಳಿದೆ.
ಟಿಸಿಎಸ್ ಉದ್ಯೋಗ ಕಡಿತದಿಂದ ಬಾಧಿತ ಉದ್ಯೋಗಿಗಳಿಗೆ ಕೆಐಟಿಯು ಎಲ್ಲಾ ಬೆಂಬಲವನ್ನು ನೀಡುತ್ತದೆ. ಟಿಸಿಎಸ್ ಆಡಳಿತ ಮಂಡಳಿಯು ನೆಲದ ಕಾನೂನನ್ನು ಗೌರವಿಸಬೇಕು ಮತ್ತು ವಜಾಗೊಳಿಸಲಾದ ಎಲ್ಲಾ ಉದ್ಯೋಗಿಗಳನ್ನು ತಕ್ಷಣ ಜಾರಿಗೆ ಬರುವಂತೆ ಮರು ನೇಮಿಸಬೇಕು. ಬಲವಂತದ ರಾಜೀನಾಮೆ ನೀಡುವ ಅಮಾನವೀಯ ಪದ್ಧತಿಯ ವಿರುದ್ಧ ಮತ್ತು ಟಿಸಿಎಸ್‌ನ ಉದ್ಯೋಗಿಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸುವಂತೆ ಕೆಐಟಿಯು ಎಲ್ಲಾ ಐಟಿ/ಐಟಿಇಎಸ್ ಉದ್ಯೋಗಿಗಳಿಗೆ ಕರೆ ನೀಡುತ್ತದೆ ಎಂದು ಕೆಐಟಿಯು ಹೇಳಿದೆ. ಸಹಾಯವಾಣಿ ಸಂಖ್ಯೆಯನ್ನೂ ನೀಡಿದೆ.
ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು 15 ಅಂಶಗಳ ಮಾರ್ಗಸೂಚಿ ರೂಪಿಸಿದ ಸುಪ್ರೀಂ ಕೋರ್ಟ್


