Homeಅಂಕಣಗಳುಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?

ಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?

ಅದಾನಿ- ಅಂಬಾನಿ ಸಾಹುಕಾರರು ಕಲ್ಲಿನಾಗ ಪೆಟ್ರೋಲು ತೆಗೆಯೋದ ಬಿಟ್ಟು ಸಾಲಿ-ಕಾಲೇಜು, ವಿವಿ- ತಗೀಲಿಕ್ಕೆ ಹತ್ಯಾರ. ಇದನ್ನ ನೆನಪು ಇಟಗೊಂಡು ನಾವು ಎನ್.ಇ.ಪಿ ಅರ್ಥ ಮಾಡಿಕೊಳ್ಳಬೇಕು.

- Advertisement -
- Advertisement -

ನಾವು ಸಣ್ಣವರಿದ್ದಾಗ ದೊಡ್ಡವರೆಲ್ಲಾ ಫೈವ್ ಎನ್.ಪಿ, ಟೆನ್ ಎನ್.ಪಿ ಅಂತ ಮಾತಾಡ್ತಿದ್ದರು. ಹಂಗಂದರ ನಯಾ ಪೈಸಾ. ಅದು ಆಣೆ – ಬಿಲ್ಲಿ ಲೆಕ್ಕ ಎಲ್ಲ ಹೋಗಿ ಪೈಸಾ ಬಂದಿದ್ದ ಕಾಲ.

ಅದು ಹಳೇದು ಆತು. ಈಗ ಬಂದಿರೋದು ಎನ್.ಇ.ಪಿ. ಅದು ಒಂದು ಥರ ಆಣೆ – ಬಿಲ್ಲಿ ಲೆಕ್ಕ ಹೋಗಿ ನಯಾ ಪೈಸಾ ಬಂದಂಗ. ಈ ಎನ್.ಇ.ಪಿ ಎನಪಾ ಅಂದ್ರ ಅದು ಹೊಸ ಶಿಕ್ಷಣ ನೀತಿ.

ನೀವು ಇಷ್ಟು ದಿವಸ ಬಹಳ ನೀತಿ- ನಿಯಮ ನೋಡಿರಬಹುಡು. ಅವುಕುರ ಹಣೆಬರಹ ಅಷ್ಟ.

ನೀತಿ ನಿಯಮಗಳು ಬರೇ ಕಾಗದದಾಗ ಇರಬೇಕು, ಜಾರಿಗೆ ಮಾತ್ರ ಬರೋದಿಲ್ಲ ಅಂತ ನೀವು ಏನರ ತಿಳ್ಕೊಂಡಿರಬಹುದು. ಅದು ಗಾಡಿ ಓಡಿಸೋವಾಗ ಎಡಗಡೆಯಿಂದ ಮುಂದಕ್ಕ ಹೋಗಬಾರದು ಅನ್ನೋ ಸರಳ ನಿಯಮ ಇರಬಹುದು ಅಥವಾ ಅಭಯಾರಣ್ಯದಾಗಿನ ಹುಲಿ- ಸಿಂಹ ಎಲ್ಲ ಕೊಂದು ಕಾರಖಾನಿ ಮಾಲೀಕರಿಗೆ ಕೊಡಬಾರದು ಅನ್ನೋ ಸಹಜ ನೀತಿ ಇರಲಿ, ಎಲ್ಲಾನೂ ಮುರಿಯಬಹುದು. ನೀತಿ ನಿಯಮದ ವಿಷಯಕ್ಕ ಬಂದರ ನಮಗ ಪ್ರತಿ ದಿನಾನು ದಸರಾ. ಪ್ರತಿ ಸಂಜೆ ಸೀಮೋಲ್ಲಂಘನ. ಈ ವಿಷಯಕ್ಕ ಬಂದರ ನಾವು ಮಹಿಷ ಕುಲದವರು.

