“ನಮಗೆಲ್ಲಾ (ಪರಿಶಿಷ್ಟರಿಗೆ) ದಲಿತ ಚಳವಳಿ ಘನತೆ ಬದುಕು ಕೊಟ್ಟಿದೆ; ನಮ್ಮ ಮೇಲಾಗುವ ದೌರ್ಜನ್ಯಗಳಿಗೆ ಆಕ್ರೋಶ ಹಾಗೂ ಸಂಘಟನಾತ್ಮಕ ಹೋರಾಟ ಕಲಿಸಿದೆ. ಆದ್ದರಿಂದ, ನಾವೆಲ್ಲರೂ ಹಂಚಿಕೊಂಡು ತಿನ್ನುವುದನ್ನು ಕಲಿಯಬೇಕು” ಎಂದು ಹೇಳಿದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್, ರಾಜ್ಯ ಸರ್ಕಾರ ಆದಷ್ಟು ಬೇಗ ಪರಿಶಿಷ್ಟರ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ, ಮಹಾಡ್ ಸತ್ಯಾಗ್ರಹ ನೆನಪಿನಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿದ್ದ ‘ಶೋಷಿತರ ಸಂಘರ್ಷ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, “ಮಹಾಡ್ ಸತ್ಯಾಗ್ರಹ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿ, ಎಲ್ಲಿ ನೆನೆಪು ಇರುವುದಿಲ್ಲವೋ ಅಲ್ಲಿ ಕನಸು ಚಿಗೋರೋದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಉದಾತ್ತ ತ್ಯಾಗ ಹಾಗೂ ಬಲಿದಾನದ ಕಾರಣಕ್ಕೆ ಇಂದು ನಾವಿಲ್ಲಿದ್ದೇವೆ. ಅವರ ಸಮಾನತೆ ಕನಸು ಬಿತ್ತುವ ಹೋರಾಟಗಳೆಲ್ಲಾ ನಮಗೆ ಮಾದರಿ ಆಗಬೇಕು; ಅವುಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ. ದಲಿತ ಸಂಘರ್ಷ ಸಮಿತಿ ದೀರ್ಘ ಕಾಲದಿಂದ ನಡೆಸಿರುವ ಹೋರಾಟವನ್ನು ನಾವು ಅರ್ಥ ಮಾಡಿಕೊಳ್ಳಬೇಕು” ಎಂದು ದಸಂಸ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
“ದಲಿತರ ಸಬಲೀಕರಣಕ್ಕೆ ಕರ್ನಾಟಕ ಸರ್ಕಾರ ನಿಧಾನಕ್ಕೆ ಕಣ್ಣು ತೆರೆಯುತ್ತಿದೆ, ಬಾಬಾ ಸಾಹೇಬರು ಹೋರಾಟಕ್ಕೆ ಅಣಿಯಾದ ಹಾಗೆ ನಾವೂ ಸಿದ್ಧರಾಗಬೇಕು; ಅವರು ಯಾರಿಗಾಗಿ ಹೋರಾಟ ನಡೆಸಿದರು ಎಂಬುದರ ಬಗ್ಗೆಯೂ ಯೋಚಿಸಬೇಕು. ನೈಸರ್ಗಿಕವಾಗಿ ಸಿಗುವ ನೀರಿನ ಮೇಲೆ ನಿರ್ಬಂಧ ಹಾಗೂ ಧಾರ್ಮಿಕ ನಿಷೇಧ ಬೇರೆ ಯಾವ ದೇಶದಲ್ಲೂ ಇಲ್ಲ. ಮನುಷ್ಯರ ಜೀವನಾವಶ್ಯಕ ವಸ್ತುಗಳ ಮೇಲಿನ ನಿರಾಕರಣೆ ಹಾಗೂ ಅವರ ಬದುಕುವ ಹಕ್ಕುಗಳ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಬಾಬಾ ಸಾಹೇಬರು ನಡೆಸಿದ ಹೋರಾಟ ಮಹತ್ವದ್ದು” ಎಂದರು.
