ಪೈರೇಟ್ಸ್ ಆಫ್ ಕೆರಿಬಿಯನ್ ನಟ ಜಾನಿ ಡೆಪ್ ವಿಶ್ವದೆಲ್ಲೆಡೆ ಸುದ್ದಿಯಲ್ಲಿದ್ದಾರೆ. ವಿಚ್ಛೇದಿತ ಹೆಂಡತಿ ಅಂಬರ್ ಹರ್ಡ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿ ಜಯಿಸಿಕೊಂಡು ಗಂಡಸರ ಬಾಯಿಯಲ್ಲಿ ನಲಿದಾಡುತ್ತಿದ್ದಾರೆ. ಹಾಲಿವುಡ್‌ನ ಖ್ಯಾತ ತಾರೆಯರಾದ ಜಾನಿ ಡೆಪ್ ಮತ್ತು ಅಂಬರ್ ಹರ್ಡ್ 2015ರಲ್ಲಿ ಮದುವೆಯಾದರು. ಸುಮಾರು 15 ತಿಂಗಳ ಕಾಲ ಜೊತೆಗಿದ್ದು, ಕೋರ್ಟ್‌ನಲ್ಲಿ ಪರಸ್ಪರ ಬೈಗುಳ ನಿಂದನೆಯ ನಂತರ ಮದುವೆ ಮುರಿದು ಬಿದ್ದಿತ್ತು.
ವಿಚ್ಛೇದನದ ನಂತರ 2018ರಲ್ಲಿ ಅಂಬರ್ ಹರ್ಡ್ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಬರೆದ ಲೇಖನ, ಡೆಪ್ ಮಾನನಷ್ಟ ಮೊಕದ್ದಮೆ ಹೂಡಲು ಪ್ರೇರಣೆಯಾಯಿತು. ಅಂಬರ್ ತಾನು ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ ಎಂದು ಜಾನಿ ಡೆಪ್ ಹೆಸರನ್ನು ಉಲ್ಲೇಖಿಸದೆ ಬರೆದಿದ್ದಳು.
ಇದರ ನಂತರ ಅನೇಕ ಪತ್ರಿಕೆಗಳು ಜಾನಿ ಡೆಪ್‌ನನ್ನು ಪತ್ನಿ ಪೀಡಕ ಮತ್ತು ಇನ್ನಿತರ ರೀತಿಯಾಗಿ ಬಿಂಬಿಸಿ ಹಸಿಬಿಸಿ ಸುದ್ದಿ ಮಾಡಿ ಹಂಚಿದ್ದವು. ಇದರಿಂದ ಸಿಟ್ಟಾದ ಡೆಪ್ ಅಂಬರ್ ವಿರುದ್ದ 50 ಮಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿದ್ದ. ಪ್ರತಿಯಾಗಿ ಅಂಬರ್ 100 ಮಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ಹಾಕಿದ್ದಳು. ಈಗ ವರ್ಜೀನಿಯಾ ಕೋರ್ಟ್ ಜಾನಿ ಡೆಪ್ ಪರವಾಗಿ ತೀರ್ಪು ನೀಡಿದ್ದು, ಡೆಪ್‌ನಿಗೆ 15 ಮಿಲಿಯನ್ ಡಾಲರ್ ನೀಡುವಂತೆ ಅಂಬರ್ ಹರ್ಡ್‌ಗೆ ಹೇಳಿದೆ. ಹಾಗೆ ಡೆಪ್ ಕೂಡ 2 ಮಿಲಿಯನ್ ಡಾಲರನ್ನು ಅಂಬರ್‌ಗೆ ನೀಡಬೇಕೆಂದಿದೆ. ಅಂದರೆ ಡೆಪ್ ಕೂಡ ತಪ್ಪಿತಸ್ಥನೆ. ಆತ ನಿರಪರಾಧಿ ಖಂಡಿತ ಅಲ್ಲ.
