ತಮಿಳುನಾಡು ಸರ್ಕಾರ ಮತ್ತು ರಾಜಭವನದ ನಡುವಿನ ತಿಕ್ಕಾಟ ತೀವ್ರವಾಗಿರುವಾಗಲೇ, ಆಡಳಿತ ಪಕ್ಷವನ್ನು ಕೆರಳಿಸುವುದಕ್ಕೆ ರಾಜ್ಯಪಾಲರಾದ ಆರ್‌ಎನ್ ರವಿ ಹೇಳಿಕೆ ನೀಡಿದ್ದಾರೆ. ನೇರವಾಗಿ ಅವರು ರಾಜ್ಯದ ಶಿಕ್ಷಣ ವ್ಯವಸ್ಥೆಯ ಮೇಲೆ ಹೊಸ ವಾಗ್ದಾಳಿ ನಡೆಸಿದ್ದು, “ಕಳಪೆ ಗುಣಮಟ್ಟದ ಶಿಕ್ಷಣವು ಮಕ್ಕಳನ್ನು ನಿಷ್ಪ್ರಯೋಜಕರನ್ನಾಗಿಸುತ್ತಿದೆ” ಎಂದು ಆರೋಪಿಸಿದ್ದಾರೆ.
ಶೇ. 75 ರಷ್ಟು ವಿದ್ಯಾರ್ಥಿಗಳು ಎರಡು ಅಂಕಿ ಸಂಖ್ಯೆಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮತ್ತು ಕಲಿಕೆ ದಯನೀಯ ಸ್ಥಿತಿಯಲ್ಲಿದೆ ಎಂದು ರಾಜ್ಯಪಾಲರು ತೀಕ್ಷಣ ವಾಗ್ದಾಳಿ ನಡೆಸಿದ್ದಾರೆ. “ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ವಸ್ತುಗಳ ಹಂಚುವ ದಂಧೆ ನಡೆಯುತ್ತಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
“ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದಲ್ಲಿ ತೀವ್ರ ಕುಸಿತವಾಗಿದೆ. ಇದು ನಮ್ಮ ದೇಶ ಮತ್ತು ರಾಜ್ಯಕ್ಕೆ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ. 9ನೇ ತರಗತಿಯ ವಿದ್ಯಾರ್ಥಿಯು ಎರಡು-ಅಂಕಿಯ ಸಂಖ್ಯೆಯನ್ನು ಗುರುತಿಸಲು ಸಾಧ್ಯವಿಲ್ಲ. ಅವರಲ್ಲಿ ಶೇಕಡಾ 75 ರಷ್ಟು ಜನರು ಗುರುತಿಸುವುದಿಲ್ಲ. ಇದಲ್ಲದೆ, ಅವರಲ್ಲಿ ಶೇಕಡಾ 40 ರಷ್ಟು ಜನರು 2 ನೇ ತರಗತಿಯ ಪಠ್ಯಪುಸ್ತಕವನ್ನು ಓದಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ರಾಜಭವನದಲ್ಲಿ ಶಿಕ್ಷಕರ ದಿನಾಚರಣೆಗೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲ ರವಿ, ತಮಿಳುನಾಡಿನಲ್ಲಿ ಶಿಕ್ಷಣದ ಅಡಿಪಾಯ ದುರ್ಬಲಗೊಂಡಿದೆ ಮತ್ತು ಬೋಧನಾ ಗುಣಮಟ್ಟವು “ರಾಷ್ಟ್ರೀಯ ಸರಾಸರಿಗಿಂತ ಕೆಳಮಟ್ಟಕ್ಕೆ ಕುಸಿದಿದೆ” ಎಂದು ಪ್ರತಿಪಾದಿಸಿದರು.
“ಯಾವುದೇ ನಿರ್ಬಂಧಗಳಿಲ್ಲದೆ ಅವರಿಗೆ ಪದವಿಗಳು ಮತ್ತು ಪ್ರಮಾಣಪತ್ರಗಳನ್ನು ನೀಡುವ ಮೂಲಕ ನಾವು ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದ್ದೇವೆ, ಅವು ಉಪಯುಕ್ತವಲ್ಲ” ಎಂದು ರಾಜ್ಯಪಾಲರು ಹೇಳಿದರು.