“ನೀರು ಮುಟ್ಟುವುದರಿಂದ ನನಗೆ ಸ್ವರ್ಗ ಸಿಗುತ್ತದೆ ಅಥವಾ ಪವಿತ್ರನಾಗುತ್ತೇನೆ ಎಂಬ ಕಾರಣಕ್ಕೆ ಮುಟ್ಟುತ್ತಿಲ್ಲ; ಮಾನವ ಹಕ್ಕುಗಳಿಗಾಗಿ ಈ ನೀರನ್ನು ಮುಟ್ಟುತ್ತಿದ್ದೇನೆ. ನೀರು ಎಲ್ಲರಿಗೂ ಸೇರಿದ್ದು ಎಂಬ ಕಾರಣಕ್ಕೆ ಹೋರಾಟ ಮಾಡಿದ್ದೇನೆ ಎಂದು ಅಂಬೇಡ್ಕರ್ ಹೇಳಿದರು” ಎಂದು ವಿವರಿಸಿದರು.
“ನನ್ನ ಹೋರಾಟ ಮನುಷ್ಯರ ಘನತೆಗಾಗಿ, ನನ್ನ ಬದುಕಿನ ಹೋರಾಟಗಳು ಗೌರವ ಹಾಗೂ ಅಭಿಮಾನ ತಂದುಕೊಟ್ಟಿದೆ ಎಂದು ಅಂಬೇಡ್ಕರ್ ಹೇಳಿದ್ದರು. ಮಹಾಡ್ ಹೋರಾಟ ನಡೆಯುವಾಗಲೇ ಅವರಿಗೆ ಸಾಕಷ್ಟು ಅಡ್ಡಿ-ಆತಂಕ ಎದುರಾಗಿದ್ದವು. ಅಲ್ಲಿ ಟೆಂಟ್ ಹಾಕುವುದಕ್ಕೆ ಒಬ್ಬ ಮುಸ್ಲಿಂ ವ್ಯಕ್ತಿ ಜಾಗ ನೀಡಿ, ಅವರೂ ಕೂಡ ಹೋರಾಟದಲ್ಲಿ ಭಾಗಿಯಾಗಿದ್ದರು. ಧರ್ಮಾತೀತವಾಗಿ ನಡೆದ ಮಹಾಡ್ ಸತ್ಯಾಗ್ರಹದಲ್ಲಿ ಬ್ರಾಹ್ಮಣರು ಭಾಗಿಯಾಗಿದ್ದರು. ಕಮ್ಯುನಿಸ್ಟ್ ನಾಯಕರೊಬ್ಬರು ಆರಂಭಿಸಿದ ಹೋರಾಟಕ್ಕೆ ಅಂಬೇಡ್ಕರ್ ತಾರ್ಕಿಕ ಅಂತ್ಯ ನೀಡಿದರು” ಎಂದರು.
‘ಕಲಾರಾಮ್ ದೇವಸ್ಥಾನ ಹೋರಾಟ ಸಂದರ್ಭದಲ್ಲಿ ಕೂಡ ಅಂಬೇಡ್ಕರ್ ಇದನ್ನೇ ಹೇಳುತ್ತಾರೆ’
ದೇವರ ಮೇಲಿನ ಭಕ್ತಿಯಿಂದ ದೇವಸ್ಥಾನ ಪ್ರವೇಶಿಸುತ್ತಿಲ್ಲ, ನಮಗೂ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಹೋರಾಟ ನಡೆಸುತ್ತೇವೆ ಎಂದು ಹೇಳುತ್ತಾರೆ. ಹೋರಾಟದ ಬಳಿಕ, ಎಲ್ಲ ಜಾತಿ ಜನರೂ ಸೇರಿ ರಥದ ಹಗ್ಗ ಎಳೆಯಬೇಕು ಎಂಬ ಒಪ್ಪಂದ ಆಗುತ್ತದೆ. ಆದರೆ, ಅದಕ್ಕೆ ಸವರ್ಣೀಯರು ಅವಕಾಶ ನೀಡದ ಕಾರಣಕ್ಕೆ ಮತ್ತೆ ಸಂಘರ್ಷ ಉಂಟಾಗುತ್ತದೆ. ಇದೇ ಕಾರಣಕ್ಕೆ, ದಲಿತರು ಹಿಂದೂಗಳಲ್ಲ; ನಮ್ಮದು ಪ್ರತ್ಯೇಕ ಘಟಕ ಎಂದು ದುಂಡುಮೇಜಿನ ಸಭೆಯಲ್ಲಿ ಅಂಬೇಡ್ಕರ್ ಹೇಳುತ್ತಾರೆ. ಅವರದ್ದೇ ಆದ ದಲಿತರಿಗೆ ಪ್ರತ್ಯೇಕ ಗುರುತು ಇದೆ ಎನ್ನುತ್ತಾರೆ. ಆದರೆ, ಇಂದು ಅದೇ ಕೆಸರಿನಲ್ಲಿ ಅಂಬೇಡ್ಕರ್ ಹೋರಾಟಗಳು ಮುಳುಗಿ ಹೋಗುತ್ತಿದೆ, ಇದು ದುರಂತ” ಎಂದು ಬೇಸರ ವ್ಯಕ್ತಪಡಿಸಿದರು.
