Homeಮುಖಪುಟಸುಪ್ರೀಂ ಕೋರ್ಟ್ ನಿರ್ದೇಶನವನ್ನೇ ಮೀರಿದ ಸಿಬಿಐ ನ್ಯಾಯಾಲಯದ ಬಾಬ್ರಿ ತೀರ್ಪು

ಸುಪ್ರೀಂ ಕೋರ್ಟ್ ನಿರ್ದೇಶನವನ್ನೇ ಮೀರಿದ ಸಿಬಿಐ ನ್ಯಾಯಾಲಯದ ಬಾಬ್ರಿ ತೀರ್ಪು

ಸುಪ್ರೀಂ ಕೋರ್ಟಿನ ಶಬ್ದಗಳಲ್ಲೇ ಹೇಳುವುದಾದರೆ ಈ ಸಂಚು, ‘ಸಂವಿಧಾನದ ಜಾತ್ಯತೀತ ಸಂರಚನೆಯನ್ನೇ ಅಲುಗಾಡಿಸುವ ಅಪರಾಧ’.

- Advertisement -
- Advertisement -

ಡಿಸೆಂಬರ್ 6, 1992ರಂದು ಬಾಬ್ರಿ ಮಸೀದಿಯ ಧ್ವಂಸಕ್ಕೆ ಕಾರಣವಾದ ಕ್ರಿಮಿನಲ್ ಸಂಚು ಹೂಡಿದ ಆರೋಪ ಹೊತ್ತಿದ್ದ ಎಲ್ಲಾ 32 ಮಂದಿಯನ್ನು ಸಿಬಿಐ ವಿಶೇಷ ನ್ಯಾಯಾಲಯವು ಆರೋಪಮುಕ್ತಗೊಳಿಸಿದೆ. ಈ ತೀರ್ಪಿನ ಹಿಂದಿರುವ ತರ್ಕವೆಂದರೆ, ‘ಈ ಧ್ವಂಸವು ಪೂರ್ವನಿರ್ಧಾರಿತವಾದದ್ದಲ್ಲ ಮತ್ತು ಆದರ ಹಿಂದೆ ಯಾವುದೇ ಕ್ರಿಮಿನಲ್ ಸಂಚು ಇರಲಿಲ್ಲ’ ಎಂಬುದಾಗಿರುವಂತೆ ಕಾಣುತ್ತದೆ ಎಂಬುದು. ಸಿಬಿಐ ಸಲ್ಲಿಸಿದ ಅಡಿಯೋ ಮತ್ತು ವಿಡಿಯೋ ತುಣುಕುಗಳ ಅಧಿಕೃತತೆಯ ಬಗ್ಗೆಯೂ ನ್ಯಾಯಾಧೀಶರು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಇದು ಧ್ವಂಸದ ಹಿಂದೆ ಯಾವುದೇ ಕ್ರಿಮಿನಲ್ ಸಂಚು ಇರಲಿಲ್ಲ ಎಂಬ ಅವರ ನಿರ್ಧಾರಕ್ಕೆ ಒತ್ತಾಸೆ ನೀಡಿರುವಂತೆಯೂ ಕಾಣುತ್ತದೆ.

