Homeಮುಖಪುಟಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ!

ಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ!

‘ಹೊಸ ಶಿಕ್ಷಣ ನೀತಿ-2020’, ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಬೀರುವ ದೂರಗಾಮಿ ದುಷ್ಪರಿಣಾಮಗಳು ಬಹುಶಃ ಮೇಲುನೋಟಕ್ಕೆ ಕಾಣದೆ ಹೋಗಬಹುದು. ಆದರೆ, ಅವು ವೇಗವಾಗಿ ಶಿಕ್ಷಣ ಕ್ಷೇತ್ರದ ಉದಾರೀಕರಣ ಮತ್ತು ಸ್ವಾಯತ್ತತೆಯ ಹೆಸರಿನಲ್ಲಿ ಖಾಸಗೀಕರಣವನ್ನು ಆಳವಾಗಿ ಬೇರೂರಿಸುವುದಂತೂ ಖಚಿತ.

- Advertisement -
- Advertisement -

ಭಾರತದ ಶಿಕ್ಷಣ ವ್ಯವಸ್ಥೆ ಈವರೆಗೆ ಹೊಂದಿದ್ದ, ದೇಶ ನಿರ್ಮಾತೃಗಳ ಆಶಯವಾಗಿದ್ದ ಬಹುಸಂಖ್ಯಾತ ಜನರಿಗೆ ಸಮಾನ ಅವಕಾಶಗಳನ್ನು ಕೊಡಬೇಕೆಂಬ, ಸಮಾಜವನ್ನು ಹೆಚ್ಚು ಹೆಚ್ಚು ಮಾನವೀಯಗೊಳಿಸಬೇಕೆಂಬ ಮೂಲಭೂತ ತಳಹದಿಯನ್ನೇ ಬದಲಿಸುವಂತಹ ದೃಷ್ಟಿಕೋನವುಳ್ಳ ಹೊಸ ಶಿಕ್ಷಣ ನೀತಿ (2020)ಯನ್ನು ಕ್ಯಾಬಿನೆಟ್ ಅಂಗೀಕರಿಸಿದೆ. ದೇಶನಿರ್ಮಾತೃಗಳ ಆಶಯವು ನಮ್ಮಲ್ಲಿ ಈಗ ಜಾರಿಯಲ್ಲಿದ್ದ ಶಿಕ್ಷಣದ ಪರಿಸ್ಥಿತಿಯಲ್ಲಿ ಎಷ್ಟರ ಮಟ್ಟಿಗೆ ಕಾರ್ಯಗತಗೊಂಡಿತ್ತೆಂಬ ಪ್ರಶ್ನೆ ಇರುವುದು ಸಹಜ. ಆದರೆ ಅದರಲ್ಲಿ, ಉದಾತ್ತ ಆಶಯಗಳು ಜಾರಿಯಾಗುವಲ್ಲಿ ಇರುವ ಕೊರತೆಗಳನ್ನು ನೀಗುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಕ್ಕೆ ಮತ್ತು ಸಮಾನತೆಯೆಡೆಗೆ ಕರೆದೊಯ್ಯುವ ಶಿಕ್ಷಣ ವ್ಯವಸ್ಥೆಗಾಗಿ ಹೋರಾಡುವುದಕ್ಕೆ ಅವಕಾಶವಾದರೂ ಇತ್ತು. ಹೊಸ ಶಿಕ್ಷಣ ನೀತಿಯು ಮೇಲ್ನೋಟಕ್ಕೆ ಬಹಳ ಸವಿಯಾದ ಪದಗುಚ್ಛಗಳನ್ನು ಬಳಸುತ್ತಿರುವಂತೆ ಕಂಡರೂ ಆಂತರ್ಯದಲ್ಲಿ ಈವರೆಗಿದ್ದ ಶಿಕ್ಷಣದ ಮೂಲಭೂತ ಆಶಯವನ್ನೇ ಬುಡಮೇಲು ಮಾಡುವಂತಹ ಅಂಶಗಳನ್ನು ಹೊಂದಿದೆ.

ಇದು, ಬಹಳ ಸೂಕ್ಷ್ಮವಾಗಿ ವಿಶ್ಲೇಷಿಸದ ಹೊರತು ಸುಲಭಕ್ಕೆ ಗೊತ್ತಾಗುವಂತೆಯೂ ಇಲ್ಲ. ಆದ್ದರಿಂದ, ಒಂದು ಬಗೆಯಲ್ಲಿ ಸಿಹಿಯಾದ ಹೊರಕವಚದೊಳಗೆ ವಿಷದ ಗುಳಿಗೆಗಳನ್ನು ನೀಡುವಂತೆ, ಈ ಶಿಕ್ಷಣ ನೀತಿಯು ನಮ್ಮೆದುರು ಬಂದಿದೆಯೆಂದು ಹೇಳಿದರೆ ತಪ್ಪಾಗಲಾರದು. ಇದರ ಆಳ ಅಗಲಗಳ ಬಗ್ಗೆ ಒಂದು ಸ್ಥೂಲನೋಟ ನೀಡುವ ಬರಹವನ್ನು ಕಳೆದೊಂದು ದಶಕದಿಂದ ಭಾರತದಲ್ಲಿ ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಮತ್ತು ಸಮಾನ ಶಿಕ್ಷಣ ನೀತಿಗಾಗಿ ಹೋರಾಡುತ್ತಿರುವ ‘ಅಖಿಲ ಭಾರತ ಶಿಕ್ಷಣ ಹಕ್ಕು ವೇದಿಕೆ’ಯ ಸಂಘಟನಾ ಕಾರ್ಯದರ್ಶಿಗಳೂ ಮತ್ತು ದೆಹಲಿ ವಿಶ್ವವಿದ್ಯಾಲಯದ ಪ್ರಧ್ಯಾಪಕರೂ ಆಗಿರುವ ಡಾ.ವಿಕಾಸ್ ಗುಪ್ತಾರವರು ಬರೆದಿದ್ದಾರೆ.

