ತನ್ನ ಸಂಪುಟ ಸಹೋದ್ಯೋಗಿ ಹಾಗೂ ದಲಿತ ಸಚಿವರ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಕ್ಕಾಗಿ ತೆಲಂಗಾಣದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪೊನ್ನಮ್ ಪ್ರಭಾಕರ್ ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.
ಸಾವರ್ವಜನಿಕ ಸಭೆಯೊಂದರಲ್ಲಿ ಪರಿಶಿಷ್ಟ ಜಾತಿ ಕಲ್ಯಾಣ ಸಚಿವ ಅಡ್ಲೂರಿ ಲಕ್ಷ್ಮಣ್ ಕುಮಾರ್ ಅವರ ಬಗ್ಗೆ ತಾವಾಡಿದ ಮಾತುಗಳಿಗೆ ಸಚಿವರು ಪ್ರತಿಕ್ರಿಯೆ ನಿಡಿದ್ದಾರೆ.
ನಿನ್ನೆ ತಡರಾತ್ರಿ ಬಿಡುಗಡೆಯಾದ ಹೇಳಿಕೆಯಲ್ಲಿ, ಲಕ್ಷ್ಮಣ್ ಕುಮಾರ್ ಅವರನ್ನು ನನ್ನ ‘ಸಹೋದರನಂತೆ’ ಎಂದು ಸಚಿವರು ಹೇಳಿದರು. “ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಸ್ನೇಹ 30 ವರ್ಷಗಳನ್ನು ಹೊಂದಿದೆ, ಅದು ರಾಜಕೀಯವನ್ನು ಮೀರಿದೆ. ನಮ್ಮ ನಡುವಿನ ಬಾಂಧವ್ಯ ಮತ್ತು ಪರಸ್ಪರ ಗೌರವ ಯಾವಾಗಲೂ ಪ್ರಬಲವಾಗಿದೆ. ಯಾರೂ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
“ನಾನು ಅವರ ವಿರುದ್ಧ ಯಾವುದೇ ವೈಯಕ್ತಿಕ ಹೇಳಿಕೆಗಳನ್ನು ನೀಡಿಲ್ಲ. ತಳಮಟ್ಟದಿಂದ ಬೆಳೆದ ವ್ಯಕ್ತಿಯಾಗಿ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ನಾಯಕನಾಗಿ, ನಾನು ಯಾರ ಬಗ್ಗೆಯೂ ಅಂತಹ ಅಭಿಪ್ರಾಯವನ್ನು ಎಂದಿಗೂ ಹೊಂದಿರುವುದಿಲ್ಲ” ಎಂದಿದ್ದಾರೆ.
“ಆದರೆ, ರಾಜಕೀಯ ದುರುದ್ದೇಶದಿಂದ, ಕೆಲವರು ನನ್ನ ಹೇಳಿಕೆಗಳನ್ನು ತಿರುಚಿ ಸತ್ಯಕ್ಕೆ ವಿರುದ್ಧವಾಗಿ ಪ್ರಚಾರ ಮಾಡಿದ್ದಾರೆ. ಈ ತಪ್ಪು ತಿಳುವಳಿಕೆಗಳಿಂದಾಗಿ, ಅಣ್ಣ ಅಡ್ಲೂರಿ ಲಕ್ಷ್ಮಣ್ ಕುಮಾರ್ ಅವರಂತಹ ವ್ಯಕ್ತಿಯ ಭಾವನೆಗಳಿಗೆ ನೋವುಂಟಾಗಿದೆ ಎಂದು ತಿಳಿದು ನನಗೆ ತುಂಬಾ ದುಃಖವಾಗಿದೆ” ಎಂದು ಪ್ರಭಾಕರ್ ಹೇಳಿದರು.
“ಅಡ್ಲೂರಿ ಲಕ್ಷ್ಮಣ್ ಕುಮಾರ್ ಅವರ ಭಾವನೆಗಳಿಗೆ ನೋವಾಗಿದ್ದರೆ ನನಗೆ ವಿಷಾದವಿದೆ. ಕಾಂಗ್ರೆಸ್ ಪಕ್ಷದ ತತ್ವಗಳನ್ನು ಬಲಪಡಿಸಲು, ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಸಾಮಾಜಿಕ ನ್ಯಾಯವನ್ನು ಸಾಧಿಸಲು ಮತ್ತು ಜನರ ಕಲ್ಯಾಣಕ್ಕಾಗಿ ಶ್ರಮಿಸಲು ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ಅವರು ಹೇಳಿದರು.