ಧ್ವಂಸದ ಹಿಂದೆ ‘ಸಂಚು ಇರಲಿಲ್ಲ’ ಎಂಬ ಈ ತೀರ್ಮಾನವು ಸಂಘ ಪರಿವಾರದ ಎಂದಿನ ಅಧಿಕೃತ ನಿಲುವಾಗಿದ್ದು, ಧ್ವಂಸವು ಅನಾಮಿಕ ಜನರ ಆ ಕ್ಷಣದ ಸ್ವಯಂಸ್ಫೂರ್ತಿಯ ಕೃತ್ಯವಾಗಿದೆ ಎಂದು ಅದು ಮತ್ತೆಮತ್ತೆ ಉಲ್ಲೇಖಿಸುತ್ತಾ ಬಂದಿದೆ. 2001ರಲ್ಲಿ ಸಂಚಿನ ಆರೋಪ ಹೊರಿಸಲಾದ ಎಲ್ಲಾ ಆರೋಪಿಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯವು ಕೈಬಿಟ್ಟು, ಈ ಕುರಿತು ಮೇಲ್ಮನವಿ ಸಲ್ಲಿಸಲಾದ ಬಳಿಕ 2010ರಲ್ಲಿ ಹೈಕೋರ್ಟ್, ಟ್ರಯಲ್ ನ್ಯಾಯಾಲಯದ ತೀರ್ಪಿನ ಜೊತೆ ಸಹಮತ ವ್ಯಕ್ತಪಡಿಸಿದಾಗ, ಸಂಘ ಪರಿವಾರವು ತನ್ನ ಈ ಸಿದ್ಧಾಂತಕ್ಕೆ ನ್ಯಾಯಾಂಗದ ಅಧಿಕೃತ ಮುದ್ರೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಆದರೆ, ನಂತರ ಸ್ವತಃ ಸುಪ್ರೀಂ ಕೋರ್ಟ್ ಈ ‘ಆ ಕ್ಷಣದ ಸ್ವಯಂಸ್ಫೂರ್ತಿ’ಯ ವಾದದಿಂದ ಸೂಚ್ಯವಾಗಿ ದೂರ ಉಳಿದಿತ್ತು ಎಂಬುದು ಗಮನಿಸಬೇಕಾದ ಅಂಶ. ಕಲ್ಯಾಣ್ ಸಿಂಗ್ ವಿರುದ್ಧ ಸಿಬಿಐ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ನಾರಿಮನ್ ಮತ್ತು ಪಿನಾಕಿ ಚಂದ್ರ ಘೋಷ್ ಅವರು 2017ರಲ್ಲಿ ಈ ಪ್ರಕರಣದಲ್ಲಿ ಸಂಚನ್ನು ಒಂದು ಆರೋಪವಾಗಿ ಮರಳಿ ಸೇರಿಸಿದ್ದರು ಮತ್ತು ಎರಡು ವರ್ಷಗಳಲ್ಲಿ ವಿಚಾರಣೆಯನ್ನು ಮುಗಿಸುವಂತೆ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ್ದರು.

ಸುಪ್ರೀಂ ಕೋರ್ಟ್ ಗಮನಿಸಿರುವಂತೆ, ‘ಪ್ರಸ್ತುತ ಪ್ರಕರಣದಲ್ಲಿ ಸಂವಿಧಾನದ ಜಾತ್ಯತೀತ ಸಂರಚನೆಯನ್ನು ಅಲುಗಾಡಿಸುವಂತಹ ಅಪರಾಧಗಳು ಸುಮಾರು 25 ವರ್ಷಗಳ ಹಿಂದೆ ನಡೆದಿವೆ ಎಂದು ಆರೋಪಿಸಲಾಗಿದೆ. ಬಹುತೇಕ ಸಿಬಿಐಯ ನಡವಳಿಕೆಯ ಕಾರಣದಿಂದಾಗಿಯೇ ಆರೋಪಿತ ವ್ಯಕ್ತಿಗಳನ್ನು ಕಾನೂನಿನಡಿ ಶಿಕ್ಷೆ ನೀಡಲಾಗಿಲ್ಲ…’ ಎಂದಿತ್ತು.

‘ಐಪಿಸಿ 120-ಬಿ ಅಡಿಯಲ್ಲಿ ಈ ವಿಷಯದಲ್ಲಿ ಸಂಚಿನ ಪ್ರಶ್ನೆಗೆ ಸಂಬಂಧಿಸಿದಂತೆ ಸಾಬೀತುಗೊಂಡ ಸಾಕ್ಷ್ಯಗಳು ಇರಬೇಕಾದ ಅಗತ್ಯವಿಲ್ಲ; ಏಕೆಂದರೆ ಒಂದು ಸಂಚನ್ನು ಗುಪ್ತವಾಗಿ ರೂಪಿಸಲಾಗುತ್ತದೆ ಮತ್ತು ಆ ಸಂಚಿನ ಬಗ್ಗೆ ಉಳಿದ ಆರೋಪಿಗಳಿಗೆ ಕ್ರಮೇಣವಾಗಿ, ನಿಧಾನವಾಗಿ ತಿಳಿಯುತ್ತದೆ. ಅವರು ಮಾಡುವ ಭಾಷಣಗಳು ಮತ್ತು ಮಾಡಿದ ಕೃತ್ಯಗಳಿಂದ ಏನು ಸ್ಪಷ್ಟವಾಗುತ್ತದೆಯೋ ಅವುಗಳಿಂದ ಅವರ ಸಂಚಿನ ಬಗೆಗಿನ ತಿಳಿವನ್ನು ಗ್ರಹಿಸಬಹುದು’ ಎಂದು 2001ರ ಲಕ್ನೋದ ವಿಶೇಷ ನ್ಯಾಯಾಧೀಶರ ತೀರ್ಪಿನ ಕುರಿತು ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ದಾಖಲಿಸಿದೆ. ಕಲ್ಯಾಣ್ ಸಿಂಗ್, ಲಾಲ್ ಕೃಷ್ಣ ಆಡ್ವಾಣಿ ಮತ್ತಿತರರ ಮೇಲೆ ಬಾಬ್ರಿ ಮಸೀದಿ ಧ್ವಂಸಗೊಳಿಸುವ ಸಂಚಿನ ಆರೋಪವನ್ನು ಏಕೆ ಹೊರಿಸಬೇಕು ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ದಾಖಲಿಸಿದೆ.

