ಗಡಿ ಬಿಕ್ಕಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗಳೇ ಕಾರಣವಾಗಿದೆ. ಇಂತಹ ಗಡಿಬಿಕ್ಕಟ್ಟನ್ನು ಕೇಂದ್ರ ಸರ್ಕಾರ ದುರುಪಯೋಗಮಾಡಿಕೊಂಡಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಅವರು ಗಡಿ ಬಿಕ್ಕಟ್ಟಿಗೆ ಮೋದಿ ಸರ್ಕಾರದ ನೀತಿಗಳೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶ ಆರ್ಥಿಕ ಬಿಕ್ಕಟ್ಟಿನಿಂದ ಮತ್ತು ಬೃಹತ್ ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲೇ ಚೀನಾ-ಭಾರತದ ಗಡಿಯಲ್ಲಿ ಪೂರ್ಣ ಪ್ರಮಾಣದ ಬಿಕ್ಕಟ್ಟು ಉದ್ಭವಿಸಿದೆ ಎಂದಿದ್ದಾರೆ.
ಪ್ರತಿ ಬಿಕ್ಕಟ್ಟಿನ ಸಂದರ್ಭದಲ್ಲೂ ಸರ್ಕಾರ ಬಹುಪಾಲು ದುಡುಪಯೋಗಪಡಿಸಿಕೊಂಡಿದೆ. ಎನ್.ಡಿ.ಎ ಸರ್ಕಾರ ಅನುಸರಿಸುತ್ತಿರುವ ತಪ್ಪು ನೀತಿಗಳಿಂದಾಗಿ ಇಂತಹ ಬಿಕ್ಕಟ್ಟು ಉದ್ಭವಿಸಿದೆ ಎಂದು ಟೀಕಿಸಿದ್ದಾರೆ.
ಪ್ರಸ್ತುತ ಬಿಕ್ಕಟ್ಟು ಎನ್.ಡಿ.ಎ ಸರ್ಕಾರದ ಅಸಮರ್ಪಕ ನೀತಿಗಳು ಮತ್ತು ಅಸಮರ್ಪಕ ನಿರ್ವಹಣೆಗೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದ್ದರೂ ಭಾರತದಲ್ಲಿ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 17ದಿನಗಳಿಂದಲೂ ನಿರಂತರವಾಗಿ ಹೆಚ್ಚಿಸಿಕೊಂಡು ಬರುತ್ತಿದೆ. ಇದು ಕರುಣೆಯಿಲ್ಲದ ಸರ್ಕಾರ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮಾತನಾಡಿ ಚೀನಾ-ಭಾರತದ ವಾಸ್ತವ ನಿಯಂತ್ರಣ ರೇಖೆಯ ಗಡಿಯಲ್ಲಿ ಬಿಕ್ಕಟ್ಟು ಇದ್ದರೆ ಅದು ಗಂಭೀರ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾದೊಂದಿಗೆ ನಾವು ಪೂರ್ಣಪ್ರಮಾಣದ ಬಿಕ್ಕಟ್ಟನ್ನು ಹೊಂದಿದ್ದೇವೆ. ಭವಿಷ್ಯವು ಇನ್ನು ತೆರೆದುಕೊಳ್ಳಬೇಕಾಗಿಲ್ಲ. ಆದರೆ ಪ್ರಬುದ್ದ ರಾಜತಾಂತ್ರಿಕತೆ ಮತ್ತು ನಿರ್ಣಾಯಕ ನಾಯಕತ್ವವು ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವಲ್ಲಿ ಸರ್ಕಾರದ ಕ್ರಮಗಳನ್ನು ತಿಳಿಸುತ್ತದೆ ಎಂದು ನಾವು ಬಾವಿಸುತ್ತೇವೆ ಎಂಬ ಸೋನಿಯಾ ಗಾಂಧಿ ಅವರ ಹೇಳಿಕೆಯನ್ನು ಅನುಮೋದಿಸಿದ್ದಾರೆ.
ಇದನ್ನೂ ಓದಿ: ಸುದೀರ್ಘ 11 ಗಂಟೆ ಸಭೆ ನಡೆಸಿದ ಇಂಡೋ-ಚೀನಾ ಲೆಫ್ಟಿನೆಂಟ್ ಕಮಾಂಡರ್‌ಗಳು


