Homeಕರ್ನಾಟಕರಾಶ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020: ಹಿಂದು-ಮುಂದು

ರಾಶ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020: ಹಿಂದು-ಮುಂದು

- Advertisement -
- Advertisement -

(ಇದು ಹೊಸ ಬರಹದಲ್ಲಿದೆ. ಮಹಾಪ್ರಾಣಗಳ ಬಳಕೆಯನ್ನು ಕಡಿತಗೊಳಿಸಲಾಗಿದೆ)

ಪೀಠಿಕೆ

ಶಿಕ್ಷಣ ತಜ್ಞನಾಗಿದ್ದ ಆಸ್ಟ್ರಿಯಾ ದೇಶದ ಇವಾನ್ ಇಲ್ಯಿಚ್ ಆಧುನಿಕತೆ ಮತ್ತು ಶಿಕ್ಷಣ ಸಂಸ್ಥೆಗಳ ಬ್ರಶ್ಟ ನೀತಿಗಳ ಕುರಿತು ಚಿಂತಿಸಿದ. ಶಿಕ್ಷಣದ ಕುರಿತಾದ ತನ್ನ ಅದ್ಯಯನ ಮತ್ತು ವಿಮರ್ಶೆಯನ್ನು ಮಂಡಿಸುತ್ತಾ ಸಾಂಸ್ಥೀಕರಣ ಪ್ರಕ್ರಿಯೆ, ಪರಿಣಿತರು ಮತ್ತು ನೈಪುಣ್ಯತೆ, ಶಿಕ್ಷಣವನ್ನು ಒಂದು ಸರಕಾಗಿಸುವುದು ಮತ್ತು ಉತ್ಪಾದಕತೆ ವಿರೋಧಿ ನೀತಿಗಳು ಈ ನಾಲ್ಕನ್ನು ಆಧುನಿಕ, ವೈಜ್ಞಾನಿಕ, ಮಾನವೀಯ ಶಿಕ್ಷಣದ ಶತ್ರುಗಳು ಎಂದು ಕರೆಯುತ್ತಾನೆ.

ಸಾಂಸ್ಥೀಕರಣ ಪ್ರಕ್ರಿಯೆ:

ಆಧುನಿಕ ಸಮಾಜವು ಅತಿ ಹೆಚ್ಚು ಸಂಸ್ಥೆಗಳನ್ನು ಸೃಷ್ಟಿಸಿದೆ, ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಜೀವಿಸುತ್ತಿರುವ ನಮ್ಮ ಬದುಕನ್ನೆ ಸಾಂಸ್ಥೀಕರಣಗೊಳಿಸಲಾಗಿದೆ. ಈ ಪ್ರಕ್ರಿಯೆಯು ಮನುಷ್ಯರ ಘನತೆಯನ್ನು, ಆತ್ಮಸ್ಥೈರ್ಯವನ್ನು ನಾಶ ಮಾಡುತ್ತದೆ, ಬಿಕ್ಕಟ್ಟಿನ ಸನ್ನಿವೇಶಗಳನ್ನು ಎದುರಿಸುವ ಗುಣಗಳನ್ನು ದ್ವಂಸ ಮಾಡುತ್ತದೆ, ಸಂಬ್ರಮದ ಸಂಬಂದಗಳನ್ನು ಕೊಲ್ಲುತ್ತದೆ ಮತ್ತು ಕಡೆಯದಾಗಿ ಬದುಕನ್ನು ಪರಾವಲಂಬಿಯಾಗಿಸುತ್ತದೆ.

ಪರಿಣಿತರು ಮತ್ತು ನೈಪುಣ್ಯತೆ:

ಈ ಪರಿಣಿತರು ಮತ್ತು ನೈಪುಣ್ಯತೆಯ ಸಂಸ್ಕೃತಿಯು ಮತ್ತಷ್ಟು ಪರಿಣಿತರನ್ನು ಬೇಡುತ್ತದೆ. ಈ ಪರಿಣಿತರು ಅನೇಕ ಸಾಂಸ್ಥಿಕ ತಡೆಗೋಡೆಗಳನ್ನು ನಿರ್ಮಿಸುತ್ತಾರೆ ಮತ್ತು ತಮ್ಮನ್ನು ಅದರ ಕಾವಲುಗಾರರು ಎಂದು ಬಿಂಬಿಸಿಕೊಳ್ಳುತ್ತಾರೆ. ಕಡೆಗೆ ಅವರು ಜ್ಞಾನದ ಉತ್ಪಾದನೆಯನ್ನು ನಿಯಂತ್ರಿಸುತ್ತಾರೆ, ಯಾವುದು ಊರ್ಜಿತ ಮತ್ತು ನ್ಯಾಯಬದ್ದ ಎಂದು ಸ್ವತಃ ಅವರೆ ನಿರ್ದರಿಸುತ್ತಾರೆ

ಶಿಕ್ಷಣವನ್ನು ಒಂದು ಸರಕಾಗಿಸುವುದು:

ಜ್ಞಾನ ಆರೋಗ್ಯಪೂರ್ಣವಾದದ್ದು, ಪವಿತ್ರವಾದದ್ದು, ಗೌರವಯುತವಾದದ್ದು ಎಂದು ಜನತೆಯನ್ನು ಒಂದು ಜಾಲದಲ್ಲಿ ಬಲೆ ಬೀಳಿಸುತ್ತಾರೆ. ಕಲಿಕೆ ಎನ್ನುವುದು ಒಂದು ವಸ್ತು, ಬದಲಿಗೆ ಅದು ಚಟುವಟಿಕೆಯಲ್ಲ ಎಂದೆನೆಸಿ ಅದನ್ನು ಒಂದು ಸರಕನ್ನಾಗಿಸಲಾಗುತ್ತದೆ. ಎಲ್ಲಾ ಪದಾರ್ಥಗಳಂತೆ ಕಲಿಕೆ ಎನ್ನುವ ಸರಕು ಸಹ ಅಗತ್ಯಕ್ಕೆ ತಕ್ಕಂತೆ ದುರ್ಲಭವಾಗುತ್ತದೆ.

PC : SettimanaNews (ಇವಾನ್ ಇಲ್ಯಿಚ್)

ಉತ್ಪಾದಕತೆ ವಿರೋಧಿ ನೀತಿಗಳು:

ಇವು ಮೂಲಭೂತವಾಗಿ ಜನಪರವಾಗಿರುವ, ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಸದುಪಯೋಗವಾಗಿರುವ ಸಕರಾತ್ಮಕ ಯೋಜನೆಗಳನ್ನು ನಕರಾತ್ಮಕಗೊಳಿಸುವವು ಮತ್ತು ನಗಣ್ಯಗೊಳಿಸುವವು. ಉದಾಹರಣೆಗೆ ರಾಜ್ಯ ಬಜೆಟ್‌ನ ಗಾತ್ರದಲ್ಲಿ ಶಿಕ್ಷಣಕ್ಕೆ ಅನುದಾನವು ಶೇ.24% ಪ್ರಮಾಣದಲ್ಲಿರಬೇಕು. ಆದರೆ ಅದು ಶೇ.11% ಪ್ರಮಾಣದಲ್ಲಿದೆ. ಕೇಂದ್ರ ಬಜೆಟ್‌ನ ಗಾತ್ರದಲ್ಲಿ ಶಿಕ್ಷಣಕ್ಕೆ ಅನುದಾನವು ಶೇ.10% ಪ್ರಮಾಣದಲ್ಲಿರಬೇಕು ಆದರೆ ಅದು ಶೇ.2.5% ಪ್ರಮಾಣದಲ್ಲಿದೆ. ಬಜೆಟ್‌ನಲ್ಲಿ ಜಿಡಿಪಿಯ ಶೇ.6% ಪ್ರಮಾಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು, ಆದರೆ ಕೇವಲ 0.455% ಮೀಸಲಿಡುತ್ತಾರೆ. ಇತ್ತೀಚೆಗೆ ಶಿಕ್ಷಣ ಮಂತ್ರಿಗಳು ಪ್ರಾಥಮಿಕ ಶಾಲಾ ಮಕ್ಕಳಿಗೆ ವರ್ಷಕ್ಕೆ ಎರಡು ಜೊತೆ ಉಚಿತ ಸಮವಸ್ತ್ರ ಕೊಡುವ ಪದ್ದತಿಯನ್ನು ಬದಲಿಸಿ ಒಂದು ಜೊತೆ ಕೊಡುವುದಾಗಿ ತೀರ್ಮಾನಿಸಿದ್ದಾರೆ (ನಂತರ ಇದನ್ನು ಹಿಂಪಡೆದಿದ್ದಾರೆ).