ಹೈಕೋರ್ಟಿನ ತೀರ್ಪನ್ನು ಸ್ಪಷ್ಟವಾಗಿ ತಳ್ಳಿಹಾಕಿ ಸಂಚಿನ ಆರೋಪವನ್ನು ಮತ್ತೆ ಸೇರಿಸಿದ ಸುಪ್ರೀಂ ಕೋರ್ಟ್, ಧ್ವಂಸದ ಹಿಂದೆ ಪೂರ್ವಾಲೋಚನೆ ಮತ್ತು ಪೂರ್ವಯೋಜನೆ ಇತ್ತು ಎಂಬ ವಾದದಲ್ಲಿ ಹುರುಳಿದೆ ಮತ್ತೆ ಅದು ಆ ಕ್ಷಣಕ್ಕೆ ಸ್ವಯಂಸ್ಫೂರ್ತಿಯಿಂದ ನಡೆದ ಕೃತ್ಯವಲ್ಲ ಎಂಬುದು ಮೇಲ್ನೋಟಕ್ಕೇ ಗೋಚರಿಸುತ್ತದೆ ಎಂದಿದೆ.

ಲಿಬರ್ಹಾನ್ ಆಯೋಗವು, ಧ್ವಂಸವು ‘ಆ ಕ್ಷಣದ ಸ್ವಯಂಸ್ಫೂರ್ತಿಯ ಕೃತ್ಯ’ದ ಪರಿಣಾಮವಲ್ಲ ಮತ್ತು ಅದರ ಹಿಂದೆ ಹಿಂದೂ ಬಲಪಂಥೀಯ ಸಂಘಟನೆಗಳ ಪಾತ್ರವಿದೆ ಎಂಬ ವಾದಕ್ಕೆ ಮತ್ತಷ್ಟು ನ್ಯಾಯಿಕ ಪುಷ್ಟಿ ಒದಗಿಸುತ್ತದೆ. ‘ಈ ಸಂಘಟನೆಗಳು ಸಾಮೂಹಿಕವಾಗಿ ಅಗಾಧವಾದ ಮತ್ತು ಅಚ್ಚರಿ ಹುಟ್ಟಿಸುವ ಘಟಕವಾಗಿದ್ದು, ಚತುರ ಕೃತ್ರಿಮ ಬುದ್ಧಿಮತ್ತೆ, ವ್ಯಾಪಕತೆ ಮತ್ತು ದಮನಕಾರಿ ಗುಂಪು ಬಲವನ್ನು ಹೊಂದಿವೆ. ಆರ್‌ಎಸ್‍ಎಸ್, ಬಿಜೆಪಿ, ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಹಾಗೂ ನಿರಂತರವಾಗಿ ರೂಪಬದಲಿಸುವ ಹಿಂದೂ ಮಹಾಸಭಾ ಮತ್ತು ಜನಸಂಘದಂತಹ ಸಂಘಟನೆಗಳ ಸ್ಥಾಪಕರ ಸಂಶಯಾಸ್ಪದ ಸಿದ್ಧಾಂತಗಳ ಮುಂದುವರಿಕೆಯಲ್ಲಿ ನಿರಂತರವಾದ ಮತ್ತು ಸ್ಥಿರವಾದ ನಾಯಕತ್ವ ಒದಗಿಸಿದ್ದರು ಎಂದು ಲಿಬರ್ಹಾನ್ ಆಯೋಗ ಗಮನಿಸಿದೆ. ಆ ಚಿಂತಕರ ಕೇಂದ್ರ ಗುಂಪಿಗೆ ಅಂತಿಮ ಪರಿಣಾಮ ಮಾತ್ರ ಮುಖ್ಯ ಮತ್ತು ವಿವಾದಿತ ಕಟ್ಟಡದ ಧ್ವಂಸ, ಧರ್ಮದ ಮುಸುಕು ಹೊದ್ದುಕೊಂಡು ಜಾತ್ಯತೀತತೆ ಮತ್ತು ಬಹುಸಂಸ್ಕೃತಿಯ ಸಮಾಜದ ವಿರುದ್ಧ ಅವರ ಮುಂದುವರಿದ ಅಭಿಯಾನದಲ್ಲಿ ವಿಜಯಶಾಲಿ ಕದನ ಮಾತ್ರವಾಗಿತ್ತು” ಎಂದು ನ್ಯಾಯಮೂರ್ತಿ ಲಿಬರ್ಹಾನ್ ಹೇಳಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯವು ಬಾಬ್ರಿ ಮಸೀದಿ ಧ್ವಂಸಕ್ಕೆ ಯಾವುದೇ ಸಂಚು ಇರಲಿಲ್ಲ ಎಂದು ಹೇಳುವುದರ ಮೂಲಕ ತನ್ನ ಮುಂದೆ ಇದ್ದ ಅಗಾಧವಾದ ಸಾಕ್ಷ್ಯಗಳಿಂದ ಆಯ್ದ ಭಾಗಗಳನ್ನಷ್ಟೇ ಓದಿ- ತರ್ಕ, ಇತಿಹಾಸ ಮತ್ತು ಬಾಬ್ರಿ ಮಸೀದಿ ಧ್ವಂಸದಲ್ಲಿ ಸಂಚನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಸುಪ್ರೀಂ ಕೋರ್ಟಿನ ಸೂಚ್ಯ ನಿರ್ದೇಶನಕ್ಕೆ ತದ್ವಿರುದ್ಧವಾದ ತೀರ್ಮಾನಕ್ಕೆ ಬಂದಿದೆ. ಸುಪ್ರೀಂ ಕೋರ್ಟಿನ ಶಬ್ದಗಳಲ್ಲೇ ಹೇಳುವುದಾದರೆ ಈ ಸಂಚು, ‘ಸಂವಿಧಾನದ ಜಾತ್ಯತೀತ ಸಂರಚನೆಯನ್ನೇ ಅಲುಗಾಡಿಸುವ ಅಪರಾಧ’. ಸಂಚು ಇರಲಿಲ್ಲ ಎಂಬ ತೀರ್ಪು ನೀಡುವುದರ ಮೂಲಕ ವಿಶೇಷ ಸಿಬಿಐ ನ್ಯಾಯಾಲಯವು ವಾಸ್ತವಾಂಶಗಳು ಮತ್ತು ಸತ್ಯ ಮಾತ್ರವಲ್ಲ; ನ್ಯಾಯಕ್ಕೇ ಘೋರ ಅನ್ಯಾಯ ಎಸಗಿದೆ.

ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾಕಷ್ಟು ನೆಲೆಗಳಿವೆ ಎಂಬುದು ಸ್ಪಷ್ಟವಾಗಿದ್ದು, ಸಿಬಿಐ ವಿಳಂಬವಿಲ್ಲದೇ ಮೇಲ್ಮನವಿ ಸಲ್ಲಿಸಬೇಕು. ಎಸಗಿದ ಅಪರಾಧಗಳಿಗೆ ಶಿಕ್ಷೆಯಿಲ್ಲದೇ ಹೋಗಬಾರದು; ಕಾನೂನು ಪ್ರಕಾರ ಸಮಾಜ ನಡೆಯಬೇಕು ಎಂಬ ಮೂಲಭೂತ ತತ್ವದ ಕುರಿತು ಕಾಳಜಿ ಇರುವ ಪ್ರತಿಯೊಬ್ಬರೂ ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಿಸಬೇಕು.

ಸಂಶಯರಹಿತವಾಗಿ ಈ ತೀರ್ಪು ಕಾನೂನು ನಡಾವಳಿಯ ಸಮಾಜವಾಗಿರುವ ಭಾರತದ ವಿಶ್ವಾಸಾರ್ಹತೆಗೆ ಗಂಭೀರವಾದ ಹೊಡೆತ ನೀಡಿದೆ ಮತ್ತು ಸಂಚಿನ ಆರೋಪವನ್ನು ಮರಳಿ ಸೇರಿಸಲು ಸಾಧ್ಯವಾಗಿದ್ದಕ್ಕೆ ಏಕೈಕ ಕಾರಣ, 2017ರಲ್ಲಿ ಸುಪ್ರೀಂ ಕೋರ್ಟಿನ ಮಧ್ಯಪ್ರವೇಶ ಎಂಬುದನ್ನು ನಾವು ಮರೆಯಬಾರದು. ಇಪ್ಪತ್ತೈದು ವರ್ಷಗಳ ವಿಳಂಬ ಮಾಡಿದ ಬಳಿಕ, ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಮೂರು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಕೊನೆಗೂ ತೀರ್ಪು ಬಂತು ಎಂಬ ವಾಸ್ತವವು ತಪ್ಪನ್ನು ಇನ್ನೂ ಸರಿಪಡಿಸಲು ಸಾಧ್ಯ ಎಂಬುದನ್ನು ಸೂಚಿಸುತ್ತದೆ.

