ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಭಾನುವಾರದ ಆವೃತ್ತಿಯಾದ ‘ದಿ ಸಂಡೇ ಎಕ್ಸ್‌ಪ್ರೆಸ್’ನಲ್ಲಿ ಪ್ರಕಟವಾಗಿರುವ ಉತ್ತರ ಪ್ರದೇಶ ಸರ್ಕಾರದ ಜಾಹೀರಾತಿನಲ್ಲಿ ಕೊಲ್ಕತ್ತ ಎಂಎಎ ಮೇಲ್ಸೇತುವೆ ಚಿತ್ರ ಬಳಸಿರುವ ಸಂಬಂಧ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪತ್ರಿಕೆ ಸ್ಪಷ್ಟನೆಯನ್ನೂ ನೀಡಿದೆ. ಆಗಿರುವ ಪ್ರಮಾದಕ್ಕೆ ವಿಷಾದಿಸಿರುವ ಎಕ್ಸ್‌ಪ್ರೆಸ್, “ಇದು ಪತ್ರಿಕೆಯ ಮಾರುಕಟ್ಟೆ ವಿಭಾಗದಿಂದ ಆಗಿರುವ ತಪ್ಪು” ಎಂದು ಹೇಳಿದೆ.
ಪತ್ರಿಕೋದ್ಯಮದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಮಹತ್ವದ ಸ್ಥಾನವಿದೆ. ಅಂತೆಯೇ ಅದು ತನ್ನ ಜಾಹೀರಾತು ನಿಲುವನ್ನೂ ಈ ಹಿಂದೆಯೇ ಸ್ಪಷ್ಟಪಡಿಸಿದೆ. ಇಂಡಿಯನ್ ಎಕ್ಸ್‌ಪ್ರೆಸ್ ನೀಡಿರುವ ಸ್ಪಷ್ಟನೆಯನ್ನು ಉಲ್ಲೇಖಿಸಿ ವರದಿ ಮಾಡಿರುವ ‘ದಿ ವೈರ್’ ಸುದ್ದಿ ಜಾಲತಾಣವು, “ತನ್ನ ನಿಲುವಿಗೇ ವಿರುದ್ಧವಾಗಿ ಎಕ್ಸ್‌ಪ್ರೆಸ್ ಸ್ಪಷ್ಟನೆ ನೀಡಿದೆ” ಎಂಬ ಅಭಿಪ್ರಾಯ ತಾಳಿದೆ. 2019ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್, “ಪತ್ರಿಕೆಯಲ್ಲಿ ಪ್ರಕಟವಾಗುವ ಯಾವುದೇ ಜಾಹೀರಾತಿಗೆ ಪತ್ರಿಕೆ ಜವಾಬ್ದಾರರಾಗಿವುದಿಲ್ಲ” ಎಂದು ಘೋಷಿಸಿಕೊಂಡಿರುವುನ್ನು ದಿ ವೈರ್ ನೆನಪಿಸಿದೆ.
ಎಕ್ಸ್‌ಪ್ರೆಸ್ ಪ್ರಕಟಿಸಿರುವ “2019ರ ರೇಟ್ ಕಾರ್ಡ್ (ಪುಟ 10)ರಲ್ಲಿ “ಯಾವುದೇ ಜಾಹೀರಾತಿಗೆ ಹಾಗೂ ಅದರಲ್ಲಿನ ಸಂಗತಿಗೆ ಯಾವುದೇ ರೀತಿಯಲ್ಲೂ ನಾವು (ಎಕ್ಸ್‌ಪ್ರೆಸ್) ಜವಾಬ್ದಾರರಾಗಿರುವುದಿಲ್ಲ” ಎಂದು ಘೋಷಿಸಿಕೊಳ್ಳಲಾಗಿದೆ.

“ಜಾಹೀರಾತಿನಲ್ಲಿನ ವಿಷಯ ಸರಿಯಾಗಿದೆ, ಪ್ರಚಲಿವಾಗಿದೆ, ಸಂಪೂರ್ಣವಾಗಿದೆ, ಯಾವುದೇ ಸುಳ್ಳನ್ನು ಹೊಂದಿರುವುದಿಲ್ಲ ಎಂಬುದಕ್ಕೆ ಜಾಹೀರಾತುದಾರರು ಪ್ರತಿನಿಧಿಗಳಾಗಿರುತ್ತಾರೆ. ಜಾಹೀರಾತಿನಲ್ಲಿ ಬಳಸಿರುವ ಚಿತ್ರ, ಲೋಗೋ, ಬರಹ ಇತ್ಯಾದಿಗಳ್ಯಾವುವು ಮೂರನೇ ವ್ಯಕ್ತಿಯದ್ದಾಗಿರುವುದಿಲ್ಲ ಹಾಗೂ ಬೌದ್ಧಿಕ ಆಸ್ತಿಯನ್ನು ಉಲ್ಲಂಘಿಸಿರುವುದಿಲ್ಲ. ಅಸಭ್ಯ, ಅಶ್ಲೀಲ ಅಥವಾ ಅವಹೇಳನಕಾರಿಯಾಗಿ ಇರುವುದಿಲ್ಲ. ನಾವು ಯಾವುದೇ ರೀತಿಯಲ್ಲಿ ಜಾಹೀರಾತು ಅಥವಾ ಅದರ ವಿಷಯಕ್ಕೆ ಜವಾಬ್ದಾರರಾಗಿರುವುದಿಲ್ಲ” ಎಂದು ಎಕ್ಸ್‌ಪ್ರೆಸ್ ಹೇಳಿಕೊಂಡಿದೆ.
ತನ್ನ ನಿಲುವಿಗೆ ವಿರುದ್ಧವಾದ ಸ್ಪಷ್ಟನೆಯನ್ನು ಭಾನುವಾರ ಪ್ರಕಟವಾಗಿರುವ ಜಾಹೀರಾತಿನ ಸಂಬಂಧ ಎಕ್ಸ್‌ಪ್ರೆಸ್ ನೀಡಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.