ಮದ್ಯಾಹ್ನದ ಬಿಸಿಯೂಟಕ್ಕೆ ಆದಾರ್ ಕಾರ್ಡ್, ಗುರುತು ಚೀಟಿ ಕಡ್ಡಾಯಗೊಳಿಸುವ ಚಿಂತನೆ. 1-5ನೆ ಹಂತದವರೆಗೂ ತರಗತಿಗೊಬ್ಬರು ಶಿಕ್ಷಕರು, 5-10ನೆ ತರಗತಿವರೆಗೆ ವಿಷಯಕ್ಕೊಬ್ಬರು ಶಿಕ್ಷಕರಿರಬೇಕು. ಆದರೆ ನಲಿ-ಕಲಿ ಯೋಜನೆಯಲ್ಲಿ 1-3ನೆ ತರಗತಿಯ ವಿಬಿನ್ನ ವಯೋಮಾನದ ಮಕ್ಕಳನ್ನು ಒಂದುಗೂಡಿಸಿ ಒಬ್ಬ ಶಿಕ್ಷಕರಿಗೆ ಅವರ ಜವಬ್ದಾರಿ ವಹಿಸುತ್ತಾರೆ. ಆರ್‌ಟಿಇ ಕಾಯಿದೆ ಅಡಿಯಲ್ಲಿ ಶಿಕ್ಷಕ ಮಕ್ಕಳ ಅನುಪಾತವನ್ನು 1:30 ಎಂದು ಅವೈಜ್ಞಾನಿಕವಾಗಿ ನಿರ್ದರಿಸುತ್ತಾರೆ. ಆದಿವಾಸಿ ಸಮುದಾಯವನ್ನು ಮುಖ್ಯವಾಹಿನಿಗೆ ಕರೆತರಲು ಆರಂಬದ ಶಿಕ್ಷಣದಲ್ಲಿ ಅವರ ಸಂಸ್ಕೃತಿ, ವೈವಿದ್ಯತೆಯನ್ನು ಒಳಗೊಂಡ ವ್ಯಾಸಂಗಕ್ರಮ ರೂಪಿಸಬೇಕು, ಆದರೆ ಆದಿವಾಸಿ ಮಕ್ಕಳು ಅವರಿಗೆ ಅಪರಿಚಿತವಾದ, ಕಬ್ಬಿಣದ ಕಡಲೆಯಾದ ಈಗಾಗಲೆ ಚಾಲ್ತಿಯಲ್ಲಿರುವ ಪಠ್ಯಕ್ರಮಗಳನ್ನು ನೇರವಾಗಿ ಕಲಿಯುವ ಅನಿವಾರ್ಯತೆ ಸೃಷ್ಟಿಸುತ್ತಾರೆ. ಇದು ಅವರ ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸುತ್ತದೆ. ಪಾಲೋ ಫ್ರೇರಿ ’ಶಿಕ್ಷಕನಿಗೆ ತಾನು ಯಾರಿಗಾಗಿ ಯಾವ ಉದ್ದೇಶಕ್ಕೆ ಬೋಧಿಸುತ್ತಿದ್ದೇನೆ ಎಂಬುದರ ಅರಿವಿರಬೇಕು.. ..ನಾವು ಜನರ ಸಾಮಾನ್ಯಜ್ಞಾನದ ಆಚೆಗೆ ಮುನ್ನಡಿ ಇಡಬೇಕು, ಜನತೆಯ ಜೊತೆಗೆ ಪಯಣಿಸಬೇಕು ಆಗ ಮಾತ್ರ ಸಮಾಜ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ’ ಎಂದು ಹೇಳುತ್ತಾನೆ. ಇದು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಊಹಿಸಿಕೊಳ್ಳಲೂ ಸಾದ್ಯವಿಲ್ಲ. ಇನ್ನೂ ನೂರಾರು ಉದಾಹರಣೆಗಳನ್ನು ಕೊಡಬಹುದು

ಎನ್‌ಇಪಿ 2020 ಬಾದಕಗಳು

ಯಾವುದೇ ಶಿಕ್ಷಣ ನೀತಿಯನ್ನು ರೂಪಿಸುವಾಗ ಇವಾನ್ ಇಲ್ಯಿಚ್‌ನ ಮೇಲಿನ ಚಿಂತನೆಗಳು ಮುಖ್ಯವಾಗುತ್ತವೆ. ಪ್ರಬುತ್ವವು ಯಾವ ಬೆಲೆ ತೆತ್ತು ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತದೆ ಎನ್ನುವುದು ನಾಗರಿಕ ಸಮಾಜದ ಕಾಳಜಿಯಾಗಿರಬೇಕು. ಸರಕಾರಗಳು ರೂಪಿಸುವ ಶಿಕ್ಷಣ ನೀತಿಯು ವಂಚಿತ ಸಮುದಾಯಗಳ ಹಿತಾಸಕ್ತಿಯನ್ನು ಆದ್ಯತೆಯಾಗಿ ಪರಿಗಣಿಸಬೇಕು. ಶಿಕ್ಷಣ ನೀತಿಯ ತಜ್ಞರು ರೂಪಿಸುವ ವ್ಯಾಸಂಗಕ್ರಮ (ಪೆಡಗಾಜಿ), ಶಿಕ್ಷಣ ಪದ್ದತಿ, ಸೂಚಿಸುವ ಬದಲಾವಣೆಗಳು ಶೋಷಿತರ ಶೈಕ್ಷಣಿಕ ಪ್ರಾತಿನಿದ್ಯ ಮತ್ತು ಸಬಲೀಕರಣವು ಆ ನೀತಿಯ ತಿರುಳಾಗಿರಬೇಕು.

ಇಂದು ಶಿಕ್ಷಣದ ವ್ಯಾಪಾರೀಕರಣವನ್ನು ಗೌಣಗೊಳಿಸಿ ಸಾರ್ವಜನಿಕ ಶಿಕ್ಷಣ ನೀತಿಯನ್ನು ಬಲಗೊಳಿಸಲು, ನೆರೆಹೊರೆ ಶಾಲಾ ಪದ್ದತಿಯನ್ನು ಜಾರಿಗೊಳಿಸಲು ಮತ್ತು ಮುಖ್ಯವಾಗಿ ಸಾಮಾಜಿಕ ನ್ಯಾಯದ ತಕ್ಕಡಿಯನ್ನು ಸಮತೂಗಿಸಲು ಸೂಕ್ತವಾದ ಶಿಕ್ಷಣ ನೀತಿಯನ್ನು ರೂಪಿಸಬೇಕಾದ ಸರಕಾರಗಳು ಇದರ ಕುರಿತು ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ. ಇದಕ್ಕೆ ಎನ್‌ಇಪಿ 2020 ಸಹ ಹೊರತಾಗಿಲ್ಲ. ಈ ಶಿಕ್ಷಣ ನೀತಿಯು ಶಿಕ್ಷಣವನ್ನು ಕೇಂದ್ರೀಕರಣಗೊಳಿಸುತ್ತದೆ ಮತ್ತು ವ್ಯಾಪಾರೀಕರಣಗೊಳಿಸುತ್ತದೆ. ಸಂವಿದಾನದ ಆಶಯಗಳಿಗೆ ವಿರುದ್ದವಾಗಿದೆ, ವೈದಿಕಶಾಹಿ ಶಿಕ್ಷಣ ವ್ಯವಸ್ಥೆಯನ್ನು ಪುರಸ್ಕರಿಸುತ್ತದೆ. ಅತ್ಯಂತ ಮುಖ್ಯವಾದ ಶಿಕ್ಷಣ ನೀತಿಯನ್ನು ಅದಿಕಾರಶಾಹಿ ನಿರ್ದರಿಸುತ್ತದೆ ಮತ್ತು ಅದು ಖಾಸಗೀಕರಣಕ್ಕೆ ಪೂರಕವಾಗಿದೆ. ಇವಾನ್ ಇಲ್ಯಿಚ್‌ನ ಆತಂಕಗಳನ್ನು ನಿಜವಾಗಿಸಿದೆ.

ಕೇಂದ್ರದ ಬಿಜೆಪಿ ಸರಕಾರದ ಕ್ಯಾಬಿನೆಟ್ ಅನುಮೋದಿಸಿದ ಈ ಎನ್‌ಇಪಿ 2020 ಕುರಿತು ಸಂಸತ್ತಿನಲ್ಲಿ ಚರ್ಚೆಯಾಗಿಲ್ಲ. ಸಂವಿದಾನದ ಶೆಡ್ಯೂಲ್ 7ರ ಪ್ರಕಾರ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಆದರೆ ರಾಜ್ಯಗಳನ್ನು ಕಡೆಗಣಿಸಲಾಗಿದೆ. ರಾಜ್ಯ ವಿದಾನಸಭೆಗಳಲ್ಲಿ ಚರ್ಚೆಯಾಗಿಲ್ಲ. ಶಿಕ್ಷಣದ ಹಕ್ಕುದಾರರೊಂದಿಗೆ ಚರ್ಚೆಯಾಗಿಲ್ಲ. ಇವೆಲ್ಲದರ ಕುರಿತು ಕಳೆದ ಮೂರು ವರ್ಶಗಳಲ್ಲಿ ನಿರಂತರವಾಗಿ ಚರ್ಚೆಯಾಗಿದೆ. ವಿಚಾರ ಕಮ್ಮಟಗಳು, ಅದ್ಯಯನ ಶಿಬಿರಗಳು ನಡೆದಿವೆ. ಇದರ ಪ್ರತಿಗಾಮಿತನವನ್ನು ವಿರೋದಿಸಿ ಪ್ರತಿಬಟನೆಗಳು ನಡೆದಿವೆ. ಆದರೆ ದೈತ್ಯ ಬಹುಮತ ಹೊಂದಿರುವ ಬಿಜೆಪಿ ಸರಕಾರ ಈ ಬಿನ್ನಾಬಿಪ್ರಾಯಗಳಿಗೆ ಕ್ಯಾರೆ ಎನ್ನುತ್ತಿಲ್ಲ.