ಈಗ ಅಗತ್ಯವಿರುವುದು ಏನೆಂದರೆ, ಪ್ರಸ್ತುತ ಬೀಸುತ್ತಿರುವ ರಾಜಕೀಯ ಗಾಳಿಯ ವಿರುದ್ಧ ಹೋಗಬೇಕಾಗಿ ಬಂದರೂ, ಸಾಕ್ಷ್ಯವನ್ನು ನ್ಯಾಯಯುತವಾಗಿ ತೂಗಿನೋಡಿ, ಅರ್ಹತೆಯ ಮೇಲೆ ತೀರ್ಪು ನೀಡಲು ಭಯಪಡದ, ಮೇಲ್ಮನವಿ ಸಲ್ಲಿಸಲಾದ ನ್ಯಾಯಾಲಯದ ಒಬ್ಬರು ನ್ಯಾಯಾಧೀಶರು. ಇಂತಹ ಜನರು ಈಗ ಅಪರೂಪವಾಗಿದ್ದರೂ, ಭಾರತದ ಕಾನೂನು ವ್ಯವಸ್ಥೆಯಲ್ಲಿ ಇಲ್ಲವೇ ಇಲ್ಲ ಎಂದೇನಲ್ಲ.

photo courtesy : Analytics Insight

ನೆನಪಿಗೆ ಬರುವ ಒಂದು ಉದಾಹರಣೆ ಎಂದರೆ, ಗುಜರಾತ್ ಹತ್ಯಾಕಾಂಡದ ವೇಳೆ ಫೆಬ್ರವರಿ 28, 2002ರಲ್ಲಿ ನರೋಡ ಪಟಿಯಾದಲ್ಲಿ ನಡೆದ ಹಿಂಸಾಚಾರದ ಪ್ರಕರಣದಲ್ಲಿ ಗಮನಾರ್ಹ ತೀರ್ಪು ನೀಡಿದ ನ್ಯಾ. ಜ್ಯೋತ್ಸ್ನಾ ಯಾಜ್ಞಿಕ್ ಅವರು. ನರೋಡ ಪಟಿಯಾದಲ್ಲಿ ನಡೆದ ಯೋಜಿತ ಹಿಂಸಾಚಾರದಲ್ಲಿ 96 ಮುಸ್ಲಿಮರ ಹತ್ಯೆಯಾಗಿತ್ತು; 124ಕ್ಕೂ ಹೆಚ್ಚು ಮುಸ್ಲಿಮರು ಗಾಯಗೊಂಡಿದ್ದರು ಮತ್ತು ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರ ಮಾಡಲಾಗಿತ್ತು. ಅಂದು ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನ್ಯಾ. ಯಾಜ್ಞಿಕ್ ಅವರು, ಮಾಜಿ ಮಂತ್ರಿ ಮಾಯಾಬೆನ್ ಕೊಡ್ನಾನಿ ಸಹಿತ 32 ಮಂದಿಯನ್ನು ಈ ಸಂಚಿನ ಭಾಗವಾಗಿದ್ದರೆಂದು ತೀರ್ಮಾನಿಸಿ, ಅವರೆಲ್ಲರಿಗೂ ಜೈಲು ಶಿಕ್ಷೆಯನ್ನು ವಿಧಿಸುವ ಧೈರ್ಯಯುತವಾದ ತೀರ್ಪು ನೀಡಿದ್ದರು.