ಈ ಬರಹದಲ್ಲಿ, ಹೊಸ ಶಿಕ್ಷಣ ನೀತಿ 2020 ಉನ್ನತ ಶಿಕ್ಷಣದ ಮೇಲೆ ಬೀರಲಿರುವ ದುಷ್ಪರಿಣಾಮಗಳು, ಬಂಡವಾಳಶಾಹಿ ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ಅನಿಯಂತ್ರಿತ ಪ್ರವೇಶ, ಬಡ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾಡಲಿರುವ ಹಾನಿ, ಸಮಾಜದ ದುರ್ಬಲ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ಮಾಡಲಿರುವ ಮೋಸ ಇತ್ಯಾದಿಯಾಗಿ ಕೆಲ ವಿಷಯಗಳ ಕುರಿತ ಟಿಪ್ಪಣಿಗಳನ್ನು ಓದುಗರು ಗಮನಿಸಬಹುದು. ಈ ಕುರಿತ ಇನ್ನಷ್ಟು ವಿಸ್ತಾರವಾದ ವಿಶ್ಲೇಷಣೆಗಳನ್ನು ಮುಂದಿನ ಸಂಚಿಕೆಗಳಲ್ಲಿ ನೀಡಲಾಗುವುದು.

ಹೊಸ ಶಿಕ್ಷಣ ನೀತಿ (ಎನ್‍ಇಪಿ 2020)ಯಲ್ಲಿ ಪ್ರಸ್ತಾಪಿಸಲಾಗಿರುವ ‘ಪರಿಪೂರ್ಣ ವ್ಯಕ್ತಿ’ಗಳನ್ನು ರೂಪಿಸುವ ಉದ್ದೇಶಕ್ಕೂ, ಶಾಲಾಪೂರ್ವ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ತನಕ ಕಲಿಕೆಯ ಪ್ರತಿಯೊಂದು ಹಂತದಲ್ಲಿ ‘ಗುರುತಿಸಲ್ಪಟ್ಟ ಕೌಶಲ್ಯ ಮತ್ತು ಮೌಲ್ಯಗಳ’ ಸೇರ್ಪಡೆಗೂ ವಿರೋಧಾಭಾಸವಿದೆ (ಪುಟ 33). ಏಕೆಂದರೆ, ‘ಪರಿಪೂರ್ಣ ವ್ಯಕ್ತಿಗಳನ್ನು’ ರೂಪಿಸುವುದಕ್ಕೆ ಅಗತ್ಯವಿರುವುದು ವ್ಯಕ್ತಿಯ ಆಂತರಿಕ ಸಾಧ್ಯತೆಗಳು ಅರಳುವುದಕ್ಕೆ ಬೇಕಾದ ಸ್ವಾತಂತ್ರ್ಯವೇ ಹೊರತು, ಕೌಶಲ ಮತ್ತು ಮೌಲ್ಯಗಳ ಗುರುತಿಸುವಿಕೆಯಲ್ಲ.

ಇಲ್ಲವಾದಲ್ಲಿ ಕೌಶಲಗಳ ಗುರುತಿಸುವಿಕೆಯು ಮಾರುಕಟ್ಟೆಯಲ್ಲಿ ಮಾರಬಹುದಾದ ದಕ್ಷತೆಗೆ ಪ್ರೋತ್ಸಾಹ ನೀಡುವ ಮೂಲಕ ಶಿಕ್ಷಣದ ಮೂಲ ಅರ್ಥವನ್ನೇ ಸಂಕುಚಿತಗೊಳಿಸಬಹುದು ಮತ್ತು ಮೌಲ್ಯಗಳ ಗುರುತಿಸುವಿಕೆಯು ಆರೆಸ್ಸೆಸ್-ಬಿಜೆಪಿಯ (ಅಥವಾ ಯಾರು ಅಧಿಕಾರದಲ್ಲಿರುತ್ತಾರೋ ಅವರ) ಸಿದ್ಧಾಂತಗಳ ಉಪದೇಶಕ್ಕೆ ಒಂದು ನೆಪವಾಗಬಹುದು. ಇನ್ನೊಂದು ಅರ್ಥದಲ್ಲಿ ಇದು ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಮೊಟಕುಗೊಳಿಸುವುದು. ವಿಶ್ವವಿದ್ಯಾಲಯಗಳು ತಮ್ಮದೇ ಕೋರ್ಸುಗಳನ್ನು ವಿನ್ಯಾಸಗೊಳಿಸುವ ಮತ್ತು ಪರಿಷ್ಕರಿಸುವ ಸಾಧ್ಯತೆಯನ್ನು ಸೀಮಿತಗೊಳಿಸುವ ಸಲುವಾಗಿ ಯುಜಿಸಿಯೇ ಮಾದರಿ ಪಠ್ಯಕ್ರಮವನ್ನು ಸಿದ್ಧಪಡಿಸುವಂತಹ-ಈಗಾಗಲೇ ಆರಂಭಗೊಂಡಿರುವ-ಪರಿಪಾಠವನ್ನು ಇನ್ನಷ್ಟು ಉಲ್ಬಣಗೊಳಿಸಿ, ಅದಕ್ಕೆ ಅಧಿಕೃತ ಮಾನ್ಯತೆಯ ಮುದ್ರೆಯೊತ್ತಬಹುದು.

