ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಇಂದು (ನ.3, 2025) ಬೆಳಿಗ್ಗೆ 6.30ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 20 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಜಲ್ಲಿಕಲ್ಲು ತುಂಬಿಕೊಂಡು ಹೈದರಾಬಾದ್ ಕಡೆಯಿಂದ ಬಿಜಾಪುರ ಕಡೆಗೆ ಹೋಗುತ್ತಿದ್ದ ಲಾರಿಯೊಂದು ತಾಂಡೂರ್‌ನಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದ ತೆಲಂಗಾಣ ಸಾರಿಗೆ ಸಂಸ್ಥೆಯ (ಟಿಜಿಎಸ್‌ಆರ್‌ಟಿಸಿ) ಬಸ್‌ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಚೆವೆಲ್ಲಾ ಮಂಡಲದ ಮಿರ್ಜಗೂಡ ಬಳಿ ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಬಸ್ ಮೇಲೆ ಜಲ್ಲಿಕಲ್ಲುಗಳು ಬಿದ್ದಿದ್ದರಿಂದ ಅನೇಕ ಪ್ರಯಾಣಿಕರು ಅದರಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಹೊರ ತೆಗೆಯುವ ಪ್ರಯತ್ನ ನಡೆಯುತ್ತಿದೆ. ಮೃತರಲ್ಲಿ 10 ಮಂದಿ ಪುರುಷರು, 9 ಮಹಿಳೆಯರು ಮತ್ತು ಒಂದು ಮಗು ಸೇರಿದೆ ಎಂದು ಈಟಿವಿ ಭಾರತ್ ತೆಲಂಗಾಣ ವರದಿ ಮಾಡಿದೆ.
ಅಪಘಾತ ನಡೆಯುವಾಗ ಬಸ್‌ನಲ್ಲಿ ಸುಮಾರು 70 ಪ್ರಯಾಣಿಕರಿದ್ದರು. ಅವಘಡದ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂರು ಜೆಸಿಬಿಗಳ ಸಹಾಯದಿಂದ ಜಲ್ಲಿಕಲ್ಲುಗಳ ರಾಶಿಯ ಅಡಿಯಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಹೊರತೆಗೆಯಲಾಗುತ್ತಿದೆ.
ಗಾಯಾಳುಗಳನ್ನು ಚೆವೆಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.


