ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಔಷಧ ಘಟಕದಲ್ಲಿ ಸೋಮವಾರ (ಜೂನ್.30) ಸಂಭವಿಸಿದ ರಿಯಾಕ್ಟರ್ ಸ್ಪೋಟದಲ್ಲಿ ಸಾವಿಗೀಡಾದವರ ಸಂಖ್ಯೆ 35 ದಾಟಿದೆ. ಕೆಲ ಮಾಧ್ಯಮಗಳು 42 ಜನರು ಸಾವನ್ನಪ್ಪಿರುವ ಬಗ್ಗೆ ವರದಿ ಮಾಡಿವೆ.
ರಾತ್ರಿಯಿಡೀ ಸ್ಥಳೀಯ ಪಟ್ಟಂಚೆರುವು ಆಸ್ಪತ್ರೆಗೆ ದುರಂತ ಸ್ಥಳದಿಂದ ಮೃತದೇಹಗಳು ಬರುತ್ತಿತ್ತು. ಆಸ್ಪತ್ರೆಯ ಅಧಿಕಾರಿಗಳು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರಿ ಭಾರೀ ಮಳೆಯಿಂದ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಅಡಚಣೆಯಾಯಿತು ಎಂದು ದಿ ಹಿಂದೂ ವರದಿ ಹೇಳಿದೆ.
ಮೃತದೇಹಗಳ ಡಿಎನ್‌ಎ ಮಾದರಿ ಸಂಗ್ರಹಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಲಾಗಿದೆ. ರಾತ್ರಿ ಸುಮಾರು 20 ಶವಗಳ ಡಿಎನ್‌ಎ ಸಂಗ್ರಹಿಸಲಾಗಿದೆ. ಅವುಗಳು ಮೃತರ ಸಂಬಂಧಿಕರೊಂದಿಗೆ ಹೊಂದಾಣಿಕೆಯಾದ ನಂತರ ಮೃತದೇಹಗಳನ್ನು ಹಸ್ತಾಂತರಿಸುತ್ತೇವೆ ಎಂದು ಪಟ್ಟಂಚೆರುವು ಪ್ರದೇಶ ಆಸ್ಪತ್ರೆಯ ಮೇಲ್ವಿಚಾರಕ ಡಾ. ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಮತ್ತು ಡಿಎನ್‌ಎ ಮಾದರಿ ಸಂಗ್ರಹಕ್ಕೆ ಸಹಾಯ ಮಾಡಲು ಉಸ್ಮಾನಿಯಾ ಜನರಲ್ ಆಸ್ಪತ್ರೆಯಿಂದ ವಿಶೇಷ ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದೆ. ಇದುವರೆಗೆ 15 ಶವಗಳ ಶವಪರೀಕ್ಷೆ ಪೂರ್ಣಗೊಂಡಿದ್ದು, ಕೇವಲ ನಾಲ್ಕು ಶವಗಳನ್ನು ಮಾತ್ರ ಗುರುತಿಸಲಾಗಿದೆ. ಉಳಿದ ಶವಗಳನ್ನು ಡಿಎನ್‌ಎ ಪ್ರೊಫೈಲಿಂಗ್‌ಗೆ ಒಳಪಡಿಸಲಾಗುತ್ತಿದೆ ಎಂದಿದ್ದಾರೆ.
ತೆಲಂಗಾಣ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ (ಡಿಎಂಇ) ಡಾ. ಎ. ನರೇಂದ್ರ ಕುಮಾರ್ ಮತ್ತು ತೆಲಂಗಾಣ ವೈದ್ಯ ವಿಧಾನ ಪರಿಷತ್ (ಟಿವಿವಿಪಿ) ಆಯುಕ್ತ ಡಾ. ಅಜಯ ಕುಮಾರ್ ಸೇರಿದಂತೆ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ರಾತ್ರಿಯಿಡೀ ಆಸ್ಪತ್ರೆಯಲ್ಲಿ ಹಾಜರಿದ್ದರು. ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಸಂಗಾರೆಡ್ಡಿ ಜಿಲ್ಲೆಯ ಪಾಶಮಿಲರಾಮ್ ಕೈಗಾರಿಕಾ ಪ್ರದೇಶದ ಔಷಧೀಯ ಘಟಕ ಸಿಗಾಚಿ ಇಂಡಸ್ಟ್ರೀಸ್ ಪ್ರೈ. ಲಿಮಿಟೆಡ್‌ನಲ್ಲಿ ಸೋಮವಾರ (ಜೂ.30) ಬೆಳಿಗ್ಗೆ 9.30ರ ಸುಮಾರಿಗೆ ಸ್ಪೋಟ ಸಂಭವಿಸಿದೆ.
ಮೈಕ್ರೋಕ್ರಿಸ್ಟಲಿನ್ ಸೆಲ್ಯುಲೋಸ್ ಅನ್ನು ನಿರ್ವಹಿಸುವಾಗ ಸ್ಪ್ರೇ ಡ್ರೈಯರ್‌ನಲ್ಲಿ ಒತ್ತಡ ಹೆಚ್ಚಾದ ಕಾರಣ ಸ್ಫೋಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಸ್ಪೋಟದಿಂದ ಕಾರ್ಖಾನೆಯಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕನಿಷ್ಠ 35 ಕಾರ್ಮಿಕರು ಸಾವನ್ನಪ್ಪಿದ್ದು, ಇನ್ನೂ 34 ಜನರು ಗಾಯಗೊಂಡಿದ್ದಾರೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳಗಳನ್ನು ಒಳಗೊಂಡ ರಕ್ಷಣಾ ತಂಡಗಳ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನೂ ಯಾರದರು ಕಾರ್ಮಿಕರು ಅಪಾಯದಲ್ಲಿ ಸಿಲುಕಿದ್ದಾರಾ? ಎಂದು ಪರಿಶೀಲಿಸಲಾಗುತ್ತಿದೆ, ಜೊತೆಗೆ ಮೃತದೇಹಗಳ ವಿಲೇವಾರಿ ನಡೆಯುತ್ತಿದೆ.