ಹೊಸ ಶಿಕ್ಷಣ ನೀತಿ 2020, ವಿದ್ವಾಂಸರಿಂದ ಪರಿಶೀಲಿಸಲ್ಪಟ್ಟ ಉನ್ನತಮಟ್ಟದ ಸಂಶೋಧನೆಗೆ ಹಣಕಾಸು ಒದಗಿಸಲು ಮತ್ತು ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಸಕ್ರಿಯವಾಗಿ ಸಂಶೋಧನೆ ಆರಂಭಿಸಲು ‘ರಾಷ್ಟ್ರೀಯ ಸಂಶೋಧನಾ ಪ್ರತಿಷ್ಟಾನ’ (ಎನ್‍ಆರ್‍ಎಫ್)ಕ್ಕೆ ಅವಕಾಶ ಮಾಡಿಕೊಡುತ್ತದೆ. ಇದು ಇಡೀ ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಸಂಶೋಧನೆಗಳನ್ನು ನಿಯಂತ್ರಿಸಲು ಸರಕಾರ ನಡೆಸುತ್ತಿರುವ ಪ್ರಯತ್ನವೆಂಬುದು ಸ್ಪಷ್ಟ. ಉನ್ನತ ಮಟ್ಟದ ಸಂಶೋಧನೆಯ ಮೇಲುಸ್ತುವಾರಿ ನಡೆಸುವುದು ಮತ್ತು ಹಣಕಾಸು ಒದಗಿಸುವುದು ಈ ಹಿಂದೆ ಯುಜಿಸಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಜಂಟಿ ಜವಾಬ್ದಾರಿಯಾಗಿತ್ತು. ಈಗಿನ ಸರ್ಕಾರ ಯುಜಿಸಿಯನ್ನೂ ಕಿತ್ತೆಸೆಯಲು ಹೊರಟಿದೆ. ಇಲ್ಲವಾದಲ್ಲಿ ಸಂಶೋಧನೆಗಳು ಈಗಿರುವಂತೆಯೇ ಉನ್ನತ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿ ಉಳಿಯಬೇಕಿತ್ತು. ರಾಷ್ಟ್ರೀಯ ಸಂಶೋಧನಾ ಪ್ರಾಧಿಕಾರವು ಮತ್ತೊಮ್ಮೆ ಸಾಂಸ್ಥಿಕ ಸ್ವಾಯತ್ತತೆಗೆ ವಿರುದ್ಧವಾದ ದಿಕ್ಕಿನಲ್ಲಿ ಹೋಗುತ್ತಿದೆ ಮತ್ತು ಇದು ಚಿಂತನೆ ಮತ್ತು ಜ್ಞಾನದ ಉತ್ಪಾದನೆಯ ಮಿಲಿಟರೀಕರಣವಾಗುತ್ತದೆ.

ಹೊಸ ಶಿಕ್ಷಣ ನೀತಿ 2020- ‘ಉನ್ನತ ಅರ್ಹತೆಯ ಸ್ವತಂತ್ರ ಮಂಡಳಿ’ಗಳಿಂದ ಉನ್ನತ ಶಿಕ್ಷಣ ಸಂಸ್ಥೆಗಳ ಆಡಳಿತದ ಮೇಲುಸ್ತುವಾರಿ ನಡೆಸುವುದನ್ನು ಪ್ರಸ್ತಾಪಿಸುತ್ತದೆ (ಪುಟ 34). ಇದರ ಅರ್ಥವೆಂದರೆ, ಈಗಿರುವ ಅಧ್ಯಾಪಕರ ಶೈಕ್ಷಣಿಕ ಮಂಡಳಿ (ಅಕಾಡಮಿಕ್ ಕೌನ್ಸಿಲ್) ಮತ್ತು ಶಿಕ್ಷಕರ ಕಾರ್ಯನಿರ್ವಾಹಕ ಮಂಡಳಿ (ಟೀಚರ್ಸ್ ಎಕ್ಸಿಕ್ಯೂಟಿವ್ ಕೌನ್ಸಿಲ್)ಗಳ ಜಾಗದಲ್ಲಿ ಹೊರಗಿನ ಮಾರುಕಟ್ಟೆ ಶಕ್ತಿಗಳು ಹಾಗೂ ಆರೆಸ್ಸೆಸ್‍ನಂತಹ ಆಳುವ ಪಕ್ಷದ ಆಲೋಚನಾ ಕೂಟದ ಸಂಸ್ಥೆಗಳು ಬರುತ್ತವೆ. ಇದು ಈ ಹೊಸ ಶಿಕ್ಷಣ ನೀತಿಯ ಎಲ್ಲ ಘೋಷಣೆಗಳಿಗೆ ವಿರುದ್ಧವಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಪ್ರಯತ್ನದ ಭಾಗವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳನ್ನು ‘ಹಗುರವಾಗಿ ಆದರೆ ಕಠಿಣವಾಗಿ’ ನಿಯಂತ್ರಿಸುವ ಉನ್ನತವಾದ ಒಂದೇ ನಿಯಂತ್ರಣ ಮಂಡಳಿಯನ್ನು ರಚಿಸುವ ಹೊಸ ಶಿಕ್ಷಣ ನೀತಿಯ ಶಿಫಾರಸು ಸ್ವಾಯತ್ತತೆಯನ್ನು ಇನ್ನಷ್ಟು ಮೊಟಕುಗೊಳಿಸುತ್ತದೆ (ಪುಟ 34). ಈ ‘ಹಗುರ’ ಮತ್ತು ‘ಕಠಿಣ’ದ ನಡುವಿನ ಸಮತೋಲನ ಮತ್ತು ವ್ಯತ್ಯಾಸವನ್ನು ಹೇಗೆ ಕಾಯ್ದುಕೊಳಲಾಗುವುದು ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಇದು ಎಲ್ಲಾ ಮಂಜೂರಾತಿಗಳಿಗೆ ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸಿ, ಎಲ್ಲಾ ರೀತಿಯ ನಿಯಂತ್ರಣಗಳನ್ನು ಹೇರುವುದೇ ಹೊರತು ಬೇರೇನಲ್ಲ!

