ಆದೇಶ ಇಲ್ಲದೆ ಪಠ್ಯ ಪರಿಷ್ಕರಣೆ ಮಾಡಿರುವ ಸಂಗತಿ ವರಿದಿಯಾಗಿದ್ದು, ಸರ್ಕಾರದ ನಿರ್ಲಕ್ಷದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ.
ಆದೇಶವಿಲ್ಲದೆ ಪಠ್ಯಪರಿಷ್ಕರಣೆಯಾಗಿರುವ ಕುರಿತು ಕನ್ನಡದ ವಿಶ್ವಾಸಾರ್ಹ ದಿನಪತ್ರಿಕೆ ‘ಪ್ರಜಾವಾಣಿ’ ವರದಿ ಮಾಡಿದೆ. “2022–23ನೇ ಸಾಲಿಗೆ ಪರಿಷ್ಕೃತ ಪಠ್ಯಪುಸ್ತಕಗಳನ್ನುಮುದ್ರಿಸಿ ವಿತರಿಸುವ ಬಗ್ಗೆ ಮಾರ್ಚ್ 9 ರಂದು ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ, ‘ಪಠ್ಯಪುಸ್ತಕಗಳನ್ನು ಪರಿಷ್ಕೃತಗೊಳಿಸಿರುವುದಕ್ಕೆ ಘಟನೋತ್ತರ ಅನುಮತಿ ನೀಡಿ, ಮುದ್ರಿಸಲು ಸೂಚಿಸಲಾಗಿದೆ’ ಎಂಬ ಉಲ್ಲೇಖವಿದೆ” ಎಂದು ವರದಿ ಉಲ್ಲೇಖಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಸರ್ಕಾರದ ಕೆಲಸವನ್ನೋ ಅಥವಾ ಕಾಮಗಾರಿಗೆ ಅನುದಾನ ಕೊಡಿಸಿಯೇ ತೀರುವೆಎಂಬ ವಿಶ್ವಾಸ ಇರುವ ಮುಖ್ಯಮಂತ್ರಿ ಅಥವಾ ಸಚಿವರು ಅಧಿಕೃತ ಆದೇಶ ಇಲ್ಲದೇ ಕೆಲಸ ಮಾಡಿಸುತ್ತಾರೆ. ಕೆಲಸ ಮುಗಿದ ಮೇಲೆ ಘಟನೋತ್ತರ ಅನುಮತಿ/ ಆದೇಶ ಹೊರಡಿಸುವ ಪರಿಪಾಟ ಇದೆ. ಮೌಖಿಕ ಸೂಚನೆ ಮೇರೆಗೆ ಪಠ್ಯಪುಸ್ತಕ ಪರಿಷ್ಕರಣೆಗೆ ಅವಕಾಶ ಕೊಟ್ಟು, ಬಳಿಕ ಆದೇಶ ಹೊರಡಿಸಿರುವುದು ತಕರಾರಿಗೆ ಕಾರಣವಾಗಿದೆ” ಎಂದು ವರದಿ ಹೇಳಿದೆ.
“ಸರ್ಕಾರದ ನಿಯಮಗಳ ಅನುಸಾರ, ವರದಿ ಸಲ್ಲಿಸಿದ ಬಳಿಕ ಪರಿಷ್ಕರಣೆ ಅಗತ್ಯವಿದ್ದಲ್ಲಿ ವಿಷಯ ತಜ್ಞರ ಸಮಿತಿ ರಚಿಸಬೇಕಾಗಿತ್ತು ಅಥವಾ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಗೆ ಪರಿಷ್ಕರಣೆ ಮಾಡುವ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಬೇಕಿತ್ತು. ಸದರಿ ಆದೇಶದಲ್ಲಿ ನಿಯಮ ಮತ್ತು ಷರತ್ತುಗಳನ್ನು ನೀಡಬೇಕಿತ್ತು. ಆ ಕೆಲಸ ಆಗಿಯೇ ಇಲ್ಲ ಎಂದು ಇಲಾಖೆ ಮೂಲಗಳು ಹೇಳಿವೆ” ಎಂದು ವರದಿಯಲ್ಲಿ ತಿಳಿಸಲಾಗಿದೆ.
