ಬಾಬಾ ರಾಮದೇವ್ ಅಲೋಪಥಿ ನಿಂದನೆ ವಿವಾದದಲ್ಲಿ ಕೇವಲ ಸ್ಪಷ್ಟೀಕರಣ ನೀಡಿದರೆ ಸಾಲದು, ‘ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಆಧುನಿಕ ವೈದ್ಯಕೀಯ ಚಿಕಿತ್ಸೆಗಳಿಂದ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ’ ಎಂಬ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ..
‘ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಅಲೋಪಥಿಕ್ ಔಷಧಿಗಳಿಂದಾಗಿ ಲಕ್ಷಾಂತರ ಜನರು ಸತ್ತರು” ಎಂದು ರಾಮದೇವ್ ಇತ್ತೀಚಿನ ವೀಡಿಯೊವೊಂದರಲ್ಲಿ ಹೇಳಿದ್ದು, ಭಾರತೀಯ ವೈದ್ಯಕೀಯ ಸಂಸ್ಥೆ ಇದನ್ನು ಕಟುವಾಗಿ ಟೀಕಿಸಿ, ರಾಮದೇವ್ ಅವರಿಗೆ ನೋಟಿಸ್ ನೀಡಿದೆ. ಸಾಂಕ್ರಾಮಿಕ ಕಾಯ್ದೆ ಅಡಿ ಅವರ ಮೇಲೆ ಪ್ರಕರಣ ದಾಖಲಿಸಲು ಐಎಂಎ ಸರ್ಕಾರಕ್ಕೆ ಮನವಿ ಮಾಡಿದೆ. ನೂರಾರು ಜನರು ಸಾಮಾಜಿಕ ಜಾಲತಾಣದಲ್ಲಿ ರಾಮದೇವ್ ಬಂಧನಕ್ಕೆ ಆಗ್ರಹಿಸಿದ್ದಾರೆ.
‘ಅಲೋಪತಿ ಔಷಧಿಗಳ ಬಗ್ಗೆ ನಿಮ್ಮ ಹೇಳಿಕೆಯಿಂದ ದೇಶದ ಜನರು ತುಂಬಾ ನೊಂದಿದ್ದಾರೆ. ಈ ಭಾವನೆಯ ಬಗ್ಗೆ ನಾನು ಈಗಾಗಲೇ ದೂರವಾಣಿಯಲ್ಲಿ ಹೇಳಿದ್ದೇನೆ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ದೇಶದ ಜನರಿಗೆ ದೇವರಂತೆ ಇದ್ದಾರೆ, ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ’ ಎಂದು ಡಾ.ವರ್ಧನ್ ಬರೆದ ಎರಡು ಪುಟಗಳ ಪತ್ರದಲ್ಲಿ ಹೇಳಿದ್ದಾರೆ.
“ನೀವು ಕೊರೋನಾ ಯೋಧರನ್ನಷ್ಟೇ ಅವಮಾನಿಸಿಲ್ಲ, ಆದರೆ ದೇಶದ ಜನರ ಭಾವನೆಗಳನ್ನು ನೋಯಿಸಿದ್ದೀರಿ. ನಿನ್ನೆ ನಿಮ್ಮ ಸ್ಪಷ್ಟೀಕರಣವು ಅದನ್ನು ನಿಭಾಯಿಸಲು ಸಾಕಾಗುವುದಿಲ್ಲ … ನೀವು ಅದರ ಬಗ್ಗೆ ಗಂಭೀರವಾಗಿ ಯೋಚಿಸುತ್ತೀರಿ ಮತ್ತು ನಿಮ್ಮ ಹೇಳಿಕೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಆರೋಗ್ಯ ಸಚಿವರು ಬರೆದಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಲೀಗಲ್ ನೋಟಿಸ್ ನೀಡಿ, ಸಾಂಕ್ರಾಮಿಕ ಸಮಯದಲ್ಲಿ ಜೀವ ಉಳಿಸಲು ಶ್ರಮಿಸುತ್ತಿರುವಾಗ ಅಲೋಪತಿ ಮತ್ತು ಆಧುನಿಕ ವೈದ್ಯವಿಜ್ಞಾನ ಪ್ರಾಕ್ಟೀಸ್ ಮಾಡುವವರ ಪ್ರತಿಷ್ಠೆಗೆ ಹಾನಿ ಮಾಡಿದ ರಾಮದೇವ್ ತಮ್ಮ ಹೇಳಿಕೆಗೆ ಲಿಖಿತ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟ ವೀಡಿಯೊವೊಂದರಲ್ಲಿ, ರಾಮದೇವ್ ಅವರು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, “ಅಲೋಪತಿ ಔಷಧಿಗಳಿಂದಾಗಿ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ, ಚಿಕಿತ್ಸೆ ಅಥವಾ ಆಮ್ಲಜನಕವನ್ನು ಪಡೆಯದ ಕಾರಣ ಮರಣ ಹೊಂದಿದವರಿಗಿಂತ ಇದು ಹೆಚ್ಚು” ಎಂದು ಹೇಳುತ್ತ, ಅಲೋಪತಿಯನ್ನು “ಅವಿವೇಕಿ ಮತ್ತು ದಿವಾಳಿಯಾದ” ವಿಜ್ಞಾನ ಎಂದೂ ಕರೆಯುತ್ತಾರೆ.