ಉನ್ನತ ಶಿಕ್ಷಣದ ಖಾಸಗೀಕರಣವು ವಿಸ್ತರಿಸುತ್ತಿರುವ ಹೊತ್ತಿನಲ್ಲಿ, ಹೊಸ ಶಿಕ್ಷಣ ನೀತಿಯು ಈ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತಗೊಳಿಸುವ ಉದ್ದೇಶ ಹೊಂದಿದ್ದು, ದುರ್ಬಲ ಮತ್ತು ಕಡೆಗಣಿಸಲ್ಪಟ್ಟ ವರ್ಗಗಳಿಗೆ ಖಾಸಗಿ/ ದಾನಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿ ವೇತನ ನೀಡುವ ಪ್ರಸ್ತಾಪ ಮಾಡುತ್ತದೆ (ಪುಟ 34). ಆದರೆ ಈ ‘ಖಾಸಗಿ’ ಮತ್ತು ‘ದಾನಿ’ ವಿಶ್ವವಿದ್ಯಾಲಯಗಳ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸಲಾಗುವುದು ಎಂಬುದನ್ನು ವ್ಯಾಖ್ಯಾನಿಸದೆಯೇ ಇದನ್ನು ಮಾಡಲಾಗಿದೆಯಲ್ಲದೇ, ಮೊತ್ತಮೊದಲಾಗಿ ದಾನಿ ಸಂಸ್ಥೆಗಳಲ್ಲದೆ ಈ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅವಕಾಶ ನೀಡುತ್ತಿರುವುದಾದರೂ ಏಕೆ ಎಂದು ಅದು ವಿವರಿಸಿಲ್ಲ. ಅದಲ್ಲದೇ, ಈ ರೀತಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಈ ಖಾಸಗಿ/ ದಾನಿ ವಿಶ್ವವಿದ್ಯಾಲಯಗಳು ಒಂದೋ ಈ ಹೊರೆಯನ್ನು ಇತರ ಸಾಮಾನ್ಯ ವಿದ್ಯಾರ್ಥಿಗಳ ಹೆಗಲಿಗೆ ದಾಟಿಸಲಿವೆ ಅಥವಾ ಇದು ಸಾರ್ವಜನಿಕರ ಹಣವನ್ನು ಈ ವಿಶ್ವವಿದ್ಯಾಲಯಗಳಿಗೆ ವರ್ಗಾಯಿಸುವುದಕ್ಕೆ ಒಂದು ದಾರಿಯಾಗಿದೆ.

ಸಾವಿರಾರು ವಿದ್ಯಾರ್ಥಿಗಳನ್ನು ಒಮ್ಮೆಲೇ ನೋಂದಾಯಿಸಿಕೊಳ್ಳುವ ಸಾಮಥ್ರ್ಯವಿರುವ ದೊಡ್ಡಡೊಡ್ಡ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಹಲವು ಜ್ಞಾನಶಿಸ್ತುಗಳನ್ನು ಒಂದೆಡೆ ಕಲಿಸುವ ಗುಚ್ಛಗಳಿಗೆ ಹೊಸ ಶಿಕ್ಷಣ ನೀತಿಯು ಒತ್ತು ನೀಡಿರುವುದಕ್ಕೆ ಕಾರಣ, ಪ್ರಾಚೀನ ಭಾರತೀಯ ವಿಶ್ವವಿದ್ಯಾಲಯಗಳ ಕುರಿತ ತಪ್ಪು ಐತಿಹಾಸಿಕ ಕಲ್ಪನೆ ಮಾತ್ರವಲ್ಲ; ಅದರ ಉದ್ದೇಶವು ಸ್ಪಷ್ಟವಾಗಿಯೇ ದೊಡ್ಡದೊಡ್ಡ ಕಾರ್ಪೋರೇಟ್ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದ ಹೂಡಿಕೆ ಮಾಡಲು ಸಾಧ್ಯವಿರುವ ಕ್ಷೇತ್ರಗಳನ್ನು ನಿರ್ಮಿಸುವುದಾಗಿದೆ. ಇದು ನಿರ್ದಿಷ್ಟವಾದ ಶೈಕ್ಷಣಿಕ ಉದ್ದೇಶಗಳೊಂದಿಗೆ, ವೈವಿಧ್ಯಮಯವಾದ ಐತಿಹಾಸಿಕ ಸಂಘರ್ಷದಿಂದ ಹುಟ್ಟಿಬಂದ ಚಿಕ್ಕ ಪ್ರಮಾಣದ ಉನ್ನತ ಶಿಕ್ಷಣ ಸಂಸ್ಥೆಗಳ ಪರಿಕಲ್ಪನೆಗೆ ವಿರುದ್ಧವಾಗಿದೆ. ‘ಏಕ ವಾಹಿನಿಯ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಾಲಾಂತರದಲ್ಲಿ ಹಂತಹಂತವಾಗಿ ನಿವಾರಿಸಲಾಗುವುದು’ ಎಂಬ ಹೊಸ ಶಿಕ್ಷಣ ನೀತಿಯಲ್ಲಿರುವ ಸಾಲು ಈ ಅಭಿಪ್ರಾಯವನ್ನು ಇನ್ನಷ್ಟು ಪುಷ್ಟೀಕರಿಸುತ್ತದೆ (ಪುಟ 35).

ಶಿಕ್ಷಣ ಸಂಸ್ಥೆಗಳಿಗೆ ಹಂತಹಂತವಾಗಿ ಮಾನ್ಯತೆ ನೀಡುವ ಮತ್ತು ಶ್ರೇಣೀಕೃತ ಮೌಲ್ಯಮಾಪನ ನಡೆಸುವ ‘ಹೊಸ ಶಿಕ್ಷಣ ನೀತಿ’ಯ ಪ್ರಸ್ತಾಪವು, ಸಾಮಾನ್ಯವಾಗಿ ಶ್ರೀಮಂತ ಪ್ರತಿಷ್ಟಿತರ ಕೋಟೆಗಳಾಗಿರುವ ಉತ್ತಮ ಸಾಧನೆಯ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪ್ರತ್ಯೇಕ ವಿಶ್ವವಿದ್ಯಾಲಯಗಳಾಗಿ ಪರಿವರ್ತಿಸಿ, ಉಳಿದ ವಿಶ್ವವಿದ್ಯಾಲಯಗಳಿಗೆ ದುರ್ಬಲ ಕಾಲೇಜುಗಳನ್ನು ಮಾತ್ರ ಉಳಿಸುವ ಮೂಲಕ ಅವು ತಮ್ಮಿಂದ ತಾವಾಗಿಯೇ ಹೆಸರು ಕಳೆದುಕೊಂಡು ಸಾಯುವಂತೆ ಮಾಡುವ ದುಷ್ಟ ಉದ್ದೇಶವನ್ನು ಹೊಂದಿದೆ (ಪುಟ 34-35). ಇದು ಸಾಮಾನ್ಯ ಶ್ರೇಣಿಯ ಸರಕಾರಿ ಶಾಲೆಗಳ ವಿಚಾರದಲ್ಲಿ ಈಗಾಗಲೇ ಸಂಭವಿಸುತ್ತಿದೆ.

ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳೆರಡನ್ನೂ ಅಭಿವೃದ್ಧಿಪಡಿಸುವ ಉದ್ದೇಶಕ್ಕೆ ಬಲವಾದ ಒತ್ತುನೀಡುತ್ತಲೇ, ‘ದೊಡ್ಡ ಸಂಖ್ಯೆಯಲ್ಲಿ ಉನ್ನತ ಮಟ್ಟದ ಸಾರ್ವಜನಿಕ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವ’ ಹೊಸ ಶಿಕ್ಷಣ ನೀತಿಯ ನಿಲುವಿನ (ಪುಟ 35) ಅರ್ಥವೆಂದರೆ, ಕೆಲವು ಉತ್ತಮ ಸಾರ್ವಜನಿಕ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಿ, ಬಹುಸಂಖ್ಯಾತರು ಕಲಿಯುವ ಸಾಮಾನ್ಯ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಅನುದಾನ ಕೊರತೆಯಿಂದ ಇನ್ನಷ್ಟು ಸೊರಗುವಂತೆ ಮಾಡುವುದು. ಇದು ಇಡೀ ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ಹೆಚ್ಚಿಸಲಿದೆ ಮತ್ತು ಸಾರ್ವಜನಿಕ ರಂಗದ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳ ಬಾಗಿಲು ಮುಚ್ಚಿಸಲಿದೆ. ಇದುವೇ ನೀತಿ (ಎನ್‍ಐಟಿಐ) ಆಯೋಗವು ಈಗಾಗಲೇ ಬಣ್ಣಿಸಿರುವ ‘ಉತ್ಪಾದನೆ ಅಳೆಯುವ ವಿಧಾನ’.

ಪರಿಪೂರ್ಣವಾದ, ಬಹುಜ್ಞಾನ ಶಿಸ್ತುಗಳ ಮತ್ತು ಮೌಲ್ಯಯುತ ಶಿಕ್ಷಣದ ಹೆಸರಿನಲ್ಲಿ (ಪುಟ 37, ಅದರಲ್ಲಿ ವಿಭಾಗ 11.8) ಹೊಸ ಶಿಕ್ಷಣ ನೀತಿಯು ಉನ್ನತ ಶಿಕ್ಷಣ ಸಂಸ್ಥೆಗಳ ಅಧ್ಯಯನ ಚಟುವಟಿಕೆಗಳ ಚೌಕಟ್ಟನ್ನು ಖಚಿತಪಡಿಸಲು ಯತ್ನಿಸುತ್ತಿದ್ದು, ಇದು ಅವುಗಳ ನೈಜ ಸ್ವಾಯತ್ತತೆಯನ್ನು ಕಡಿತಗೊಳಿಸುವ ಪ್ರಯತ್ನಕ್ಕೆ ಇನ್ನೊಂದು ಉದಾಹರಣೆಯಾಗಿದೆ. ಒಮ್ಮೆ ಈ ನೀತಿಯು ಸಂಸತ್ತಿನಲ್ಲಿ ಅಂಗೀಕಾರಗೊಂಡು ಸ್ಥಾಪಿತವಾದಲ್ಲಿ, ಅದನ್ನು ಮುಂದೆ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಮೇಲೆ ಕೋರ್ಸುಗಳನ್ನು ಹೇರಲು ಬಳಸಬಹುದು.

ಹೊಸ ಶಿಕ್ಷಣ ನೀತಿಯು ಪ್ರಸ್ತಾಪಿಸಿರುವ ‘ಬಹು ನಿರ್ಗಮನ ವ್ಯವಸ್ಥೆ’ (ಬೇರೆಬೇರೆ ಹಂತಗಳಲ್ಲಿ ಶಿಕ್ಷಣ ನಿಲ್ಲಿಸಲು ಅವಕಾಶಗಳು, ಪುಟ 37)ಯು ಹೊಸ ಶಿಕ್ಷಣ ನೀತಿಯ ಸಮಗ್ರ ಮತ್ತು ಅಗತ್ಯಕ್ಕನುಸಾರ ಶಿಕ್ಷಣ ನೀಡುವ ಘೋಷಿತ ಉದ್ದೇಶಕ್ಕೆ ವ್ಯತಿರಿಕ್ತವಾಗಿದೆ ಹಾಗೂ ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸುವ ಮಕ್ಕಳ ಸಂಖ್ಯೆಯನ್ನು (ಡ್ರಾಪ್ ಔಟ್) ಮುಚ್ಚಿಹಾಕಲು ನಡೆಸಿದ ಪ್ರಯತ್ನವಾಗಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ತಿಗೊಳಿಸಲು ಬೇಕಾಗಿರುವ ಅಗತ್ಯ ಮತ್ತು ಮೂರ್ತವಾದ ವ್ಯವಸ್ಥೆಗಳನ್ನು ಮಾಡುವ ಪ್ರಗತಿಪರ ನಿಲುವಿಗೆ ಬದಲಾಗಿ, ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ವೈಫಲ್ಯಗಳಿಗೆ ಮಾನ್ಯತೆ ಒದಗಿಸುವ ಋಣಾತ್ಮಕ ನಿಲುವನ್ನು ಅನುಸರಿಸಲು ಹೊರಟಿದೆ. ಒಮ್ಮೆ ಉದ್ಯೋಗದ ಪ್ರಪಂಚವನ್ನು ಪ್ರವೇಶಿಸಿದ ಮೇಲೆ ಮತ್ತೆ ಶಿಕ್ಷಣಕ್ಕೆ ಮರಳುವುದು ಮುಖ್ಯವಾಗಿ ಅವಕಾಶವಂಚಿತರು ಮತ್ತು ಮಹಿಳೆಯರಿಗೆ ಕಷ್ಟಸಾಧ್ಯವಾದ ವಿಚಾರ ಎಂಬುದನ್ನು ಈ ನೀತಿಯು ಅರ್ಥಮಾಡಿಕೊಂಡಿಲ್ಲ.

