ದಲಿತ ಯುವತಿಯನ್ನು ಪ್ರೀತಿಸಿ ಆನಂತರ ಮದುವೆಯಾಗಲು ನಿರಾಕರಿಸಿದ ಸವರ್ಣೀಯ ಯುವಕ, ನಂತರ ಪೆಟ್ರೋಲ್ ಸುರಿದು ಯುವತಿಯನ್ನು ಕೊಲೆ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟೆಯ ಉಪ ತಹಶೀಲ್ದಾರ್ ಅಶೋಕ್ ಶರ್ಮಾ ಅವರ ಮಗಳಾದ ದಾನೇಶ್ವರಿ (23) ಅವರನ್ನು, ಬಾದಾಮಿ ಮೂಲದ ಲಿಂಗಾಯತ ಜಾತಿಗೆ ಸೇರಿದ ಶಿವಕುಮಾರ್ ಹಿರೇಹಾಳ ಕೊಲೆ ಮಾಡಿದ್ದನು. ಪೆಟ್ರೋಲ್ ಸುರಿದು ಹತ್ಯೆಗೈದು ಪರಾರಿಯಾಗಿದ್ದನು. ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿತ್ತು. ದಾನೇಶ್ವರಿಯ ತಂಗಿ ತೇಜೇಶ್ವರಿ ನೀಡಿದ ದೂರಿನ ಆಧಾರದ ಮೇಲೆ ಪರಾರಿಯಾಗಿರುವ ಶಿವಕುಮಾರ್ ಚಂದ್ರಶೇಖರ್ ಹಿರೇಹಾಳ ಎಂಬ ಯುವಕನ ಮೇಲೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಪವನ್ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಪ್ರಮುಖ ಆರೋಪಿ ಶಿವಕುಮಾರ್‌ನನ್ನು ಎಲ್ಲ ಸೆಕ್ಷನ್ ಅಡಿಯಲ್ಲಿ ಬಂಧಿಸಲಾಗಿದೆ. ಕೊಲೆಯಲ್ಲಿ ಭಾಗಿಯಾಗಿರುವ ಈತನ ಸ್ನೇಹಿತರ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಸಾಕ್ಷ್ಯಾಧಾರಗಳು ಸಿಕ್ಕಲ್ಲಿ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗುವುದು” ಎಂದು ತಿಳಿಸಿದ್ದಾರೆ.
ಹತ್ಯೆಗೊಳಗಾದ ದಾನೇಶ್ವರಿ ಮತ್ತು ಆರೋಪಿ ಶಿವಕುಮಾರ್ ಇಬ್ಬರು ವಿಜಯಪುರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು. ವಿದ್ಯಾಭ್ಯಾಸ ಮುಗಿದ ನಂತರ ಅವರಿಬ್ಬರೂ ಒಟ್ಟಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಈ ವೇಳೆ ಆರೋಪಿ ಶಿವಕುಮಾರ್ ಮದುವೆಯಾಗುವುದಾಗಿ ದಾನೇಶ್ವರಿಗೆ ಮಾತು ಕೊಟ್ಟಿದ್ದ ಎಂದು ಆಕೆಯ ತಂಗಿ ಪೊಲೀಸರಿಗೆ ತಿಳಿಸಿದ್ದಾರೆ.