ತಳ ಸಮುದಾಯಗಳ ಶಿಕ್ಷಣಕ್ಕೆ ಮಾರಕವಾಗಿರುವ ಈ ನೀತಿಯನ್ನು ಬಿಜೆಪಿ ಪಕ್ಷವು ತರಾತುರಿಯಲ್ಲಿ ಜಾರಿಗೊಳಿಸಲು ಮುಂದಾಗಿದೆ ಮತ್ತು ಕರ್‍ನಾಟಕದ ಉನ್ನತ ಶಿಕ್ಷಣ ಮಂತ್ರಿ ಅಶ್ವತ್ಥನಾರಾಯಣ ಅವರು ತಮ್ಮ ಹೈಕಮಾಂಡನ್ನು ಮೆಚ್ಚಿಸಲು ಪ್ರಸಕ್ತ ವರ್ಶದಿಂದಲೇ ಪದವಿ/ಉನ್ನತ ಶಿಕ್ಷಣದಲ್ಲಿ ನಾಲ್ಕು ವರ್ಶಗಳ ಪದವಿ ಶಿಕ್ಷಣವನ್ನು ಪ್ರಾರಂಬಿಸಲು ಆದೇಶ ನೀಡಿದ್ದಾರೆ. ತಮಾಶೆಯೆಂದರೆ ವಿದಾನಮಂಡಲದ ಮಾತು ದೂರವುಳಿಯಿತು, ಕರ್‍ನಾಟಕ ಸರಕಾರದ ಕ್ಯಾಬಿನೆಟ್‌ನಲ್ಲಿಯೂ ಸಹ ಈ ಎನ್‌ಇಪಿ 2020 ಚರ್ಚೆಯಾಗಿಲ್ಲ ಎಂದಮೇಲೆ ಇವರ ಸರ್ವಾದಿಕಾರ ದೋರಣೆ ಯಾವ ಹಂತದಲ್ಲಿದೆ ಎಂಬುದು ಮನವರಿಕೆಯಾಗುತ್ತದೆ. ಮತ್ತು ಈ ಕುರಿತು ಎಣೆಯಿಲ್ಲದಶ್ಟು ಚರ್ಚೆಯಾಗಿದೆ.

ಶಿಕ್ಷಣ ನೀತಿಯನ್ನು ರೂಪಿಸುವ ಪ್ರತಿ ಸಂದರ್ಬದಲ್ಲಿ ಕೆಳಗಿನ ವಿಚಾರಗಳನ್ನು ಒಳಗೊಂಡಿದೆಯೇ ಎನ್ನುವುದು ಮುಖ್ಯವಾಗಬೇಕು

1. ಸಂವಿದಾನದ ನೀತಿಸಂಹಿತೆಗಳನ್ನು ಪಾಲಿಸಿದೆಯೇ? ಪ್ರಜಾಪ್ರಬುತ್ವದ ಆಶಯಗಳಿಗೆ ಬದ್ದವಾಗಿದೆಯೇ?

ವಾಸ್ತವ: ಈ ಶಿಕ್ಷಣ ನೀತಿಯನ್ನು ತಯಾರಿಸಿದ ಕಸ್ತೂರಿ ರಂಗನ್ ಸಮಿತಿಯು ಶಿಕ್ಷಣದ ಕುರಿತಂತೆ ಸಂವಿದಾನದ ಪರಿಚ್ಚೇದಗಳನ್ನು ಪ್ರಸ್ತಾಪ ಮಾಡಲಿಲ್ಲ ಮತ್ತು ಆ ಪರಿಚ್ಚೇದಗಳಿಗೆ ತನ್ನ ಬದ್ದತೆಯನ್ನು ಸಹ ವ್ಯಕ್ತಪಡಿಸಲಿಲ್ಲ. ಭಾರತ ಸಂವಿದಾನದಲ್ಲಿ ಮಕ್ಕಳ ಶಿಕ್ಷಣ, ಆರೈಕೆ, ರಕ್ಷಣೆ, ಪೋಷಣೆಗೆ ಸಂಬಂದಿಸಿದಂತೆ ಶಿಕ್ಷಣದ ಮೂಲಭೂತ ಹಕ್ಕು (ಪರಿಚ್ಚೇದ 21ಎ), ಬಾಲ ಕಾರ್ಮಿಕ ಪದ್ದತಿ ನಿಶೇದ (ಪರಿಚ್ಚೇದ 24), ಮಕ್ಕಳು ಆರೋಗ್ಯಕರವಾಗಿ ಅಬಿವೃದ್ದಿ ಹೊಂದಲು ಅವಕಾಶ ಮತ್ತು ಸೌಲಬ್ಯ (ಪರಿಚ್ಚೇದ 39 ಎಫ್), ಬಾಲ್ಯಪೂರ್ವ ಆರೈಕೆಗಳಾದ ಪೌಷ್ಟಿಕಾಂಶ, ಆರೋಗ್ಯ (ಪರಿಚ್ಚೇದ 45), ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ದುರ್ಬಲ ವರ್ಗಗಳ ಶೈಕ್ಷಣಿಕ ಹಿತಾಸಕ್ತಿ ರಕ್ಷಣೆ (ಪರಿಚ್ಚೇದ, 15(4), 46), ಸಮಾನ ಶಿಕ್ಷಣ, ಕೆಜಿ-ಪಿಜಿವರೆಗೆ ಉತ್ತಮ ಗುಣಮಟ್ಟದ ಉಚಿತ, ಕಡ್ಡಾಯ ಶಿಕ್ಷಣಕ್ಕೆ ಪೂರಕವಾಗಿ, ಒತ್ತಾಸೆಯಾಗಿವೆ. ಆದರೆ ಈ ಶಿಕ್ಷಣ ನೀತಿಯಲ್ಲಿ ಈ ಸಂವಿದಾನದ ನೀತಿಸಂಹಿತೆಗಳ ಪ್ರಸ್ತಾಪವೇ ಇಲ್ಲ. ಅವುಗಳ ಶಿಫಾರಸ್ಸು ಈ ನೀತಿಸಂಹಿತೆಗಳಿಗೆ ವಿರುದ್ದವಾಗಿವೆ.

ಭಾರತದ ಎಲ್ಲಾ 30 ರಾಜ್ಯಗಳಲ್ಲಿನ (2017-18ರ ಸಂದರ್ಬದಲ್ಲಿ) ಶಿಕ್ಷಣ ತಜ್ಷರೊಂದಿಗೆ, ಶಿಕ್ಷಣ ಹಕ್ಕುದಾರರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಮದ್ಯಪ್ರದೇಶ, ಕಾಶ್ಮೀರ, ಈಶಾನ್ಯ ರಾಜ್ಯಗಳನ್ನು ಒಳಗೊಂಡಂತೆ ಅನೇಕ ರಾಜ್ಯಗಳಿಗೂ ಭೇಟಿ ಕೊಡಲಿಲ್ಲ. ಆದರೆ ಇದಕ್ಕೆ ಪೂರ್ವಭಾವಿಯಾಗಿ ಆರೆಸ್ಸಸ್‌ನ ಅಂಗಸಂಸ್ಥೆಗಳಾದ ’ಭಾರತೀಯ ಶಿಕ್ಷಣ ಮಂಡಲ್’ (ಬಿಎಸ್‌ಎಂ) ಮತ್ತು ’ಶಿಕ್ಷ ಸಂಸ್ಕೃತಿ ಉತ್ಥಾನ ನ್ಯಾಸ್’ (ಎಸ್‌ಎಸ್‌ಯುಎನ್) ಮತ್ತು ’ಭಾರತೀಯ ಭಾಷಾ ಮಂಚ್’ ಜಂಟಿಯಾಗಿ ರಾಷ್ಟ್ರಾದ್ಯಾಂತ 40 ಸೆಮಿನಾರ್‌ಗಳನ್ನು ಏರ್ಪಡಿಸಿದ್ದವು, 6000 ಶೈಕ್ಷಣಿಕ ವಲಯದವರು ಮತ್ತು ಸಂಸ್ಥೆಗಳ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿದ್ದವು ಮತ್ತು ಆ ಮೂಲಕ ಎಲ್ಲರ ಅಬಿಪ್ರಾಯಗಳನ್ನು ಪಡೆದುಕೊಂಡವು. ಹಿಂದಿನ ಮಾನವ ಸಂಪನ್ಮೂಲ ಇಲಾಖೆಯ ಮಂತ್ರಿಗಳಾದ ರಮೇಶ್ ಪೋಕ್ರಿಯಾಲ್ ಮತ್ತು ಪ್ರಕಾಶ್ ಜಾವಡೇಕರ್ ಅವರು ಆರೆಸ್ಸೆಸ್ ಪದಾದಿಕಾರಿಗಳೊಂದಿಗೆ ಮತ್ತು ಬಿಜೆಪಿ ಸರಕಾರ ಅದಿಕಾರದಲ್ಲಿದ್ದ ರಾಜ್ಯಗಳ ಶಿಕ್ಷಣ ಮಂತ್ರಿಗಳೊಂದಿಗೆ ಸತತವಾಗಿ ಸಮಾಲೋಚನೆ ನಡೆಸಿದ್ದರು. ಸಂಘ ಪರಿವಾರದ ಅಂಗಸಂಸ್ಥೆಗಳು ತಮ್ಮ ಅಬಿಪ್ರಾಯವನ್ನು ಸುಬ್ರಮಣ್ಯ ಸಮಿತಿ ಮತ್ತು ನಂತರದ ಕಸ್ತೂರಿರಂಗನ್ ಸಮಿತಿಗೆ ಸಲ್ಲಿಸಿದ್ದವು.

2. ಹಿಂದಿನ ಶಿಕ್ಷಣ ನೀತಿಗಳನ್ನು, ಜಾಗತಿಕ ಮಟ್ಟದಲ್ಲಿನ ಶೈಕ್ಷಣಿಕ ಬೆಳವಣಿಗೆಗಳನ್ನು ಕುರಿತು ತೌಲನಿಕವಾಗಿ ಅದ್ಯಯನ ಮಾಡಿದೆಯೇ?