ಈ ಮಧ್ಯೆ 2017ರಲ್ಲಿ ಆದ ವಿವಾಹ ವಿಚ್ಛೇದನ ಪರಿಹಾರವಾಗಿ ಡೆಪ್ ಅಂಬರ್‌ಗೆ ನೀಡಬೇಕಿದ್ದ 7 ಮಿಲಿಯನ್ ಡಾಲರ್‌ಗಳನ್ನು ಇನ್ನೂ ಸಹ ನೀಡಿಲ್ಲ. ವಿಚ್ಛೇದನ ಪರಿಹಾರದ ಎಲ್ಲಾ ಹಣವನ್ನು ಚಾರಿಟಿಗೆ ನೀಡುತ್ತೇನೆ ಎಂದಿದ್ದ ಅಂಬರ್ ತನಗೆ ಬಂದಿದ್ದ 1.3 ಮಿಲಿಯನ್ ಡಾಲರ್ ಹಣವನ್ನು ಆರ್ಥಿಕ ಸಂಕಷ್ಟದಿಂದ ತನ್ನಲ್ಲೆ ಉಳಿಸಿಕೊಂಡಿದ್ದಾಳೆ. ಕೊನೆಗೆ ಇಬ್ಬರೂ ಕಣ್ಣಿಗೆ ಎದ್ದು ಕಾಣುವ ಸಣ್ಣಸಣ್ಣ ತಪ್ಪು ಮತ್ತು ಸುಳ್ಳುಗಳನ್ನು ಕಟಕಟೆಗೆ ತಂದು ಜಗಜ್ಜಾಹೀರು ಮಾಡಿದ್ದಾರೆ. ಪರಸ್ಪರ ಪ್ರೀತಿ ಮುರಿದ ಮೇಲೆ ಕೊನೆಗೆ ಉಳಿಯಬೇಕಾದ ಗೌರವವೂ ಇಬ್ಬರ ನಡುವೆ ಇಲ್ಲದಿರುವುದು ಇಷ್ಟಕ್ಕೆ ಕಾರಣವಾಗಿದೆಯೊ ಅಥವಾ ಒಬ್ಬರಿಂದ ಒಬ್ಬರು ಅನುಭವಿಸಿದ ಹಿಂಸೆಯನ್ನ ಇಬ್ಬರಿಗೂ ಮರೆಯಲಾಗದೆ ಕೆದಕಿ ಬೆದಕಿ ಹೊಸ ರೂಪ ನೀಡುತ್ತಿದ್ದಾರೋ ತಿಳಿಯದಾಗಿದೆ.
ಹಾಲಿವುಡ್ ತಾರೆಗಳ ಹತ್ತಾರು ಸಂಬಂಧಗಳು, ಉತ್ಕಟ ಪ್ರೀತಿ, ಡ್ರಗ್ಸ್ ಪಾರ್ಟಿಗಳು, ರಂಗೀಲಾ ಮದುವೆ, ವಿಚ್ಛೇದನ ಎಲ್ಲವೂ ಬಹುದೊಡ್ಡದಾಗಿ ಸುದ್ದಿಯಾಗುತ್ತವೆ. ಅವರ ಬೆಡ್‌ರೂಂ ಕಥೆಗಳಂತೂ ಮಾಧ್ಯಮಗಳಿಗೆ ಆಹಾರವಾಗಿರುವಾಗ ಹಾಲಿವುಡ್ ಗಂಡಹೆಂಡತಿ ಜಗಳಕ್ಕೆ ಬೇರೆಬೇರೆ ಆಯಾಮ ನೀಡಲಾಗುತ್ತಿದೆ. ಡೆಪ್ ಮಾನನಷ್ಟ ಮೊಕದ್ದಮೆ ಗೆದ್ದಿದ್ದಂತೂ ಅಂದಾಜು ಮೀರಿ ಸುದ್ದಿಯಾಯಿತು. ವಿಶ್ವದ ಅನೇಕ ಗಂಡಸರು ತಮ್ಮದೆ ಜಯ ಎಂಬಂತೆ ಸಂಭ್ರಮಿಸಿದರು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಕುರಿತಾದ ಮತ್ತು ಗಂಡಸೂ ಕೂಡ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಹೇಳಿಕೊಳ್ಳುವ#MenToo ಚಳವಳಿಯಾಗಿ ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಯಿತು.