(ವೀಡಿಯೊದ ಸತ್ಯಾಸತ್ಯತೆಯನ್ನು ಎನ್‌ಡಿಟಿವಿ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ)
ಈ ಹೇಳಿಕೆಯಿಂದ ಹಿನ್ನಡೆ ಎದುರಿಸುತ್ತಿರುವ ರಾಮ್‌ದೇವ್ ಅವರ ಪತಂಜಲಿ ಗುಂಪು, ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ಹೇಳಿಕೆಯನ್ನು “ಸಂದರ್ಭದಿಂದ ಬೇರ್ಪಡಿಸಲಾಗಿದೆ” ಎಂದು ಹೇಳಿದೆ. ರಾಮದೇವ್ ಅವರಿಗೆ ಆಧುನಿಕ ವಿಜ್ಞಾನದ ವೈದ್ಯರ ವಿರುದ್ಧ ಯಾವುದೇ ಕೆಟ್ಟ ಅಭಿಪ್ರಾಯವಿಲ್ಲ’ ಎಂದು ಅದು ಹೇಳಿದೆ.
“ಈ ಘಟನೆಯು ಖಾಸಗಿ ಕಾರ್ಯಕಮವಾಗಿತ್ತು. ರಾಮದೇವ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸದಸ್ಯರು ಫಾರ್ವರ್ಡ್ ಮಾಡಿದ ವಾಟ್ಸಾಪ್ ಸಂದೇಶವನ್ನು ಓದುತ್ತಿದ್ದರು … ಅವರ ವಿರುದ್ಧ ಏನು ಆರೋಪಿಸಲಾಗುತ್ತಿದೆ ಎಂಬುದು ಸುಳ್ಳು’ ಎಂದು ಪತಂಜಲಿ ಹೇಳಿದೆ.
3.5 ಲಕ್ಷ ವೈದ್ಯರನ್ನು ಪ್ರತಿನಿಧಿಸುವ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಜೊತೆಗೆ, ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಶನ್ (ಫೈಮಾ) ಕೂಡ ರಾಮದೇವ್ ಅವರಿಗೆ ಲೀಗಲ್ ನೋಟಿಸ್ ನೀಡಿದೆ.
ಐಎಂಎ, ಮಾಧ್ಯಮ ಹೇಳಿಕೆಯಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು.
ರಾಮದೇವ್ ಅವರು ಈಹಿಂದೆ ಕೊರೊನಿಲ್ ಬಿಡುಗಡೆ ಸಂದರ್ಭದಲ್ಲಿ ಸ್ವತಃ ವೈದ್ಯರೂ ಆಗಿರುವ ಆರೋಗ್ಯ ಸಚಿವರ ಸಮ್ಮುಖದಲ್ಲೇ ವೈದ್ಯರನ್ನು “ಕೊಲೆಗಾರರು” ಎಂದು ಕರೆದಿದ್ದರು ಎಂದು ಆರೋಪಿಸಲಾಗಿದೆ.
ಆಡಳಿತಾರೂಢ ಬಿಜೆಪಿ ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿರುವ ರಾಮ್‌ದೇವ್ ಈ ಹಿಂದಿನ ಸಾಂಕ್ರಾಮಿಕ ಸಮಯದಲ್ಲಿ ವಿವಾದವನ್ನು ಎದುರಿಸಿದ್ದಾರೆ. ಆರೋಗ್ಯ ಸಚಿವ ಹರ್ಷ್ ವರ್ಧನ್ ಮತ್ತು ಅವರ ಸಹೋದ್ಯೋಗಿ ನಿತಿನ್ ಗಡ್ಕರಿ ‘ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣೀಕೃತ ಔಷಧಿಗಳು’ ಎಂದಿದ್ದ ಪತಂಜಲಿಯ ಔಷಧಿಗಳನ್ನು ಬಿಡುಗಡೆ ಮಾಡಿದ್ದರು..
ವಿಶ್ವ ಆರೋಗ್ಯ ಸಂಸ್ಥೆ ‘ಕೋವಿಡ್ ಚಿಕಿತ್ಸೆಗೆ ಯಾವುದೇ ಸಾಂಪ್ರದಾಯಿಕ ಔಷಧದ ಪರಿಣಾಮಕಾರಿತ್ವವನ್ನು ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ” ಎಂದು ಸ್ಪಷ್ಟೀಕರಣವನ್ನು ನೀಡಿತ್ತು.
ಸಾಂಕ್ರಾಮಿಕ ರೋಗದ ಎರಡನೇ ಅಲೆಯ ವಿರುದ್ಧ ಹೋರಾಡುತ್ತಾ 420 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಐಎಂಎ ಹೇಳಿದ ಒಂದು ದಿನದ ನಂತರ ರಾಮದೇವ್ ಅವರ ಇತ್ತೀಚಿನ ಹೇಳಿಕೆ ಬಂದಿದೆ. ಕಳೆದ ವರ್ಷ ಬಿಕ್ಕಟ್ಟಿನ ಆರಂಭದಿಂದೀಚೆಗೆ 1,200 ಕ್ಕಿಂತಲೂ ಹೆಚ್ಚು ವೈದ್ಯ ಸಿಬ್ಬಂದಿ ಮೃತರಾಗಿದ್ದಾರೆ.
ಇದನ್ನೂ ಓದಿ: ಅಲೋಪತಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಾಬಾ ರಾಮದೇವ್‌ಗೆ ಲೀಗಲ್ ನೋಟಿಸ್ – ಬಂಧನಕ್ಕೆ ಒತ್ತಾಯ


