Homeಅಂಕಣಗಳುಖಾಸಗಿ ಆಸ್ಪತ್ರೆಯಲ್ಲಿ ರಾಜಕಾರಣಿಗಳು: ಆರೋಗ್ಯ ವ್ಯವಸ್ಥೆಯ ರಾಷ್ಟ್ರೀಕರಣಕ್ಕೆ ಸೂಕ್ತ ಸಮಯ

ಖಾಸಗಿ ಆಸ್ಪತ್ರೆಯಲ್ಲಿ ರಾಜಕಾರಣಿಗಳು: ಆರೋಗ್ಯ ವ್ಯವಸ್ಥೆಯ ರಾಷ್ಟ್ರೀಕರಣಕ್ಕೆ ಸೂಕ್ತ ಸಮಯ

ಯಡಿಯೂರಪ್ಪನವರೂ, ಸಿದ್ದರಾಮಯ್ಯನವರೂ, ಅಮಿತ್‍ಷಾ ಅವರೂ ಗುಣಮುಖರಾಗಿ ಹೊರಬರಲಿ. ಅವರೆಲ್ಲರಿಗೂ ಒಳ್ಳೆಯದನ್ನೇ ಹಾರೈಸೋಣ. ಆದರೆ ಜನಸಾಮಾನ್ಯರು ನೋವು, ಸಂಕಟದಲ್ಲಿರುವಾಗ ಅವರಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆಯ ಅಗತ್ಯವಿರುತ್ತದೆ ಅಲ್ಲವೇ?

- Advertisement -
- Advertisement -

ದೇಶದ ಹಲವು ಅಧಿಕಾರಸ್ಥ ರಾಜಕೀಯ ನಾಯಕರುಗಳಿಗೆ ಕೊರೊನಾ ತಗುಲಿದ ನಂತರ ಅವರುಗಳು ಸರ್ಕಾರೀ ಆಸ್ಪತ್ರೆಯಲ್ಲಿ ಏಕೆ ದಾಖಲಾಗುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ. ಸರ್ಕಾರೀ ಮತ್ತು ಖಾಸಗೀ ಆಸ್ಪತ್ರೆಗಳೆರಡರಲ್ಲೂ ಕೆಲಸ ಮಾಡಿರುವ ಅನುಭವದಿಂದ ಈ ಕೆಳಗಿನ ಎರಡು ಅಂಶಗಳನ್ನು ಖಚಿತವಾಗಿ ಹೇಳಬಹುದು. ಒಂದು, ಈ ರಾಜಕೀಯ ನಾಯಕರುಗಳಿಗೆ ತಾವೇ ಅನುದಾನ ಬಿಡುಗಡೆ ಮಾಡುವ ನಮ್ಮ ಸರ್ಕಾರೀ ವೈದ್ಯಕೀಯ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬ ತಿಳುವಳಿಕೆ ಇದ್ದಂತಿಲ್ಲ. ಎರಡು, ಜನಸಾಮಾನ್ಯರು ತಮ್ಮ ಆರೋಗ್ಯದ ಕುರಿತು ಯೋಚಿಸುವ ರೀತಿಯಲ್ಲಿಯೇ ಇವರುಗಳೂ ಯೋಚಿಸುತ್ತಿದ್ದಾರೆ.