ಜಾನಿ ಡೆಪ್ ಮತ್ತು ಅಂಬರ್ ಪ್ರಚಾರ ಬಯಸುವ ಮತ್ತು ಪ್ರಚಾರದಿಂದ ಬಂದ ಪ್ರಖ್ಯಾತಿ ಹಾಗೆ ಉಳಿಯಬೇಕು ಎಂದು ಬಯಸುವ ನಟನೆಯ ವೃತ್ತಿಯಲ್ಲಿರುವವರು. ಈ ಪ್ರಕರಣದಲ್ಲಿ ಜಾನಿ ಡೆಪ್ ಸೋಷಿಯಲ್ ಮೀಡಿಯಾಗಳನ್ನು ಬಳಸಿಕೊಂಡು ತನ್ನ ಮೇಲೆ ಬಂದಿರುವ ಆರೋಪಕ್ಕೆ ಬಿಳಿ ಬಣ್ಣಬಳಿದುಕೊಳ್ಳುವ ಪ್ರಯತ್ನದಲ್ಲಿ ಬಹುಪಾಲು ಯಶಸ್ವಿಯಾಗಿರಬಹುದು. ಆದರೆ ಅವನಿಗೆ ಈಗಲೂ ಕೈತಪ್ಪಿಹೋಗುತ್ತಿರುವ ಪ್ರಾಜೆಕ್ಟ್‌ಗಳನ್ನು ನೋಡಿದರೆ ಹಾಲಿವುಡ್ ಮಂದಿಗೆ ತಾನೊಬ್ಬ ಅನ್ಯಾಯಕ್ಕೆ ಒಳಗಾದ ಗಂಡಸು ಎಂದು ನಂಬಿಸುವುದರಲ್ಲಿ ಸೋತಿರಬಹುದು.
ಜಾನಿ ಡೆಪ್ ಪ್ರಖ್ಯಾತಿಗೆ ಬಂದೊದಗಿರುವ ಕುತ್ತು, ವೃತ್ತಿಯಲ್ಲಾಗಿರುವ ಹಿನ್ನಡೆ ಹಾಗೂ ಸಾಮಾಜಿಕವಾಗಿ ಆಗಿರುವ ಅವಮಾನಕ್ಕೆ ಅಂಬರ್ ಕಾರಣ ಮತ್ತು ಅವಳಷ್ಟೆ ಕಾರಣ ಎಂಬುದಾಗಿ ಡೆಪ್‌ನನ್ನು ಬೆಂಬಲಿಸುವ ಅಭಿಮಾನಿ ಗುಂಪು ಜಗತ್ತಿಗೆ ಸಾಬೀತುಮಾಡಲು ಹೊರಟಿದೆ. ಆದರೆ ಜಾನಿ ಡೆಪ್ ಈಗಿನ ಸ್ಥಿತಿಗೆ ಅಂಬರ್ ಎಷ್ಟು ಕಾರಣಳೋ ಜಾನಿ ಡೆಪ್ ಕೂಡ ಅಷ್ಟೆ ಕಾರಣ. ಅಂಬರ್ ವಿಷಯದಲ್ಲೂ ಇದು ಹಾಗೆಯೆ. ಇಂದು ಆಕೆ ಬೆಲೆ ತೆತ್ತುತ್ತಿರುವುದರಲ್ಲಿ ಆಕೆಯದು ಸಮಪಾಲಿದೆ.
ಇಬ್ಬರೂ ತಮ್ಮನ್ನು ನಿರಪರಾಧಿಗಳು ಎಂದು ಸಾಬೀತುಮಾಡಿಕೊಳ್ಳಲು ಹಳೆಯ ಪ್ರೇಮಿಗಳ ಜೊತೆಗಿನ ಸಂಬಂಧಗಳನ್ನು, ಮದುವೆಗಳನ್ನು ಕೆದಕಿದ್ದರು. ಅಂಬರ್‌ಳನ್ನು ಮದುವೆಯಾಗುವ ಮುನ್ನ ಡೆಪ್‌ಗೆ 2 ಬಾರಿ ವಿವಾಹವಾಗಿತ್ತು. ಒಬ್ಬರಾದ ನಂತರ ಒಬ್ಬರಂತೆ ಹೆಂಡತಿಯರನ್ನು ಸೇರಿ 6 ಗೆಳತಿಯರು. ಜಾನಿಯ 7ನೇ ಗೆಳತಿ ಹಾಗೂ 3ನೇ ಹೆಂಡತಿ ಅಂಬರ್ ಆತನಿಗಿಂತ 23 ವರ್ಷ ಚಿಕ್ಕವಳು.