‘ಪ್ರಜಾವಾಣಿ’ ವರದಿಗಳಿಗೆ ಸಚಿವ ಬಿ.ಸಿ.ನಾಗೇಶ್ ಗರಂ: ಸ್ಪಷ್ಟನೆಗೆ ನಕಾರ
ಪಠ್ಯಪುಸ್ತಕ ಪರಿಶೀಲನೆಯ ಅಧ್ವಾನಗಳು ಒಂದೊಂದಾಗಿ ಚರ್ಚೆಗೆ ಬರುತ್ತಿರುವಲ್ಲಿ ‘ಪ್ರಜಾವಾಣಿ’ ಕೆಲಸವೂ ಮುಖ್ಯವಾಗಿದೆ. ಜನಾಕ್ರೋಶಕ್ಕೆ ಮಣಿದು ಸರ್ಕಾರ ಕೆಲವು ತಿದ್ದುಪಡಿಗಳನ್ನೂ ಮಾಡಿಕೊಂಡಿದೆ. (ಉದಾಹರಣೆಗೆ: ಭಗತ್‌ಸಿಂಗ್ ಪಾಠಕ್ಕೆ ಕೋಕ್ ಎಂಬ ವರದಿಯನ್ನು ಮೊದಲಿಗೆ ‘ಪ್ರಜಾವಾಣಿ’ ಮಾಡಿತ್ತು. ಜನಾಕ್ರೋಶಕ್ಕೆ ಮಣಿದು ಸರ್ಕಾರ ಆ ಪಠ್ಯವನ್ನು ಸೇರಿಸಿಕೊಂಡಿದೆ). ಆದರೆ ಪಠ್ಯಪುಸ್ತಕಕ್ಕೆ ಸಂಬಂಧಿಸಿ ವಿವಿಧ ಮಾಧ್ಯಮಗಳು ನಿರಂತರ ವರದಿ ಮಾಡುತ್ತಿರುವುದರಿಂದ ಬಿ.ಸಿ.ನಾಗೇಶ್ ವಿಚಲಿತರಾದಂತೆ ಕಾಣುತ್ತಿದೆ.
‘ಪ್ರಜಾವಾಣಿ’ಯ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆಯಲು ‘ನಾನುಗೌರಿ.ಕಾಂ’ ವರದಿಗಾರರು ಸಚಿವ ಬಿ.ಸಿ.ನಾಗೇಶ್ ಅವರನ್ನು ಸಂಪರ್ಕಿಸಿದಾಗ, “ದಿನಕ್ಕೊಂದು ವರದಿಯನ್ನು ಪ್ರಜಾವಾಣಿಯವರು ಮಾಡುತ್ತಿದ್ದಾರೆ. ಅವರಿಗೆ ನಾವು ಪ್ರತಿಕ್ರಿಯೆ ನೀಡಬೇಕಿಲ್ಲ. ನಾರಾಯಣಗುರು ಪಾಠ ಇಲ್ಲ ಎಂದವರು ಅವರೇ, ಭಗತ್‌ಸಿಂಗ್ ಪಾಠಕ್ಕೆ ಕೊಕ್ ಎಂದವರೂ ಅವರೇ. ಎಲ್ಲದ್ದಕ್ಕೂ ಉತ್ತರ ಕೊಡೋಣವೇ? ಅವರು ಬರೆಯಲಿ, ನಾವು ಜನಕ್ಕೆ ಉತ್ತರ ಕೊಡುತ್ತೇವೆ” ಎಂದು ಹೇಳಿ ಕಾಲ್ ಕಟ್ ಮಾಡಿದರು. ವರದಿಗಳಿಗೆ ಯಾವುದೇ ಸ್ಪಷ್ಟನೆಯನ್ನು ಸಚಿವರು ನೀಡಲಿಲ್ಲ.