ನಾವು ಧಾರವಾಡದ ಹತ್ತರ ಎಮ್ಮಿಗನೂರಿನ ನಾಡಹಬ್ಬ ಮಾಡಲಿ, ಮಂಡ್ಯದ ಹತ್ತರ ಮಹಿಷಾಸುರ ಊರಿನೊಳಗ ಚಾಮುಂಡಿ ಬೆಟ್ಟದ ಹತ್ತರ ದಸರಾ ಆಚರಿಸಲಿ, ಅದಕ್ಕ ಭಾಳ ವ್ಯತ್ಯಾಸ ಏನೂ ಇಲ್ಲ.

ಈಗ ನೋಡ್ರಿಪಾ, ಆ ನೀತಿ ಕೇಂದ್ರ ಸಚಿವ ಸಂಪುಟದಾಗ ಪಾಸು ಆಗಿ ಮೂರು ದಿವಸ ಆದ ಮ್ಯಾಲೆ ಅದನ್ನ ಕೇಂದ್ರ ಶಿಕ್ಷಣ ಇಲಾಖೆ ಜಾಲತಾಣದಾಗ ಬಿಟ್ಟಾರೂ. ಅದು ಸುಮಾರು 70 ಪುಟ ಐತಿ. ಅದರವು ಕೆಲವು ಪೇಜು ಅಷ್ಟ ನೋಡೋಣ.

ಮೊದಲಿಗೆ ಅದರಾಗ ಛಲೋ ಏನ ಐತಿ ಅನ್ನೋದು ನೋಡೋಣು. ಮೊದಲಿಗೆ, ಸಾಧ್ಯವಾದಷ್ಟು ಮಟ್ಟಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಅಂತ ಒಂದು ಮಾತು ಐತಿ.

ಇದು ಈಗ ಸದ್ಯ ಚಾಲ್ತಿ ಇರೋ ಆಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಪ್ರಕರಣದಾಗ ಸುಪ್ರೀಂ ಕೋರ್ಟು 2013ದೊಳಗ ನೀಡಿದ ತೀರ್ಪಿನ ವಿರುದ್ಧ ಐತಿ. ಯಾರಾದರೂ ಅದನ್ನು ಪ್ರಶ್ನಿಸಿದರ, ದೆಹಲಿಯೊಳಗಿನ ನಮ್ಮ ಲಾರ್ಡ್‍ಗಳು ನ್ಯಾಯಾಲಯದ ಲಾರ್ಡ್‍ಗಳನ್ನು ಹೆಂಗ ಒಪ್ಪಿಸತಾರ ನೋಡಬೇಕು.

ಎರಡನೇದು, ನಮ್ಮಂತಹ ಡ್ರಾಪ್‍ಔಟ್‍ಗಳು ಕಾಲೇಜು ಬಿಟ್ಟು ಹೋಗಿ ಹತ್ತು ವರ್ಷ ಆದ ಮ್ಯಾಲೆ ಮತ್ತ ಓದಬೇಕು ಅಂತ ಅನ್ನಿಸಿದರ ವಾಪಸ್ ಕಾಲೇಜಿಗೆ ಬಂದು ಎಲ್ಲಿಗೆ ಬಿಟ್ಟಿದ್ದಾರೋ ಅಲ್ಲಿಂದ ಶುರು ಮಾಡಬಹುದು.

ಮೂರನೇದು `ರೀಕಾಗ್ನಿಷನ್ ಆಫ್ ಪ್ರಯರ್ ಲರನಿಂಗ್’ ಅಂದ್ರ ಮುಂಚಿನ ಕಲಿಕೆಯನ್ನು ಗುರುತಿಸುವುದು ಅನ್ನೋ ಯೋಜನೆ ಒಳಗ, ಪ್ರಾಥಮಿಕ ಶಿಕ್ಷಣದ ನಂತರ ವಿದ್ಯಾರ್ಥಿಗಳು ಕರಕುಶಲ ಕಲೆ, ವೃತ್ತಿ ಶಿಕ್ಷಣ ಹಾಗೂ ಉದ್ಯೋಗ ಆಧಾರಿತ ಶಿಕ್ಷಣದ ತರಬೇತಿ ತೊಗೋಬಹುದು.