ವಾಸ್ತವ: ಈಗ ಒಂದೆಡೆ 484 ಪುಟಗಳ ಕಸ್ತೂರಿ ರಂಗನ್ ಸಮಿತಿಯ ವರದಿಯಿದೆ. ಮತ್ತೊಂದೆಡೆ ಅದನ್ನು ಸಂಕ್ಷಿಪ್ತಗೊಳಿಸಿ ಕೇಂದ್ರ ಶಿಕ್ಷಣ ಇಲಾಖೆ ಪ್ರಕಟಿಸಿದ 63 ಪುಟಗಳ ದಸ್ತಾವೇಜು ಇದೆ. ಇದನ್ನು ಆದರಿಸಿ ಕರ್‍ನಾಟಕದ ಉನ್ನತ ಶಿಕ್ಷಣ ಇಲಾಖೆ 38 ಪುಟಗಳ ತನ್ನ ಎನ್‌ಇಪಿ ನೀತಿಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ವರ್ಶದಿಂದ ಜಾರಿಗೊಳ್ಳುವಂತೆ ಅನುವಾಗಲು ವಿಶ್ರಾಂತ ಉಪಕುಲಪತಿಗಳಾದ ತಿಮ್ಮೇಗೌಡರ ನೇತೃತ್ವದ ಕಾವಲು ಪಡೆ ಸಿದ್ದಪಡಿಸಿದ ದಸ್ತಾವೇಜಿದೆ. ದುರಂತವೆಂದರೆ ಈ ಎಲ್ಲಾ ವರದಿಗಳು, ಮಾರ್ಗಸೂಚಿಗಳಿಗೆ ಯಾವುದೇ ಬಗೆಯ ಸಾಂವಿದಾನಿಕ ಚೌಕಟ್ಟು ಇಲ್ಲ. ಸಂವಿದಾನದ, ಸಂಸತ್ತಿನ, ವಿದಾನ ಮಂಡಲದ ಮಾನ್ಯತೆಯಿಲ್ಲ. ಹಾಗಿದ್ದಲ್ಲಿ ಈ ದಸ್ತಾವೇಜುಗಳಿಗೆ ರೆಫೆರೆನ್ಸ್ ಯಾವುದು? ಆಧಾರಗಳೇನು? ಯಾವ ಮಾದರಿಗಳನ್ನು, ಮಾನದಂಡಗಳನ್ನು ಆದರಿಸಿ ಇವುಗಳನ್ನು ರಚಿಸಲಾಗಿದೆ? ಇದನ್ನು ರೂಪಿಸಲು ಬಳಸಿದ ಮಾನದಂಡಗಳೇನು? ಈ ನೀತಿಗಳನ್ನು ಪರಾಮರ್ಶೆ ಮಾಡಿದವರಾರು? ಈ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಶ್ಟಾನಗೊಳಿಸಲು ಮುಂದಾಗಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಈ ಹಿಂದೆ ಜಾರಿಗೊಂಡ ಶಿಕ್ಷಣ ನೀತಿಯ ಯಾವುದಾದರೂ ಉದಾಹರಣೆಯನ್ನು ಪರಾಮರ್ಶೆ, ಅದ್ಯಯನ ಮಾಡಿದ್ದಾರೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಕಸ್ತೂರಿ ರಂಗನ್‌ರಿಂದ ಮೊದಲುಗೊಂಡು ಅಶ್ವತ್ಥನಾರಾಯಣ ಬಳಿ ಯಾವುದೇ ಉತ್ತರವಿಲ್ಲ. ಆದರೆ ಕಸ್ತೂರಿ ರಂಗನ್ ಸಮಿತಿಯ ಸದಸ್ಯ ಮತ್ತು ಈ ನೀತಿಯ ಪ್ರಮುಖ ಪಾತ್ರದಾರಿ ಸಂಘ ಪರಿವಾರದ ಎಂ.ಕೆ.ಶ್ರೀಧರ್ ಬಳಿ ಮತ್ತು ಆರೆಸ್ಸಸ್ ಬಳಿ ಮಾತ್ರ ನಿಖರವಾದ ಉತ್ತರಗಳಿವೆ.

ಕಸ್ತೂರಿ ರಂಗನ್ ಸಮಿತಿಯ 484 ಪುಟಗಳಲ್ಲಿ 1966ರ ಕೊಠಾರಿ ಆಯೋಗದ ಶಿಫಾರಸ್ಸುಗಳ ಕುರಿತಾಗಲಿ, 1968, 1986 ಮತ್ತು 1992 (ತಿದ್ದುಪಡಿ) ಶಿಕ್ಷಣ ನೀತಿಗಳ ಉತ್ತಮ ಅಂಶಗಳು ಮತ್ತು ಅದರ ಮಿತಿಗಳನ್ನು ತೌಲನಿಕವಾಗಿ ಅದ್ಯಯನ ಮಾಡಲಾಗಿಲ್ಲ. ಜಾಗತಿಕ ಮಟ್ಟದಲ್ಲಿನ ಶೈಕ್ಷಣಿಕ ಬೆಳವಣಿಗೆಗಳ ಕುರಿತು, ಫಿನ್ಲೆಂಡ್ ದೇಶವು ಯಾವ ಕಾರಣಕ್ಕೆ ಶೈಕ್ಷಣಿಕವಾಗಿ ಮೊದಲ ಸ್ಥಾನದಲ್ಲಿದೆ ಎಂದು ತೌಲನಿಕ ಸಂಶೋದನೆ ಮಾಡಲಿಲ್ಲ.

1966ರಲ್ಲಿ ಬಿಡುಗಡೆಯಾದ ’ಕೊಠಾರಿ ಆಯೋಗ’ದಲ್ಲಿ ಆಗ ’ಯುಜಿಸಿ’ ಚೇರ್ಮನ್ ಆಗಿದ್ದ ಪ್ರೊ. ಕೊಠಾರಿ ಈ ಆಯೋಗದ ಅದ್ಯಕ್ಷರು. ಐದು ಸದಸ್ಯರು ವಿದೇಶಿ ಶಿಕ್ಷಣ ತಜ್ಞರು. ಒಬ್ಬರು ಉಪಕುಲಪತಿಗಳು, ಹತ್ತು ಸದಸ್ಯರು ಶಿಕ್ಷಣ ತಜ್ಞರು. 2, ಅಕ್ಟೋಬರ್ 1964ರಂದು ಅವರ ಕಾರ್ಯ ಆರಂಬಿಸಿದರು. 29, ಜೂನ್ 1966ರಲ್ಲಿ 713 ಪುಟಗಳ ದಸ್ತಾವೇಜನ್ನು ಪ್ರಕಟಿಸಿದರು. ಇಂಡಿಯಾದ ಎಲ್ಲಾ ರಾಜ್ಯಗಳ ಶಿಕ್ಷಣ ತಜ್ಞರನ್ನು, ಶಿಕ್ಷಣದ ಹಕ್ಕುದಾರರನ್ನು ಸಂಪರ್ಕಿಸಿದರು. ಸುಮಾರು 9000 ಜನರನ್ನು ಸಂದರ್ಶನ ಮಾಡಿದರು. ಸೆಮಿನಾರ್‌ಗಳನ್ನು ನಡೆಸಿದರು. ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಎರಡು ಸಮಾವೇಶ ನಡೆಸಿದರು. ಅಂತರಾಷ್ಟ್ರೀಯ ಶೈಕ್ಷಣಿಕ ಸಮಾಲೋಚನೆ ನಡೆಸಿದರು. ಕೊಠಾರಿ ಆಯೋಗವು ಆರಂಬದಲ್ಲಿ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ, ಕೃಷಿ ಶಿಕ್ಷಣ, ವಯಸ್ಕ ಶಿಕ್ಷಣ, ವಿಜ್ಞಾನ ಶಿಕ್ಷಣ ಮತ್ತು ಸಂಶೋದನೆ, ಶಿಕ್ಷಕರ ತರಬೇತಿ, ವಿದ್ಯಾರ್ಥಿ ಕಲ್ಯಾಣ, ಹೊಸ ತಂತ್ರಜ್ಞಾನ ಮತ್ತು ಮಾದರಿ, ಮಾನವ ಸಂಪನ್ಮೂಲ, ಶೈಕ್ಷಣಿಕ ಆಡಳಿತ, ಶೈಕ್ಷಣಿಕ ಹಣಕಾಸು ಒಳಗೊಂಡಂತೆ 12 ಟಾಸ್ಕ್ ಫೋರ್ಸ್ ರಚಿಸಲಾಗಿತ್ತು. ಇದರ ಜೊತೆಗೆ ಮಹಿಳಾ ಶಿಕ್ಷಣ, ಹಿಂದುಳಿದ ವರ್ಗಗಳ ಶಿಕ್ಷಣ, ಶಾಲಾ ಕಟ್ಟಡಗಳು, ಶಾಲಾ ಸಮುದಾಯಗಳ ಸಂಬಂದಗಳು, ಸಂಖ್ಯಾಶಾಸ್ತ್ರ, ಪೂರ್ವ ಪ್ರಾಥಮಿಕ ಶಿಕ್ಷಣ, ಶಾಲಾ ಪಠ್ಯಕ್ರಮಗಳನ್ನು ಒಳಗೊಂಡಂತೆ ಕಾರ್ಯನಿರ್ವಹಣೆ ತಂಡಗಳನ್ನು ರಚಿಸಲಾಯಿತು. ಸುಮಾರು 2400 ಲಿಖಿತ ದಾಖಲೆ ಮತ್ತು ಟಿಪ್ಪಣೆಗಳನ್ನು ಸಲ್ಲಿಸಲಾಯಿತು.