ಡೆಪ್‌ನ ಮೊದಲನೆ ಹೆಂಡತಿ ಲೋರಿ ಅಲ್ಲಿಸನ್ ಡೆಪ್‌ನನ್ನು ಹಾಲಿವುಡ್‌ನಲ್ಲಿ ಸಂಪರ್ಕ ಮಾಡಿದ್ದಳು. ಈಕೆ ನಿಕೋಲಸ್ ಕೇಜ್‌ಹೆ ಡೆಪ್‌ನನ್ನು ಭೇಟಿ ಮಾಡಿಸುವ ಮೂಲಕ ಡೆಪ್‌ಗೆ ಹಾಲಿವುಡ್‌ನ ಬಾಗಿಲು ತೆರೆದಿತ್ತು. 1983ರಲ್ಲಿ ಮದುವೆಯಾದ ಈ ಜೋಡಿ ಎರಡೇ ವರ್ಷದಲ್ಲಿ (1985) ಬೇರೆಯಾಗಿದ್ದರು. ಇದಾದ ನಂತರ ಜೆನ್ನಿಫರ್ ಗ್ರೇ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡು ಮದುವೆಯಾಗದೆ ಅರ್ಧದಲ್ಲೆ ಕೈಬಿಟ್ಟು ವಿನೋನಾ ರೈಡರ್ ಮೇಲೆ ಡೆಪ್ ಪ್ರೀತಿ ಬೆಳೆಸಿಕೊಂಡಿದ್ದ. ’ವಿನೋನಾ ಫಾರೆವರ್’ ಎಂಬ ಟ್ಯಾಟುವನ್ನು ಹಾಕಿಸಿಕೊಂಡಿದ್ದ. ಈಗ ಅದನ್ನ ’ವಿನೋ ಫಾರೆವರ್’ ಎಂದು ಮಾಡಿಸಿಕೊಂಡಿದ್ದಾನೆ. 1993ರಲ್ಲಿ ಈ ಸಂಬಂಧ ಮುರಿದುಬಿದ್ದಿತ್ತು. ಅಂಬರ್ ಹೇಳುವ ಪ್ರಕಾರ ಡೆಪ್ ತನ್ನ ಮೇಲೆ ಮೊದಲ ಬಾರಿ ಕೈ ಮಾಡಿದ್ದು, ’ವಿನೊ ಫಾರೆವರ್’ ಅಂದರೆ ಏನು ಎಂದು ಅವರಿಬ್ಬರೂ ಸೇರಿ ಕುಡಿಯುವಾಗ ಕೇಳಿದ್ದಕ್ಕೆ. ಆಗ ಡೆಪ್ ಕೊಕೇನ್ ಡ್ರಗ್ ಕೂಡ ಸೇವಿಸಿದ್ದ. ಆಗ ಒಂದರ ಮೇಲೊಂದು ಹೊಡೆತ ಬಿದ್ದಿತ್ತು ಎಂದಿದ್ದಾಳೆ.
ಡೆಪ್ 1994ರಲ್ಲಿ ಬ್ರಿಟಿಷ್ ಮಾಡೆಲ್ ಕೇಟ್ ಮೊಸ್ ಜೊತೆ 4 ವರ್ಷ ಜೊತೆ ಇದ್ದ. ಡೆಪ್ ಈಕೆಯನ್ನು ಮೆಟ್ಟಿಲಿನಿಂದ ತಳ್ಳಿದ್ದ ಎಂಬ ಊಹಾಪೋಹ ಇತ್ತು. ಇದನ್ನು ಅಂಬರ್ ಕೋರ್ಟ್‌ನಲ್ಲಿ ಸಹ ಹೇಳಿದ್ದಳು. ಆದರೆ ಕೇಟ್ ನ್ಯಾಯಾಲಯಕ್ಕೆ ಹಾಜರಾಗಿ ಇದು ಶುದ್ಧ ಸುಳ್ಳು ಎಂಬ ಹೇಳಿಕೆ ನೀಡಿದ್ದಳು.
ಅದಾದನಂತರ ವನ್ನೆಸಾ ಪ್ಯಾರಡೀಸ್ ಜೊತೆ ಡೆಪ್ 14 ವರ್ಷ ಇದ್ದ. ಇವರಿಗೆ ಎರಡು ಮಕ್ಕಳಿದ್ದಾರೆ. 2012ರಲ್ಲಿ ಇಬ್ಬರೂ ಬೇರೆಯಾದರು.