ನವೆಂಬರ್ 11 ರಂದು ಜುಬಿಲಿ ಹಿಲ್ಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವಾದ ಪ್ರಾರಂಭವಾಯಿತು. ಲಕ್ಷ್ಮಣ್ ಕುಮಾರ್ ಬರುವುದಕ್ಕಾಗಿ ಕಾಯುತ್ತಿದ್ದರು ಪ್ರಭಾಕರ್, ವಿಳಂಬದಿಂದ ಸಿಟ್ಟಾಗಿದ್ದರು. ಸಹ ಸಚಿವರೊಂದಿಗೆ ಮಾತನಾಡುವಾಗ, ಅವರು ಸಮಯಪಾಲನೆಯ ಬಗ್ಗೆ ಟೀಕಿಸಿದರು. ಲಕ್ಷ್ಮಣ್ ಕುಮಾರ್ ಅವರನ್ನು ಎಮ್ಮ (ತೆಲುಗಿನಲ್ಲಿ ಧುನ್ನಪೋತು) ಎಂದು ಉಲ್ಲೇಖಿಸಿದರು. ಸುದ್ದಿವಾಹಿನಿಗಳು ಮಾಧ್ಯಮ ಪ್ರಸಾರಕ್ಕಾಗಿ ಇಟ್ಟಿದ್ದ ಮೈಕ್ರೊಫೋನ್‌ಗಳು ಈ ಹೇಳಿಕೆಯನ್ನು ಸೆರೆಹಿಡಿದಿದ್ದವು.
ಪರಿಶಿಷ್ಟ ಜಾತಿ ಮಾದಿಗ ಸಮುದಾಯಕ್ಕೆ ಸೇರಿದ ಲಕ್ಷ್ಮಣ್ ಕುಮಾರ್, ತಮ್ಮ ಸಂಪುಟ ಸಹೋದ್ಯೋಗಿಯ ಹೇಳಿಕೆಗೆ ತೀವ್ರ ದುಃಖ ವ್ಯಕ್ತಪಡಿಸಿ ಭಾವನಾತ್ಮಕ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಹೇಳಿಕೆಯನ್ನು ಅವರು ಜಾತಿವಾದಿ ಅವಮಾನವೆಂದು ಪರಿಗಣಿಸಿದ್ದು, ಅದು ಅವರನ್ನು ಮಾತ್ರವಲ್ಲದೆ ತಮ್ಮ ಸಮುದಾಯವನ್ನೂ ನಾಚಿಕೆಪಡಿಸಿದೆ, ಸಾರ್ವಜನಿಕ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಪ್ರಭಾಕರ್ ಕ್ಷಮೆಯಾಚಿಸದಿದ್ದರೆ, ಈ ವಿಷಯವನ್ನು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಕೊಂಡೊಯ್ಯುವುದಾಗಿ ಕುಮಾರ್ ಎಚ್ಚರಿಸಿದರು.
ಕರೀಂನಗರ ಜಿಲ್ಲೆಯ ಪ್ರಭಾವಿ ನಾಯಕರು ಮತ್ತು ಕಾಂಗ್ರೆಸ್ ಸರ್ಕಾರದ ಪ್ರಮುಖ ವ್ಯಕ್ತಿಗಳಾದ ಹಿರಿಯ ಸಚಿವರ ನಡುವಿನ ಸಾರ್ವಜನಿಕ ಜಗಳವು ನಿರ್ಣಾಯಕ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಜುಬಿಲಿ ಹಿಲ್ಸ್ ಉಪಚುನಾವಣೆಗೆ ಮೊದಲು ಕೋಲಾಹಲಕ್ಕೆ ಕಾರಣವಾಯಿತು.
ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಬಿ ಮಹೇಶ್ ಕುಮಾರ್ ಗೌಡ್, ಮಧ್ಯಪ್ರವೇಶಿಸಿ ಇಬ್ಬರೂ ಸಚಿವರೊಂದಿಗೆ ಮಾತನಾಡಿದರತು. ಸಂಯಮ ಮತ್ತು ಸಮನ್ವಯವನ್ನು ಕಾಯ್ದುಕೊಳ್ಳುವಂತೆ ಒತ್ತಾಯಿಸಿದರು.