ನೋಯ್ಡಾದ ಗಾಜಿಯಾಬಾದ್‌ನಲ್ಲಿ ರಸ್ತೆ ಸಂಚಾರ ಉಲ್ಲಂಘನೆಯ ವಿಚಾರಕ್ಕೆ ಸಂಚಾರ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ನಂತರ 35 ವರ್ಷದ ಸಾಫ್ಟ್ ವೇರ್ ಉದ್ಯೋಗಿಯಾದ ತನ್ನ ಮಗ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ನಗರದ ನಿವಾಸಿಯೊಬ್ಬರು ಆರೋಪಿಸಿದ್ದಾರೆ.
ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ವಾಗ್ವಾದ ನಡೆಸಿದ ಸಂಚಾರ ಪೊಲೀಸ್ ಸಿಬ್ಬಂದಿ ಕೂಡ ಅದೇ ಜಿಲ್ಲೆಯವರು ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ.
“ಈ ಕುರಿತು ವಿಚಾರಣೆ ನಡೆಸುತ್ತಿದ್ದೇವೆ. ಆ ವ್ಯಕ್ತಿಯು ಮಧುಮೇಹ ಮತ್ತು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಬೆಳಕಿಗೆ ಬಂದಿದೆ. ಸಂಜೆ 6 ಗಂಟೆ ಸುಮಾರಿಗೆ ಗಾಜಿಯಾಬಾದ್ ಜಿಲ್ಲೆಯ ಸಿಐಎಸ್ಎಫ್ ಕಟ್ ಬಳಿ ಘಟನೆ ಸಂಭವಿಸಿದೆ. ಮಾಹಿತಿಯನ್ನು ಗಾಜಿಯಾಬಾದ್ ಪೊಲೀಸರಿಗೆ ತಲುಪಿಸಲಾಗಿದೆ” ಎಂದು ಗೌತಮ್ ಬುದ್ಧ ನಗರ ಎಸ್‌ಎಸ್‌ಪಿ ವೈಭವ್ ಕೃಷ್ಣ ಹೇಳಿದ್ದಾರೆ.
ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ತನ್ನ ವಯಸ್ಸಾದ ಹೆತ್ತವರೊಂದಿಗೆ ತನ್ನ ಕಾರಿನಲ್ಲಿದ್ದಾಗ ಸಿಐಎಸ್ಎಫ್ ಕಟ್ ಬಳಿ ತಪಾಸಣೆ ನಡೆಸಲು ಟ್ರಾಫಿಕ್ ಪೊಲೀಸರು ತಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವ್ಯಕ್ತಿಯ 65 ವರ್ಷದ ತಂದೆ ‘ಕಟ್ಟುನಿಟ್ಟಾದ ಹೊಸ ಮೋಟಾರು ವಾಹನ ಕಾಯ್ದೆ’ ಅಡಿಯಲ್ಲಿ ಪರಿಶೀಲಿಸುವ ಹೆಸರಿನಲ್ಲಿ ‘ಸಂಚಾರ ಪೊಲೀಸರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ. “ಯಾವುದಕ್ಕೂ ಒಂದು ರೀತಿ-ನೀತಿ ಇರಬೇಕು. ಸಂಚಾರ ನಿಯಮಗಳನ್ನು ಬದಲಾಯಿಸಲಾಗಿದೆ ಸರಿ. ಆದರೆ ಪೊಲೀಸರು ಸಭ್ಯರಾಗಿ ತಪಾಸಣೆ ನಡೆಸಬೇಕು. ಅದು ಬಿಟ್ಟು ಅಮಾನವೀಯವಾಗಿ ವರ್ತಿಸಬಾರದು. ನಾವು ಯಾವುದೇ ತಪ್ಪು ಮಾಡಿಲ್ಲ. ಆದರೂ ಕಾರಿನೊಳಗೆ ಇಬ್ಬರು ವೃದ್ಧರು ಕುಳಿತಿದ್ದರೂ ಸಹ ಪೊಲೀಸರು ಲಾಠಿಗಳಿಂದ ಕಾರಿಗೆ ಹೊಡೆದು ಭಯ ಹುಟ್ಟಿಸಿದರು. ಇದನ್ನು ಪ್ರಶ್ನಿಸಿದ್ದಕ್ಕೆ ಮತ್ತಷ್ಟು ಜೋರಾಗಿ ಬೈಯ್ದರು … ಇದು ಪರೀಕ್ಷಿಸುವ ವಿಧಾನವಲ್ಲ. ಈ ರೀತಿ ಮಾಡಲು ಅನುಮತಿಸುವ ಯಾವುದೇ ನಿಯಮವಿದೆ ಎಂದು ನಾನು ಭಾವಿಸುವುದಿಲ್ಲ” ಎಂದು ಮೃತ ವ್ಯಕ್ತಿಯ ತಂದೆ ಹೇಳಿದ್ದಾರೆ.
ಸೆಪ್ಟಂಬರ್ ನಿಂದ ಜಾರಿಗೆ ಬಂದಿರುವ ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆಗೆ ದೇಶದೆಲ್ಲೆಡೆ ತೀವ್ರ ವಿರೋಧ ಬಂದಿದೆ. ಈಗಾಗಲೇ ದಿನವೊಂದಕ್ಕೆ ಲಕ್ಷಾಂತರ ರೂ ದಂಡ ವಸೂಲಿಯಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಇದನ್ನು ಹಿಂಪಡೆಯಬೇಕು, ಇಲ್ಲದಿದ್ದಲ್ಲಿ ತೈಲ ಸರಬರಾಜು ನಿಲ್ಲಿಸಿ ಪ್ರತಿಭಟಿಸಬೇಕಾಗುತ್ತದೆ ಎಂದು ಲಾರಿ ಮಾಲೀಕರ ಸಂಘ ಎಚ್ಚರಿಕೆ ಸಹ ನೀಡಿದ್ದಾರೆ.