“ಬಾಬಾ ಸಾಹೇಬರು ಕಾಲೇಜಿನಲ್ಲಿ ಪಾಠ ಮಾಡುವಾಗ ಅವರಿಗೆ ನೀರಿನ ಮಡಿಕೆ ಮುಟ್ಟಲು ಅವಕಾಶ ನೀಡಲಿಲ್ಲ.. ಇತ್ತೀಚೆಗೆ ರಾಜಸ್ತಾನದಲ್ಲಿ ಸಣ್ಣ ಹುಡುಗ ಶಾಲೆಯಲ್ಲಿ ನೀರಿನ ಮಡಿಕೆ ಮುಟ್ಟಿದ್ದಕ್ಕೆ ಸಾಯಿಸಲಾಯಿತು. ದಲಿತರ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ” ಎಂದು ಹೇಳಿದರು.
“ಮಹಾತ್ಮ ಗಾಂಧಿ ನಡೆಸಿದ ಉಪ್ಪಿನ ಸತ್ಯಾಗ್ರಹಕ್ಕೆ ಸಿಕ್ಕ ಮನ್ನಣೆ ಚೌಡಾರ್ ಕೆರೆ ಸತ್ಯಾಗ್ರಹಕ್ಕೆ ಸಿಗಲಿಲ್ಲ. ಐತಿಹಾಸಿಕ ಹೋರಾಟವೊಂದು ಯಾಕೆ ಪ್ರಸಿದ್ಧಿ ಆಗಲಿಲ್ಲ ಎಂಬುದನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು.. ಭಾರತದ ಮಟ್ಟಿಗೆ ಇದು ಅತ್ಯಂತ ಮಹತ್ವದ ಹೋರಾಟವಾಗಿದೆ” ಎಂದರು.
“ಕುಂಭಮೇಳದ ಸಂಗಮದಲ್ಲಿ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಿಲ್ಲ ಎಂದು ಎನ್‌ಜಿಟಿ ಹೇಳಿದರೂ ಅದನ್ನು ವೀರೋಧಿಸುವ ಜನ ನಮ್ಮಲ್ಲಿದ್ದಾರೆ. ಇಂದು ಪ್ರಭುತ್ವದ ವಿರುದ್ಧ ಮಾತನಾಡಿದರೆ ದೇಶದ್ರೋಹ ಆಗುತ್ತದೆ. ಅಂದರೆ, ಅವರು ಏನೇ ಮಾಡಿದರೂ ನಾವು ಸಹಿಸಿಕೊಳ್ಳಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ನಮ್ಮ ಸಂವಿಧಾನವೇ ಮೂಡನಂಬಿಕೆ ವಿರುದ್ಧವಾಗಿ. ಆದರೆ, ಸಮಾಜ ಇಂದು ಹಿಮ್ಮುಖವಾಗಿ ಚಲಿಸುತ್ತಿದೆ” ಎಂದರು.
