ವಂಶಾಡಳಿತ ರಾಜಕಾರಣವೇ ಪ್ರಜಾಪ್ರಭುತ್ವದ ಅತಿದೊಡ್ಡ ಶತ್ರು ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಬೇರುಸಮೇತ ಕಿತ್ತು ಹಾಕಲು ಕರೆ ನೀಡಿದ್ದಾರೆ. ಅಲ್ಲದೆ ಇತ್ತೀಚೆಗೆ ಸರ್ ನೇಮ್‌ಗಳ ಆಧಾರದಲ್ಲಿ ಚುನಾವಣೆಯಲ್ಲಿ ಗೆಲ್ಲುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದಿದ್ದಾರೆ.
ಎರಡನೇ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾನತಾಡಿದ ಅವರು “ಯುವಜನರು ರಾಜಕೀಯಕ್ಕೆ ಬರಬೇಕು. ಇಲ್ಲದಿದ್ದಲ್ಲಿ ವಂಶಾಡಳಿತ ರಾಜಕಾರಣ ಎಂಬ ವಿಷ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಎಂದಿದ್ದಾರೆ.
ಇತ್ತೀಚೆಗೆ ಸರ್ ನೇಮ್‌ಗಳ ಆಧಾರದಲ್ಲಿ ಚುನಾವಣೆಯಲ್ಲಿ ಗೆಲ್ಲುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದ್ದರೂ ಸಹ ವಂಶಾಡಳಿತ ರಾಜಕಾರಣ ಕೊನೆಗೊಂಡಿಲ್ಲ. ಇಂದಿಗೂ ತಮ್ಮ ಕುಟುಂಬದ ಹಿತಾಸಕ್ತಿಗಾಗಿ ರಾಜಕೀಯ ಮಾಡುತ್ತಿರುವವರು ಇದ್ದಾರೆ ಎಂದು ಮೋದಿಯವರು ವಿರೋಧ ಪಕ್ಷಗಳನ್ನು ಟೀಕಿಸಿದ್ದಾರೆ.
ವಂಶಾಡಳಿತ ರಾಜಕಾರಣ ಮಾಡುತ್ತಿರುವರು ತಾವು ಮತ್ತು ತಮ್ಮ ಕುಟುಂಬದ ಬಗ್ಗೆಯೇ ಯೋಚಿಸುತ್ತಾರೆ ಹೊರತು ದೇಶ ಮೊದಲು ಎನ್ನುವ ಪರಿಪಾಠ ಅವರಲ್ಲಿಲ್ಲ ಎಂದು ಮೋದಿ ಹೇಳಿದ್ದಾರೆ.
ಎಲ್ಲಾ ಕ್ಷೇತ್ರಗಳಂತೆಯೇ ರಾಜಕೀಯವು ಸಹ ಯುವಜನರನ್ನು ಕೇಳುತ್ತಿದೆ. ಅವರ ಯೋಚನೆ, ಶಕ್ತಿ, ಉತ್ಸಾಹ ದೇಶಕ್ಕೆ ಬೇಕಿದೆ ಎಂದು 70 ವರ್ಷದ ಮೋದಿಯವರು ಹೇಳಿದ್ದಾರೆ.
ಮೋದಿಯವರು ಇಂದಿನ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡೇ ಮಾತನಾಡಿದರು. ಆದರೆ ಮೋದಿಯವರು ವಿರೋಧಿಸುತ್ತಿರುವ ವಂಶಾಡಳಿತ ರಾಜಕಾರಣ ಅವರ ಬಿಜೆಪಿ ಪಕ್ಷದಲ್ಲಿಯೂ ಸಹ ದೊಡ್ಡ ಮಟ್ಟದಲ್ಲಿದೆ. ಗೃಹ ಸಚಿವ ಅಮಿತ್ ಶಾ ಮಗ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿರುವುದು, ಕರ್ನಾಟಕದ ಸಿಎಂ ಮಕ್ಕಳು ಸಕ್ರಿಯ ರಾಜಕಾರಣದಲ್ಲಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ.
ಇದನ್ನೂ ಓದಿ: ಮುಂದಿನ ಆದೇಶದವರೆಗೆ ಮೂರು ಕೃಷಿ ಕಾನೂನುಗಳ ಜಾರಿಯನ್ನು ಸ್ಥಗಿತಗೊಳಿಸುತ್ತೇವೆ: ಸುಪ್ರೀಂ ಕೋರ್ಟ್