ದಾನೇಶ್ವರಿಯು ಮದುವೆ ವಿಚಾರವನ್ನು ಶಿವಕುಮಾರ್ ಬಳಿ ಮಾತನಾಡಿದಾಗ ಆತ ತನ್ನ ಪೋಷಕರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದ. ವಿಜಯಪುರಕ್ಕೆ ಹೋಗಿ ಬಂದ ಬಳಿಕ ನಿನ್ನನ್ನು ಮದುವೆಯಾಗುವುದಿಲ್ಲ, ನಮ್ಮ ಮನೆಯವರು ಮದುವೆಗೆ ಒಪ್ಪಿಲ್ಲ, ಏಕೆಂದರೆ ನೀನು ಕೆಳಜಾತಿಗೆ ಸೇರಿರುವೆ ಎಂದು ನಿಂದಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಾರ್ಚ್ 15ರಂದು ದಾನೇಶ್ವರಿಯು ಶಿವಕುಮಾರ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿದಾಗಲೂ ನೀನು ಕೆಳಜಾತಿ ಎಂದು ಜಾತಿನಿಂದನೆ ಮಾಡಿ ಹೀಯಾಳಿಸಿದ್ದ. ಅಲ್ಲದೆ ಈಗ ಮಾತನಾಡಲು ಸಾಧ್ಯವಿಲ್ಲ ಎಂದು ಯಾರು ಇಲ್ಲದ ಜಾಗಕ್ಕೆ ದಾನೇಶ್ವರಿಯನ್ನು ಕರೆಸಿಕೊಂಡು ಶಿವಕುಮಾರ್ ಮತ್ತು ಆತನ ಸ್ನೇಹಿತರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮದುವೆ ವಿಚಾರವಾಗಿ ದಾನೇಶ್ವರಿ ಹಾಗೂ ಶಿವಕುಮಾರ್ ನಡುವೆ ಗಲಾಟೆಯಾಗಿತ್ತು. ಈ ವೇಳೆ ಮೂವರು ಯುವಕರು ಹಿಂದಿನಿಂದ ಬಂದು ದಾನೇಶ್ವರಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಗಾಯಗೊಂಡ ದಾನೇಶ್ವರಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ದಾನೇಶ್ವರಿ ಮೃತಪಟ್ಟಿದ್ದಾರೆ.
ಯುವತಿಯ ತಂದೆ ಅಶೋಕ್ ಶರ್ಮ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ದಾನೇಶ್ವರಿಗೆ ಮದುವೆ ಮಾಡಲು ನಾವು ಸಿದ್ಧತೆಯಲ್ಲಿದ್ದೆವು. ಆದರೆ ಈ ವೇಳೆ ತನ್ನ ಪ್ರೇಮದ ವಿಚಾರ ನಮಗೆ ತಿಳಿಸಿದ್ದಳು. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುವಾಗ ಪರಸ್ಪರ ಪ್ರೀತಿಸಿದ್ದಾರೆ. ನಾನು ಅವನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಆದರೆ ಅವನು ಒಪ್ಪಿರಲಿಲ್ಲ. ಮದುವೆಯಾಗಲು ಕೇಳಿದಾಗ ಜಾತಿ ವಿಚಾರ ಹೇಳಿದ್ದಾನೆ. ನಿನ್ನ ಮದುವೆಯಾದರೆ ನನ್ನ ತಂದೆ ತಾಯಿ ಮನೆಗೆ ಸೇರಿಸುವುದಿಲ್ಲ ಎಂದು ಹೇಳಿರುವುದಾಗಿ ಮಗಳು ತಿಳಿಸಿದ್ದಳು” ಎಂದಿದ್ದಾರೆ.
“ನಮ್ಮ ಮಗಳು ಕೆಲಸಕ್ಕೆ ಸೇರಲು ಕೋರ್ಸ್ ಮಾಡುತ್ತಿದ್ದಳು. ಹೀಗಾಗಿ ಬಿಟಿಎಂ ಲೇಔಟ್‌ನ ಪಿಜಿಯಲ್ಲಿ ವಾಸವಿದ್ದಳು. ಇದೇ ತಿಂಗಳ 16ರಂದು ರಾತ್ರಿ ಈ ಘಟನೆ ವಿಚಾರ ನಮಗೆ ತಿಳಿಯಿತು. ಕೂಡಲೇ ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ದುಡ್ಡು ಕೂಡ ಹಾಕಿದ್ದೆ. ಹುಡುಗಿಯೇ ಪೆಟ್ರೋಲ್ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಶಿವಕುಮಾರನು ಮುಖ್ಯ ರಸ್ತೆಯ ಖಾಲಿ ಜಾಗದಲ್ಲಿ ಪೆಟ್ರೋಲ್ ಹಾಕಿದ್ದಾನೆ. ಅವನೇ ಬಂದು ಆಸ್ಪತ್ರೆಗೆ ಸೇರಿಸಿ ನಮ್ಮ ನಂಬರ್ ಕೊಟ್ಟಿದ್ದಾನೆ” ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.
ಇದನ್ನೂ ಓದಿರಿ: ಪ್ರಪೊಗಾಂಡ ಸಿನಿಮಾಕ್ಕೆ 6 ತಿಂಗಳು ತೆರಿಗೆ ವಿನಾಯಿತಿ; ಬಡವರ ಜ್ಯೋತಿಗೆ ಬರೆ?