ಪ್ರಣಾಳಿಕೆಯಲ್ಲಿ ಹೇಳಿದ್ದಕ್ಕೆ ವಿರುದ್ಧವಾಗಿರುವ ಕಾಂಗ್ರೆಸ್ ಸರ್ಕಾರ
“ಬಂಡವಾಳ ಶಾಹಿಗಳಿಗೆ ಕರ್ನಾಟಕದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಪರಭಾರೆ ಮಾಡಲಾಗುತ್ತಿದೆ. ಗುಜರಾತ್ ಸೇರಿದಂತೆ ದೇಶದ ಯಾವ ರಾಜ್ಯದಲ್ಲೂ ಈ ಪದ್ಧತಿ ಇಲ್ಲ. ಕಾಂಗ್ರೆಸ್ ಸರ್ಕಾರ ತಾನು ಚುನಾವಣೆಗೆ ಮುಂಚಿತವಾಗಿ ನೀಡಿದ ಪ್ರಣಾಳಿಕೆಯ ಭರವಸೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ನೀಡಿದ್ದ ಭರವಸೆ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ದೇವನಹಳ್ಳಿಯ ಚನ್ನರಾಯಪಟ್ಟಣದ ರೈತರು ಮೂರು ವರ್ಷದಿಂದ ಭೂಮಿ ಬಿಟ್ಟುಕೊಡಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಮುಖ್ಯಮಂತ್ರಿಗಳನ್ನು ಹಲವು ಭಾರಿ ಭೇಟಿ ಮಾಡಿ ಚರ್ಚಿಸಿದರೂ ಒಂದು ನಿರ್ಧಾರಕ್ಕೆ ಬಂದಿಲ್ಲ. ಅವರು ಬೆಳೆದು ಉತ್ಪಾದಿಸುತ್ತಿರುವ ತರಕಾರಿ-ಹಾಲನ್ನೇ ನಾವು ಬಳಸುತ್ತಿದ್ದೇವೆ” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಾಬಾ ಸಾಹೇಬರು ಕೇಳಿದ್ದು ರಾಜಕೀಯ ಮೀಸಲಾತಿಯಲ್ಲ; ಪ್ರತ್ಯೇಕ ಮತ ಕ್ಷೇತ್ರ
“ಬಾಬಾ ಸಾಹೇಬರು ಕೇಳಿದ್ದು ರಾಜಕೀಯ ಅಧಿಕಾರ ಅಥವಾ ಮೀಸಲಾತಿಯಲ್ಲ; ಪ್ರತ್ಯೇಕ ಮತಕ್ಷೇತ್ರಕ್ಕೆ ಬದಲಾಗಿ ಮೀಸಲು ಕ್ಷೇತ್ರ ನೀಡಿದರು. ‘ನನ್ನ ಜನರಿಗೆ ಸ್ವಂತ ಅಧಿಕಾರ ಬೇಕು’ ಎಂದು ಬೇಡಿಕೆ ಇಟ್ಟಿದ್ದರು. ಅದಕ್ಕಾಗಿಯೇ, ಮಹಾತ್ಮ ಗಾಂಧಿ ದುಂಡು ಮೇಜಿನ ಸಭೆಯ ನಿರ್ಣಯಗಳಿಗೆ ಸಹಿ ಮಾಡಿರಲಿಲ್ಲ. ಅವರು ಪ್ರತ್ಯೇಕ ಮತಕ್ಷೇತ್ರ ವಿರೋಧಿಸಿ ಉಪವಾಸ ಮಾಡಿದರು. ಒಂದು ವೇಳೆ ಅವರು ಸತ್ತರೆ ದಲಿತರ ಮೇಲೆ ದೇಶದಾದ್ಯಂತ ಹಲ್ಲೆ ನಡೆಯುತ್ತದೆ, ಇತಿಹಾಸದಲ್ಲಿ ನಾನು ಕಳನಾಯಕ ಆಗುತ್ತೇನೆ; ನಮ್ಮನ್ನು ದ್ರೋಹಿಗಳು ಎಂದು ಬಿಂಬಿಸುತ್ತಾರೆ ಎಂಬ ಕಾರಣಕ್ಕೆ ಪೂನಾ ಒಪ್ಪಂದಕ್ಕೆ ಸಹಿ ಹಾಕಿದರು. ಅದರ ಪರಿಣಾಮವೇ ಮೀಸಲು ಕ್ಷೇತ್ರ. ಮೀಸಲು ಕ್ಷೇತ್ರಗಳಲ್ಲಿ ಗೆಲ್ಲುತ್ತಿರುವ ನಮ್ಮ ಶಾಸಕರಿಗೆ ಪೂನಾ ಒಪ್ಪಂದದ ಬಗ್ಗೆ ಗೊತ್ತಿಲ್ಲ. ಅದಕ್ಕಾಗಿಯೇ ಅವರು ದಲಿತರಿಗೆ ಅನ್ಯಾಯ ಅದಾಗ ಮಾತನಾಡುವುದಿಲ್ಲ” ಎಂದರು ಆಕ್ರೋಶ ಹೊರಹಾಕಿದರು.