ಇಂದಿಗೂ ನಮ್ಮ ಸರ್ಕಾರೀ ವೈದ್ಯಕೀಯ ವ್ಯವಸ್ಥೆಯಲ್ಲಿ ಉನ್ನತ ಸಂಸ್ಥೆಗಳು ಅತ್ಯುತ್ತಮವಾಗಿಯೇ ಇವೆ. ದೆಹಲಿಯ ಏಮ್ಸ್ ಮಾತ್ರವಲ್ಲದೇ, ನಮ್ಮದೇ ಬೆಂಗಳೂರಿನ ನಿಮ್ಹಾನ್ಸ್, ಜಯದೇವ ಹಾಗೂ ವಿಕ್ಟೋರಿಯಾ ಕ್ಯಾಂಪಸ್ಸಿನಲ್ಲಿರುವ ಟ್ರಾಮಾ ಸೆಂಟರ್ ಇವೆಲ್ಲವೂ ಗುಣಮಟ್ಟದ ಸೇವೆಯನ್ನೇ ಒದಗಿಸುತ್ತಿವೆ. ಅಂತಹ ಆಸ್ಪತ್ರೆಗಳಿಗೆ ಈ ಪ್ರಭಾವೀ ರಾಜಕಾರಣಿಗಳು ದಾಖಲಾದರೆ ಅವರಿಗೆ ಇನ್ನೂ ಉತ್ತಮವಾದ ಸೇವೆಯನ್ನು ಒದಗಿಸಲು ಅಲ್ಲಿನ ಸಿಬ್ಬಂದಿ ತುದಿಗಾಲಿನ ಮೇಲೆ ನಿಂತಿರುತ್ತಾರೆ. ಅದಕ್ಕಾಗಿ ಆಸ್ಪತ್ರೆಯ ಎಲ್ಲಾ ನಿಯಮಗಳನ್ನೂ ಬದಲಿಸಿ ಇವರಿಗಾಗಿ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಡಲಾಗುತ್ತದೆ. ಅಲ್ಲಿಗೆ ಹೋಗುವುದಕ್ಕೆ ಮುಂಚೆ ಒಂದೇ ಒಂದು ಫೋನ್ ಕರೆ ಮಾಡಿದರೆ ಸಾಕು, ಆ ಆಸ್ಪತ್ರೆಗಳ ನಿರ್ದೇಶಕರ ಕೊಠಡಿಯಲ್ಲೇ ವಿವಿಧ ವಿಭಾಗಗಳ ಮುಖ್ಯಸ್ಥರೇ ಬಂದು ಕಾದಿದ್ದು, ಪರೀಕ್ಷೆ ಮಾಡಿ ಪ್ರತ್ಯೇಕವಾದ ಕೊಠಡಿಗಳನ್ನು ಇವರಿಗಾಗಿ ಸಿದ್ಧಗೊಳಿಸಿ ಉತ್ತಮವಾದ ಚಿಕಿತ್ಸೆ ನೀಡುತ್ತಾರೆ. ಹಾಗೆ ನೋಡಿದರೆ ಇದಕ್ಕಾಗಿ ನೀವು ಮುಖ್ಯಮಂತ್ರಿ, ಕೇಂದ್ರ ಗೃಹಮಂತ್ರಿ ಅಥವಾ ವಿರೋಧ ಪಕ್ಷದ ನಾಯಕನಾಗಬೇಕಿಲ್ಲ. ಆರೋಗ್ಯ ಮಂತ್ರಿಯ ಪಿಎ ಆಗಿದ್ದರೂ ಸಾಕು. ಇನ್ನೂ ಹೇಳಬೇಕೆಂದರೆ, ಈ ಆಸ್ಪತ್ರೆಯ ವಿವಿಧ ಗೋಲ್‍ಮಾಲ್‍ಗಳನ್ನು ಬಯಲಿಗೆಳೆಯಲು ಆಗಿಂದಾಗ್ಗೆ ಆರ್‌ಟಿಐ ಹಾಕುತ್ತಾ, ಸಣ್ಣ ಪುಟ್ಟ ಪ್ರತಿಭಟನೆಗಳನ್ನು ಮಾಡುವ ವ್ಯಕ್ತಿಯಾಗಿದ್ದರೂ ಸಾಕು.

ಹೀಗಿದ್ದರೂ, ಅಧಿಕಾರಸ್ಥ ರಾಜಕಾರಣಿಗಳು ಇಂತಹ ದೊಡ್ಡ ಸರ್ಕಾರೀ ಆಸ್ಪತ್ರೆಗಳಿಗೂ ದಾಖಲಾಗದೇ ಇರಲು ಕಾರಣವೇನು? ಅವರಿಗೆ ನಮ್ಮ ಸರ್ಕಾರೀ ವೈದ್ಯಕೀಯ ವ್ಯವಸ್ಥೆಯಲ್ಲಿಯೇ ಕೆಲವು ಸಂಸ್ಥೆಗಳು ಉತ್ತಮವಾಗಿರುವುದರ ಬಗ್ಗೆ ಗೊತ್ತಿಲ್ಲ. ಅಂತಹ ಆಸ್ಪತ್ರೆಗಳ ಉದ್ಘಾಟನೆಗೆ, ನವೀಕರಣಕ್ಕೆ ಅವರು ಹೋದಾಗ ನೋಡುವುದನ್ನು ಬಿಟ್ಟರೆ ಈ ಆಸ್ಪತ್ರೆಗಳ ಗುಣಮಟ್ಟದ ಬಗ್ಗೆ ಅವರಿಗೆ ತಿಳಿದಿಲ್ಲ. ಜಡ್ಡುಗಟ್ಟಿದ ಸರ್ಕಾರೀ ವ್ಯವಸ್ಥೆಯಲ್ಲಿ ಮನೆ ಮಾಡಿರುವ ಜನವಿರೋಧಿ ಗುಣ, ನಿರ್ಲಕ್ಷ್ಯಗಳು ಜನಸಾಮಾನ್ಯರಿಗೆ ತೊಂದರೆ ಕೊಡುತ್ತವೆನ್ನುವುದು ನಿಜ; ಈ ಅಧಿಕಾರಸ್ಥರಿಗಲ್ಲ. ಹಾಗಾಗಿ ಯಾರಾದರೂ ಅಧಿಕಾರಸ್ಥ ರಾಜಕಾರಣಿ ಸರ್ಕಾರೀ ಆಸ್ಪತ್ರೆಗೆ ಹೋಗಿ ದಾಖಲಾದರೆ ಅವರು ಯಾವ ತ್ಯಾಗವನ್ನೂ ಮಾಡಿದಂತೆ ಅಲ್ಲ.

