ಇತ್ತೀಚೆಗೆ ಮುಕ್ತಾಯಗೊಂಡ ನೀಟ್ ಪರೀಕ್ಷೆಗಳಲ್ಲಿ ಅರ್ಹ ಅಂಕ ಗಳಿಸಲು ಸಾಧ್ಯವಾಗುವುದಿಲ್ಲ ಎಂಬ ಭೀತಿಯಿಂದ ಇಬ್ಬರು ಅಭ್ಯರ್ಥಿಗಳು ಮೇ 4 ರಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.
ಜಗ್ತಿಯಾಲ್ ಹಾಗೂ ಆದಿಲಾಬಾದ್ ಜಿಲ್ಲೆಗಳ ಜಂಗಾ ಪೂಜಾ ಮತ್ತು ರಾಯ್ ಮನೋಜ್ ಕುಮಾರ್ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೂಜಾ ಅವರಿಗೆ ಇದು ಅವರ ಎರಡನೇ ಪ್ರಯತ್ನವಾಗಿತ್ತು. ಅವರು 2023 ರಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಉತ್ತಮ ಫಲಿತಾಂಶಗಳನ್ನು ಪಡೆಯಲಿಲ್ಲ. ಆಜೆಯ ಸಹೋದರನ ಪ್ರಕಾರ, ಅವರು ಈ ವರ್ಷ ತುಂಬಾ ಶ್ರಮಪಟ್ಟಿದ್ದರು. ತಮ್ಮ ಸಿದ್ಧತೆಯನ್ನು ಸುಧಾರಿಸಲು ಕೋಚಿಂಗ್ ಸೆಂಟರ್ ಅನ್ನು ಸಹ ಸೇರಿಕೊಂಡಿದ್ದರು.
ಆದರೂ, ಪರೀಕ್ಷಾ ಕೇಂದ್ರದಿಂದ ಮನೆಗೆ ಹಿಂದಿರುಗಿದ ನಂತರ ಅವರು ತಮ್ಮ ಉತ್ತರಗಳನ್ನು ಅಡ್ಡಪರಿಶೀಲಿಸಿದಾಗ, ಪೂಜಾ ಮತ್ತೆ ಅನುತ್ತೀರ್ಣರಾಗಬಹುದು ಎಂದು ಭಾವಿಸಿದ್ದು, ಆತಂಕ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿಕ್ಷಕಿಯೊಬ್ಬರ ಮಗನಾದ ಮತ್ತೊಬ್ಬ ನೀಟ್ ಅಭ್ಯರ್ಥಿ ರಾಯ್ ಮನೋಜ್ ಕುಮಾರ್, ಪರೀಕ್ಷೆಗೆ ಹಾಜರಾದ ಒಂದು ದಿನದ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಮಾರ್ ಕೂಡ ಕಷ್ಟಪಟ್ಟು ಹೈದರಾಬಾದ್‌ನಲ್ಲಿ ಕೋಚಿಂಗ್ ತರಗತಿಗೆ ಸೇರಿಕೊಂಡಿದ್ದ.
ಪದವಿಪೂರ್ವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) 2025 ರ ಪದವಿಪೂರ್ವ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) ಅನ್ನು ನಡೆಸುತ್ತದೆ. ಭಾನುವಾರ ನಡೆದ ಪರೀಕ್ಷೆಗೆ ದೇಶಾದ್ಯಂತ 500 ಕ್ಕೂ ಹೆಚ್ಚು ನಗರಗಳ 5,453 ಕೇಂದ್ರಗಳಲ್ಲಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.