ಆ ನಂತರ ಡೆಪ್‌ನ ಏಳನೆಯ ಗೆಳತಿಯೆ ಅಂಬರ್ ಹರ್ಡ್. ಡೆಪ್‌ನಿಗೆ ಸಂಬಂಧಗಳನ್ನು ಬದಲಾಯಿಸುವುದು ಸುಲಭ ಮತ್ತು ಎಲ್ಲರನ್ನೂ ನಿಭಾಯಿಸುವ ಕಲೆ ಇದೆ. ಹಳೆ ಗೆಳತಿಯರು ಮತ್ತು ವಿಚ್ಛೇದನ ಪಡೆದಿರುವ ಹೆಂಡತಿಯರು ಈ ಮಾನನಷ್ಟ ಮೊಕದ್ದಮೆಯಲ್ಲಿ ಅವನ ಪರ ಮಾತನಾಡುವಂತೆ ಡೆಪ್‌ನ ಪಿ.ಆರ್ ಟೀಮ್ (ಸಾರ್ವಜನಿಕ ಸಂಪರ್ಕ ಸಾಧಿಸಿ ಪ್ರಚಾರ ಮಾಡುವ ತಂಡ) ಕೆಲಸ ಮಾಡಿತ್ತು.
ಡೆಪ್ ಜೊತೆ ಮದುವೆಯಾಗುವ ಮೊದಲು ಅಂಬರ್ 2008-12ರವರೆಗೆ ತಸ್ಯ ವಾನ್ ರೇ ಎಂಬ ಫೋಟೋಗ್ರಾಫರ್ ಜೊತೆ ಸಂಬಂಧದಲ್ಲಿದ್ದಳು. ಆತನ ಮೇಲೆ ಹಲ್ಲೆ ಮಾಡಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು ದೊಡ್ಡ ಸುದ್ದಿಯಾಗಿದ್ದರಿಂದ ಸಾಕ್ಷಿಗಳ ಅಗತ್ಯ ಬೀಳಲಿಲ್ಲ. ಡೆಪ್ ಮತ್ತು ಅಂಬರ್ ಇಬ್ಬರೂ ಸಹ ಒಬ್ಬರ ಮೇಲೊಬ್ಬರು ಹಲ್ಲೆ ಮಾಡಿಕೊಂಡಿದ್ದಕ್ಕೆ ಸಾಕ್ಷಿಗಳಿವೆ. ಸಂಬಂಧಗಳನ್ನು ಸರಿಯಾಗಿ ನಿಭಾಯಿಸಲಾಗದ್ದಕ್ಕೆ ನಿದರ್ಶನಗಳಿವೆ. ಆದ್ದರಿಂದ ಡೆಪ್‌ನ ಗೆಲುವು ಸುಳ್ಳಿನ ವಿರುದ್ದ ಸತ್ಯ ಗೆದ್ದಂತಹ ಗೆಲುವಲ್ಲ. ಜಾನಿ ಡೆಪ್ ಈ ಪ್ರಕರಣವನ್ನು ಗೆಲ್ಲಲೇಬೇಕು ಎಂದು ಮಾಡಿದ ತಂತ್ರಗಾರಿಕೆ ಬಹುದೊಡ್ಡದು. ಆತನ ಪರವಾಗಿ ಹಲವು ವಕ್ತಾರರನ್ನು ಕೂಡ ನೇಮಿಸಿಕೊಂಡಿದ್ದ.