ಎರಡನೆಯದಾಗಿ, ಆರೋಗ್ಯದ ಕುರಿತಾಗಿ ಇರುವ ತಿಳುವಳಿಕೆಯಲ್ಲೇ ಒಂದು ಮೂಲಭೂತ ದೋಷವಿದೆ. ಇದು ಈ ದೇಶದ ಬಹುತೇಕ ಜನರಲ್ಲಿ ಇರುವ ತಿಳುವಳಿಕೆಯಾಗಿದೆ. ಅದೇನೆಂದರೆ ಹಣ ಕೊಡದೇ ಇದ್ದಲ್ಲಿ ಉತ್ತಮವಾದ ಏನೂ ಸಿಗುವುದಿಲ್ಲ ಎಂಬ ಗಾಢನಂಬಿಕೆ. ಸಾಮಾನ್ಯವಾಗಿ ಜನರಿಗೆ ಉಚಿತವಾಗಿ ಸಿಗುವ ಅನುಕೂಲಗಳನ್ನು ಸರ್ಕಾರವು ಕೊಡಮಾಡುತ್ತದೆ. ಈಗೀಗ ಅದೂ ಕಡಿಮೆಯಾಗಿದೆ. ಉತ್ತಮವಾದ ರಸ್ತೆಯೆಂದರೆ ಟೋಲ್ ಇರುವ ರಸ್ತೆ ಎಂದಾಗಿಲ್ಲವೇ, ಹಾಗೆ. ಕೊಡುವ ಹಣ ಹೆಚ್ಚಾದಷ್ಟೂ ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆ ಸಿಗುತ್ತದೆ ಎಂಬ ಮಾರುಕಟ್ಟೆಯ ಮೇಲಿನ ನಂಬುಗೆ ಹೀಗೆ ಮಾಡುತ್ತದೆ. ಉಳಿದ ವಿಚಾರಗಳಲ್ಲಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲು ಜನರು ಸಿದ್ಧರಿರುತ್ತಾರಾದರೂ, ತಮ್ಮ ಆರೋಗ್ಯದ ವಿಚಾರದಲ್ಲಿ ಅಂತಹದನ್ನು ‘ಅಪಾಯಕ್ಕೆ’ ತಮ್ಮನ್ನು ತಾವು ಒಡ್ಡಿಕೊಳ್ಳಲು ಸಿದ್ಧರಿರುವುದಿಲ್ಲ.

