ಕರಾಡ್ ರೈಲ್ವೇ ನಿಲ್ದಾಣದಲ್ಲಿ ತನ್ನನ್ನು ತಪ್ಪಾಗಿ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿ, ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರ ವಿರುದ್ಧ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರು ನವಘರ್ ಮುಲುಂದ್ ಪೂರ್ವ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
ದೂರನ್ನು ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಯ್ಯ, “ಮುಂಬೈ ಪೊಲೀಸರು ತಪ್ಪಾಗಿ ವಶಕ್ಕೆ ಪಡೆದಿದ್ದು, ಕೊಲ್ಹಾಪುರಕ್ಕೆ ಭೇಟಿ ನೀಡುವುದನ್ನು ತಡೆಯಲು ಅಧಿಕಾರದ ದುರ್ಬಳಕೆ ಮಾಡಲಾಗಿದೆ. ಗಣೇಶ ವಿಸರ್ಜನೆಯ ದಿನ ನಾನ ನಿವಾಸದಿಂದ ಹೊರಗೆ ಬರುವುದನ್ನು ತಡೆಯಲಾಯಿತು. ಜೊತೆಗೆ ಕರಡ್ ರೈಲ್ವೇ ನಿಲ್ದಾಣದಲ್ಲಿಯು ನಿಲ್ಲಿಸಲಾಯಿತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಚಾರವಾದಿ ದಾಬೋಲ್ಕರ್ ಹತ್ಯೆ – ಐವರ ವಿರುದ್ದ ದೋಷಾರೋಪ ದಾಖಲಿಸಿದ ಮಹಾರಾಷ್ಟ್ರ ಕೋರ್ಟ್
“ಐಪಿಸಿ ಸೆಕ್ಷನ್ 149, 340, 341, 342 ರ ಅಡಿಯಲ್ಲಿ ಮುಲುಂದ್ ಮತ್ತು ಎಂಆರ್‌ಎ ಮಾರ್ಗ ಪೊಲೀಸ್ ಠಾಣೆಗಳಿಗೆ ಕಾನೂನು ನೋಟಿಸ್ ಸಲ್ಲಿಸಿದ್ದೇನೆ. ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಸರ್ಕಾರ 24 ಗಂಟೆಗಳಲ್ಲಿ ನನ್ನ ಕ್ಷಮೆ ಕೇಳಬೇಕು” ಎಂದು ಅವರು ಹೇಳಿದ್ದಾರೆ.
ಸೋಮಯ್ಯ ಅವರನ್ನು ಸೋಮವಾರ ಮುಂಜಾನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕಾರಾಡ್ ರೈಲ್ವೇ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿತ್ತು. ಅವರು ಸೆಪ್ಟೆಂಬರ್ 20 ರಂದು ಕೊಲ್ಹಾಪುರಕ್ಕೆ ರೈಲಿನ ಮೂಲಕ ಭೇಟಿ ನೀಡಲಿದ್ದಾರೆ ಎಂಬ ನಿರೀಕ್ಷೆಯಿತ್ತು.
ಅವರ ಭೇಟಿಗೆ ಮುಂಚಿತವಾಗಿ, ಕೊಲ್ಹಾಪುರ ಜಿಲ್ಲಾಧಿಕಾರಿಯು ಅವರ ವಿರುದ್ಧ ನಿಷೇಧದ ಆದೇಶಗಳನ್ನು ಹೊರಡಿಸಿದ್ದರು. ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಿ, ಸೆಪ್ಟೆಂಬರ್ 20 ಮತ್ತು 21 ರಂದು ಕೂಟಗಳನ್ನು ನಿಷೇಧಿಸಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ: ಬಾಲಕಿ ಮೇಲೆ ಅತ್ಯಾಚಾರ- ದೂರು ದಾಖಲಿಸಲು ನಿರಾಕರಿಸಿದ ಪೊಲೀಸ್ ಠಾಣೆಗಳು
ಮೈತ್ರಿ ಸರ್ಕಾರದ ಭಾಗವಾಗಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ)ದ ನಾಯಕ, ಮಹಾರಾಷ್ಟ್ರ ಗ್ರಾಮೀಣ ಅಭಿವೃದ್ಧಿ ಸಚಿವ ಹಸನ್ ಮುಶ್ರೀಫ್ ಅವರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ಪ್ರತಿಭಟನೆ ನಡೆಸುವ ಬಗ್ಗೆ ಸೋಮಯ್ಯ ಅವರು ಹೇಳಿಕೊಂಡಿದ್ದರು.
ಇಷ್ಟೇ ಅಲ್ಲದೆ ಸೋಮಯ್ಯ ಅವರು ಮಹಾರಾಷ್ಟ್ರದ ಕ್ಯಾಬಿನೆಟ್ ಮಂತ್ರಿಗಳಾದ ಚಗನ್ ಭುಜ್ಬಲ್ ಮತ್ತು ಅನಿಲ್ ಪರಬ್ ವಿರುದ್ಧ ಹಣ ವರ್ಗಾವಣೆ ಆರೋಪವನ್ನು ಹೊರಿಸಿದ್ದರು.
ಸೋಮಯ್ಯ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮುಶ್ರೀಫ್ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದು, ಕಿರಿತ್ ಸೋಮಯ್ಯ ಮಾಡಿರುವ ಆರೋಪವು ಬಿಜೆಪಿಯ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ BJP ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು: ಬಿಜೆಪಿ -ಶಿವಸೇನೆ ನಡುವೆ ವಾಕ್ಸಮರ