ಸ್ನಾತಕೋತ್ತರ ಪದವಿಯನ್ನು ಒಂದು ವರ್ಷದ ಕಾರ್ಯಕ್ರಮವಾಗಿ ಇಳಿಸಿರುವುದು ಮತ್ತು ಎಂ. ಫಿಲ್ ಪದವಿಯನ್ನು ಸಾರಾಸಗಟಾಗಿ ಕಿತ್ತುಹಾಕುವುದು ಗುಣಮಟ್ಟದ ಸಂಶೋಧನೆಗೆ ಅಗತ್ಯವಾಗಿರುವ ವಿದ್ಯಾರ್ಥಿಗಳ ವಿಷಯ ನಿರ್ಧಿಷ್ಟ ಜ್ಞಾನವನ್ನು ದುರ್ಬಲಗೊಳಿಸಲಿದೆ. ಇದು ಎಲ್ಲಾ ವಿಷಯಗಳಿಗೆ ಹಾನಿ ಉಂಟುಮಾಡುತ್ತದೆಯಾದರೂ, ಕಲೆ ಮತ್ತು ಮಾನವಿಕ ಅಧ್ಯಯನಗಳು ಹೆಚ್ಚು ಬಾಧಿತವಾಗಲಿವೆ.

ಭಾರತದ ‘ವಿಶ್ವಗುರು’ ಸ್ಥಾನವನ್ನು ಮರುಸ್ಥಾಪಿಸುವ ಬಡಬಡಿಕೆ ಮತ್ತು ‘ಮನೆಯಲ್ಲಿಯೇ ಕೈಗೆಟಕುವ ಅಂತರರಾಷ್ಟ್ರೀಯ ಶಿಕ್ಷಣ’ (ಪುಟ 39) ಒದಗಿಸುವ ಭ್ರಾಮಕ ಭರವಸೆಗಳನ್ನು ನೀಡುವ ಮೂಲಕ ಹೊಸ ಶಿಕ್ಷಣ ನೀತಿಯು ವಾಸ್ತವವಾಗಿ ಉನ್ನತ ಶಿಕ್ಷಣದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವ ಡಬ್ಲ್ಯೂಟಿಓ- ಗ್ಯಾಟ್ಸ್ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಿದೆ. ಅದಕ್ಕೆಂದು ‘ಆತ್ಮ ನಿರ್ಭರ ಭಾರತ’ದ ಘೋಷಣೆಯಡಿಲ್ಲಿ ಬಹುತೇಕ ಅನಿಯಂತ್ರಿತವಾದ ವಿದೇಶಿ ವಿಶ್ವವಿದ್ಯಾಲಯಗಳಿಗೆ ಪ್ರವೇಶ ನೀಡುತ್ತದೆ.

ಹೊಸ ಶಿಕ್ಷಣ ನೀತಿಯು ‘ಪ್ರತಿಭಾವಂತರಾದ ಎಸ್ಸಿ, ಎಸ್ಟಿ, ಓಬಿಸಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಇತರ ಗುಂಪುಗಳಿಗೆ ಸೇರಿದ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹಕಗಳನ್ನು ನೀಡುವ ಪ್ರಯತ್ನ ಮಾಡುವ’ ಮಾತನ್ನಾಡುತ್ತದೆ (ಪುಟ 40). ಇದರ ಅರ್ಥವೆಂದರೆ, ಆಯ್ದ ಕೆಲವರು ಮಾತ್ರ ಶಿಕ್ಷಣ ಪಡೆಯಲು ಶಕ್ತರಾಗುವರು ಮತ್ತು ಇಂತಹ ಕ್ರಮಗಳಿಂದ ಶೋಷಿತ ಸಮುದಾಯಗಳ ಬಹುತೇಕ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಹಣಕಾಸು ನೆರವನ್ನು ಹಿಂತೆಯುವ ಮೂಲಕ ಸಂವಿಧಾನದತ್ತವಾದ ಮೀಸಲಾತಿಯನ್ನು ನಿರುಪಯುಕ್ತವನ್ನಾಗಿ ಮಾಡಲಾಗುವುದು.