ಖಾಸಗಿ ಆಸ್ಪತ್ರೆಗಳಲ್ಲಿ ವಿಪರೀತ ಬಿಲ್ ಮಾಡುತ್ತಾರೆ, ಅನಗತ್ಯವಾದ ಪರೀಕ್ಷೆ, ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ ಮತ್ತು ಬೇಕಿಲ್ಲದ ಔಷಧಿಗಳನ್ನು ನೀಡಲಾಗುತ್ತದೆ ಎಂಬೆಲ್ಲಾ ತಕರಾರು, ದೂರುಗಳು ಇರುತ್ತವಾದರೂ, ಈ ಸದ್ಯ ತಮಗೆ ಬಂದಿರುವ ಖಾಯಿಲೆಗಂತೂ ತಮ್ಮ ಜೇಬಿಗೆ ಕಷ್ಟಸಾಧ್ಯವಾದರೂ, ಇರುವುದರಲ್ಲೆ ಅತ್ಯುತ್ತಮವಾದ ಚಿಕಿತ್ಸೆ ದೊರೆಯಲಿ ಎಂದೇ ಎಲ್ಲರೂ ಬಯಸುತ್ತಾರೆ. ಖಾಸಗಿ ಆಸ್ಪತ್ರೆಗಳ ಥಳಕು ಬಳುಕಿನಲ್ಲಿ ತೋರಿಕೆಯ ಚೆಂದ ಬೇಕಾದಷ್ಟು ಇದ್ದೇ ಇರುತ್ತದೆ ಮತ್ತು ಸರ್ಕಾರೀ ಆಸ್ಪತ್ರೆಗಳಲ್ಲಿ ಜನರನ್ನು ಪ್ರೀತಿ ಗೌರವದಿಂದ ಮಾತಾಡಿಸುವ ಕಷ್ಟ ಬಹುತೇಕ ಯಾರೂ ತೆಗೆದುಕೊಳ್ಳುವುದಿಲ್ಲ. ಚಿಕಿತ್ಸೆಯಲ್ಲೂ ಉಡಾಫೆ, ನಿರ್ಲಕ್ಷ್ಯ ಇರಬಹುದು. ಇದರ ಅರ್ಥ ಖಾಸಗಿ ಆಸ್ಪತ್ರೆಗಳಲ್ಲಿ ಬೇರಾವುದೋ ಮಾಂತ್ರಿಕ ಶಕ್ತಿ ಇರುವುದಿಲ್ಲ. ಅವರು ನಂಬರ್ 1 ಡಾಕ್ಟ್ರು, ಇವರು ನಂಬರ್ 2 ಸರ್ಜನ್ ಎಂಬುದೆಲ್ಲಾ ಅರ್ಥಹೀನ. ವಾಸ್ತವದಲ್ಲಿ ಮನುಷ್ಯರಿಗೆ ಬರುವ ರೋಗಗಳಲ್ಲಿ ಹೆಚ್ಚಿನವು, ಮನುಷ್ಯ ದೇಹಕ್ಕೆ/ಪ್ರಕೃತಿಗೆ ಇರುವ ಅಪಾರ ಶಕ್ತಿಯ ಕಾರಣದಿಂದ ಗುಣವಾಗುತ್ತವೆಯೇ ಹೊರತು ಚಿಕಿತ್ಸೆಯಿಂದಲ್ಲ. ಆದರೆ, ರೋಗಿಗಳನ್ನು ಕ್ಯೂನಲ್ಲಿ ಕಾಯಿಸುವುದು, ಉಡಾಫೆಯಿಂದ ಮಾತನಾಡಿಸುವುದು, ಗಮನ ಕೊಟ್ಟು ನೋಡದಿರುವುದು, ಸ್ವಚ್ಛವಾಗಿಲ್ಲದೇ ಇರುವುದು ಇತ್ಯಾದಿ ಸಮಸ್ಯೆಗಳು ಸರ್ಕಾರೀ ಆಸ್ಪತ್ರೆಗಳಲ್ಲಿರುವುದು ವಾಸ್ತವ. ಇದಕ್ಕೆ ಸರ್ಕಾರೀ ಆಸ್ಪತ್ರೆಗಳ ಮೇಲಿರುವ ಭಾರೀ ಹೊರೆಯೂ ಒಂದು ಕಾರಣವಾಗಿದೆ; ಸರ್ಕಾರೀ ವ್ಯವಸ್ಥೆಯ ಇತರ ವಿಭಾಗಗಳಲ್ಲೂ ಕಾಣುವ ಜಡತ್ವ, ಉತ್ತರದಾಯಿತ್ವ ರಹಿತ ಕಾರ್ಯನಿರ್ವಹಣೆ, ಭ್ರಷ್ಟಾಚಾರಗಳೂ ಕಾರಣವಾಗಿವೆ. ಆದರೆ, ಅವಾವುವೂ ಅಧಿಕಾರಸ್ಥ ರಾಜಕಾರಣಿಗಳು ಹೋದಾಗ ಸಮಸ್ಯೆಗಳಾಗುವುದಿಲ್ಲ. ಎಲ್ಲಾ ಅವ್ಯವಸ್ಥೆಗಳ ನಡುವೆಯೂ ಅವರಿಗೆ ಭಿನ್ನ ರೀತಿಯ ಚಿಕಿತ್ಸೆಯನ್ನು ವೈದ್ಯಾಧಿಕಾರಿಗಳು ಖಾತರಿಪಡಿಸಬಲ್ಲರು.

