ಮಹಾರಾಷ್ಟ್ರದ ಶಿವಸೇನೆ ಅತೃಪ್ತ ಶಾಸಕರ ಮಾದರಿಯಲ್ಲಿ ಗೋವಾದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾಗಿದ್ದ ಕಾಂಗ್ರೆಸ್ ಶಾಸಕರ ಪ್ರಯತ್ನಕ್ಕೆ ತಾತ್ಕಾಲಿಕ ತಡೆಬಿದ್ದಿದೆ. ಪಕ್ಷಾಂತರ ನಿಷೇದ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಒಟ್ಟು ಶಾಸಕರ ಮೂರನೇ ಎರಡರಷ್ಟು ಬಹುಮತ ಇಲ್ಲದ ಕಾರಣಕ್ಕೆ ಪಕ್ಷಾಂತರಕ್ಕೆ ತಡೆ ಬಿದ್ದಿದೆ. ಆದರೆ ಈಗಲೂ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಗೋವಾದಲ್ಲಿ 11 ಕಾಂಗ್ರೆಸ್ ಶಾಸಕರಿದ್ದು, ಕಾನೂನು ಬದ್ದ ಸಾಮೂಹಿಕ ಪಕ್ಷಾಂತಕ್ಕೆ ಕನಿಷ್ಠ 8 ಶಾಸಕರ ಅಗತ್ಯವಿದೆ. ಅದನ್ನು ಸಾಧಿಸುವುದಕ್ಕಾಗಿ ಮಾಜಿ ಮುಖ್ಯಮಂತ್ರಿ, ಹಾಲಿ ಶಾಸಕ ದಿಗಂಬರ್ ಕಾಮತ್ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಸಂಭಾವ್ಯ ಬಂಡಾಯವನ್ನು ತಡೆಯಲು ಕಾಂಗ್ರೆಸ್ ಪಕ್ಷವು ನಿನ್ನೆ ಸಂಜೆ ಶಾಸಕರ ಸಭೆ ಕರೆದಿತ್ತು. ಪಕ್ಷದ ಮುಖಂಡ ಮುಕುಲ್ ವಾಸ್ನಿಕ್ ಮತ್ತು ಉಸ್ತುವಾರಿ ದಿನೇಶ್ ಗುಂಡೂರಾವ್ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಿಗಂಬರ್ ಕಾಮತ್, ಮೈಕಲ್ ಲೋಬೊ ಹೊರತುಪಡಿಸಿ ಉಳಿದ 09 ಸದಸ್ಯರು ಭಾಗವಹಿಸಿದ್ದಾರೆ. ಆ ಚಿತ್ರವನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್ ಇದು ಬಿಜೆಪಿಯ ವಿಫಲ ಯತ್ನ ಎಂದು ಕರೆದಿದೆ.
ಬಿಜೆಪಿಯು ತನ್ನ ಆರು ಶಾಸಕರನ್ನು ಗೋವಾದಿಂದ ಹೊರಗೆ ಸ್ಥಳಾಂತರಿಸಲು ಚಾರ್ಟರ್ಡ್ ಫ್ಲೈಟ್ ಅನ್ನು ಸಿದ್ಧಪಡಿಸಿದೆ. ಬಿಜೆಪಿಯ ಉನ್ನತ ನಾಯಕರೊಬ್ಬರು ಶಾಸಕರೊಂದಿಗೆ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದು, ಅವರು ಪಕ್ಷಕ್ಕೆ ಸೇರಿದರೆ ತಲಾ ₹ 15 ಕೋಟಿಯಿಂದ ₹ 20 ಕೋಟಿ ನೀಡುವುದಾಗಿ ಆಮಿಷ ತೋರಿಸಿದ್ದಾರೆ. ಶಾಸಕರ ಸಂಖ್ಯೆ ಕಡಿಮೆಯಾದಾಗ ಅವರ ಯೋಜನೆ ಸ್ಥಗಿತಗೊಂಡಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಭಾನುವಾರ ಕಾಂಗ್ರೆಸ್ ಪಕ್ಷದ ಐವರು ಶಾಸಕರು ನಾಪತ್ತೆಯಾಗಿದ್ದರು. ಅವರು ದಿಂಗಂಬರ್ ಕಾಮತ್ ನೇತೃತ್ವದಲ್ಲಿ ಸಿಎಂ ಪ್ರಮೋದ್ ಸಾವಂತ್‌ರನ್ನು ಭೇಟಿಯಾಗಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಇದು ಪಕ್ಷದ ವರಿಷ್ಟರನ್ನು ಚಿಂತೆಗೆ ದೂಡಿತ್ತು. ಸೋಮವಾರ ಅವರೆಲ್ಲರೂ ಮತ್ತೆ ಪ್ರತ್ಯಕ್ಷರಾಗಿದ್ದಾರೆ ಮತ್ತು ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿದ್ದಾರೆ. ಆದರೂ ಕಾಂಗ್ರೆಸ್ ಪಕ್ಷದ ಶಾಸಕರು ಪಕ್ಷಾಂತರವಾಗದಂತೆ ತಡೆಯಲು ಕಾವಲು ಕಾಯುತ್ತಿದೆ.