ಇನ್ನೊಂದು ಮಜಾ ಅಂದ್ರ ಎಂ.ಫಿಲ್ ಅಂತ ಒಂದು ಯಾರಿಗೂ ಬ್ಯಾಡಾಗಿದ್ದು ಒಂದು ಕೋರ್ಸ್ ಇತ್ತು. ನಮ್ಮ ಧಾರವಾಡ ಯುನಿವರ್ಸಿಟಿ ಒಳಗ ಒಂದು ಜೋಕು ಇತ್ತು. ಕೆಲಸ ಸಿಗಲಾರದ ಗಂಡು ಮಕ್ಕಳು ಮತ್ತು ಮದುವೆ ಆಗಲಾರದ ಹೆಣ್ಣು ಮಕ್ಕಳು ಸೇರಿಕೊಳ್ಳುವಂತಹ ಯಾವುದಾದರೂ ಕೋರ್ಸ್ ಇತ್ತು ಅಂದ್ರ ಅದು ಎಂ.ಫಿಲ್ ಅಂತ. ಆನಂತರ ನಮ್ಮ ಬಾಗಲಕೋಟೆಯ ಬಜರಂಗಿ ಭಾಯಿಜಾನ ಅರವಿಂದ್ ಲಿಂಬಾವಳಿ ಅವರು ಸಚಿವರಾದ ಮೇಲೆ ಅದನ್ನ ಸರ್ಕಾರಿ ಅಧ್ಯಾಪಕರ ನೇಮಕಾತಿಗೆ ಕಡ್ಡಾಯ ಮಾಡಿದರು. ಹಂಗ ಮಾಡಿದ ಮ್ಯಾಲೆ ನಮ್ಮ ಊರಾಗ ಟೂ ಮಿನಿಟ್ ಮ್ಯಾಗಿ ಮಾಡಿಕೊಂಡು ಇದ್ದ ಸಾವಿರಾರು ಡಬಲ್ ಪದವೀಧರರು ತಮಿಳುನಾಡು- ಒರಿಸ್ಸಾ – ಆಂಧ್ರ- ಗುಜರಾತಿನ ನೂರಾರು ಯೂನಿವರ್ಸಿಟಿಗಳಲ್ಲಿ ಧಿಡೀರ ಎಂ.ಫಿಲ್ ಮಾಡಿಬಿಟ್ಟರು. ಅಷ್ಟೊಂದು ಓದಿದವರಿಗೆ ಹೆಣ್ಣು ಹುಡುಕುವುದು ಕಷ್ಟ ಆಯಿತು. ಎಲ್ಲಿಂದ ಎಂ.ಫಿಲ್ ಮಾಡಿದಿರೋ ಅಲ್ಲಿಂದನ ಹೆಣ್ಣು ತರಬೇಕಾಗಿತ್ತು ಅಂತ ಹಿರೇರು ಹೇಳೋ ಪರಿಸ್ಥಿತಿ ಬಂತು.

ಈ ಎಂ.ಫಿಲ್‍ಅನ್ನ ರದ್ದು ಮಾಡರಿ ಅಂತ ಎನ್.ಇ.ಪಿದಾಗ ಒಂದು ಶಿಫಾರಸು ಐತಿ. ಇದಕ್ಕೂ ಒಂದು ವೆಲ್‍ಕಂ ಇರಲಿ.

ಡಿಗ್ರಿ ಮೂರು ವರ್ಷ ಹೋಗಿ ನಾಕು ಮಾಡಿದಾರು. ಒಂದು ವರ್ಷ ಓದಿದರ ಪ್ರಮಾಣ ಪತ್ರ, ಎರಡು ಓದಿದರ ಡಿಪ್ಲೋಮಾ, ಮೂರು ಓದಿದರ ಡಿಗ್ರಿ, ಹಾಗೂ ನಾಕು ಓದಿದರ ಮಾಸ್ಟರ್ ಡಿಗ್ರಿ ಅಂತ ಐತಿ. ಇನ್ನೊಂದು ವರ್ಷ ಓದರಿ, ನೌಕರಿ ಕೊಡ್ತೇವಿ ಅಂತ ಇರಬೇಕಾಗಿತ್ತು. ಆದರ ಹಂಗ ಇಲ್ಲ.

