ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ.
ಶಾಸಕರ ಅನರ್ಹತೆ ಅರ್ಜಿಗಳ ಮೇಲಿನ ಆದೇಶಗಳನ್ನು ಪ್ರಕಟಿಸಿದ ಸ್ಪೀಕರ್, ಐವರು ಶಾಸಕರು ಬಿಆರ್‌ಎಸ್‌ನಿಂದ ಕಾಂಗ್ರೆಸ್‌ಗೆ ಔಪಚಾರಿಕವಾಗಿ ಪಕ್ಷಾಂತರಗೊಂಡಿದ್ದಾರೆ ಎಂಬುದಕ್ಕೆ ಅರ್ಜಿದಾರರು ಪುರಾವೆಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.
ಹಾಗಾಗಿ, ಪಕ್ಷಾಂತರ ನಿಷೇಧ ಕಾನೂನು ಶಾಸಕರಾದ ತೆಲ್ಲಂ ವೆಂಕಟ್ ರಾವ್, ಬಂಡ್ಲಾ ಕೃಷ್ಣ ಮೋಹನ್ ರೆಡ್ಡಿ, ಟಿ ಪ್ರಕಾಶ್ ಗೌಡ್, ಗುಡೆಮ್ ಮಹಿಪಾಲ್ ರೆಡ್ಡಿ ಮತ್ತು ಅರೆಕಪುಡಿ ಗಾಂಧಿ ಅವರಿಗೆ ಅನ್ವಯಿಸುವುದಿಲ್ಲ ಎಂದು ಸ್ಪೀಕರ್ ತೀರ್ಪು ನೀಡಿದ್ದಾರೆ.
ಶಾಸಕರು ತಾಂತ್ರಿಕವಾಗಿ ಇನ್ನೂ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ನಲ್ಲಿದ್ದಾರೆ ಎಂದು ಹೇಳಿದ್ದಾರೆ.
ಆಡಳಿತ ಪಕ್ಷಕ್ಕೆ ನಿಷ್ಠೆಯನ್ನು ಬದಲಾಯಿಸಿದ ಆರೋಪದ ಮೇಲೆ 10 ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಲಾಗಿತ್ತು. ಈ ಪೈಕಿ ಐವರ ಕುರಿತು ಸ್ಪೀಕರ್ ಆದೇಶ ಪ್ರಕಟಿಸಿದ್ದಾರೆ. ಒಟ್ಟು ಎಂಟು ಶಾಸಕರ ಅನರ್ಹತೆ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಸ್ಪೀಕರ್ ಆದೇಶಗಳನ್ನು ಕಾಯ್ದಿರಿಸಿದ್ದರು.
ಇತರ ಇಬ್ಬರು ಶಾಸಕರಾದ ದಾನಂ ನಾಗೇಂದರ್ ಮತ್ತು ಕಡಿಯಂ ಶ್ರೀಹರಿ ಅವರಿಗೆ ನೀಡಲಾದ ನೋಟಿಸ್‌ಗಳಿಗೆ ಉತ್ತರಗಳನ್ನು ಸಲ್ಲಿಸಿದ ನಂತರ, ಅವರ ಅನರ್ಹತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಕಳೆದ ತಿಂಗಳು ಸ್ಪೀಕರ್ ಕಳುಹಿಸಿದ್ದ ನೋಟಿಸ್‌ಗೆ ಉತ್ತರಿಸಲು ಅವರು ಹೆಚ್ಚಿನ ಸಮಯ ಕೋರಿದ್ದರು.
2023ರ ಚುನಾವಣೆಯಲ್ಲಿ ತನ್ನ ಟಿಕೆಟ್‌ನಿಂದ ವಿಧಾನಸಭೆಗೆ ಆಯ್ಕೆಯಾಗಿ 2024ರಲ್ಲಿ ಕಾಂಗ್ರೆಸ್‌ಗೆ ನಿಷ್ಠೆ ಬದಲಿಸಿದ 10 ಶಾಸಕರನ್ನು ಅನರ್ಹಗೊಳಿಸುವಂತೆ ಬಿಆರ್‌ಎಸ್ ಅರ್ಜಿಗಳನ್ನು ಸಲ್ಲಿಸಿತ್ತು.
ಈ ಶಾಸಕರು ಬಹಿರಂಗವಾಗಿ ಕಾಂಗ್ರೆಸ್ ಸೇರಿದ್ದಾರೆ ಮತ್ತು ವಿಧಾನಸಭೆಯಲ್ಲೂ ಅವರ ಜೊತೆ ಕುಳಿತಿದ್ದಾರೆ ಎಂದು ಬಿಆರ್‌ಎಸ್ ದೂರಿದೆ. ಆದರೆ, ಶಾಸಕರು ಆಡಳಿತ ಪಕ್ಷ ಸೇರಿರುವುದನ್ನು ನಿರಾಕರಿಸಿದ್ದಾರೆ. ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ನಿಧಿ ಕೇಳಲು ಮಾತ್ರ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾಗಿ ವಾದಿಸಿದ್ದಾರೆ.
ಶಾಸಕ ನಾಗೇಂದರ್ ಕಾಂಗ್ರೆಸ್ ಸೇರಿದ್ದಲ್ಲದೆ, 2024ರ ಲೋಕಸಭಾ ಚುನಾವಣೆಯಲ್ಲಿ ಸಿಕಂದರಾಬಾದ್‌ನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು ಎಂದು ಬಿಆರ್‌ಎಸ್ ಸ್ಪೀಕರ್ ಗಮನಕ್ಕೆ ತಂದಿತ್ತು.
ಕಾಂಗ್ರೆಸ್ ಅಭ್ಯರ್ಥಿಯಾಗಿ ವಾರಂಗಲ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ತಮ್ಮ ಪುತ್ರಿ ಕಡಿಯಂ ಕವಿಯಾ ಪರ ಕಡಿಯಂ ಶ್ರೀಹರಿ ಬಹಿರಂಗ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿತ್ತು.
10 ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ಕುರಿತು ನಿರ್ಧರಿಸಲು ತಾನು ನೀಡಿದ್ದ ನಿರ್ದೇಶನವನ್ನು ಪಾಲಿಸದಿದ್ದಕ್ಕಾಗಿ ನವೆಂಬರ್ 17 ರಂದು ಸುಪ್ರೀಂ ಕೋರ್ಟ್ ತೆಲಂಗಾಣ ಸ್ಪೀಕರ್‌ಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತ್ತು.
ಜುಲೈ 31ರಂದು, ಆಗಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು 10 ಶಾಸಕರ ಅನರ್ಹತೆಯ ವಿಷಯವನ್ನು ಮೂರು ತಿಂಗಳಲ್ಲಿ ನಿರ್ಧರಿಸುವಂತೆ ಸ್ಪೀಕರ್‌ಗೆ ಸೂಚಿಸಿತ್ತು.
ಬಿಆರ್‌ಎಸ್ ನಾಯಕರು ಸಲ್ಲಿಸಿದ ಅರ್ಜಿಗಳ ಕುರಿತು ಸ್ಪೀಕರ್ ಮತ್ತು ಇತರರಿಗೆ ನೋಟಿಸ್ ನೀಡುವಾಗ, ಪೀಠವು ತನ್ನ ಹಿಂದಿನ ನಿರ್ದೇಶನಗಳನ್ನು ಪಾಲಿಸದಿರುವುದನ್ನು ಅತ್ಯಂತ ಗಂಭೀರವಾದ ನ್ಯಾಯಾಂಗ ನಿಂದನೆ ಎಂದು ಹೇಳಿತ್ತು.


