ಮೊದಲೇ ಹಳ್ಳ ಹಿಡಿದಿದ್ದ ದೇಶದ ಆರ್ಥಿಕತೆಯು ಕೊರೊನಾ ಮುನ್ನೆಚ್ಚರಿಕೆಯ ಕಾರಣಕ್ಕಾಗಿ ಘೋಷಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಪಾತಾಳ ತಲುಪಿದೆ. ಬಡವರು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದಾರೆ. ಈ ನಡುವೆ ಸರ್ಕಾರಕ್ಕಾದ ನಷ್ಟ ತುಂಬಿಕೊಳ್ಳಲು ತೆಲಂಗಾಣ ಸರ್ಕಾರವು ತಮ್ಮ ನೌಕರರ ಸಂಬಳಕ್ಕೆ ಕತ್ತರಿ ಹಾಕುವ ಕೆಲಸಕ್ಕೆ ಮುಂದಾಗಿದೆ.
ಲಾಕ್‌ಡೌನ್‌ನಿಂದಾಗಿ ಒಂದು ವಾರದಲ್ಲಿ 12 ಸಾವಿರ ಕೋಟಿ ನಷ್ಟವಾಗಿದೆ ಎಂದು ಲೆಕ್ಕ ಹಾಕಿರುವ ತೆಲಂಗಾಣ ಸರ್ಕಾರವೂ ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ಶಾಸಕರಿಂದ ಆರಂಭವಾಗಿ ಗುತ್ತಿಗೆ ನೌಕರರ ಸಂಬಳದಲ್ಲಿ ಕಡಿತ ಮಾಡಲು ನಿರ್ಧರಿಸಿದೆ.
ಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಸಂಬಳದ ಶೇ.75 ಹಣ ಕಳೆದುಕೊಂಡರೆ, ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳು ಶೇ.60, ಸರ್ಕಾರಿ ನೌಕರರು ಶೇ.50 ಮತ್ತು ಡಿ ದರ್ಜೆ ಮತ್ತು ಗುತ್ತಿಗೆ ನೌಕರರ ಶೇ. 10 ರಷ್ಟು ವೇತನವನ್ನು ಕಡಿತ ಗೊಳಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.


ಸಂಬಳ ಕಟ್ ಮಾಡುವ ಕ್ರಮವು ಮಾರ್ಚ್ ತಿಂಗಳ ಸಂಬಳದಿಂದಲೇ ಜಾರಿಯಾಗಲಿದ್ದು ಸರ್ಕಾರದ ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.
ಈ ರೀತಿ ರಾಜ್ಯ ಸರ್ಕಾರ ತನ್ನ ಹಣಕಾಸು ನಿರ್ವಹಿಸಲು ನೌಕರರ ಸಂಬಳ ಕತ್ತರಿಸುವ ಕ್ರಮಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದರೂ ಕೂಡ ಬೇರೆ ದಾರಿ ಇಲ್ಲ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಕೊರೊನಾ ಸೋಂಕಿಗೆ ಇದುವರೆಗೂ ತೆಲಂಗಾನದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಲ್ಲಿ 1251 ಸೋಂಕಿತ ಪ್ರಕರಣಗಳು ದಾಖಲಾಗಿದ್ದು 32 ಮಂದಿ ಸಾವನಪ್ಪಿದ್ದರೆ 101 ಜನ ಗುಣಮುಖರಾಗಿದ್ದಾರೆ.