ಅಮೆರಿಕ – ಯುರೋಪಿನ ಪದ್ಧತಿಯಂತೆ ನಾಕು ವರ್ಷ ಡಿಗ್ರಿ, ಆನಂತರ ನೇರವಾಗಿ ಪಿ. ಎಚ್ ಡಿ. ಅಂತ ನಿಯಮ ಮಾಡಿದಾರು. ಹಂಗಾರ ಎಂಎ, ಎಂ ಕಾಂ, ಎಂಎಸ್ಸಿ ಕಲಿಸಿಗೋತ ನೂರಾರು ಎಕರೆ ಕ್ಯಾಂಪಸ್ಸುದೊಳಗ ಎರಡೂವರೆ ಎಕರೆ ಸರಕಾರಿ ಮನೆ ಒಳಗ ಇರೋ ಯೂಜಿಸಿ ಸಂಬಳದ ಪ್ರೊ.ಲಕ್ಷ್ಮೀಪತಿ ಅವರು ಮುಂದ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರ ಸದ್ಯಕ್ಕಂತೂ ಇಲ್ಲ.

ಸರಕಾರಿ ಸಾಲಿ ಒಳಗ ಮೂರನೇ ವರ್ಷದಿಂದ ಮಕ್ಕಳಿಗೆ ಪ್ರವೇಶ ಕೊಡರಿ ಅಂತ ಹೇಳಿದಾರ. ಅದರ ಅದಕ್ಕ ತಕ್ಕ ತರಬೇತಿ, ಮೂಲ ಸೌಕರ್ಯ ಮುಂತಾದರ ಮಾತು ಇಲ್ಲ.

ಎಲ್ಲ ರೀತಿಯ ಉನ್ನತ ಶಿಕ್ಷಣದ ಮೂಗುದಾರ ಹಿಡಿಯಲಿಕ್ಕೆ ಒಂದೇ ಸಂಸ್ಥೆ ಮಾಡ್ತೇವಿ ಅಂತ ಘೋಷಣೆ ಹಾಕಿದಾರು. ಯುಜಿಸಿ, ಎ.ಐ.ಸಿ.ಟಿ.ಇ., ಕೃಷಿ ಶಿಕ್ಷಣ ಪರಿಷತ್ತು, ಮುಂತಾದಾವೆಲ್ಲ ಸೇರಿಸಿ ಒಂದ ಸಂಘಟನೆ ಆಗೋ ವಿಚಾರ ಐತಿ. ಇದು ಒಂದು ಲೆಕ್ಕದಾಗ ಅಪಾಯಕಾರಿ. ಸರಕಾರಿ ಸಂಘಟೆನೆಗಳಿಗೆ ಸಾಮಾನ್ಯವಾಗಿ ರಾಜಕೀಯ ನೇಮಕಾತಿ ಆಗತದ. ಅದರಗೂ ಆಳುವ ಪಕ್ಷದವರು, ಬರೆ ಸಿದ್ಧಾಂತದ ಆಧಾರದ ಮೇಲೆ ನೇಮಕ ಆಗತಾರ. ಏನರ ಓದಿದವರು, ರಾಜಕೀಯ ಕಾರಣಕ್ಕಾಗಿ ಇದರಾಗ ಸೇರಿಕೊಂಡು ಏನೇನರ ಬದಲಾವಣೆ ಮಾಡಲಿಕ್ಕ ಹತ್ತಿದರ ಏನು ಕತಿ?

ಇನ್ನ ಹಳ್ಳಿಯ ಸಣ್ಣ ಶಾಲೆಗಳನ್ನ ಬಂದು ಮಾಡಿ 5-10 ಕಿಲೋಮೀಟರು ಅಂತರದಾಗ ದೊಡ್ಡ ಶಾಲೆ ತಗಿಬೇಕು ಅಂತ ಇದರಾಗ ಒಂದು ಉದ್ಧಘೋಷ ಐತಿ. ಇದು ಖಂಡಿತ ಅಡ್ಡಡ್ಡ ಪರಿಣಾಮ ಬೀರತೇತಿ. ಈಗ ಪ್ರಾಥಮಿಕ ಶಾಲೆಗಳು ಒಂದು ಕಿಲೋಮೀಟರು ಅಂತರದೊಳಗ ಇರಬೇಕು ಅಂತ ಐತಿ. ಇದನ್ನ ತಗದು ಹತ್ತು ಕಿಲೋಮೀಟರು ಅಂತರ ಮಾಡಿದರ ಅದರ ದುಷ್ಪರಿಣಾಮ ಹತ್ತು ಪಟ್ಟುಗಿಂತ ಜಾಸ್ತಿ ಆಗತದ ಅಂತ ಒಂದು ಅಂದಾಜು.

