ತೆಲುಗು ಕಿರುತೆರೆ ನಟಿ ಕೊಂಡಪಲ್ಲಿ ಶ್ರಾವಣಿ ಅಸಹಜ ಸಾವು ಪ್ರಕರಣದಲ್ಲಿ ಪ್ರಮುಖ ತೆಲುಗು ಚಲನಚಿತ್ರ ನಿರ್ಮಾಪಕನನ್ನು ಬಂಧಿಸಲಾಗಿದೆ. ಸೆ.8 ರಂದು ಶ್ರಾವಣಿ ಹೈದರಾಬಾದ್‌ನ ಮಧುರಾ ನಗರದ ತನ್ನ ಅಪಾರ್ಟ್‌ಮೆಂಟ್‌ನ ಬಾತ್‌ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದರು.
“RX 100” ನಂತಹ ತೆಲುಗು ಸೂಪರ್ ಹಿಟ್ ಚಿತ್ರ ನಿರ್ಮಿಸಿದ್ದ ಅಶೋಕ್ ರೆಡ್ಡಿ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನು ಇಬ್ಬರು ಆರೋಪಿಗಳಾದ ಸಾಯಿ ಕೃಷ್ಣ ರೆಡ್ಡಿ ಮತ್ತು ದೇವರಾಜ್ ರೆಡ್ಡಿಯನ್ನು ಕೂಡ ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ತೆಲುಗು ಟಿವಿ ನಟಿ ಕೊಂಡಪಲ್ಲಿ ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!: ಪೊಲೀಸರ ಹೇಳಿಕೆ
ನಟಿ ಶ್ರಾವಣಿ 2018 ರಲ್ಲಿ ಸಾಯಿ ಕೃಷ್ಣ ರೆಡ್ಡಿ, ಅಶೋಕ್ ರೆಡ್ಡಿ ಮತ್ತು ದೇವರಾಜ್ ರೆಡ್ಡಿ ಅವರನ್ನು ಟಿಕ್ ಟಾಕ್ ಮೂಲಕ ಪರಿಚಯ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ನಂತರ ತೆಲುಗು ಚಿತ್ರ “ಪ್ರೇಮತೋ ಕಾರ್ತಿಕ್” ನಿರ್ಮಾಣದ ವೇಳೆ ನಟ ಅಶೋಕ್ ರೆಡ್ಡಿ ಅವರನ್ನು ಭೇಟಿಯಾದರು ಎಂದು ವರದಿಯಾಗಿದೆ.
ಮೃತ ಶ್ರಾವಣಿ ಕೊನೆಯ ಬಾರಿ ದೇವರಾಜ್ ರೆಡ್ಡಿಗೆ ಕರೆ ಮಾಡಿ, ಈ ಮೂವರಿಂದ ಕಿರುಕುಳವನ್ನು ಸಹಿಸಲು ನನಗೆ ಸಾಧ್ಯವಿಲ್ಲ, ಹಾಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು ಎಂದು ವರದಿಯಾಗಿದೆ.
ಕೊಂಡಪಲ್ಲಿ ಶ್ರಾವಣಿ ಜನಪ್ರಿಯ ತೆಲುಗು ಕಿರುತೆರೆ ಧಾರಾವಾಹಿಗಳಾದ “ಮಾನಸು ಮಮತಾ” ಮತ್ತು “ಮೌನರಾಗಂ” ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಅವರು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯವರಾಗಿದ್ದು, ಕಳೆದ ಎಂಟು ವರ್ಷಗಳಿಂದ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104


