ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.42ರಷ್ಟು ಮೀಸಲಾತಿ ಕಲ್ಪಿಸಲು ತೆಲಂಗಾಣ ಸರ್ಕಾರ ಶುಕ್ರವಾರ (ಸೆ.26) ಆದೇಶ ಹೊರಡಿಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೊರಡಿಸಿದ ಸರ್ಕಾರಿ ಆದೇಶದಿಂದ (ಜಿಒ) ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ದಾರಿ ಮಾಡಿಕೊಡುವ ನಿರೀಕ್ಷೆಯಿದೆ.
ತೆಲಂಗಾಣ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ ಚುನಾವಣಾ ವೇಳಾಪಟ್ಟಿ ಘೋಷಣೆಯ ಮೊದಲು ಶೇಕಡ 42ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿಡಲಿದೆ.
“ಸ್ಥಳೀಯ ಸಂಸ್ಥೆಗಳ ಹಿಂದುಳಿದಿರುವಿಕೆಯ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ಸಮಕಾಲೀನ ಕಠಿಣ ಪ್ರಾಯೋಗಿಕ ಪರಿಶೀಲನೆ ನಡೆಸಲು ಮತ್ತು ಮೀಸಲಾತಿಗಳ ಅನುಪಾತವನ್ನು ನಿರ್ದಿಷ್ಟಪಡಿಸಲು” ನವೆಂಬರ್ 2024ರಲ್ಲಿ ಆಯೋಗವನ್ನು ರಚಿಸಲಾಗಿತ್ತು ಎಂದು ಸರ್ಕಾರಿ ಆದೇಶ ಹೇಳಿದೆ.
ಜಾತಿ ಸಮೀಕ್ಷೆಯ ಪ್ರಾಯೋಗಿಕ ದತ್ತಾಂಶವನ್ನು ವಿಶ್ಲೇಷಿಸಿದ ಆಯೋಗವು ಮಾರ್ಚ್ 2025ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ರಾಜ್ಯದಲ್ಲಿ ಶೇಕಡಾ 56.33 ರಷ್ಟಿರುವ ಜನಸಂಖ್ಯೆಗೆ ಹೋಲಿಸಿದರೆ ಹಿಂದುಳಿದ ವರ್ಗದವರು ತುಲನಾತ್ಮಕವಾಗಿ ಹಿಂದುಳಿದಿದ್ದಾರೆ ಎಂದು ವರದಿ ಹೇಳಿತ್ತು. ರಾಜಕೀಯ ಪ್ರಾತಿನಿಧ್ಯಗಳಲ್ಲಿ, ವಿಶೇಷವಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಠ ಶೇಕಡ 42 ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಿತ್ತು ಎಂದು ಆದೇಶ ವಿವರಿಸಿದೆ.
ಆಗಸ್ಟ್ 31ರಂದು ವಿಧಾನಸಭೆ ಅಂಗೀಕರಿಸಿದ ಎರಡು ಮಸೂದೆಗಳು ಇನ್ನೂ ರಾಜ್ಯಪಾಲರ ಅನುಮೋದನೆಗಾಗಿ ಕಾಯುತ್ತಿರುವುದರಿಂದ ರಾಜ್ಯ ಸರ್ಕಾರವು ಈ ಆದೇಶವನ್ನು ಹೊರಡಿಸಿದೆ ಎಂದು ವರದಿಯಾಗಿದೆ.
ವಿಧಾನಸಭೆ ಅಂಗೀಕರಿಸಿರುವ ತೆಲಂಗಾಣ ಪುರಸಭೆಗಳ (ಮೂರನೇ ತಿದ್ದುಪಡಿ) ಮಸೂದೆ, 2025 ಮತ್ತು ತೆಲಂಗಾಣ ಪಂಚಾಯತ್ ರಾಜ್ (ಮೂರನೇ ತಿದ್ದುಪಡಿ) ಮಸೂದೆ, 2025, ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇಕಡ 42ಕ್ಕೆ ಹೆಚ್ಚಿಸುವ ಮತ್ತು ಎಲ್ಲಾ ವರ್ಗಗಳ ಮೀಸಲಾತಿಯ 50ರ ಮಿತಿಯನ್ನು ತೆಗೆದುಹಾಕುವ ಉದ್ದೇಶ ಹೊಂದಿದೆ.
ಮಾರ್ಚ್ ಆರಂಭದಲ್ಲಿ, ಶಿಕ್ಷಣ, ಉದ್ಯೋಗ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇಕಡ 42ಕ್ಕೆ ಹೆಚ್ಚಿಸಲು ವಿಧಾನಸಭೆ ಎರಡು ಮಸೂದೆಗಳನ್ನು ಅಂಗೀಕರಿಸಿತ್ತು. ಈ ಎರಡೂ ಮಸೂದೆಗಳಿಗೆ ಇನ್ನೂ ರಾಷ್ಟ್ರಪತಿಗಳ ಅನುಮೋದನೆ ದೊರೆತಿಲ್ಲ.
ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ತೆಲಂಗಾಣದ ಸಚಿವರು, ಸಂಸದರು ಮತ್ತು ಶಾಸಕರು ಕೇಂದ್ರ ಸರ್ಕಾರ ಅಥವಾ ರಾಷ್ಟ್ರಪತಿ ಎರಡು ಮಸೂದೆಗಳಿಗೆ ಅನುಮೋದನೆ ನೀಡಬೇಕೆಂದು ಒತ್ತಾಯಿಸಿದ್ದರು.
ಮಸೂದೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಲು ರಾಷ್ಟ್ರಪತಿಗಳ ಅಪಾಯಿಂಟ್ಮೆಂಟ್ ಕೂಡ ಕೋರಿದ್ದೇವೆ. ಆದರೆ, ರಾಷ್ಟ್ರಪತಿ ಭವನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಿಎಂ ರೇವಂತ್ ರೆಡ್ಡಿ ತಿಳಿಸಿದ್ದಾರೆ.
ಕೇಂದ್ರದಿಂದ ಸಂಸದೀಯ ಸ್ಥಾಯಿ ಸಮಿತಿಗಳ ಅವಧಿ ವಿಸ್ತರಣೆ ಸಾಧ್ಯತೆ: ಶಶಿ ತರೂರ್ ಸ್ಥಾನ ಅಬಾಧಿತ?