ಜನಾಕ್ರೋಶ
ಆದೇಶ ಇಲ್ಲದೇ ಪಠ್ಯ ಪರಿಷ್ಕರಣೆ ಮಾಡಿರುವ ಕುರಿತು ಜನಾಕ್ರೋಶ ವ್ಯಕ್ತವಾಗುತ್ತಿದೆ. ಈ ವಿಷಯ ಹೊರ ಬಂದ ಬಳಿಕ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರ ನಿಯಮಬಾಹಿರವಾಗಿ ನಡೆದುಕೊಂಡಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಇದು ಸಂತೋಷ್ ಪಾಟೀಲ್ ಕೇಸ್
“ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಸಂತೋಷ್ ಪಾಟೀಲ್ ಕಾರ್ಯಾದೇಶ (Work order) ಇಲ್ಲದೇ ಕೆಲಸ ಮಾಡಿರುವುದೇ ಅಕ್ರಮ ಎಂದು ಆಡಳಿತ ಪಕ್ಷದವರು ವಾದ ಮಾಡಿದ್ದರು. ಈಗ ಇಲ್ಲಿ ಆಗಿರುವುದೇನು? ಆದೇಶ ಇಲ್ಲದೇ ಸಚಿವರ ಮೌಖಿಕ ಸೂಚನೆಯ ಮೇರೆಗೆ ಸಣ್ಣ ನೀರಿನಟ್ಯಾಂಕ್ ಕೂರಿಸಬಹುದು; ಚರಂಡಿ ಸ್ವಚ್ಛ ಮಾಡಬಹುದು ಅಥವಾ ಅಂತಹ ಯಾವುದಾದರೂ ತುರ್ತು ಕಾಮಗಾರಿ ಕೈಗೊಂಡರೆ ಒಪ್ಪಬಹುದು. ಲಕ್ಷಾಂತರ ಮಕ್ಕಳ ಕಲಿಕಾ ಭವಿಷ್ಯ ನಿರ್ಧರಿಸುವ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಹೀಗೆ ಮಾಡಬಹುದೇ? ಹಾಗಾದರೆ ಈ ಸರ್ಕಾರದಲ್ಲಿ ಇನ್ನೂ ಏನೇನು ಆದೇಶವಿಲ್ಲದೇ ಮಂತ್ರಿ-ಮುಖ್ಯಮಂತ್ರಿಗಳ ಮೌಖಿಕ ಸೂಚನೆ ಮೇರೆಗೆ ನಡೆದಿರಬಹುದು?” ಎಂದು ಡಾ.ಎಚ್.ವಿ.ವಾಸು ಪ್ರಶ್ನಿಸಿದ್ದಾರೆ.