“ಕರ್ನಾಟಕ ಸರ್ಕಾರ ತಕ್ಷಣವೇ ಒಳ ಮೀಸಲಾತಿ ವಿವಾದ ಇತ್ಯರ್ಥ ಮಾಡಬೇಕು; ಸಲಿತ ಸಮುದಾಯದ ಒಳಗೆ ಕ್ಷೋಭೆ ಉಂಟಾಗಿ, ಪರಸ್ಪರ ಅಪನಂಬಿಕೆ ಮೂಡುತ್ತಿದೆ. ಈ ಬಗ್ಗೆ ಯಾರೂ ಕೂಡ ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ವೈಜ್ಞಾನಿಕವಾಗಿ ಒಳ ಮೀಸಲಾತಿ ಜಾರಿ ಮಾಡಬೇಕು. 2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿ 1.25 ಲಕ್ಷ ದಲಿತರಿದ್ದಾರೆ. ಇಷ್ಟು ಜನರನ್ನು ಸಮೀಕ್ಷೆ ಮಾಡುವುದು ಸರ್ಕಾರಕ್ಕೆ ದೊಡ್ಡ ಕೆಲಸವಲ್ಲ; ಕೂಡಲೇ ಸರ್ವೆ ಮಾಡಲು ಮುಂದಾಗಬೇಕು. ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ನಡುವಿನ ಗೊಂದಲ ನಿವಾರಣೆ ಮಾಡಬೇಕು. ಕಾಲ ಮಿತಿಯೊಳಗೆ ಸರ್ವೇ ಮಾಡಿ ಒಳ ಮೀಸಲಾತಿ ಜಾರಿ ಮಾಡಬೇಕು” ಎಂದು ಒತ್ತಾಯಿಸಿದರು.
“ಮಲದ ಗುಂಡಿಯಲ್ಲಿ ಸಾಯುವ ಭಂಗಿಗಳು, ಊರೂರು ಅಲೆಯುತ್ತಿರುವ ಅಲೆಮಾರಿಗಳ ಬಗ್ಗೆ ಮಾತನಾಡುವವರು ಇಲ್ಲದಂತಾಗಿದೆ. ಬದುಕಿನ ಘನತೆ ಗೊತ್ತಿಲ್ಲದೆ ಟೆಂಟ್‌ಗಳಲ್ಲಿ ಬದುಕುವ ಜನರ ಬಗ್ಗೆ ಕಾಳಜಿ ವಹಿಸಬೇಕು. ಸರ್ಕಾರ ಇದನ್ನೆಲ್ಲ ನೋಡಿಕೊಂಡು ದೀರ್ಘ ಕಾಲ ಸುಮ್ಮನೆ ಕೂರಬಾರದು. ಸಮುದಾಯದ ಸಚಿವರು ಹಾಗೂ ಶಾಸಕರು ನಮಗೆ ನ್ಯಾಯ ಕೊಡಿಸಬೇಕು. ದಲಿತ ಚಳವಳಿ ನಮಗೆ ಘನತೆಯ ಬದುಕು ನೀಡಿದೆ. ಅನ್ಯಾಯದ ವಿರುದ್ಧ ಆಕ್ರೋಶ ಹಾಗೂ ಸಂಘಟನಾತ್ಮಕ ಬದುಕು ಕಲಿಸಿದೆ. ಆದ್ದರಿಂದ, ನಾವು ಹಂಚಿಕೊಂಡು ತಿನ್ನುವುದನ್ನು ನಾವು ಕಲಿಯಬೇಕು” ಎಂದರು.