2017ರಲ್ಲಿ ರಚನೆಗೊಂಡ ಪ್ರಸಕ್ತ ಚರ್ಚೆಯಲ್ಲಿರುವ ಸಮಿತಿಯು 2018ರ ಡಿಸೆಂಬರ್‌ನಲ್ಲಿ ತನ್ನ 486 ಪುಟಗಳ ’ಎನ್‌ಇಪಿ 2019’ ವರದಿಯನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಿತು. ಪ್ರೊ. ವಸುದ ಕಾಮತ್, ಪ್ರೊ. ಮಂಜುಲ್ ಬಾರ್ಗವ, ಡಾ. ರಾಮ್ ಶಂಕರ್ ಕುರೀಲ್, ಪ್ರೊ. ಓ.ವಿ.ಕಟ್ಟೀಮನಿ, ಕೃಷ್ಣಮೋಹನ್ ತ್ರಿಪಾಠಿ, ಪ್ರೊ. ಮಾಜರ್ ಆಸೀಫ್, ಪ್ರೊ. ಎಂ.ಕೆ.ಶ್ರೀಧರ್, ರಾಜೇಂದ್ರ ಪ್ರತಾಪ ಗುಪ್ತ ಈ ಸಮಿತಿಯ ಸದಸ್ಯರು. ಇಲ್ಲಿ ಮಹಿಳಾ ಸದಸ್ಯರಿಲ್ಲ. ಸಾಮಾಜಿಕ ನ್ಯಾಯದ ಮಾನದಂಡವನ್ನು ಅನುಸರಿಸಿಲ್ಲ. ಕಸ್ತೂರಿ ರಂಗನ್ ವಿಜ್ಞಾನಿ. ಶಿಕ್ಷಣ ತಜ್ಞರಲ್ಲ. ಇವರಲ್ಲಿ ಎಂ.ಕೆ.ಶ್ರೀದರ್ ಅವರು ಆರೆಸ್ಸೆಸ್‌ನ ಸಂಘಚಾಲಕರಾಗಿದ್ದವರು ಮತ್ತು ಎಬಿವಿಪಿಯ ಉಪಾದ್ಯಕ್ಷರಾಗಿದ್ದವರು. ರಾಜೇಂದ್ರ ಪ್ರತಾಪ್ ಗುಪ್ತ ಅವರು 2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿನ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನ ರೂಪಿಸಿದವರಲ್ಲಿ ಪ್ರಮುಖರು. 2018ರಲ್ಲಿ ಆಗಿನ ಕೇಂದ್ರ ಆರೋಗ್ಯ ಮಂತ್ರಿ ಜೆ.ಪಿ. ನಡ್ಡ ಅವರು, ತಮ್ಮ ಸಲಹೆಗಾರರಾಗಿದ್ದ ಈ ರಾಜೇಂದ್ರ ಪ್ರತಾಪ್ ಗುಪ್ತ ಅವರನ್ನ ಬ್ರಶ್ಟಾಚಾರದ ಆದಾರದ ಮೇಲೆ ಸೇವೆಯಿಂದ ವಜಾಗೊಳಿಸಿದ್ದರು. ಕಸ್ತೂರಿ ರಂಗನ್ ಸಮಿತಿಯಲ್ಲಿನ 7 ಸದಸ್ಯರ ಪೈಕಿ ಕೆಲ ಸದಸ್ಯರ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ.

ಈ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ 2.5 ಲಕ್ಷ ಗ್ರಾಮ ಪಂಚಾಯತುಗಳು, 6600 ವಿಭಾಗಗಳು, 6000 ನಗರ ಸ್ಥಳೀಯ ಸಂಸ್ಥೆಗಳು(ಯು.ಎಲ್.ಬಿ.), 676 ಜಿಲ್ಲೆಗಳು ಮತ್ತು 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 2015ರ ಮೇ ತಿಂಗಳಿಂದ ಅಕ್ಟೋಬರ್‌ವರೆಗೆ ತಳಹಂತದವರೆಗೆ ಸಮಾಲೋಚನೆಗಳನ್ನು ನಡೆಸಲಾಗಿದೆ. ಅಂತಿಮವಾಗಿ 1,10,623 ಹಳ್ಳಿಗಳು, 3250 ವಿಭಾಗಗಳು, 962 ಯು.ಎಲ್.ಬಿ.ಗಳು, 406 ಜಿಲ್ಲೆಗಳು ಮತ್ತು 21 ರಾಜ್ಯಗಳು ತಮ್ಮ ಸಮಾಲೋಚನೆಗಳ ಫಲಿತಾಂಶವನ್ನು ಜಾಲತಾಣದ ವಿಳಾಸ: survey.mygov.in.ಕ್ಕೆ ಕಳಿಸಿದ್ದವು. ನಮಗೆ ತಲುಪಿದ ಸಲಹೆಗಳು, ಪತ್ರಗಳು ಹಾಗೂ ವಿಮರ್ಶೆಗಳಲ್ಲಿ ಸುಮಾರು 35000 ಆನ್‌ಲೈನ್ ಸಲಹೆಗಳು, ಜನಸಮೂಹದ ಹಲವು ವಿಭಾಗಗಳಿಂದ, ಕೇಂದ್ರ ಸರ್ಕಾರದ 31 ಸಚಿವಾಲಯಗಳಿಂದ, 29 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ, 76 ಸಂಸದರಿಂದ, 305 ಬಹು ಮುಖ್ಯ ವ್ಯಕ್ತಿಗಳಿಂದ, 324 ಸಂಘ ಸಂಸ್ಥೆಗಳಿಂದ, 485 ವೈಯಕ್ತಿಕ ಪತ್ರಗಳು, 7613 ವಿದ್ಯುನ್ಮಾನ ಸಂಪರ್ಕಗಳಿಂದ ಮತ್ತು ಪ್ರಧಾನ ಮಂತ್ರಿಗಳ ಕಛೇರಿ ಹಾಗೂ ರಾಷ್ಟ್ರಪತಿಗಳ ಕಾರ್ಯಾಲಯದಿಂದ ಬಂದಿದ್ದವು.” ಎಂದು ಹೇಳಿಕೊಂಡಿದ್ದಾರೆ.

ಆದರೆ ವಾಸ್ತವದಲ್ಲಿ ಭಾರತದ ಎಲ್ಲಾ 30 ರಾಜ್ಯಗಳಲ್ಲಿನ ಶಿಕ್ಷಣ ತಜ್ಞರೊಂದಿಗೆ, ಶಿಕ್ಷಣ ಹಕ್ಕುದಾರರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಎಸ್‌ಡಿಎಂಸಿ, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಕ ಸಂಘಟನೆಗಳು, ಪ್ರಗತಿಪರ ವಿಚಾರಗಳ ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಮದ್ಯಪ್ರದೇಶ, ಕಾಶ್ಮೀರ, ಈಶಾನ್ಯ ರಾಜ್ಯಗಳನ್ನು ಒಳಗೊಂಡಂತೆ ಅನೇಕ ರಾಜ್ಯಗಳಿಗೂ ಭೇಟಿ ಕೊಡಲಿಲ್ಲ. ಕೊಠಾರಿ ಆಯೋಗ ಮತ್ತು ಕಸ್ತೂರಿ ರಂಗನ್ ಆಯೋಗದ ಎಲ್ಲಾ ಪ್ರಕ್ರಿಯೆಗಳನ್ನು ತೌಲನಿಕವಾಗಿ ವಿಶ್ಲೇಷಿಸಿದಾಗ ಕಸ್ತೂರಿ ರಂಗನ್ ಸಮಿತಿಯ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ ಮತ್ತು ಮುಖ್ಯವಾಗಿ ಶಿಕ್ಷಣ ಹಕ್ಕು ಕಾಯಿದೆಯ ಎಲ್ಲಾ ಆಶಯಗಳನ್ನು ನಿರ್ಲಕ್ಷಿಸಲಾಗಿದೆ.

3. ಈ ಶಿಕ್ಷಣ ನೀತಿಯು ವೈಜ್ಞಾನಿಕ, ಸೆಕ್ಯುಲರ್ ಆಶಯಗಳನ್ನು ಒಳಗೊಂಡಿದೆಯೇ?

ವಾಸ್ತವ: ಇನ್ನು ಮೇಲ್ನೋಟಕ್ಕೆ ಕಾಣುವಂತೆ ಇಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಪೆಡಗಾಜಿ, ಬಹುಸಂಸ್ಕೃತಿ, ಎಲ್ಲರಿಗೂ ಶಿಕ್ಷಣ, ಮಕ್ಕಳ ಆಯ್ಕೆ ಮುಂತಾದ ಪದಪುಂಜಗಳು ಹೇರಳವಾಗಿವೆ. ಇದರ ಬಹುತೇಕ ಆಶಯಗಳು ನಿಜಕ್ಕೂ ಸ್ವಾಗತಾರ್ಹ. ಇದನ್ನು ಮಾತ್ರ ಅನುಸರಿಸಿದರೆ ಈ ಕರಡುಪ್ರತಿಯಲ್ಲಿ ಎಲ್ಲವೂ ಸುಂದರವಾಗಿ ಕಾಣುತ್ತದೆ. ಆದರೆ ಇದನ್ನು ಸಮಾಜೋ-ರಾಜಕೀಯ-ಶೈಕ್ಷಣಿಕ ಹಿನ್ನೆಲೆಯಲ್ಲಿ ಅರ್ಥೈಸಿದರೆ, ಆಳವಾಗಿರುವ ಸಿಕ್ಕುಗಳನ್ನು ಬಿಡಿಸಿದರೆ ಇದರೊಳಗಿನ ಮಿತಿಗಳು, ಪ್ರತಿಗಾಮಿ ಉದ್ದೇಶಗಳು ಗೋಚರಿಸುತ್ತವೆ. ಮುಖ್ಯವಾಗಿ ಇದು ಖಾಸಗೀಕರಣಕ್ಕೆ, ಕೇಂದ್ರೀಕರಣಕ್ಕೆ ಮತ್ತು ವ್ಯಾಪಾರೀಕರಣಕ್ಕೆ ಪ್ರೋತ್ಸಾಹ ನೀಡುತ್ತದೆ ಎನ್ನುವ ಸತ್ಯ ಗೋಚರಿಸುತ್ತದೆ.

