ಅಧಿಕಾರ ಕೇಂದ್ರದಲ್ಲಿ ಹುಟ್ಟಿದ್ದರೂ ಅಧಿಕಾರಕ್ಕಾಗಿ ಯಾವುದೇ ದುರಾಸೆ ಇಲ್ಲ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂವಿಧಾನಿಕ ಸಂಸ್ಥೆಗಳನ್ನು ಆರ್‌ಎಸ್‌ಎಸ್ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ ಕೆ.ರಾಜು ಸಂಪಾದಿಸಿರುವ ಪ್ರಬಂಧಗಳ ಸಂಗ್ರಹವನ್ನು ಜವಾಹರ ಭವನದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಅಧಿಕಾರದ ಹುಡುಕಾಟದಲ್ಲಿ ನಿರಂತರವಾಗಿ ಇರುವ ರಾಜಕಾರಣಿಗಳಿದ್ದಾರೆ. ನಾನು ಅಧಿಕಾರದ ಕೇಂದ್ರದಲ್ಲಿ ಹುಟ್ಟಿದ್ದೇನೆ. ಆದರೆ ಅದರ ಮೇಲೆ ನನಗೆ ಆಸಕ್ತಿಯಿಲ್ಲ. ನಾನು ಜನರನ್ನು ಮತ್ತು ದೇಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಈ ಪ್ರಕ್ರಿಯೆಯಲ್ಲಿ ಅಸ್ಪೃಶ್ಯತೆ ಇನ್ನೂ ಅಸ್ತಿತ್ವದಲ್ಲಿ ಇರುವ ವಿಶ್ವದ ಏಕೈಕ ದೇಶ ಭಾರತ ಎಂದು ನಾನು ತಿಳಿದುಕೊಂಡಿದ್ದೇನೆ” ಎಂದು ವಿಷಾದಿಸಿದ್ದಾರೆ.
ಜನರಿಂದ ಸಿಗುತ್ತಿರುವ ನಿರಂತರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ ರಾಹುಲ್ ಗಾಂಧಿ, “ನನ್ನ ದೇಶವು ನನ್ನನ್ನು ಬೇಷರತ್ತಾಗಿ ಪ್ರೀತಿಸಿದೆ. ಅದಕ್ಕಾಗಿ ನಾನು ಶಾಶ್ವತವಾಗಿ ಋಣಿಯಾಗಿದ್ದೇನೆ” ಎಂದಿದ್ದಾರೆ.
ಜನರು ಒಂದು ನಿರ್ದಿಷ್ಟ ಜಾತಿ ಅಥವಾ ಧರ್ಮಕ್ಕೆ ಸೇರಿದವರಾಗಿರುವುದರಿಂದ ಮಾತ್ರ ಗುರಿಯಾಗುತ್ತಿರುವ ಬಗ್ಗೆ ಮಾತನಾಡಿದ ಅವರು, “ಬೇರೆ ಜಾತಿ ಅಥವಾ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಮುಗ್ಧ ಜನರ ಮೇಲೆ ಹಲ್ಲೆ ಮಾಡಿದ ಸಂದರ್ಭಗಳನ್ನು ನಾನು ನೋಡಿದ್ದೇನೆ. ದೇಶದಲ್ಲಿ ದಲಿತರಿಗೆ ಈ ಅನ್ಯಾಯವಾಗುತ್ತಿದೆ” ಎಂದಿದ್ದಾರೆ.
ಸಂವಿಧಾನವು ಒಂದು ಅಸ್ತ್ರವಾಗಿದೆ. ಆದರೆ ಸಂಸ್ಥೆಗಳಿಲ್ಲದೆ ಅದು ಅರ್ಥಹೀನವಾಗಿದೆ ಎಂದಿರುವ ರಾಹುಲ್ ಗಾಂಧಿ, “ಸಂಸ್ಥೆಗಳನ್ನು ಆರ್‌ಎಸ್‌ಎಸ್ ವಶಪಡಿಸಿಕೊಂಡಿದೆ” ಎಂದು ದೂರಿದ್ದಾರೆ.
ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಉತ್ತರ ಪ್ರದೇಶ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವ ಕಾಂಗ್ರೆಸ್ ಪ್ರಸ್ತಾಪಕ್ಕೆ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರು ತೋರಿಸಿದ ಹಾದಿಯಲ್ಲಿ ದಲಿತರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಎಚ್ಚರಿಸಿರುವ ಅವರು, “ಸಂವಿಧಾನವು ಭಾರತದ ಅಸ್ತ್ರವಾಗಿದೆ. ಆದರೆ ಸಂಸ್ಥೆಗಳಿಲ್ಲದಿದ್ದರೆ ಸಂವಿಧಾನಕ್ಕೆ ಅರ್ಥವಿಲ್ಲ. ನಾವು ಸಂವಿಧಾನವನ್ನು ರಕ್ಷಿಸುವ ಬಗ್ಗೆ ಮಾತನಾಡುತ್ತೇವೆ. ಆದರೆ ಸಂವಿಧಾನವನ್ನು ಸಂಸ್ಥೆಗಳ ಜೊತೆಯಲ್ಲಿ ಹೇಗೆ ಜಾರಿಗೆ ತರಲಾಗುತ್ತದೆ? ಎಲ್ಲಾ ಸಂಸ್ಥೆಗಳು ಆರ್‌ಎಸ್‌ಎಸ್ ಕೈಯಲ್ಲಿವೆ” ಎಂದಿದ್ದಾರೆ.
“ಇದು ಹೊಸ ದಾಳಿಯಲ್ಲ, ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ ದಿನದಿಂದಲೂ ಪ್ರಾರಂಭವಾಯಿತು” ಎಂದು ತಿಳಿಸಿದ್ದಾರೆ.
“ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಜನರಿಗೆ ಅಸ್ತ್ರವನ್ನು ನೀಡಿದರು. ಆದರೆ ಇಂದು ಆ ಅಸ್ತ್ರಕ್ಕೆ ಅರ್ಥವಿಲ್ಲ. ಏಕೆಂದರೆ ಮಾಧ್ಯಮಗಳನ್ನು ನಿಯಂತ್ರಿಸಲಾಗುತ್ತಿದೆ. ರಾಜಕೀಯ ನಾಯಕರನ್ನು ನಿಯಂತ್ರಿಸಲು ಸ್ಪೈವೇರ್ (ಪೆಗಾಸಸ್) ಬಳಸಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಅವರು ಯಾವುದೇ ಹಣವನ್ನು ತೆಗೆದುಕೊಂಡಿದ್ದರೆ ಸರ್ಕಾರದ ವಿರುದ್ಧ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಸಿಬಿಐ ಮತ್ತು ಇಡಿ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುತ್ತವೆ ಎಂದು ಹೇಳಿದ್ದಾರೆ.
ಮಾಯಾವತಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಮೈತ್ರಿ ಮಾಡಿಕೊಳ್ಳುವಂತೆ ಸಂದೇಶ ಕಳುಹಿಸಿ ಮುಖ್ಯಮಂತ್ರಿಯಾಗುವಂತೆ ಹೇಳಿದ್ದೆವು, ಅವರು ನಮ್ಮೊಂದಿಗೆ ಮಾತನಾಡಲಿಲ್ಲ” ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ದಲಿತ ಧ್ವನಿಯನ್ನು ಉಚ್ಚರಿಸಿದ್ದಕ್ಕಾಗಿ ಕಾನ್ಶಿರಾಮ್ ಅವರ ಬಗ್ಗೆ ನನಗೆ ಗೌರವವಿದೆ ಎಂದು ಹೇಳಿದ ರಾಹುಲ್ ಗಾಂಧಿ, “ಇದರಿಂದಾಗಿ ಕಾಂಗ್ರೆಸ್ ನಷ್ಟವನ್ನು ಅನುಭವಿಸಿತು. ಮಾಯಾವತಿ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸ್ಪಷ್ಟ ಮಾರ್ಗವನ್ನು ತೋರಿದರು. ಅದಕ್ಕೆ ಕಾರಣ- ಸಿಬಿಐ, ಇಡಿ ಮತ್ತು ಪೆಗಾಸಸ್” ಎಂದು ದೂರಿದ್ದಾರೆ.
ಕೆ.ರಾಜು ಅವರು ತಮ್ಮ ಹೊಸ ಪುಸ್ತಕ “ದ ದಲಿತ್ ಟ್ರುತ್: ದಿ ಬ್ಯಾಟಲ್ ಫಾರ್ ರಿಯಲೈಸಿಂಗ್ ಅಂಬೇಡ್ಕರ್’ಸ್ ವಿಷನ್”ನಲ್ಲಿ ದಲಿತರ ಧ್ವನಿಯನ್ನು ಚಿತ್ರಿಸಲು ಪ್ರಯತ್ನಿಸಿದ್ದಾರೆ. ಇದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದ ‘ರೀಥಿಂಕಿಂಗ್ ಇಂಡಿಯಾ’ ಸರಣಿಯ ಎಂಟನೇ ಸಂಪುಟವಾಗಿದೆ.
ಇದನ್ನೂ ಓದಿರಿ: ವಿಮಾನಗಳಲ್ಲಿ ಮಾಂಸಾಹಾರ ನಿಷೇಧಿಸುವಂತೆ ಒಕ್ಕೂಟ ಸರ್ಕಾರಕ್ಕೆ ಪತ್ರ


