ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಆರಂಭವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದರಿಂದ ಇದು ದೇಶದ ಗಮನ ಸೆಳೆದಿದೆ. ಭವಾನಿಪುರ ಜೊತೆಯಲ್ಲೇ ರಾಜ್ಯದ ಮುರ್ಷಿದಾಬಾದ್ ಜಿಲ್ಲೆಯ ಸಂಸರ್‌ಗಂಜ್ ಮತ್ತು ಜಂಗೀಪುರ ಕ್ಷೇತ್ರಗಳಲ್ಲಿ ಕೂಡಾ ಚುನಾವಣೆ ನಡೆಯುತ್ತಿದೆ. ಬಿಗಿ ಭದ್ರತೆಯ ನಡುವೆ ಮುಂಜಾನೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಮೂರು ಕ್ಷೇತ್ರಗಳಲ್ಲಿ ಒಟ್ಟು 6,97,164 ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.
ಅಕ್ಟೋಬರ್ 3 ರಂದು ಮತಗಳನ್ನು ಎಣಿಕೆ ನಡೆಸಲಾಗುತ್ತದೆ. ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಅವರು ಸೋತಿದ್ದರು. ಆದರೂ ರಾಜ್ಯದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಏರಿದ್ದರು. ಹೀಗಾಗಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಈ ಚುನಾವಣೆಯನ್ನು ಗೆಲ್ಲಲೇಬೇಕಾಗಿದೆ.
ಇದನ್ನೂ ಓದಿ: ರಾಜ್ಯಸಭಾ ಉಪಚುನಾವಣೆ – ಟಿಎಂಸಿ ವಿರುದ್ಧ ಸ್ಪರ್ಧಿಸದಿರಲು ತಿರ್ಮಾನಿಸಿದ BJP!
ಜಂಗೀಪುರ ಮತ್ತು ಸಂಸರ್‌ಗಂಜ್ ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳು ಮೃತಪಟ್ಟಿರುವುದರಿಂದ ಅಲ್ಲಿನ ಚುನಾವಣೆಗಳು ಮುಂದೂಡಲ್ಪಟ್ಟಿದ್ದವು.
ಮೂರು ಕ್ಷೇತ್ರದಾದ್ಯಂತ ಹಲವು ಬೂತ್‌ಗಳ ಹೊರಗೆ ಮುಂಜಾನೆಯಿಂದಲೇ ಉದ್ದವಾದ ಸರತಿ ಸಾಲುಗಳು ಕಂಡುಬಂದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಂದು ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಭವಾನಿಪುರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ಬಿಜೆಪಿಯಿಂದ ಪ್ರಿಯಾಂಕಾ ಟಿಬ್ರೆವಾಲ್ ಮತ್ತು ಸಿಪಿಎಂನ ಶ್ರೀಜಿಬ್ ಬಿಸ್ವಾಸ್ ಸ್ಪರ್ಧಿಸಿದ್ದಾರೆ.
ಬಿಜೆಪಿ ಕೂಡಾ ಭವಾನಿಪುರ ಉಪಚುನಾವಣೆಯನ್ನು ಪ್ರತಿಷ್ಠಿತ ಕಣವಾಗಿ ಪರಿಗಣಿಸಿದ್ದು, ಇದಕ್ಕಾಗಿ ಅಕ್ಟೋಬರ್ 4 ರಂದು ನಡೆಯಲಿರುವ ರಾಜ್ಯಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ. ಪಕ್ಷದ ಗಮನ ಭವಾನಿಪುರ ವಿಧಾನಸಭಾ ಉಪ-ಚುನಾವಣೆಯ ಕಡೆಗೆ ಕೇಂದ್ರೀಕೃತವಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗದ ಮುಖ್ಯಮಂತ್ರಿಯನ್ನು ಮತ್ತೊಮ್ಮೆ ಆಯ್ಕೆಯಾಗದ ಹಾಗೆ ಮಾಡಲು ಪಕ್ಷ ಕೆಲಸ ಮಾಡುತ್ತಿದೆ ಎಂದು ಅದು ಹೇಳಿತ್ತು.
ಇದನ್ನೂ ಓದಿ: ಭಾರತವನ್ನು ತಾಲಿಬಾನ್, ಪಾಕಿಸ್ತಾನ ಆಗಲು ಬಿಡುವುದಿಲ್ಲ- ಮಮತಾ ಬ್ಯಾನರ್ಜಿ