2015ರಲ್ಲಿ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು “17 ಸುಸ್ಥಿರ ಅಬಿವೃದ್ದಿ ಗುರಿಗಳು (ಎಸ್‌ಡಿಜಿ)” ಗಳಿಗೆ ಒಪ್ಪಿಕೊಂಡು ಸಹಿ ಹಾಕಿವೆ. ಇದರಲ್ಲಿನ ಗುರಿ 4ರ ಆಶಯ ’ನ್ಯಾಯಸಮ್ಮತವಾದ, ಒಳಗೊಳ್ಳುವಿಕೆಯ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು, ಸರ್ವರಿಗೂ ಜೀವನಪರ್ಯಂತ ಕಲಿಕೆಯ ಅವಕಾಶಗಳಿಗೆ ಒತ್ತಾಸೆಯಾಗುವುದು’. ಇದನ್ನು 2030ರ ಒಳಗೆ ಸಾದಿಸುವುದು ತಮ್ಮ ಉದ್ದೇಶ ಎಂದು ಎನ್‌ಇಪಿ 2020 ಆರಂಬದಲ್ಲಿ ಹೇಳಿಕೊಂಡಿದೆ. ನಿಜಕ್ಕೂ ಈ ಉದ್ದೇಶವು ಶ್ಲಾಘನೀಯ. ಆದರೆ ಮುಂದುವರೆದು ಪುಟ 4, ಎರಡನೆ ಪ್ಯಾರಾದಲ್ಲಿ ತಮ್ಮ ಉದ್ದೇಶವು ’ಪ್ರಾಚೀನ ಭಾರತದ ಶ್ರೀಮಂತ ಪರಂಪರೆಯು ಈ ನೀತಿಯ ಮಾರ್ಗಸೂಚಿಯಾಗಿದೆ…

…ಬಹುಶಿಸ್ತೀಯ ಅದ್ಯಯನದಲ್ಲಿ ತಕ್ಷಶಿಲಾ, ನಳಂದ, ವಿಕ್ರಮಶಿಲಾ, ವಲ್ಲಬೈ ಉನ್ನತ ಮಾನದಂಡಗಳನ್ನು ಹಾಕಿಕೊಟ್ಟಿವೆ… …ಚರಕ, ಶುಶ್ರುತ, ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ, ಬ್ರಹ್ಮಗುಪ್ತ, ಚಾಣಕ್ಯ, ಮಾದವ, ಪಾಣಿನಿ, ಪತಂಜಲಿ ಮುಂತಾದವರು ಜ್ಞಾನ ಅಬಿವೃದ್ದಿಗೆ ಕೊಡುಗೆ ನೀಡಿದ್ದಾರೆ…’ ಎಂದು ಸ್ಮರಿಸಿಕೊಂಡಿದೆ. ಪುಟ 17, ಅನುಕ್ರಮ 4.27.ರಲ್ಲಿ ಭಾರತದ ಶಿಕ್ಷಣದ ಬವಿಷ್ಯವು ಪ್ರಾಚೀನ ಭಾರತದ ಜ್ಞಾನದ ಬಲದ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗಿದೆ. ಪ್ರಾಚೀನ ಭಾರತದ (ಸನಾತನ) ಮೌಲ್ಯಗಳನ್ನು ಈ ಶಿಕ್ಷಣ ಪದ್ದತಿಗೆ ಅಳವಡಿಸಿಕೊಳ್ಳಬೇಕೆಂದು ಪದೇ ಪದೇ ಪ್ರಸ್ತಾಪಿಸಲಾಗಿದೆ. ಆದರೆ ಒಂದು ಸಾಲಿನ ಹೇಳಿಕೆ ಹೊರತುಪಡಿಸಿ ಸಂವಿದಾನದ ಅದ್ಯಯನ ಮತ್ತು ಕಲಿಕೆಯ ಅವಶ್ಯಕತೆ ಕುರಿತು ಎಲ್ಲಿಯೂ ಪ್ರಸ್ತಾಪಿಸುವುದಿಲ್ಲ. ಇದು ಆರೆಸ್ಸೆಸ್‌ನ ಗುಪ್ತಕಾರ್ಯಸೂಚಿ ಎಂಬುದು ಸ್ಪಷ್ಟವಾಗುತ್ತದೆ.

ತಮ್ಮ ಹಿಂದಿನ ಪರಂಪರೆಯನ್ನು ನೆನಪಿಸಿಕೊಳ್ಳುವುದು ಸಹಜ. ಆದರೆ 2030ರ ಒಳಗೆ ಎಲ್ಲರಿಗೂ ನ್ಯಾಯಸಮ್ಮತವಾದ ಗುಣಮಟ್ಟದ ಶಿಕ್ಷಣ ಕೊಡಬೇಕೆಂದು ಬಯಸುವ ಈ ಶಿಕ್ಷಣ ನೀತಿ ಎಲ್ಲಿಯೂ ಸಹ ಆಧುನಿಕ ಶಿಕ್ಷಣ ಪದ್ದತಿಯನ್ನು ಕುರಿತು ತೌಲನಿಕವಾಗಿ ಚಿಂತನೆ ನಡೆಸಿಲ್ಲ. ಶೈಕ್ಷಣಿಕ ವಲಯದ ಕುರಿತಾಗಿ ಜಾಗತಿಕ ಮಟ್ಟದಲ್ಲಿನ ಬೆಳವಣಿಗೆಗಳು ಮತ್ತು ಅದನ್ನು ಭಾರತದ ಅವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಳ್ಳುವುದರ ಕುರಿತು ಪ್ರಸ್ತಾಪಿಸುವುದಿಲ್ಲ. ತನ್ನ ಹಿಂದಿನ ಶಿಕ್ಷಣ ನೀತಿಯನ್ನು ಮತ್ತು ಜಾಗತಿಕ ಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ತೌಲನಿಕವಾಗಿ ಅದ್ಯಯನ ಮಾಡುವುದಿಲ್ಲ ಮತ್ತು ಆಧುನಿಕ, ವೈಜ್ಞಾನಿಕ, ಶೋಷಿತರ ವ್ಯಾಸಂಗಕ್ರಮವನ್ನು ರೂಪಿಸುವ ಯೋಜನೆಯೂ ಕಾಣುವುದಿಲ್ಲ.

ಸುಸ್ಥಿರ ಅಬಿವೃದ್ದಿಯ ಗುರಿ 4ನ್ನು ತಲುಪಲು ಅಗತ್ಯವಾದ ಸಮಾನ ಶಿಕ್ಷಣ ವ್ಯವಸ್ಥೆ, ನೆರೆಹೊರೆ ಶಾಲಾ ಪದ್ದತಿ, ವೈಜ್ಞಾನಿಕ ಮನೋದರ್ಮದ ಕುರಿತು ಮಾತನಾಡುವುದಿಲ್ಲ. ಬದಲಿಗೆ ಪದೇಪದೇ ಪ್ರಾಚೀನ ಭಾರತದ ಗುರುಕುಲ ಪದ್ದತಿ, ಆಗಿನ ವೈದಿಕಶಾಹಿ ಶಿಕ್ಷಣ ಪರಂಪರೆ ಕುರಿತು ಮಾತನಾಡುತ್ತದೆ. ಸಂಸ್ಕೃತ ಬಾಷೆಯನ್ನು ಐಚ್ಚಿಕವಾಗಿ ಕಲಿಯಬೇಕೆಂದು ಒತ್ತಾಯಿಸುತ್ತದೆ. ಆರೆಸ್ಸೆಸ್ ಜೊತೆಗೆ ಸತತವಾಗಿ ಸಮಾಲೋಚನೆ ನಡೆಸಿರುವ ಈ ’ಎನ್‌ಇಪಿ 2020’ ಸಮಿತಿ ಈ ಶಿಕ್ಷಣ ನೀತಿಯ ಮೂಲಕ ದೇಶವನ್ನು ಸಾವಿರ ವರ್ಶಗಳ ಹಿಂದಕ್ಕೆ, ವರ್ಣಾಶ್ರಮ ಪದ್ದತಿಗೆ ಕೊಂಡೊಯ್ಯಲು ಬಯಸುತ್ತದೆ.

4. ಈ ಶಿಕ್ಷಣ ನೀತಿಯು ಸಾಮಾಜಿಕ ನ್ಯಾಯದ ಪರವಾಗಿದೆಯೇ?

ವಾಸ್ತವ: ’ಎನ್‌ಇಪಿ 2020’ ರ ಅದ್ಯಾಯಗಳು 1.1, 1.4, 2.3, 3.4, 3.5, 4.44, 6.2, 6.16, 6.8, 6.9, 12.4, 14.4.2(ಬಿ), 21.9, 26.3 ಗಳಲ್ಲಿ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕುರಿತು ಒಂದು ಸಾಲಿನ ಪ್ರಸ್ತಾಪವಿದೆ. ಆದರೆ ಇಡೀ ಕರಡು ಪ್ರತಿಯಲ್ಲಿ ಪ.ಜಾತಿ/ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಎಲ್ಲಿಯೂ ಶೈಕ್ಷಣಿಕ ಮೀಸಲಾತಿ ಕುರಿತು ಪ್ರಸ್ತಾಪವಿಲ್ಲ.