ಮನಶಾಸ್ತ್ರಜ್ಞರಿಂದ ಅಂಬರ್‌ಗೆ ’ಬಾರ್ಡರ್ ಲೈನ್ ಪರ್ಸವಾಲಿಟಿ’ ಇದೆ ಎಂದು ಹೇಳಿಸಿದ. ಪ್ರಚಾರ ಬಯಸಿ ಜನರ ಗಮನ ಸೆಳೆಯುವ ತಂತ್ರ ಮಾಡುತ್ತಿದ್ದಾಳೆ ಎಂದು ದಾಖಲೆಯಿಟ್ಟ. ಹಿಸ್ಟ್ರಿಯೋನಿಕ್ ಪರ್ಸನಾಲಿಟಿ ಡಿಸಾರ್ಡರ್ ಇದೆ, ಆಕೆ ತಾನೆ ಜನರ ಕೇಂದ್ರಬಿಂದುವಾಗಬೇಕೆಂದು ನಾಟಕ ಮಾಡುತ್ತಾಳೆ ಎಂದು ಸಹ ಹೇಳಿಸಿದ. ಆದರೆ ಡೆಪ್ ನಿಯೋಜಿಸಿದ ’ರೆಡ್ ಬ್ಯಾನಿಯನ್’ ಪಿ.ಆರ್ ಟೀಮ್ ಸಂಸ್ಥಾಪಕ ಇವಾನ್ ನಿಯರ್‌ಮನ್ “ಇಡೀ ಪ್ರಕರಣವನ್ನು ತುಂಬಾ ಆಕರ್ಷಕವಾಗಿ ಬಹು ಆಯಾಮದಲ್ಲಿ ಪ್ರಚಾರ ಮಾಡುವುದೆ ತಮ್ಮ ಕೆಲಸವಾಗಿದೆ” ಎಂದು ಹೇಳಿದ್ದಲ್ಲದೆ ಹಾಗೆಯೇ ಮಾಡಿದರು ಸಹ. ಇದು ಡೆಪ್ ಮಾಡಿದ ನಾಟಕದ ಮುಖ್ಯ ಭಾಗ.
ತನ್ನ ಈ ಸಾಪೇಕ್ಷ ಜಯ ಬಹುದೊಡ್ಡ ಸುದ್ದಿಯಾಗಲೇಬೇಕು ಎಂದು ಅದನ್ನು ಸಾಧಿಸಿಕೊಂಡ ಜಾನಿ ಡೆಪ್. ಅಂಬರ್‌ಳನ್ನು ಹಿಂಸೆ ಮಾಡಿ ಕೊಲ್ಲುವ ಆಸೆಯನ್ನು ಗೆಳೆಯನಿಗೆ ಸಂದೇಶ ತಲುಪಿಸಿದ್ದಲ್ಲದೆ ಅಂಬರ್‌ಳಿಗೂ ಬೆದರಿಸಿದ್ದ. ಈಗ ಸಾಮಾಜಿಕವಾಗಿ ಆಕೆಯನ್ನು ಮುಗಿಸುವ ಕೆಲಸವನ್ನು ಆತನ ಪಿ.ಆರ್ ತಂಡ ಮಾಡುತ್ತಿದೆ. ಅಂಬರ್ ಮಾಡಿದ ಆರೋಪದ ಕಾರಣದಿಂದ ಕೆಲ ಪ್ರಾಜೆಕ್ಟ್‌ಗಳು ಅವನ ಕೈ ತಪ್ಪಿದ್ದ ಕಾರಣ ಡೆಪ್‌ಗೆ ತಾನು ನಿರಪರಾಧಿ ಎಂದು ನ್ಯಾಯಾಲಯ ನೀಡಿದ ತೀರ್ಪನ್ನು ಜಗತ್ತಿಗೆ ಸಾರಿ ಹೇಳುವ ಅವಶ್ಯಕತೆ ಬಿದ್ದಿರಬಹುದು. ತನ್ನ ಅಭಿಮಾನಿಗಳನ್ನು ಉಳಿಸಿಕೊಳ್ಳುವ ತಂತ್ರಗಾರಿಕೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಸಿನೆಮಾ ತಾರೆಗಳು ಏನೇ ಮಾಡಿದರೂ ಸಮಾಜದ ಕಣ್ಣಿಗೆ ಮಾತ್ರ ಒಳ್ಳೆಯವರಾಗಿ ಉಳಿಯಬೇಕಾದ ಅನಿವಾರ್ಯ ಮಾತ್ರ ಎಲ್ಲಾ ಭಾಷೆ-ದೇಶಗಳ ಸಿನೆಮಾರಂಗದಲ್ಲಿಯೂ ಇದೆ. ಕೆಟ್ಟದ್ದನ್ನು ಒಳ್ಳೆಯದು ಎಂದು ಪ್ರಚಾರ ಮಾಡಲು ಇಲ್ಲಿ ಬಹುರಾಷ್ಟ್ರೀಯ ಕಂಪನಿಗಳಿವೆ. ಹಣ ಕೊಟ್ಟು ತಂತ್ರ ಹೆಣೆದು ಸತ್ಯವನ್ನು ಸೃಷ್ಟಿಮಾಡಬಹುದಾಗಿದೆ. ಬಂಡವಾಳಶಾಹಿಗಳು ಏನನ್ನೂ ಕೂಡ ಮಾಡಿ ಜಯಿಸಬಹುದಾಗಿದೆ. ಸಾಕ್ಷಿ ಸೃಷ್ಟಿ ಮತ್ತು ನಾಶ ಬಲಿಷ್ಠರಿಂದ ಸಾಧ್ಯ ಎಂಬುದೇ ಆತಂಕಕಾರಿ. ಇದು ಹಾಲಿವುಡ್ ಬಾಲಿವುಡ್ ಮತ್ತು ನಮ್ಮ ಕನ್ನಡ ಚಿತ್ರರಂಗದಲ್ಲೂ ಪದೆಪದೆ ಸಾಬೀತಾಗುತ್ತಿದೆ.