ಹೊಸ ಶಿಕ್ಷಣ ನೀತಿಯು ‘ಟೆನ್ಯೂರ್ ಟ್ರ್ಯಾಕ್’ ಎಂದರೆ, ‘ಸೂಕ್ತ ಪ್ರೋಬೇಷನ್ ಅವಧಿ’ ಎಂಬ ವ್ಯವಸ್ಥೆಯ ಪ್ರಸ್ತಾಪ ಮಾಡಿದ್ದು, ಇದು ಪ್ರಸ್ತುತ ಇರುವ ನಿರ್ದಿಷ್ಟ ಅವಧಿಯ ಪ್ರೋಬೇಷನ್’ ಪದ್ಧತಿಗೆ ಅಥವಾ ‘ನಿರ್ದಿಷ್ಟ ಅವಧಿಯ ಪರಿವೀಕ್ಷಣಾ ವ್ಯವಸ್ಥೆ’ಗಿಂತ ಭಿನ್ನವಾದುದು. ಇದು, ಈಗಾಗಲೇ ವ್ಯಾಪಕವಾಗಿರುವ ಅಧ್ಯಾಪನ ಹುದ್ದೆಗಳ ಗುತ್ತಿಗೆ ವ್ಯವಸ್ಥೆಗೆ ಇನ್ನಷ್ಟು ಉತ್ತೇಜನ ನೀಡುವುದು. ಈವರೆಗಿನ ಯಾವುದೇ ಶಿಕ್ಷಣ ನೀತಿಯು ಈ ರೀತಿಯಲ್ಲಿ ಗುತ್ತಿಗೆ ವ್ಯವಸ್ಥೆಯನ್ನು ಅಧಿಕೃತವಾಗಿ ದಾಖಲೆಯಲ್ಲಿ ತಂದಿರಲಿಲ್ಲ. ಇದರಿಂದ ಅಧ್ಯಾಪಕರಲ್ಲಿ ಅಸ್ಥಿರತೆ ಹೆಚ್ಚಲು ಕಾರಣವಾಗುವುದು ಮತ್ತು ಇದು ವೈಯಕ್ತಿಕ ಮಾತ್ರವಲ್ಲ, ಕೌಟುಂಬಿಕ ಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವುದು. ಜೊತೆಗೆ, ದೀರ್ಘಕಾಲೀನ ಸಂಶೋಧನಾ ಗುರಿಗಳಿಗೆ ಧಕ್ಕೆ ಉಂಟುಮಾಡುವುದಲ್ಲದೆ, ಅಧ್ಯಾಪಕರು ಅಧಿಕಾರಿಗಳ ಮುಂದೆ ಅನಗತ್ಯವಾಗಿ ತಲೆಬಾಗಿಸಬೇಕಾದ ಗುಲಾಮಿ ಪರಿಸ್ಥಿತಿಯನ್ನು ಉಂಟುಮಾಡುತ್ತದೆ.

ಹೊಸ ಶಿಕ್ಷಣ ನೀತಿಯಲ್ಲಿರುವ ಹಲವು ವಿಭಾಗಗಳು ಸ್ಥಳೀಯ/ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣದ ಬಗ್ಗೆ ಮಾತನಾಡಿರುವುದು ಶ್ಲಾಘನೀಯವಾಗಬಹುದಿತ್ತು. ಆದರೆ, ದುರದೃಷ್ಟವಶಾತ್ ಮಾತೃಭಾಷೆ ಅಥವಾ ಆಯಾ ರಾಜ್ಯದ ಭಾಷೆಯಲ್ಲಿ ಶಿಕ್ಷಣ ನೀಡುವ ಬಗ್ಗೆ ಈ ನೀತಿ ಮುಂದಿಟ್ಟಿರುವ ವಿಚಾರಗಳನ್ನು ಸಮಾಧಾನಕರವೆಂದು ಭಾವಿಸುವುದು ಸಾಧ್ಯವಿಲ್ಲವಾಗಿದೆ. ಏಕೆಂದರೆ, ಎಲ್ಲಿಯೂ ಮಾತೃಭಾಷೆ ಅಥವಾ ರಾಜ್ಯದ ಭಾಷೆಯಲ್ಲಿ ಶಿಕ್ಷಣ ನೀಡುವ ವಿಷಯವನ್ನು ಹೇಗೆ ಜಾರಿಗೊಳಿಸಬೇಕೆಂಬ ಬಗ್ಗೆ ಕಾರ್ಯಸಾಧುವಾದ ಸೂಚನೆಗಳಿಲ್ಲ. ಎಲ್ಲ ಕಡೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ‘ಸಾಧ್ಯವಿರುವಲ್ಲೆಲ್ಲ ಮಾತೃಭಾಷೆ ಅಥವಾ ರಾಜ್ಯದ ಭಾಷೆಯಲ್ಲಿ ಶಿಕ್ಷಣ ನೀಡುವ ಪ್ರಯತ್ನ’ ಮಾಡಬೇಕೆಂದು ಸೂಚಿಸಲಾಗಿದೆಯೇ ಹೊರತು ಅದನ್ನು ನಿರ್ಧಿಷ್ಟಗೊಳಿಸಿಲ್ಲ. ಜೊತೆಗೆ, ವೃತ್ತಿಪರ ಕೋರ್ಸುಗಳಂತಹ ವಿಷಯಗಳಲ್ಲಿ ಈ ವೈವಿಧ್ಯಮಯ ಭಾಷೆಗಳಲ್ಲಿ ಗುಣಮಟ್ಟದ ಓದುವ ಸಾಮಗ್ರಿಗಳನ್ನು ಹೇಗೆ ಒದಗಿಸಲಾಗುವುದು ಎಂಬ ಬಗ್ಗೆ ಯಾವುದೇ ಮೂರ್ತವಾದ ಯೋಜನೆಯ ಪ್ರಸ್ತಾಪ ಮಾಡದೇ ಇರುವುದರಿಂದ, ಇದೊಂದು ಪೇಲವವಾದ ಹುರುಳಿಲ್ಲದ ಭರವಸೆ ಎಂದೇ ಭಾವಿಸಬೇಕಾಗುತ್ತದೆ.

ಬಹಳ ಗಂಭೀರವಾದ ಮತ್ತೊಂದು ವಿಷಯ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ)ಯ ಕುರಿತು ಈ ನೀತಿಯಲ್ಲಿರುವ ಪ್ರಸ್ತಾಪವಾಗಿದೆ (ಎಲ್ಲ ಬಗೆಯ ಜ್ಞಾನಶಿಸ್ತುಗಳಿಗೂ ಸಂಬಂಧಿಸಿದ ರಾಷ್ಟ್ರೀಯ ಮಟ್ಟದ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆ). ಇದು ಸ್ಪಷ್ಟವಾಗಿ ಒಕ್ಕೂಟ ವ್ಯವಸ್ಥೆಯೊಂದರಲ್ಲಿ ರಾಜ್ಯಗಳ ಹಕ್ಕುಗಳ ಉಲ್ಲಂಘನೆಯಾಗಿದೆ ಮಾತ್ರವಲ್ಲ, ಹೊಸ ಶಿಕ್ಷಣ ನೀತಿಯಲ್ಲಿ ಬಳಸಲಾಗಿರುವ ‘ಸ್ವಾಯತ್ತತೆ’ ಎಂಬ ಪದದ ಸಂಕುಚಿತ ಮತ್ತು ವಂಚಕ ಅರ್ಥವನ್ನು ಅನಾವರಣಗೊಳಿಸುತ್ತದೆ.