ಕಾಣೆಯಾಗಿದ್ದ ವಿರೋಧ ಪಕ್ಷದ ನಾಯಕ ಮೈಕಲ್ ಲೊಬೋರನ್ನು ಆ ಸ್ಥಾನದಿಂದ ತೆಗೆದುಹಾಕುವಂತೆ ಕಾಂಗ್ರೆಸ್ ಸ್ಪೀಕರ್ ಅವರಲ್ಲಿ ಮನವಿ ಮಾಡಿದೆ. ಅವರು ದಿಗಂಬರ್ ಕಾಮತ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಪಕ್ಷಾಂತರಕ್ಕೆ ಯೋಜನೆ ರೂಪಿಸಿದವರಲ್ಲಿ ಒಬ್ಬರಾಗಿದ್ದಾರೆ ಎನ್ನಲಾಗಿದೆ.
ಗೋವಾ ಸಿಎಂ ಪ್ರಮೋದ್ ಸಾವಂತ್ ಮಾಧ್ಯಮಗಳೊಂದಿಗೆ ಮಾತನಾಡಿ ನನಗೂ ಕಾಂಗ್ರೆಸ್ ಬಿಕ್ಕಟ್ಟಿಗೂ ಸಂಬಂಧವಿಲ್ಲ ಎಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದಿಗಂಬರ್ ಕಾಮತ್ ನೇತೃತ್ವದಲ್ಲಿ ಚುನಾವಣೆ ಎದುರಿಸಿತ್ತು. ಆದರೆ 11 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಆನಂತರ ದಿಗಂಬರ್ ಕಾಮತ್ ಬದಲಿಗೆ ಮೈಕಲ್ ಲೋಬೊರನ್ನು ವಿರೋಧ ಪಕ್ಷದ ಮುಖಂಡರನ್ನಾಗಿ ನೇಮಿಸಿತ್ತು. ಇದರಿಂದ ದಿಗಂಬರ್ ಕಾಮತ್ ಬಂಡಾಯವೆದ್ದಿದ್ದಾರೆ ಎನ್ನಲಾಗಿತ್ತು. ಆಶ್ಚರ್ಯಕರ ರೀತಿಯಲ್ಲಿ ವಿಪಕ್ಷ ನಾಯಕ ಮೈಕಲ್ ಲೋಬೊ ಕೂಡ ಅವರ ಜೊತೆಗೂಡಿದ್ದಾರೆ.
ಇದನ್ನೂ ಓದಿ: ಉದ್ಧವ್ ಠಾಕ್ರೆಗೆ ಮತ್ತೆ ಸಂಕಷ್ಟ: ದ್ರೌಪದಿ ಮುರ್ಮು ಬೆಂಬಲಿಸುವಂತೆ 16 ಸಂಸದರ ಒತ್ತಡ


