Homeಮುಖಪುಟಪೆಗಾಸಸ್ ಹಗರಣ ತನಿಖೆಗೆ ಸಮಿತಿ ರಚನೆ: ಸುಪ್ರೀಂ ಹೇಳಿಕೆ

ಪೆಗಾಸಸ್ ಹಗರಣ ತನಿಖೆಗೆ ಸಮಿತಿ ರಚನೆ: ಸುಪ್ರೀಂ ಹೇಳಿಕೆ

- Advertisement -
- Advertisement -

ದೇಶಾದ್ಯಂತ ಭಾರೀ ಟೀಕೆಗಳಿಗೆ ಕಾರಣವಾಗಿದ್ದ ಪೆಗಾಸಸ್ ಹಗರಣದ ಕುರಿತು ತನಿಖೆ ನಡೆಸಲು ಸಮಿತಿ ರಚಿಸುವುದಾಗಿ ಸುಪ್ರೀಂ ಹೇಳಿದೆ. ಈ ವಿಚಾರದ ಕುರಿತು ಒಂದು ವಾರದಲ್ಲಿ ಔಪಚಾರಿಕ ಆದೇಶ ಹೊರಬೀಳಬಹುದು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣರವರು ಈ ವಿಷಯ ಬಹಿರಂಗಪಡಿಸಿದ್ದಾರೆ. “ಕಳೆದ ವಾರವೇ ಪೆಗಾಸಸ್ ತನಿಖಾ ಸಮಿತಿ ಕುರಿತು ಆದೇಶ ಹೊರಡಿಸಲು ಬಯಸಿದ್ದೆವು. ಆದರೆ ನಾವು ಪರಿಗಣಿಸಿದ್ದ ಕೆಲವು ಸದಸ್ಯರು ವೈಯಕ್ತಿಕ ಕಾರಣಗಳಿಂದಾಗಿ ಈ ಸಮಿತಿಯ ಭಾಗವಾಗಿರಲು ನಿರಾಕರಿಸಿದರು. ಆದ್ದರಿಂದ ವಿಳಂಬವಾಗಿದೆ. ನಾವು ಮುಂದಿನ ವಾರ ಆದೇಶ ರವಾನಿಸಲು ಪ್ರಯತ್ನಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಪೆಗಾಸಸ್ ಗೂಢಚಾರ ಹಗರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಸುಪ್ರಿಂಕೊರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ವಿವರವಾದ ಅಫಿಡವಿಟ್‌ಗಳನ್ನು ಸಲ್ಲಿಸುವುದಿಲ್ಲ ಎಂದು ಒಕ್ಕೂಟ ಸರ್ಕಾರ ಸೆಪ್ಟಂಬರ್ 13 ರಂದು ಹೇಳಿದೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸುಪ್ರೀಂ “ಕಳೆದ ಬಾರಿಯೂ ರಾಷ್ಟ್ರೀಯ ಭದ್ರತೆ ಕುರಿತು ಹೇಳಲಾಯಿತು… ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ವೈಯಕ್ತಿಕ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆಯೆ ಎಂದು ನಾವು ನಿಮ್ಮನ್ನು ಕೇಳಿದ್ದೇವೆ … ಹಾಗಾಗಿ ಅದು ಅಧಿಕೃತವಾಗಿದೆಯೇ ಎಂದು ನಿಮ್ಮ ಅಫಿಡವಿಟ್ ಸಲ್ಲಿಸಿ” ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದರು.

ಇದಕ್ಕೂ ಮೊದಲು ಒಕ್ಕೂಟ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ಆದರೆ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವಂತಹ ಯಾವುದೇ ವಿಷಯವನ್ನು ಸರ್ಕಾರ ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿತ್ತು. ಈಗ ತನಿಖೆಗೆ ಸಮಿತಿ ರಚನೆ ಮಾಡಲು ಹೊರಟಿದೆ.

ಪೆಗಾಸಸ್‌‌ ಗೂಢಚಾರ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ಸೇರಿದಂತೆ ಹಲವು ಅರ್ಜಿಗಳನ್ನು ನ್ಯಾಯಾಲಯವು ಒಂದು ಬ್ಯಾಚ್‌‌‌ನಡಿ ವಿಚಾರಣೆ ನಡೆಸುತ್ತಿದೆ.

ಇಸ್ರೇಲ್ ಮೂಲದ NSO ಸಂಸ್ಥೆಯ ಗೂಢಚಾರ ತಂತ್ರಾಂಶವಾದ ಪೆಗಾಸಸ್ ಅನ್ನು ಬಳಸಿಕೊಂಡು ಭಾರತದ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರ ಮೇಲೆ ಗೂಢಚಾರ ಮಾಡಿದ ಬಗ್ಗೆ ಕೆಲ ತಿಂಗಳಿಂದ ವಿವಾದವೆದ್ದಿದೆ.

ಪೆಗಾಸಸ್ ಬಳಸಿ ಕಣ್ಗಾವಲು ಮಾಡುವ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ 300 ಕ್ಕೂ ಹೆಚ್ಚು ಭಾರತೀಯ ಮೊಬೈಲ್ ಫೋನ್ ಸಂಖ್ಯೆಗಳಿವೆ ಎಂದು ಅಂತರಾಷ್ಟ್ರೀಯ ಮಾಧ್ಯಮ ಒಕ್ಕೂಟ ತನ್ನ ವರದಿಯಲ್ಲಿ ಹೇಳಿತ್ತು. ಭಾರತದ ದಿ ವೈರ್ ಈ ಕುರಿತು ವಿವರವಾದ ತನಿಖಾ ವರದಿಗಳನ್ನು ಪ್ರಕಟಿಸಿತ್ತು.


ಇದನ್ನೂ ಓದಿ: ಪೆಗಾಸಸ್ ಗೂಢಚರ್ಯೆ ಸಮಸ್ಯೆಯಲ್ಲ: ವಿವಾದಿತ ಹೇಳಿಕೆ ನೀಡಿದ ಕೇಂದ್ರ ಸಚಿವ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...