ಸಾವಿರಾರು ವರ್ಷದಿಂದ ಶಿಕ್ಷಣದಿಂದ ದೂರ ಉಳಿದ ಸಮುದಾಯಗಳು ಇವತ್ತು ಸಾಲಿ ಮೆಟ್ಟಲ ಹತ್ತಲಿಕ್ಕೆ ಸಾಧ್ಯ ಆಗಿದ್ದು ಈ ಒಂದು ಕಿಲೋಮೀಟರು ಅಂತರದ ಕಾನೂನಿನಿಂದನ. ಇದು ದೊಡ್ಡವರಿಗೆ ತಿಳಿಯದೇ ಇರಲಿಕ್ಕೆ ಸಾಧ್ಯ ಇಲ್ಲ.

ಈ ಜಿ.ಇ.ಆರ್ ಅಂತ ಒಂದು ಐತಿ. ಅದು ಎಂ.ಜಿ.ಆರ್, ಎನ್.ಟಿ.ಆರ್‍ರಷ್ಟು ಜನಪ್ರಿಯ ಅಲ್ಲ. ಚಾಲ್ತಿ ಒಳಗೂ ಇಲ್ಲ. ಅದು ಏನಪ ಅಂದ್ರ ನಿಮ್ಮ ಊರಾಗ ಒಂದು ನೂರು ಹುಡುಗರು ಒಂದನೇ ತರಗತಿಗೆ ಸಾಲಿಗೆ ಹೋದರ ಆದರಾಗ ಎಷ್ಟು ಮಂದಿ ಯುನಿವರ್ಸಿಟಿಗೆ ಹೋಗತಾರ ಅನ್ನೋ ಲೆಕ್ಕ.

ಅದು ಈಗ ದಕ್ಷಿಣ ಭಾರತದಾಗ ಸುಮಾರು 30-50ರ ಒಳಗ ಐತಿ. ಉತ್ತರ ಹಿಂದೂಸ್ತಾನದಾಗ 5-25 ರವರೆಗೂ ಐತಿ. ಈ ಹಿನ್ನೆಲೆಯೊಳಗ 2035 ರವರೆಗೆ ಸಮಗ್ರ ಭಾರತ ರಾಷ್ಟ್ರದ ಸರಾಸರಿ ಜಿ.ಇ.ಆರ್ ಅನ್ನು 50 ಮಾಡಬೇಕು ಅಂತ ಎನ್.ಇ.ಪಿ ಒಳಗ ಐತಿ.

ಅದರ ಅದನ್ನ ಹೆಂಗ ಮಾಡಬೇಕು ಅನ್ನೋ ಮಾತು ಇದರಾಗ ಇಲ್ಲ. ಈಗ ದೇಶದ ತಲಾ ಉತ್ಪನ್ನದ ಶೇಕಡಾ 2-4 ರ ಒಳಗ ಇರೋ ಬಾಬತ್ತು 4-8 ಆಗಬೇಕು ಅನ್ನೋ ಮಾತು ಇಲ್ಲ. ಇದು ಹೆಂಗ ಅಂದ್ರ ಮನಿಗ ಹಾಲು, ಸಕ್ಕರಿ, ಶಾವಿಗೆ ತಂದು ಕೊಡಲಾರದ ಗಂಡ `ನಾಳೆ ಪಾಯಸ ಮಾಡು ಇಲ್ಲಾಂದರ ಬಡಿತೇನಿ’ ಅಂತ ಹೆಂಡತಿಗೆ ಹೇಳಿದ ಹಂಗ.