ಪ್ರಸ್ತುತ ಡೆಪ್-ಹರ್ಡ್ ಟ್ರಯಲ್ ಕೂಡ ಜಾಗತಿಕವಾಗಿ ಉತ್ತಮ ಸಂದೇಶ ಕೊಡುವಂತಹ ಸುದ್ದಿಯೇನು ಅಲ್ಲ. ಪ್ರಖ್ಯಾತ ವ್ಯಕ್ತಿಗಳ ಕುಖ್ಯಾತ ಸುದ್ದಿ ಎಂದಷ್ಟೆ ಗ್ರಹಿಸಬೇಕು. ಗಂಡಸರಿಗೆ ಖುಷಿ ಕೊಟ್ಟಿದ್ದು ಆಕೆ ಪರಿಹಾರವಾಗಿ ನೀಡಬೇಕಾಗಿರುವ ಹಣ ಮತ್ತು ಹೆಣ್ಣಿನ ಮೇಲೆ ಗಂಡು ಜಯಿಸಿದ ಎಂಬ ಕಾರಣಕ್ಕೆ. ಎರಡೂ ಕಡೆ ತಪ್ಪನ್ನು ನೋಡದೆ, ಡೆಪ್‌ನ ಗೆಲುವನ್ನು ನಿಜವಾಗಿ ಸಂಭ್ರಮಿಸಲು ಸಾಧ್ಯವಾಗಿದ್ದು ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರಿಗೆ ಮಾತ್ರ. ಅದು ಹೆಣ್ಣಿರಬಹುದು ಗಂಡಿರಬಹುದು ಸಂಭ್ರಮಿಸಿದ್ದು ಗಂಡಾಳ್ವಿಕೆ ಮನಸ್ಥಿತಿಗಳೆ.
#MeToo, ಹೆಣ್ಣಿನ ಒಳಗೆ ಹುದುಗಿಟ್ಟುಕೊಂಡ ದೌರ್ಜನ್ಯ ಅನುಭವಗಳು ತುಂಬಾ ಆರ್ಗಾನಿಕ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಕೊಂಡ ಅಭಿಯಾನ. ಆದರೆ #MenToo ಜಾನಿ ಡೆಪ್‌ನ ಪಿ.ಆರ್ ತಂಡ ಮಾಡಿದ ಪ್ರಮೋಟೆಡ್ ಅಭಿಯಾನ. ಹೆಣ್ಣಿನ ಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಂತೆ #MenTooವನ್ನು ಮಾರ್ಕೆಟಿಂಗ್ ಮಾಡಲಾಯಿತು. ಅಂಬರ್ ಮೇಲಿನ ಸೈಬರ್ ಟ್ರೋಲಿಂಗ್ ನೋಡಿದಾಗ ಪುರುಷ ಪ್ರಧಾನ ವ್ಯವಸ್ಥೆಯ ಜೀವಂತಿಕೆ ಗಾಬರಿ ಹುಟ್ಟಿಸಿದೆ. ಇಡೀ ಜಗತ್ತಿನಲ್ಲಿ ಅದೂ ಸಹ ಸುಶಿಕ್ಷಿತರಲ್ಲಿ ಗಂಡಾಳ್ವಿಕೆ ಮನಸ್ಥಿತಿ ಗಟ್ಟಿಯಾಗಿರುವುದು ದುರಂತಕಾರಿ.