ಜರ್ಮನಿಯಲ್ಲಿ ನಾಜಿಗಳು ನಡೆಸಿದ ಹೋಲೋಕೋಸ್ಟ್‌ನಿಂದ ತಪ್ಪಿಸಿಕೊಂಡಿದ್ದ ತತ್ವಶಾಸ್ತ್ರಜ್ಞೆ ಹನ್ನಾ ಅರೆಂಟ್ ಅವರಿಂದ ಕಲಿಯಬಹುದಾರೆ, ಮಾನವೀಯತೆಯಲ್ಲಿ ಮತ್ತು ಎಲ್ಲಾ ಜನರನ್ನು ಭಯಭೀತಿಗೊಳಿಸಿ ಸಮ್ಮತಿ ಸೂಚಿಸುವಂತೆ ಮಾಡುವ ಅಥವಾ ತಮ್ಮ ಸಿದ್ಧಾಂತಗಳಿಗೆ ಬದ್ಧರಾಗಿರುವ ವ್ಯಕ್ತಿಗಳನ್ನಾಗಿಸಿ ಬದಲಾಯಿಸುವ ಅಂತಿಮ ಅಸಾಧ್ಯತೆಯ ಬಗ್ಗೆ ನಮ್ಮ ನಂಬಿಕೆಯನ್ನು ಇರಿಸಿಕೊಳ್ಳಬೇಕಿದೆ. ಅರೆಂಟ್ ಅವರ ವಾದದ ಪ್ರಕಾರ ‘ಭಯಭೀತಿಯ ವಾತಾವರಣದಲ್ಲಿ ಬಹುತೇಕ ಜನ ಹೇಳಿದ್ದಕ್ಕೆಲ್ಲಾ ಸಮ್ಮತಿಯನ್ನು ಸೂಚಿಸುತ್ತಾರಾದರೂ, ಕೆಲವರಾದರೂ ಅದನ್ನು ಧಿಕ್ಕರಿಸುತ್ತಾರೆ. ಅಂತಿಮ ಪರಿಹಾರವನ್ನು ಸೂಚಿಸಲಾಗಿದ್ದ ದೇಶಗಳಲ್ಲಿ ಬಹುತೇಕ ಎಲ್ಲೆಡೆ “ಅದು ಸಿದ್ದಿಸಬಹುದು” ಎಂದುಕೊಂಡರೂ ಎಲ್ಲಾ ಕಡೆ ಅದು ಸಾಧ್ಯವಾಗಲಿಲ್ಲ ಎಂಬುದರಿಂದ ಸಿಕ್ಕುವ ಪಾಠ ಅದು’.

ಸಂವಿಧಾನವನ್ನು ರಕ್ಷಿಸಿಕೊಳ್ಳುವ ನಮ್ಮ ಹೋರಾಟ, ಬೇರೆಲ್ಲಾ ಅಡೆತಡೆಗಳ ಹೊರತು ಭಾರತೀಯ ನ್ಯಾಯಾಂಗ ವ್ಯವಸ್ಥೆಯು ತನ್ನೊಳಗೇ- ‘ಭಾರತೀಯ ಸಂವಿಧಾನದಲ್ಲಿ ನಿಜವಾದ ನಂಬಿಕೆ ಮತ್ತು ನಿಷ್ಟೆ’ಯ ತಮ್ಮ ಪ್ರತಿಜ್ಞೆಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಲು ಸಿದ್ಧರಿರುವ ನ್ಯಾ. ಯಾಜ್ಞಿಕ್ ಅವರಂತಹ ನ್ಯಾಯಾಧೀಶರನ್ನು- ಇನ್ನೂ ಕೂಡಾ ಹುಟ್ಟುಹಾಕುತ್ತದೆ ಎಂಬ ನಂಬಿಕೆಯನ್ನು ನಾವು ಮುಂದುವರೆಸಿಕೊಂಡು ಹೋಗಬೇಕಿದೆ.

ಅರವಿಂದ್ ನಾರಾಯಣ್

(ಸಂವಿಧಾನ ತಜ್ಞರು, ಪರ್ಯಾಯ ಕಾನೂನು ವೇದಿಕೆ (ಎಎಲ್‍ಎಫ್) ಸ್ಥಾಪಕ ಸದಸ್ಯರು. ಎಲ್‌ಜಿಬಿಟಿ ಹಕ್ಕುಗಳ ಹೋರಾಟಗಳಲ್ಲೂ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಐಪಿಸಿ 377 ರದ್ದುಗೊಳಿಸುವ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು.)

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಬಾಬ್ರಿ ಮಸೀದಿ ಕೆಡವುದರ ಹಿಂದೆ ಯಾರ ಸಂಚು ಇಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಧೀಶರು ಕೊಟ್ಟ10 ಕಾರಣಗಳು!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...