ಇನ್ನ ಖಾಸಗಿ ಸಹಭಾಗಿತ್ವದ ಮಾತಿಗೆ ಬರೋಣ. ಖಾಸಗಿ ಕ್ಷೇತ್ರ ಸರಕಾರದ ಭಾರ ಹಂಚಿಕೊಳ್ಳಬೇಕು. ಬಡವರಿಗೆ ಹೊರೆ ಆಗದಂತೆ ಖಾಸಗಿ ಸಂಸ್ಥೆಗಳು ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಳ್ಳಬೇಕು ಅಂತ ಇದಾರಗ ಒಂದು ಫರಮಾನು ಐತಿ.

ಸರಕಾರಿ ಹಾಗೂ ಖಾಸಗಿ ಶಾಲೆ- ಕಾಲೇಜುಗಳಿಗೆ ಒಂದೇ ಮಾನದಂಡ. ಅವಕ್ಕೆ ಒಂದೇ ನಿಗರಾಣಿ ಸಂಸ್ಥೆ ಅಂತ ಒಂದು ಶೀಲಾಲೇಖ ಐತಿ. ಕಲ್ಲಿನ ಮ್ಯಾಲೆ ಬರದ ಮಾತು ಸುಳ್ಳು ಆಗತದ? ಇಲ್ಲ. ಆ ನಿಗರಾಣಿ ಸಂಸ್ಥೆಯೊಳಗ ನಮ್ಮ ನಿರಾಣಿ ಸಾಹೇಬರು ಅಥವಾ ಅಂತವರು ಸೇರಿಕೊಂಡರ ಮುಂದ ಏನು?

ಅದಾನಿ- ಅಂಬಾನಿ ಸಾಹುಕಾರರು ಕಲ್ಲಿನಾಗ ಪೆಟ್ರೋಲು ತೆಗೆಯೋದ ಬಿಟ್ಟು ಸಾಲಿ-ಕಾಲೇಜು, ವಿವಿ- ತಗೀಲಿಕ್ಕೆ ಹತ್ಯಾರ. ಇದನ್ನ ನೆನಪು ಇಟಗೊಂಡು ನಾವು ಎನ್.ಇ.ಪಿ ಅರ್ಥ ಮಾಡಿಕೊಳ್ಳಬೇಕು.

ಹಿಂದ ಟಿ.ಎಂ.ಎ. ಪೈ ಪ್ರಕರಣದಾಗ ನ್ಯಾಯಾಧೀಶರು `ಯೋಗ್ಯ ಲಾಭ’ ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು. ಅದನ್ನು ಕೇಂದ್ರ ಸರಕಾರ 2020 ರೊಳಗ ಅಫಿಶಿಯಲ್ ನೀತಿಯನ್ನಾಗಿ ಪ್ರಕಟಮಾಡಿತು.

ನಮ್ಮ ಪಂಥ ಪ್ರಧಾನ ಸೇವಕರು ಈ ನೀತಿ ನೌಕರಿ ಹುಡುಕುವರನ್ನು ಹುಟ್ಟು ಹಾಕುವುದಿಲ್ಲ. ನೌಕರಿ ಸೃಷ್ಟಿ ಮಾಡುವರನ್ನು ತಯಾರಿಸುತ್ತಾದೆ ಅಂತ ಹೇಳಿದಾರು. ಎಂಥ ಗಹನವಾದ ವಿಷಯಗಳನ್ನು ಅವರು ಎಷ್ಟು ಸರಳವಾದ ಭಾಷೆಯೊಳಗ ತಿಳಿ ಹೇಳತಾರ. ಮತ್ತು ಅದನ್ನ ಕೇಳಿಸಿಕೊಂಡವರು ಹೂಂ ಅಂತ ತಲೆದೂಗಿ ಚಪ್ಪಾಳೆ ತಟ್ಟಿ ವ್ಹಾ ವ್ಹಾ ಅಂತಾರ. ಈ ಗಹನವಾದ ಆಡಳಿತ ನೀತಿಯನ್ನು ಮೊದಲು ನಾವು ತಿಳಿದುಕೊಳ್ಳಬೇಕು.


ಇದನ್ನು ಓದಿ: ಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...