ಮುಂದಿನ ತಿಂಗಳು ನಡೆಯಲಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್ ಅವರೊಂದಿಗೆ ಎರಡನೇ ಆನ್‌ಲೈನ್ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಟ್ರಂಪ್‌ಗೆ ಕೊರೊನಾ ವೈರಸ್ ಸೋಂಕು ದೃಡಪಟ್ಟಿರುವುದರಿಂದ, ಈ ತಿಂಗಳ 15 ರಂದು ಅಧ್ಯಕ್ಷೀಯ ಅಭ್ಯರ್ಥಿಗಳ ನಡುವೆ ಮಿಯಾಮಿಯಲ್ಲಿ ನಡೆಯಲಿರುವ ಚರ್ಚಾ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನಡೆಸಬೇಕಾಗುತ್ತದೆ ಎಂದು ಸಂಘಟನಾ ಸಮಿತಿ ತಿಳಿಸಿತ್ತು. ಆದರೆ ಇದಕ್ಕೆ ಟ್ರಂಪ್ ನಿರಾಕರಿಸಿದ್ದಾರೆ.
ಇದನ್ನೂ ಓದಿ: ‘ಕಮಲಾ ಹ್ಯಾರಿಸ್ ಕಮ್ಯುನಿಸ್ಟ್’ – ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಸೆಪ್ಟೆಂಬರ್ 29 ರಂದು ಟ್ರಂಪ್‌ಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ ಎಂದು ವರದಿಯಾಗಿತ್ತಾದರೂ, ಹಲವರು ಇದಕ್ಕೆ ಅನುಮಾನ ವ್ಯಕ್ತಪಡಿಸಿದ್ದರು.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನವೆಂಬರ್ 3 ರಂದು ನಡೆಯಲಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ಜೋ ಬಿಡೆನ್ ಏಕ-ಅಂಕಗಳ ಅಂತರದಿಂದ ರಾಷ್ಟ್ರವನ್ನು ಮುನ್ನಡೆಸುತ್ತಿದ್ದಾರೆ. ಆದಾಗ್ಯೂ, ಚುನಾವಣೆಯ ಫಲಿತಾಂಶವು ಎರಡು ಪ್ರಮುಖ ಪ್ರಾಂತ್ಯಗಳ ಅಂತಿಮ ಮತದ ಮೇಲೆ ಅವಲಂಬಿತವಾಗಿರುತ್ತದೆ, ಅಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಇರುತ್ತದೆ ಎಂದು ಬಿಬಿಸಿ ವರದಿ ಮಾಡಿದೆ.

ಸುಮಾರು 60 ಲಕ್ಷ ಜನರು ಈವರೆಗೆ ಚುನಾವಣೆಗೆ ಮುಂಚಿತವಾಗಿ ಮತ ಚಲಾಯಿಸುವ ಅವಕಾಶವನ್ನು ಬಳಸಿಕೊಂಡು ತಮ್ಮ ಮತಪತ್ರಗಳನ್ನು ಚಲಾಯಿಸಿದ್ದಾರೆ.
ಚರ್ಚೆಯ ಬಗ್ಗೆ ಟ್ರಂಪ್ ಫಾಕ್ಸ್ ಬಿಸಿನೆಸ್ ಚಾನೆಲ್‌ಗೆ ತಿಳಿಸಿದ್ದು, “ಕಂಪ್ಯೂಟರ್ ಹಿಂದೆ ಕುಳಿತು ಮಾಡುವ ಚರ್ಚೆಯಲ್ಲಿ ಕೂತು ನನ್ನ ಸಮಯವನ್ನು ವ್ಯರ್ಥ ಮಾಡಲು ಹೋಗುವುದಿಲ್ಲ” ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್ ಪ್ರತಿಸ್ಫರ್ಧಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್, “ಟ್ರಂಪ್ ಪ್ರತಿ ಸೆಕೆಂಡಿಗೆ ತಮ್ಮ ನಿರ್ಧಾರವನ್ನು ಬದಲಾಯಿಸುತ್ತಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉದ್ವಿಗ್ನತೆ ಹೆಚ್ಚಾದರೆ ಟ್ರಂಪ್ ಭಾರತದ ಪರವಾಗಿ ನಿಲ್ಲತಾರೆಂದು ಖಾತರಿಯಿಲ್ಲ: ಅಮೆರಿಕಾದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ


