ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ‌ ಕ್ರಶರ್ ಅವ್ಯವಹಾರ  ನಡೆಯುತ್ತಿವೆ ಎಂಬ ಹಲವು ದೂರುಗಳು ದಾಖಲಾಗಿವೆ. ಉಡುಪಿಗೆ ಜೀವಜಲ ಒದಗಿಸುವ ಸ್ವರ್ಣ ನದಿಯ ಹೂಳೆತ್ತುವ ನೆಪದಲ್ಲಿ ಕೋಟ್ಯಾಂತರ ರೂಪಾಯಿ ಮರಳು ಕಳ್ಳಸಾಗಾಣಿಕೆಯಾಗಿದೆ ಎಂದು ಲೋಕಾಯುಕ್ತಾಗೆ ದೂರು ನೀಡಲಾಗಿತ್ತು. ಅವ್ಯವಹಾರದಲ್ಲಿ ಸ್ಥಳೀಯ ಶಾಸಕ ರಘುಪತಿ ಭಟ್ ಹೆಸರು ಸಹ ಕೇಳಿಬಂದಿತ್ತು. ಆದರೆ ತನಿಖೆ ಮಾತ್ರ ಪೂರ್ಣಗೊಳ್ಳಲಿಲ್ಲ.

ಆ ಮರಳು ಕದ್ದು ಸಾಗಿಸಲು ನೆರವಾಗಿದ್ದರು ಎಂಬ ಆರೋಪ ಹೊತ್ತಿರುವ ಹಿರಿಯ ಭೂ ವಿಜ್ಞಾನ ಅಧಿಕಾರಿ ರಾಂಜಿ ನಾಯಕ್‌ ಇತ್ತೀಚೆಗೆ ಉಡುಪಿಯಿಂದ ಶಿವಮೊಗ್ಗಕ್ಕೆ ವರ್ಗಾವಣೆಯಾಗಿದ್ದಾರೆ. ಕೆಲ ಕ್ರಶರ್ ಮಾಲೀಕರು ಮತ್ತು ಮರಳು ವ್ಯಾಪಾರಿಗಳು ಅಧಿಕಾರವಾಧಿಯಲ್ಲಿ ಸಹಾಯ ಮಾಡಿದ ಅವರಿಗೆ ಬೀಳ್ಕೊಡುಗೆ ನೆಪದಲ್ಲಿ ಅದ್ದೂರಿ ಪಾರ್ಟಿ ನಡೆಸಿ, ಬಾಡೂಟ ಹಾಕಿಸಿ ಲಕ್ಷಾಂತರ ಮೌಲ್ಯದ ವಸ್ತುಗಳು ಮತ್ತು ಕಾರನ್ನು  ಉಡುಗೊರೆಯಾಗಿ ನೀಡಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ!

ಸಮಾರಂಭದಲ್ಲಿ ಸಿಬ್ಬಂದಿ ಭಾಗವಹಿಸಿರುವುದು.

ಅಕ್ಟೋಬರ್ 5 ರಂದು ನಗರದ ಓಶನ್ ಪರ್ಲ್ ಹೋಟೆಲ್‌ನಲ್ಲಿ ನಡೆದ ಈ ಭೋಜನ ಕೂಟದಲ್ಲಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಸರಕಾರಿ ಜೀಪಿನಲ್ಲೇ ಬಂದು ಕ್ರಶರ್ ಮಾಲೀಕರು ಏರ್ಪಡಿಸಿದ ಪಾರ್ಟಿಯಲ್ಲಿ ಭರ್ಜರಿಯಾಗಿ ಉಂಡು ಹೋಗಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಕ್ರಶರ್ ಮಾಲೀಕರು ಹಾಗೂ ಕೆಲವು ಮರಳು ಮಾರಾಟಗಾರರು ಭಾಗಿಯಾಗಿದ್ದರು ಎನ್ನಲಾಗಿದೆ.

ಉಡುಪಿಯಲ್ಲಿ ರಾಂಜಿ ನಾಯಕ್ ಹಿರಿಯ ಭೂ ವಿಜ್ಞಾನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಅಕ್ರಮ ಮರಳುಗಾರಿಕೆಗೆ ಸ್ವತಃ ಬೆಂಬಲ ನೀಡಿದ್ದರು. ಅಷ್ಟೇ ಅಲ್ಲದೇ ಕಾನೂನು‌ ಉಲ್ಲಂಘಿಸಿ ನಡೆಯುತ್ತಿದ್ದ ಕ್ರಶರ್ ಗಳಿಗೆ ರತ್ನ ಗಂಬಳಿ ಹಾಕಿ ಕೊಟ್ಟಿದ್ದರು. ಡೀಮ್ಡ್ ಫಾರೆಸ್ಟ್ ನಲ್ಲಿ ಸ್ಥಗಿತಗೊಂಡಿದ್ದ ಅಕ್ರಮ ಕ್ರಶರ್ ಗಳಿಗೆ ಲಕ್ಷಾಂತರ ರೂಪಾಯಿ ಲಂಚ ಪಡೆದು ಮರು ಪ್ರಾರಂಭಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಎಂಬ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ವಿಚಾರವಾಗಿ ಲೋಕಾಯುಕ್ತಾಕ್ಕೆ ದೂರು ಹೋದಾಗ ದಾಳಿ ನಡೆದು ಹಲವೆಡೆ ಅಕ್ರಮ ಮರಳು ದಾಸ್ತಾನು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ರಾಂಜಿ ನಾಯಕ್ ಮೇಲೆ ದೂರು ಸಹ ದಾಖಲಾಗಿದೆ.