ಇದನ್ನೂ ಓದಿರಿ: ನೂತನ ಪಠ್ಯ ಪುಸ್ತಕ: ಐವರು ಬಿಜೆಪಿ ನಾಯಕರಿಂದ ವಿರೋಧ
‘ಅಧ್ಯಕ್ಷನಿಂದ ಹಣ ವಸೂಲಿ ಮಾಡಿ’
“ಒಂದು ತರಗತಿಯ ಒಂದು ಅಧ್ಯಾಯದ ಪರಿಶೀಲನೆಗೆಂದು ಒಬ್ಬ ಅನರ್ಹ ವಿಕೃತನನ್ನು ನೇಮಿಸಿ, ರಾಜ್ಯದ ಶ್ರೇಷ್ಠ ತಜ್ಞರು ರಚಿಸಿದ್ದ ಎಲ್ಲಾ ತರಗತಿಗಳ ಪಠ್ಯಪುಸ್ತಕಗಳನ್ನು ಯಾವುದೇ ಆದೇಶವಿಲ್ಲದೆಯೂ ಅವನೊಬ್ಬನಿಗೆ ಹಾಳುಗೆಡವಲು ಅವಕಾಶವಿತ್ತು, ಅವನು ಮನಬಂದಂತೆ ತನ್ನ ವಿಕೃತಿಯನ್ನು ಅವುಗಳಲ್ಲಿ ತುಂಬಿಸಿದ್ದನ್ನು ಬೇರೆಯವರಲ್ಲಿ ಪರೀಕ್ಷಿಸದೆಯೇ, ಅಧಿಕಾರಿಗಳನ್ನೂ ಲೆಕ್ಕಿಸದೆಯೇ, ತರಾತುರಿಯಿಂದ ಘಟನೋತ್ತರ ಅನುಮತಿ ಒತ್ತಿ ಮುದ್ರಿಸಿ ರಾಜ್ಯದ ಮಕ್ಕಳಿಗೆ ಪುಸ್ತಕಗಳೇ ಇಲ್ಲದ ಹಾಗೆ ಮಾಡಿದ್ದಷ್ಟೇ ಅಲ್ಲದೇ ಎಲ್ಲಾ ದಾರ್ಶನಿಕರಿಗೂ, ಹಿರಿಯಾತಿಹಿರಿಯ ಸಾಹಿತಿಗಳಿಗೂ, ಎಲ್ಲಾ ಜನವರ್ಗಗಳ ಭಾವನೆಗಳಿಗೂ ಅಪಾರವಾದ ಘಾಸಿಯುಂಟು ಮಾಡಿದ್ದಕ್ಕಾಗಿ ಶಿಕ್ಷಣ ಸಚಿವರು ಇನ್ನೊಂದು ಘಳಿಗೆಯೂ ಮುಂದುವರಿಯದೆ ಕೂಡಲೇ ರಾಜೀನಾಮೆ ನೀಡಬೇಕು, ಯಾವುದೇ ಆದೇಶವಿಲ್ಲದೇ ಈ ದುಷ್ಟ ಕೆಲಸಗಳನ್ನು ಮಾಡಿದ ಅನರ್ಹ ಅಧ್ಯಕ್ಷನನ್ನು ಬಂಧಿಸಿ ಎಲ್ಲಾ ವೆಚ್ಚಗಳನ್ನು ಅವನಿಂದಲೇ ವಸೂಲಿ ಮಾಡಬೇಕು” ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಒತ್ತಾಯಿಸಿದ್ದಾರೆ.
“ಪ್ರಜಾವಾಣಿಯ ಈ ವರದಿಯ ಪ್ರಕಾರ ರೋಹಿತ್ ಸಮಿತಿಗೆ ಪಠ್ಯ ತಿದ್ದುವ ಅಧಿಕಾರವೇ ಇರಲಿಲ್ಲ. ಆದರೂ ಅವನು ತಿದ್ದಿದ್ದಾನೆ. ಅವನು ತಿದ್ದಿದ ನಂತರ ರಾಜ್ಯ ಸರ್ಕಾರ ಅವನ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದೆ. ಇದನ್ನು ನೋಡಿದರೆ ತಕ್ಷಣವೇ ರೋಹಿತ್ ಮತ್ತು ಸಮಿತಿ ಸದಸ್ಯರ ಬಂಧನ ಆಗಬೇಕು. ಬಸವರಾಜ ಬೊಮ್ಮಾಯಿ ಮತ್ತು ನಾಗೇಶ ಇಬ್ಬರು ರಾಜೀನಾಮೆ ಕೊಡಬೇಕು” ಎಂದು ಬರಹಗಾರ ನಾಗೇಗೌಡ ಕೀಲಾರ ಒತ್ತಾಯಿಸಿದ್ದಾರೆ.



Without Government order how could possible to release the school text books… ? Where is the responsibility of opposition leaders..