ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಗುಂಪೊಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ದೂರು ಸಲ್ಲಿಸಿದ್ದು, ಪೊಲೀಸರು ಮಧ್ಯರಾತ್ರಿಯಲ್ಲಿ ಗರ್ಭಿಣಿಯರು ಸೇರಿದಂತೆ ಬುಡಕಟ್ಟು ರೈತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನವೆಂಬರ್ 11 ರಂದು ಜಿಲ್ಲೆಯ ಲಗಚರ್ಲಾ ಗ್ರಾಮದಲ್ಲಿ ಅಧಿಕಾರಿಗಳ ಮೇಲೆ ದಾಳಿ ನಡೆದ ನಂತರ, ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 6 ಗಂಟೆಯ ನಡುವೆ ಬುಡಕಟ್ಟು ನಿವಾಸಿಗಳ ಮನೆಗಳಿಗೆ ‘ಪೊಲೀಸ್ ಸಿಬ್ಬಂದಿ ಹಿಂಸಾತ್ಮಕವಾಗಿ ಪ್ರವೇಶಿಸಿ’ ಬಾಗಿಲು ಒಡೆದು ಗರ್ಭಿಣಿಯರು ಸೇರಿದಂತೆ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಶಾಸಕಿ ಸತ್ಯವತಿ ರಾಥೋಡ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಆರ್‌ಎಸ್ ಪ್ರವೀಣ್ ಕುಮಾರ್ ಸೇರಿದಂತೆ ವಿರೋಧ ಪಕ್ಷ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯ ಹಲವು ನಾಯಕರು ಕೂಡ ದೂರು ನೀಡಿದವರಲ್ಲಿ ಸೇರಿದ್ದಾರೆ. ನವೆಂಬರ್ 16 ರಂದು ಶನಿವಾರ ತೆಲಂಗಾಣ ಎಸ್‌ಸಿ/ಎಸ್‌ಟಿ ಆಯೋಗದ ಅಧ್ಯಕ್ಷ ಬಕ್ಕಿ ವೆಂಕಟಯ್ಯ ಅವರಿಗೆ ದೂರು ಸಲ್ಲಿಸಲಾಗಿದೆ.
ನವೆಂಬರ್ 11 ರಂದು ವಿಕಾರಾಬಾದ್ ಜಿಲ್ಲಾಧಿಕಾರಿ ಪ್ರತೀಕ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಜಿ ಲಿಂಗಯ್ಯ ನಾಯ್ಕ್, ಕೊಡಂಗಲ್ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಅಧ್ಯಕ್ಷ ವೆಂಕಟ್ ರೆಡ್ಡಿ ಮತ್ತು ಇತರ ಅಧಿಕಾರಿಗಳು ಫಾರ್ಮಾ ಕ್ಲಸ್ಟರ್‌ಗೆ ಭೂಸ್ವಾಧೀನಪಡಿಸಿಕೊಳ್ಳುವ ಕುರಿತು ಸಾರ್ವಜನಿಕರ ಅಹವಾಳು ಆಲಿಸಲು ಲಗಚಾರ್ಲಾ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿದ ಗ್ರಾಮದ ನಿವಾಸಿಗಳು, ಅಧಿಕಾರಿಗಳನ್ನು ಓಡಿಸಿದ್ದರು. ಅವರ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಜಖಂಗೊಳಿಸಿದ್ದರು.
ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಕ್ಷೇತ್ರ ಕೊಡಂಗಲ್‌ನಲ್ಲಿ ನಡೆದ ಈ ಘಟನೆಯು ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಆರ್‌ಎಸ್ ನಡುವೆ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕೊಡಂಗಲ್‌ನ ಮಾಜಿ ಬಿಆರ್‌ಎಸ್ ಶಾಸಕ ಪಟ್ನಂ ನರೇಂದ್ರ ರೆಡ್ಡಿ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಬಿಆರ್‌ಎಸ್ ನಾಯಕ ಕೆಟಿ ರಾಮರಾವ್ ಅವರ ಸೂಚನೆ ಮೇರೆಗೆ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದ ಭಾಗವಾಗಿ ಹಿಂಸಾಚಾರವನ್ನು ಪ್ರಚೋದಿಸಿದ್ದಾಗಿ ನರೇಂದ್ರ ರೆಡ್ಡಿ ಒಪ್ಪಿಕೊಂಡಿದ್ದಾರೆ ಎಂದು ರಿಮಾಂಡ್ ವರದಿಯಲ್ಲಿ ಪೊಲೀಸರು ತಿಳಿಸಿದ್ದಾರೆ.
ರಾಜಕೀಯ ಲಾಭ ಗಳಿಸುವುದು ಮತ್ತು ತೆಲಂಗಾಣ ಸರ್ಕಾರದ ಪ್ರತಿಷ್ಠೆಗೆ ಮಸಿ ಬಳಿಯುವುದು ಅವರ ಗುರಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕೆಟಿಆರ್, ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ನಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ. ಈ ನಡುವೆ ರಾತ್ರೋರಾತ್ರಿ ಬುಡಕಟ್ಟು ಜನರ ಮನೆಗಳಿಗೆ ನುಗ್ಗಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಲಂಬಾಡಾ ಬುಡಕಟ್ಟು ಜನಾಂಗದ ಲಗಚಾರ್ಲ ನಿವಾಸಿಗಳ ಗುಂಪಿನ ಹೆಸರಿನಲ್ಲಿ ದೂರು ದಾಖಲಾಗಿದೆ. ಸರ್ಕಾರಿ ಅಧಿಕಾರಿಗಳ ಮೇಲಿನ ದಾಳಿಯ ರಾತ್ರಿ, ಪೊಲೀಸರು ಅವರ ಮನೆಗಳಿಗೆ ಪ್ರವೇಶಿಸಿದರು ಮತ್ತು “ಮಹಿಳೆಯರನ್ನು ಹಿಂಸಾತ್ಮಕವಾಗಿ ತಳ್ಳಲಾಯಿತು, ತೀವ್ರ ಗಾಯಗಳನ್ನು ಉಂಟುಮಾಡಿದರು ಮತ್ತು ಅವರ ಮನೆಗಳನ್ನು ಬಿಟ್ಟು ಓಡಿಹೋಗುವಂತೆ ಒತ್ತಾಯಿಸಲಾಯಿತು, ಹತ್ತಿರದ ಕಾಡುಗಳು ಮತ್ತು ಕೃಷಿಭೂಮಿಗಳಲ್ಲಿ ಆಶ್ರಯ ಪಡೆದರು” ಎಂದು ಅದು ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಬಂಧಿತರಾಗಿರುವ ಹಲವು ಆರೋಪಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂದು ಆರೋಪಿಸಿದೆ. ಹಿಂಸಾಚಾರದಲ್ಲಿ ಭಾಗಿಯಾದವರು ಸರ್ಕಾರಿ ಅಧಿಕಾರಿಗಳ ಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ದಾಳಿಯಲ್ಲಿ ಕಲೆಕ್ಟರ್ ಪ್ರತೀಕ್ ಜೈನ್ ರಕ್ತಸ್ರಾವದಿಂದ ಗಾಯಗೊಂಡಿದ್ದಾರೆ ಎಂದು ರಿಮಾಂಡ್ ವರದಿ ಹೇಳಿದೆ. ಆದರೆ, ಘಟನೆ ನಡೆದ ಮರುದಿನ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಪ್ರತೀಕ್ ಜೈನ್, ‘ಯಾವುದೇ ಹಿಂಸಾಚಾರ ನಡೆದಿಲ್ಲ ಮತ್ತು ಯಾವುದೇ ರೀತಿಯ ಗಾಯಗಳಾಗಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದ್ದರಿಂದ ಬಂಧಿತರ ವಿರುದ್ಧ ಮಾಡಿರುವ ಆರೋಪಗಳು ರಾಜಕೀಯ ಪ್ರೇರಿತ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಜೊತೆಗೂಡಿ ಗ್ರಾಮದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮಹಿಳೆಯರ ವಿರುದ್ಧ ಜಾತಿ ನಿಂದನೆ ಪದಗಳನ್ನು ಬಳಸಿದ್ದಾರೆ, ಅವರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಬಂಧಿತ ಆರೋಪಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಜಾತಿಯ ಹೆಸರಿನಲ್ಲಿ ನಿಂದಿಸಿದ್ದಾರೆ ಮತ್ತು ಮ್ಯಾಜಿಸ್ಟ್ರೇಟ್‌ಗೆ ಹಿಂಸೆಯನ್ನು ಪ್ರಸ್ತಾಪಿಸದಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಗಳ ಕುರಿತು ತನಿಖೆ ನಡೆಸಲು ಎಸ್‌ಸಿ/ಎಸ್‌ಟಿ ಆಯೋಗವು ಶೀಘ್ರವೇ ಲಗಚರ್ಲಾ ಗ್ರಾಮಕ್ಕೆ ಭೇಟಿ ನೀಡಲಿದೆ ಎಂದು ಬಕ್ಕಿ ವೆಂಕಟಯ್ಯ ತಿಳಿಸಿದ್ದಾರೆ. ನವೆಂಬರ್ 16 ರವರೆಗೆ ಸರ್ಕಾರಿ ಅಧಿಕಾರಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ 25 ಜನರನ್ನು ಬಂಧಿಸಲಾಗಿದೆ.
ಇದನ್ನೂ ಓದಿ : 50% ಮೀಸಲಾತಿ ಮಿತಿ ತೆಗೆಯುತ್ತೇವೆ : ಪುನರುಚ್ಚರಿಸಿದ ರಾಹುಲ್ ಗಾಂಧಿ