ರಾಜ್ಯಪಾಲ ರವಿ ಅವರು ಶಾಲಾ-ಕಾಲೇಜುಗಳಲ್ಲಿ ಸಿಂಥೆಟಿಕ್ ಮತ್ತು ರಾಸಾಯನಿಕ ಔಷಧಗಳ ಲಭ್ಯತೆಯ ಬಗ್ಗೆ ಪ್ರಸ್ತಾಪಿಸಿ, ಇದು ಅತ್ಯಂತ ಗಂಭೀರ ಸಮಸ್ಯೆ ಎಂದು ಕರೆದರು.
“ನಾವು ನಿರಾಕರಣೆಯಲ್ಲಿ ಉಳಿಯಲು ಸಾಧ್ಯವಿಲ್ಲ. ಶಾಲೆಗಳಲ್ಲಿ ಬೋಧನೆ, ಕಲಿಕೆ ಮತ್ತು ಮಾದಕ ದ್ರವ್ಯ ಸೇವನೆಯಲ್ಲಿ ಸಮಸ್ಯೆಗಳಿವೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ನಾವು ಈ ಸಮಸ್ಯೆಗಳನ್ನು ಎದುರಿಸಬೇಕಾಗಿದೆ” ಎಂದು ಅವರು ಹೇಳಿದರು.
ರಾಜ್ಯ ಮಂಡಳಿಯ ಪಠ್ಯಕ್ರಮವನ್ನು ಟೀಕಿಸಿದ್ದಕ್ಕಾಗಿ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ತಿರುಗೇಟು ನೀಡಿದ ದಿನವೇ ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ರಾಜ್ಯಪಾಲ ರವಿ ಅವರ ಟೀಕೆಗಳು ಬಂದವು.
ಸಚಿವ ಉದಯನಿಧಿ ತಿರುಗೇಟು
“ತಮಿಳುನಾಡು ರಾಜ್ಯದ ಪಠ್ಯಕ್ರಮವು ವಿದ್ಯಾರ್ಥಿಗಳನ್ನು ವಿಮರ್ಶಾತ್ಮಕವಾಗಿ ಯೋಚಿಸಲು ಮತ್ತು ಪ್ರಶ್ನೆಗಳನ್ನು ಕೇಳಲು ಪ್ರೋತ್ಸಾಹಿಸುತ್ತದೆ. ರಾಜ್ಯ ಮಂಡಳಿಯ ಅಡಿಯಲ್ಲಿ ಶಿಕ್ಷಣ ಪಡೆದ ಅನೇಕರು ಇಸ್ರೋ, ಐಟಿ ವಲಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಹ ಮಹತ್ತರವಾದ ಸಾಧನೆಗಳನ್ನು ಮಾಡಿದ್ದಾರೆ” ಎಂದು ಸಚಿವ ಉದಯನಿಧಿ ಸ್ಟಾಲಿನ್ ತಿರುಗೇಟು ನೀಡಿದ್ದಾರೆ.
“ನಮ್ಮ ರಾಜ್ಯ ಮಂಡಳಿಯ ಪಠ್ಯಕ್ರಮವನ್ನು ಯಾರಾದರೂ ಟೀಕಿಸಿದರೆ, ನಾವು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈಗಲೂ ಯಾರಾದರೂ ಮಾಡಿದರೆ, ಅವರು ನಮ್ಮ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅವಮಾನಿಸುತ್ತಿದ್ದಾರೆ ಎಂದರ್ಥ. ನಮ್ಮ ಮುಖ್ಯಮಂತ್ರಿ ಮತ್ತು ದ್ರಾವಿಡ ಮಾದರಿ ಸರ್ಕಾರ ಇದಕ್ಕೆ ಅವಕಾಶ ನೀಡುವುದಿಲ್ಲ” ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಇದನ್ನೂ ಓದಿ; ರೈಲ್ವೆ ಹುದ್ದೆಗೆ ರಾಜೀನಾಮೆ ನೀಡಿದ ವಿನೇಶಾ; ಬಜರಂಗ್ ಪೂನಿಯಾ ಜತೆಗೆ ಇಂದು ಕಾಂಗ್ರೆಸ್ ಸೇರ್ಪಡೆ