ಭೂ ವಿಜ್ಞಾನ ಅಧಿಕಾರಿಗೆ ಕ್ರಶರ್ ಮಾಲೀಕರು ಭರ್ಜರಿ ಪಾರ್ಟಿ ಕೊಟ್ಟಿದ್ದೇಕೆ?

ಕ್ರಶರ್ ಮಾಲೀಕರು, ಮರಳು ಮಾರಾಟಗಾರರು ಉಡುಪಿ ಜಿಲ್ಲೆಯ ಭೂ ವಿಜ್ಞಾನ ಅಧಿಕಾರಿಗೆ ಪಾರ್ಟಿ ನೀಡಿದ್ದಾರೆ. ಸರ್ಕಾರಿ ವಾಹನದಲ್ಲಿಯೇ ಪಾರ್ಟಿಯಲ್ಲಿ ಭಾವಹಿಸಿರುವ ವಿಡಿಯೋ

Posted by Naanu Gauri on Friday, October 9, 2020

ಇಷ್ಟೆಲ್ಲ ಇರುವಾಗ ಕ್ರಶರ್ ಮಾಲೀಕರು ಆಯೋಜಿಸುವ ಪಾರ್ಟಿಯಲ್ಲಿ ಇವರು ರಾಜಾರೋಷವಾಗಿ ಭಾಗವಹಿಸಿ, ಅವರಿಂದ ಹಾರ, ಶಾಲು ಹಾಕಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಸಹಾಯದ ಋಣಸಂದಾಯಕ್ಕಾಗಿ ಕ್ರಶರ್ ಹಾಗೂ ಅಕ್ರಮ‌ ಮರಳು ದಂಧೆಕೋರರು ರಾಂಜಿ ನಾಯಕ್ ಗೆ ಐಶರಾಮಿ ಹೊಟೇಲಿನಲ್ಲಿ ಭರ್ಜರಿ ಪಾರ್ಟಿ ನೀಡಿ ಲಕ್ಷಾಂತರ ಮೌಲ್ಯದ ಉಡುಗೊರೆಗಳನ್ನ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.

ಸದರಿ ಅಧಿಕಾರಿಯ ಮೇಲೆ ಅಕ್ರಮ ಗಣಿಗಾರಿಕೆ, ಕ್ರಶರ್‌ಗೆ ಅನುಮತಿ ನೀಡಿದ ಆರೋಪದಲ್ಲಿ ಭ್ರಷ್ಟಚಾರ ನಿಗ್ರಹ ದಳದಿಂದ ತನಿಖೆ ನಡೆಯುತ್ತಿದೆ. ಸರಕಾರಿ ಅಧಿಕಾರಿಗಳು ಅಕ್ರಮ ದಂಧೆಕೋರರ ಜೊತೆ ಬಹಿರಂಗವಾಗಿ ಪಾರ್ಟಿಯಲ್ಲಿ ಭಾಗವಹಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು ಆ ಉದ್ಯಮಿಗಳ ಲೈಸನ್ಸ್ ಮರುಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿ ದೂರನ್ನು ನೀಡಿದ್ದಾರೆ. ನಾಡಿನ ಸಂಪತ್ತು ಲೂಟಿಯಾಗಿರುವ ಈ ಪ್ರಕರಣದಲ್ಲಿ ಈಗಲಾದರೂ ಸಮರ್ಪಕ ತನಿಖೆ ನಡೆಯುವುದೇ ಎಂದು ಕಾದು ನೋಡಬೇಕಿದೆ.

  • ಶುದ್ದೋಧನ

ಇದನ್ನೂ ಓದಿ: ವಿಜಯೇಂದ್ರರ ವಿರುದ್ಧದ ತನಿಖೆಗೆ ಪೊಲೀಸರ ನಕಾರ: ಕೋರ್ಟ್‌ ಮೆಟ್ಟಿಲೇರಲಿರುವ ಜಸಂಪ!

LEAVE A REPLY

Please enter your comment!
Please enter your name here