ಸ್ಕಾಲರ್‌ಶಿಪ್‌ಗಳ ಕುರಿತು ಪ್ರಸ್ತಾಪವಿಲ್ಲ. ಅದ್ಯಾಯ 14.4.2(ಬಿ)ನಲ್ಲಿ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಹಣಕಾಸು ನೆರವು ನೀಡಬೇಕೆಂದು ಒಂದು ಸಾಲಿನ ಪ್ರಸ್ತಾಪ ಮಾಡುತ್ತದೆ. ಅದ್ಯಾಯ 4.44ರಲ್ಲಿ ಮೆರಿಟ್ ಆದಾರಿತ, ಸಮಾನ ಪ್ರವೇಶದ ಕುರಿತು ಹೇಳುತ್ತದೆ. ಅದ್ಯಾಯ 5.2ರಲ್ಲಿ ನಾಲ್ಕು ವರ್ಷಗಳ ಸಂಯೋಜಿತ ಬಿ.ಎಡ್. ಶಿಕ್ಷಣಕ್ಕೆ ಮೆರಿಟ್ ಆದಾರಿತ ಸ್ಕಾಲರ್‌ಶಿಪ್ ಕೊಡಬೇಕು ಎನ್ನುತ್ತದೆ.

ಅದ್ಯಾಯ 6.16ರಲ್ಲಿ ಎಲ್ಲಾ ಮೆರಿಟ್ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ, ಸ್ಕಾಲರ್‌ಶಿಪ್ ಮೂಲಕ ಹಣಕಾಸು ನೆರವು ಕೊಡಬೇಕೆಂದು ಹೇಳುತ್ತದೆ. ಅದ್ಯಾಯ 15.5ರಲ್ಲಿ ಮೆರಿಟ್ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕೊಡುವುದರ ಮೂಲಕ ಬಿಎಡ್. ಕೋರ್ಸ್‌ಗೆ ಸೆಳೆಯಬೇಕೆಂದು ಹೇಳುತ್ತದೆ.

ಅದ್ಯಾಯ 17.9 ರಲ್ಲಿ ’ರಾಷ್ಟ್ರೀಯ ಸಂಶೋದನೆ ಪ್ರತಿಷ್ಠಾನ’ವು ಮೆರಿಟ್ ವಿದ್ಯಾರ್ಥಿಗಳಿಗೆ ಅನುದಾನ ಕೊಡುವ ಪ್ರಸ್ತಾಪವಿದೆ. ಮೇಲಿನ ಶಿಫಾರಸ್ಸುಗಳು ಸಂಪೂರ್ಣವಾಗಿ ಸಾಮಾಜಿಕ ನ್ಯಾಯವನ್ನು ಕಡೆಗಣಿಸಿರುವುದು ಸ್ಪಷ್ಟವಾಗುತ್ತದೆ. ಪ್ರತಿ ಹಣಕಾಸು ನೆರವಿನ ಸಂದರ್ಭದಲ್ಲಿ ಮೆರಿಟ್ ಅನ್ನು ಮಾನದಂಡವಾಗಿ ಬಳಸುವುದು ಭಾರತದಂತಹ ಜಾತಿ, ವರ್ಗ ತಾರತಮ್ಯದ ದೇಶದಲ್ಲಿ ಪ್ರತಿಗಾಮಿ ನೀತಿಯಾಗುತ್ತದೆ.

ಪ್ರಸ್ತಾಪ: ಮತ್ತು ಮುಖ್ಯವಾಗಿ ಕರ್‍ನಾಟಕದ ಉನ್ನತ ಶಿಕ್ಷಣ ಇಲಾಖೆಯು ಶೇ.40 ಪ್ರಮಾಣದ ಆನ್‌ಲೈನ್ ಶಿಕ್ಷಣವನ್ನು ಕಡ್ಡಾಯಗೊಳಿಸುವುದಾಗಿ ಪ್ತಸ್ತಾಪಿಸಿದೆ. ಡಿಜಿಟಲ್ ಕಲಿಕೆ ಮುಂದಿನ ಗುರಿ ಎಂದು ಹೇಳಿಕೊಂಡಿದೆ.

ವಾಸ್ತವ: ಗ್ರಾಮೀಣ ಅಬಿವೃದ್ದಿ ಇಲಾಖೆಯು 2017-18ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಮಿಷನ್ ಅಂತ್ಯೋದಯ ಸಮೀಕ್ಷೆಯ ಪ್ರಕಾರ ಶೇ.16ರಷ್ಟು ಕುಟುಂಬಗಳಿಗೆ 1-8 ಗಂಟೆ ವಿದ್ಯುತ್ ಸರಬರಾಜಿದೆ. ಶೇ.33ರಷ್ಟು ಕುಟುಂಬಗಳಿಗೆ 9-12ಗಂಟೆ, ಶೇ.47ರಷ್ಟು ಕುಟುಂಬಗಳಿಗೆ 12 ಗಂಟೆಗೂ ಹೆಚ್ಚಿನ ಸಮಯದಲ್ಲಿ ವಿದ್ಯುತ್ ಸರಬರಾಜಿದೆ. ಅಲ್ಲದೆ ಈ ವಿದ್ಯುತ್ ಸರಬರಾಜು ಸಹ ಅನಿಯಮಿತವಾಗಿರುತ್ತದೆ. ಆನ್‌ಲೈನ್ ಶಿಕ್ಷಣವನ್ನು ಜಾರಿಗೊಳಿಸಿದರೆ ಶೇ.84ರಷ್ಟು ಕುಟುಂಬಗಳ ಮಕ್ಕಳು ವಿದ್ಯುತ್ ಸಂಪರ್ಕದ ಕೊರತೆಯ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗುತ್ತಾರೆ.

ಎನ್‌ಎಸ್‌ಓ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ನಗರಬಾಗದ ಶೇ.23ರಶ್ಟು, ಗ್ರಾಮೀಣ ಬಾಗದ ಶೇ.4ರಷ್ಟು ಪ್ರಮಾಣದ ಜನಸಂಖ್ಯೆ ಕಂಪ್ಯೂಟರ್/ಲ್ಯಾಪ್‌ಟಾಪ್ ಹೊಂದಿದ್ದಾರೆ. 2018ರ ಸಮೀಕ್ಷೆ ಪ್ರಕಾರ ಶೇ.24ರಷ್ಟು, 2020ರ ಸಮೀಕ್ಷೆಯ ಪ್ರಕಾರ ಶೇ.40ರಶ್ಟು ಭಾರತೀಯರ ಬಳಿ ಸ್ಮಾರ್ಟ್‌ಫೋನ್ ಸೌಲಬ್ಯವಿದೆ. ಗ್ರಾಮೀಣ ಬಾಗದಲ್ಲಿ 2018ರಲ್ಲಿ ಶೇ.15ರಷ್ಟು 2020ರಲ್ಲಿ ಶೇ.31ರಷ್ಟು ಜನಸಂಖ್ಯೆ ಅಂತರ್ಜಾಲ (ಇಂಟರ್‌ನೆಟ್) ಸೌಲಬ್ಯ ಹೊಂದಿದ್ದಾರೆ. ನಗರ ಪ್ರದೇಶದಲ್ಲಿ ಶೇ.47ರಷ್ಟು ಜನಸಂಖ್ಯೆ ಬಳಿ ಅಂತರ್ಜಾಲ ಸೌಲಬ್ಯವಿದೆ. ಇಲ್ಲಿ ಕುಟುಂಬಗಳ ಬಳಿ ಅಂತರ್ಜಾಲದ ಸೌಕರ್ಯವಿದೆ ಎಂದಾಕ್ಷಣ ಅದನ್ನು ಅವರು ಖಾಸಗಿಯಾಗಿ ಹೊಂದಿರುತ್ತಾರೆ ಎಂದು ಅರ್ಥವಲ್ಲ ಮತ್ತು ಇಲ್ಲಿ ಅದು ಎಲ್ಲಾ ಮಕ್ಕಳ ಬಳಿ ಲಬ್ಯವಿದೆ ಎಂದೂ ಅರ್ಥವಲ್ಲ.

ಇಂಟರ್ನೆಟ್ ಮತ್ತು ಮೊಬೈಲ್ ಅಸೋಶಿಯೇಶನ್ ಮಾಹಿತಿ ನಡೆಸಿದ ಸಮೀಕ್ಷೆ ಪ್ರಕಾರ ರಾಷ್ಟ್ರಮಟ್ಟದಲ್ಲಿ ಪುರುಷರು ಶೇ.65 ಮತ್ತು ಮಹಿಳೆಯರು ಶೇ.35 ಪ್ರಮಾಣದಲ್ಲಿ ಇಂಟರ್ನೆಟ್ ಬಳಸುತ್ತಾರೆ. ನಗರಬಾಗದಲ್ಲಿ ಪುರುಷರು ಶೇ.65 ಮತ್ತು ಮಹಿಳೆಯರು ಶೇ.35 ಪ್ರಮಾಣದಲ್ಲಿ, ಗ್ರಾಮೀಣ ಬಾಗದಲ್ಲಿ ಪುರುಷರು ಶೇ.69 ಮತ್ತು ಮಹಿಳೆಯರು ಶೇ.31 ಪ್ರಮಾಣದಲ್ಲಿ ಇಂಟರ್ನೆಟ್ ಬಳಸುತ್ತಾರೆ.