ಇವೆಲ್ಲವೂ, ಸ್ಪಷ್ಟವಾಗಿಯೇ ನಮ್ಮ ದೇಶದ ಜನಸಾಮಾನ್ಯರ ಆಚರಣೆಗಳು, ಧರ್ಮ, ಪ್ರದೇಶ ಮತ್ತು ಭಾಷಾ ವೈವಿಧ್ಯತೆಯೇ ಮೊದಲಾದ ಬಹುತ್ವಗಳಿಗೆ ಇರಬೇಕಾದ ಮಹತ್ವವನ್ನು ಉಲ್ಲಂಘಿಸುತ್ತಾ, ದೇಶದ ರಾಜಕಾರಣದ ಇನ್ನಿತರ ಆಯಾಮಗಳಲ್ಲಿ ನಾವು ಕಾಣುತ್ತಿರುವ ಕೇಂದ್ರೀಕರಣವನ್ನು ಶಿಕ್ಷಣ ಕ್ಷೇತ್ರದ ಮೇಲೂ ಹೇರುವ ಪ್ರಯತ್ನವೇ ಹೊರತು ಬೇರೇನಲ್ಲ. ಸ್ಥಳೀಯವಾದ ಜ್ಞಾನ ಮತ್ತು ಕೌಶಲ್ಯಗಳ ಸೃಷ್ಟಿಯ ಸಾಧ್ಯತೆಗಳನ್ನೂ, ವಿಕೇಂದ್ರೀಕೃತವಾದ ಕಲಿಕಾ ಪದ್ಧತಿಗಳನ್ನೂ, ತಮ್ಮದೇ ಭಾಷೆಗಳಲ್ಲಿ ಮುಕ್ತವಾಗಿ ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ವಿಚಾರಗಳನ್ನು ಅಭಿವ್ಯಕ್ತಿಸುವ ಸಾಧ್ಯತೆಗಳೆಲ್ಲವನ್ನೂ ಮೊಟಕುಗೊಳಿಸಲಿರುವ ಈ ‘ಹೊಸ ಶಿಕ್ಷಣ ನೀತಿ-2020’, ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಬೀರುವ ದೂರಗಾಮಿ ದುಷ್ಪರಿಣಾಮಗಳು ಬಹುಶಃ ಮೇಲುನೋಟಕ್ಕೆ ಕಾಣದೆ ಹೋಗಬಹುದು. ಆದರೆ, ಅವು ವೇಗವಾಗಿ ಶಿಕ್ಷಣ ಕ್ಷೇತ್ರದ ಉದಾರೀಕರಣ ಮತ್ತು ಸ್ವಾಯತ್ತತೆಯ ಹೆಸರಿನಲ್ಲಿ ಖಾಸಗೀಕರಣವನ್ನು ಆಳವಾಗಿ ಬೇರೂರಿಸುವುದಂತೂ ಖಚಿತ. ಆದರೆ, ಇಷ್ಟೆಲ್ಲ ಅಪಾಯಕಾರಿ ಅಂಶಗಳಿರುವ ಈ ನೀತಿಯನ್ನು ಭಾರತದ ಬಹುತೇಕ ಅಕಾಡೆಮಿಕ್ ರಂಗಗಳ ‘ಬುದ್ಧಿವಂತರು’ ಸ್ವಾಗತಿಸುತ್ತಿರುವುದು ಮಾತ್ರವಲ್ಲ, ಅದರಲ್ಲಿರುವ ಅಸ್ಪಷ್ಟತೆಗಳನ್ನೇ ಮುಂದಿಟ್ಟು ಹಾಡಿಹೊಗಳುತ್ತಾ ವಿದ್ಯಾರ್ಥಿಗಳು, ಪೋಷಕರು ಮತ್ತು ಜನಸಾಮಾನ್ಯರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಈ ಪರಿಸ್ಥಿತಿ ನೋಡಿದಾಗ, ಬಹುಶಃ ಇದರ ಪರಿಣಾಮಗಳನ್ನು ಅರಿಯಲು ಮತ್ತು ಅವುಗಳ ವಿರುದ್ಧ ದನಿಯೆತ್ತಲು ಭಾರತದ ಶಿಕ್ಷಣರಂಗಕ್ಕೆ ಕೆಲವು ವರ್ಷಗಳೇ ಬೇಕಾಗಬಹುದು ಮತ್ತು ಇದು ಈ ಕಾಲಘಟ್ಟದ ದುರಂತ!

  • ಡಾ. ವಿಕಾಸ್ ಗುಪ್ತಾ, ಪ್ರಾಧ್ಯಾಪಕರು, ದೆಹಲಿ ವಿಶ್ವವಿದ್ಯಾಲಯ.

ಅನುವಾದ: ನಿಖಿಲ್ ಕೋಲ್ಪೆ


ಇದನ್ನು ಓದಿ: ಶಾಲಾ ಶುಲ್ಕ ಮನ್ನಾ ಮಾಡುವ ಪಿಐಎಲ್ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಭಾರತದ ಶಿಕ್ಷಣವನ್ನೂ ಬುಡಮೇಲು ಮಾಡುವ ಹುನ್ನಾರ.ಇದು ಇನ್ನೂ ಮೊದಲ ಹೇಜ್ಜೆ.

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...