ಅಂತಹ ಖಾತರಿಯು ಜನಸಾಮಾನ್ಯರಿಗೆ ಸಾಧ್ಯವಿಲ್ಲ. ಖಾಸಗಿ ವ್ಯವಸ್ಥೆಯಲ್ಲೂ ಕಡಿಮೆ ಹಣ ತೆರುವವರಿಗೆ ಕಡಿಮೆ ಗುಣಮಟ್ಟದ ಚಿಕಿತ್ಸೆಯಷ್ಟೇ ಲಭ್ಯವಾಗುತ್ತದೆ. ಇದೇ ಕೋವಿಡ್ ಚಿಕಿತ್ಸೆಯ ಸಂದರ್ಭದಲ್ಲೂ ಬಿಬಿಎಂಪಿಯಿಂದ ರೆಫರ್ ಆದ ರೋಗಿಗಳಿಗೆ ಬೇರೆ ಚಿಕಿತ್ಸೆ ಮತ್ತು ತಾವೇ ಹಣ ನೀಡುವುದಾದರೆ ಬೇರ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ನೋವು, ಸಂಕಟದಲ್ಲಿರುವಾಗ ಮನುಷ್ಯರು ಸಾಂತ್ವನ ಮತ್ತು ಪರಿಹಾರವನ್ನು ಬಯಸುತ್ತಾರೆ. ಇದಕ್ಕೆ ರಾಜಕಾರಣಿಗಳೂ ಹೊರತಲ್ಲ. ಅವರ ಪ್ರಭಾವ, ಅಧಿಕಾರದ ಕಾರಣಕ್ಕೆ ಸರ್ಕಾರೀ ವ್ಯವಸ್ಥೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುವ ಸಾಧ್ಯತೆಯಿದ್ದರೂ ಸಿಎಂ, ಮಾಜಿ ಸಿಎಂಗಳು ಅಲ್ಲಿಗೆ ಹೋಗಿಲ್ಲ ಎನ್ನುವುದಾದರೆ, ಅವರು ಸಾಮಾನ್ಯ ಜನರ ಪರಿಸ್ಥಿತಿಯ ಕುರಿತು ಆಲೋಚಿಸುವ ಉತ್ತರದಾಯಿತ್ವವನ್ನು ಹೊರಲೇಬೇಕಿದೆ. ಯಡಿಯೂರಪ್ಪನವರೂ, ಸಿದ್ದರಾಮಯ್ಯನವರೂ, ಅಮಿತ್‍ಷಾ ಅವರೂ ಗುಣಮುಖರಾಗಿ ಹೊರಬರಲಿ. ಅವರೆಲ್ಲರಿಗೂ ಒಳ್ಳೆಯದನ್ನೇ ಹಾರೈಸೋಣ. ಆದರೆ ಜನಸಾಮಾನ್ಯರು ನೋವು, ಸಂಕಟದಲ್ಲಿರುವಾಗ ಅವರಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆಯ ಅಗತ್ಯವಿರುತ್ತದೆ ಅಲ್ಲವೇ? ಹಾಗಾಗಿ ನೀವೇಕೆ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದೀರಿ ಎಂಬ ಪ್ರಶ್ನೆಯನ್ನು ಈ ಹೊತ್ತಿನಲ್ಲಿ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆರೋಗ್ಯ ವ್ಯವಸ್ಥೆಯ ಸಂಪೂರ್ಣ ರಾಷ್ಟ್ರೀಕರಣದ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಲವರ್ಧನೆ, ವಿಸ್ತರಣೆ ಹಾಗೂ ಖಾಸಗಿ ವೈದ್ಯಕೀಯ ವ್ಯವಸ್ಥೆಯ ನಿಯಂತ್ರಣದ ಪ್ರಶ್ನೆಯನ್ನು ಗಟ್ಟಿಯಾಗಿ ಎತ್ತಲೇಬೇಕು. ಅದು ಸಾಧ್ಯವಾಗುವುದಾದರೆ ದೇಶಕ್ಕೆ ಸಾಕಷ್ಟು ಹಾನಿ ಮಾಡಿರುವ ಕೊರೊನಾದಿಂದ ಒಂದಾದರೂ ಒಳಿತಾಯಿತು ಎಂದುಕೊಳ್ಳಬಹುದು.


ಇದನ್ನು ಓದಿ: ಕೋವಿಡ್ ಸೋಂಕಿತ ಬಹುತೇಕ ರಾಜಕಾರಣಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ! ಏಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...