ಅಂತರ್ಜಾಲ ಲಬ್ಯತೆ, ಬಳಕೆಯಲ್ಲಿನ ಈ ಲಿಂಗ ತಾರತಮ್ಯವನ್ನು ಪರಿಹರಿಸಲು ಯಾವ ಸರಕಾರಗಳು ಆಸಕ್ತಿ ವಹಿಸಿಲ್ಲ. ಆದರೆ ಆನ್‌ಲೈನ್ ಶಿಕ್ಷಣಕ್ಕೆ ಮಾತ್ರ ಉತ್ಸುಕತೆ ತೋರಿಸುತ್ತಿರುವುದು ಒಂದು ವ್ಯಂಗ್ಯವಲ್ಲದೆ ಮತ್ತೇನು? ಒಂದು ವೇಳೆ ಆನ್‌ಲೈನ್ ಶಿಕ್ಷಣ ಕಡ್ಡಾಯಗೊಂಡರೆ ಹೆಣ್ಣುಮಕ್ಕಳು ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತರಾಗುತ್ತಾರೆ ಎನ್ನುವುದು ಈ ಅಂಕಿಅಂಶಗಳಿಂದ ಸ್ಪಶ್ಟವಾಗುತ್ತದೆ.

ಬಡತನ ರೇಖೆಗಿಂತ ಕೆಳಗಿರುವ ಕೆಳಸ್ತರದ ಶೇ.20ರಷ್ಟು ಬಡ ಕುಟುಂಬಗಳಲ್ಲಿ ಶೇ.2.7 ಪ್ರಮಾಣದ ಕುಟುಂಬಗಳು ಕಂಪ್ಯೂಟರ್ ಹೊಂದಿದ್ದಾರೆ ಮತ್ತು ಶೇ.8.9ರಷ್ಟು ಕುಟುಂಬಗಳು ಅಂತರ್ಜಾಲ ಸೌಕರ್ಯ ಹೊಂದಿವೆ. ಬಡತನ ರೇಖೆಗಿಂತ ಮೇಲಿರುವ ಮೇಲಸ್ತರದ ಶೇ.20ರಷ್ಟು ಬಡ ಕುಟುಂಬಗಳಲ್ಲಿ ಶೇ.27.6 ಪ್ರಮಾಣದ ಕುಟುಂಬಗಳು ಕಂಪ್ಯೂಟರ್ ಹೊಂದಿದ್ದಾರೆ ಮತ್ತು ಶೇ.50ರಷ್ಟು ಕುಟುಂಬಗಳು ಅಂತರ್ಜಾಲ ಸೌಕರ್ಯ ಹೊಂದಿವೆ.

ಇನ್ನು ಲಬ್ಯವಿರುವ ಅಂತರ್ಜಾಲ ಸಂಪರ್ಕವೂ ಸಹ ನಿರಂತರವಾಗಿ ದೊರಕುವುದಿಲ್ಲ. ಬ್ರಾಡ್‌ಬಾಂಡ್ ಅಂತರ್ಜಾಲದಲ್ಲಿ ಶೇ.53 ಪ್ರಮಾಣದ ಕುಟುಂಬಗಳಿಗೆ ದುರ್ಬಲ ಅಂತರ್ಜಾಲ ಸಂಪರ್ಕವಿದೆ, ಶೇ.53 ಪ್ರಮಾಣದ ಕುಟುಂಬಗಳಿಗೆ ಸಿಗ್ನಲ್‌ನ ತೊಂದರೆ ಇದೆ. ಮೊಬೈಲ್ ಅಂತರ್ಜಾಲದಲ್ಲಿ ಶೇ.40.2 ಪ್ರಮಾಣದ ಕುಟುಂಬಗಳಿಗೆ ದುರ್ಬಲ ಅಂತರ್ಜಾಲ ಸಂಪರ್ಕವಿದೆ. ಶೇ.56.6 ಪ್ರಮಾಣದ ಕುಟುಂಬಗಳಿಗೆ ಸಿಗ್ನಲ್‌ನ ತೊಂದರೆ ಇದೆ. ಇದಲ್ಲದೆ ಈಗಿನ ಸಂದರ್ಭದಲ್ಲಿ ವೇಗ ಸಂಪರ್ಕಕ್ಕೆ ಅಗತ್ಯವಿರುವ 4ಜಿ ಸಂಪರ್ಕ ಗ್ರಾಮೀಣ ಭಾಗದಲ್ಲಿ ದೊರಕುವುದಿಲ್ಲ.

ಪದವಿ, ಉನ್ನತ ಶಿಕ್ಷಣಕ್ಕೆ ಅನ್ವಯಿಸುವುದಾದರೆ ಮೇಲಿನ ಅಂಕಿಅಂಶಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮುಸ್ಲಿಂ ಸಮುದಾಯದ ಮಕ್ಕಳು ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಅಂತರ್ಜಾಲದ ಕೊರತೆಯ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ಮೇಲಿನ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ ಆನ್‌ಲೈನ್ ಶಿಕ್ಷಣ ಕಡ್ಡಾಯಗೊಳಿಸಿದರೆ ಯಾವುದೇ ಆಯ್ಕೆಗಳಿಲ್ಲದ ಸರಾಸರಿಯಾಗಿ ಶೇ.60-80 ಪ್ರಮಾಣದ ಕುಟುಂಬದ ಮಕ್ಕಳು ಸೌಲಭ್ಯಗಳ ಕೊರತೆಯಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದರಿಂದ ಮತ್ತೆ ಕೇವಲ ಶೇ.10-20 ಪ್ರಮಾಣದ ಉಳ್ಳವರಿಗೆ ಮಾತ್ರ ಶಿಕ್ಷಣ ದೊರಕುತ್ತದೆ. ಅದರಲ್ಲಿಯೂ ಗ್ರಾಮೀಣ ಬಾಗದ ಹೆಣ್ಣುಮಕ್ಕಳಿಗೆ ಅವರ ಪೋಷಕರು ಮನೆಯಲ್ಲಿ ಕುಳಿತು ವ್ಯಾಸಂಗ ಮಾಡುವ ಅವಕಾಶವನ್ನು ಕೊಡುವುದಿಲ್ಲ. ಅಲ್ಲಿನ ಪುರುಶಾದಿಪತ್ಯದ ವ್ಯವಸ್ಥೆ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕಲ್ಪಿಸುವ ಸಾದ್ಯತೆಗಳು ತುಂಬಾ ಕಡಿಮೆ.

ಉಪಸಂಹಾರ

ಈ ಶಿಕ್ಷಣ ನೀತಿಯ ಪ್ರತಿಗಾಮಿ ನಿಲುವುಗಳ ಕುರಿತು ಬರೆದಶ್ಟು ಮುಗಿಯುವುದಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರು ಸದನದಲ್ಲಿ ಇದರ ವಿರುದ್ದ ನಿಲುವಳಿ ಸೂಚನೆ ಮಂಡಿಸುವುದಾಗಿ ಹೇಳಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ರಾಜಕೀಯ ಪ್ರತಿರೋದ ಯಾವ ರೀತಿ ರೂಪುಗೊಳ್ಳಲಿದೆ ಎನ್ನುವುದನ್ನು ಈಗಲೇ ಹೇಳುವುದು ಕಶ್ಟ. ಕಳೆದ ಮೂರು ವರ್ಶಗಳಿಂದ ಬೆರೆಳೆಣಿಕೆಯಶ್ಟು ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಇದರ ಕುರಿತು ಚರ್ಚೆ ಮಾಡುತ್ತಿದ್ದಾರೆ. ಆದರೆ ಈ ಚರ್ಚೆಯನ್ನು ವಿಸ್ತರಿಸಲು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು, ಜನಾಂದೋಲನ ರೂಪಿಸುವಲ್ಲಿ ವಿಫಲಗೊಂಡಿದ್ದೇವೆ. ಈಗ ಎಚ್ಚೆತ್ತುಕ್ಕೊಂಡು ಪ್ರತಿಬಟನೆಗಳನ್ನು ಮಾಡುತ್ತಿದ್ದಾರೆ. ಆದರೆ ತುಂಬಾ ತಡವಾಗಿದೆ. ಇಲ್ಲಿನ ಉನ್ನತ ಶಿಕ್ಷಣ ಇಲಾಖೆ ಈ ವರ್ಶದಿಂದಲೇ ಎನ್‌ಇಪಿಯನ್ನು ಜಾರಿಗೊಳಿಸಲು ಮುಂದಾಗಿದೆ. ಆದರೆ ಕಾಲ ಮಿಂಚಿಲ್ಲ. ಕೇಂದ್ರವು ಶಿಕ್ಷಣ ನೀತಿಗೆ ಚೌಕಟ್ಟನ್ನು ಮಾತ್ರ ಒದಗಿಸಬೇಕು ಮತ್ತು ಅದರೊಳಗೆ ರಾಜ್ಯಗಳು ತಮ್ಮದೇ ಶಿಕ್ಷಣ ನೀತಿಯನ್ನು ರೂಪಿಸಿಕೊಳ್ಳಬೇಕು. ಇದು ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಪೂರಕವಾಗಿದೆ. ಪ್ರಗತಿಪರ ಸಂಘಟನೆಗಳು ಈ ಒಕ್ಕೂಟ ವ್ಯವಸ್ಥೆಯ ಹಿತರಕ್ಷಣೆಗಾಗಿ ’ರಾಶ್ಟ್ರೀಯ ಶಿಕ್ಷಣ ನೀತಿ ಬೇಕಾಗಿಲ್ಲ, ರಾಜ್ಯಗಳ ಶಿಕ್ಷಣ ನೀತಿ ಬೇಕು’ ಎನ್ನುವ ಜನಾಂದೋಲನವನ್ನು ಕಟ್ಟಬೇಕು. ಮತ್ತು ಮುಖ್ಯವಾಗಿ ನಾವು ಒಂದು ಮಾದರಿ ಶಿಕ್ಷಣ ನೀತಿಯನ್ನು ರೂಪಿಸಬೇಕು. ಅದನ್ನು ಜನರ ಬಳಿ ತೆಗೆದುಕೊಂಡು ಹೋಗಬೇಕು.

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...