ಈ ಪ್ರಕರಣವನ್ನು ಗೆದ್ದ ನಂತರ ಇಂಗ್ಲೆಂಡ್‌ನಲ್ಲಿರುವ ಭಾರತೀಯ ಹೊಟೇಲ್‌ವೊಂದರಲ್ಲಿ 48 ಲಕ್ಷ ಖರ್ಚು ಮಾಡಿ ಡೆಪ್ ಸ್ನೇಹಿತರೊಂದಿಗೆ ಸಂಭ್ರಮಿಸಿದ್ದು ಕೂಡ ಪ್ರಚಾರದ ಭಾಗವೆ. ಭಾರತದಲ್ಲಿರುವ ಬಹುದೊಡ್ಡ ಅಭಿಮಾನಿ ಪಡೆಯನ್ನ ಮತ್ತು ಪುರುಷ ಪ್ರಧಾನ ವ್ಯವಸ್ಥೆಯ ಜನರನ್ನು ತನ್ನ ಪರವಾಗಿ ಉಳಿಸಿಕೊಳ್ಳುವ ಹಾಗೂ ಅವರಿಂದ ಪ್ರಚಾರ ಪಡೆಯುವ ತಂತ್ರದ ಭಾಗ.
ಇಲ್ಲಿ ಡೆಪ್ ಮತ್ತು ಅಂಬರ್ ಇಬ್ಬರೂ ಒಬ್ಬರನ್ನೊಬ್ಬರು ನಿಂದಿಸಿದ್ದಾರೆ. ಹಲ್ಲೆ ಮಾಡಿಕೊಂಡಿದ್ದಾರೆ. ಅವಳು ತಪ್ಪು ಎಂದು ತೋರಿಸಲು ಬೇಕಾದ ಸಾಕ್ಷ್ಯಾಧಾರಗಳನ್ನು ಇವನು, ಇವನು ತಪ್ಪಿತಸ್ಥ ಎಂಬುದಕ್ಕೆ ಸಾಕ್ಷಿಗಳನ್ನು ಇವಳು ಸಂಗ್ರಹಿಸಿಕೊಂಡಿದ್ದಾರೆ. ಸಾಕ್ಷಿಗಳನ್ನು ಸೃಷ್ಟಿಸಲು ಸಂದರ್ಭಗಳನ್ನು ಸಹ ಸೃಷ್ಟಿಸಿರುವುದು ಇಬ್ಬರ ವಿಷಯದಲ್ಲೂ ಎದ್ದು ಕಾಣುತ್ತದೆ. ಡೆಪ್ ವಿವಿಧ ರೀತಿಯ ಡ್ರಗ್ಸ್ ಸೇವಿಸುವುದು, ನಶೆಯಲ್ಲಿ ದೌರ್ಜನ್ಯ ಎಸಗಿದ್ದು ಸತ್ಯ. ಈ ಎಲ್ಲ ಕಾರಣಗಳಿಂದ ಈ ಪ್ರಕರಣವನ್ನು #MeTooನಿಂದ #MenTooವರೆಗಿನ ಚಳವಳಿಯ ಭಾಗ ಎಂದು ಕರೆಯಲು ಸಾಧ್ಯವಿಲ್ಲ.

ಚೈತ್ರಿಕಾ ನಾಯ್ಕ ಹರ್ಗಿ
ಉತ್ತರ ಕನ್ನಡ ಜಿಲ್ಲೆಯ ಹರ್ಗಿಯವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಓದು. ಸದ್ಯ ಇರುವುದು ಬೆಂಗಳೂರು. ಡಿಜಿಟಲ್ ಕ್ರಿಯೆಟಿವ್ ಕಂಟೆಂಟ್ ರೈಟರ್. ಅಡುಗೆ, ಸುತ್ತಾಟದಲ್ಲಿ ಆಸಕ್ತಿ. ಮಹಿಳಾವಾದದ ಹೊಸ ಮಗ್ಗುಲುಗಳನ್ನು ಶೋಧಿಸುವಲ್ಲಿ ನಿರತರಾದ ಯುವ ಉತ್ಸಾಹಿ.
ಇದನ್ನೂ ಓದಿ: ಪಠ್ಯ ಪರಿಷ್ಕರಣೆ; ಸಂವಿಧಾನದ ಮೇಲೂ ದಾಳಿ, ಮತ್ತೊಂದು ಕಡೆ ಸಂವಿಧಾನಶಿಲ್ಪಿಯ ಮೇಲೆಯೂ!


