ಇಂದು ದೆಹಲಿ ಹೈಕೋರ್ಟ್, ನಿಜಾಮುದ್ದೀನ್ ಮರ್ಕಜ್‌ನ ಮೊದಲ ಮಹಡಿಯಲ್ಲಿ ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸಲು ಮತ್ತು ಪ್ರತಿ ಬಾರಿ 50 ಜನರು ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿತು. ಆದರೆ ವಿಪತ್ತು ನಿರ್ವಹಣಾ ನಿಯಮಗಳಿಗೆ ಒಳಪಟ್ಟು ನಮಾಜ್ ಮಾಡಲು ಸೂಚಿಸಿದೆ.
ನಿಯಮಗಳ ಪ್ರಕಾರ, ಧಾರ್ಮಿಕ ಕೂಟಗಳನ್ನು ನಿಷೇಧಿಸಲಾಗಿದೆ. ಆದರೆ ಪೂಜಾ ಸ್ಥಳಗಳನ್ನು ಮುಚ್ಚಲು “ನಿರ್ದೇಶನ” ಇಲ್ಲ ಎಂದು ನ್ಯಾಯಾಲಯವು ಗಮನಿಸಿತು. “ಪರಿಸ್ಥಿತಿ ದಿನದಿಂದ ದಿನಕ್ಕೆ ಕಠೋರವಾಗುತ್ತಿದೆ. ಆದರೆ ಎಲ್ಲಾ ಧಾರ್ಮಿಕ ಸ್ಥಳಗಳು ತೆರೆದಿರುವುದರಿಂದ ಮತ್ತು ನಿಜಾಮುದ್ದೀನ್ ಮರ್ಕಜ್ ಕೂಡಾ ಪೂಜಾ ಸ್ಥಳವಾಗಿರುವುದರಿಂದ ಇದನ್ನು ಸಹ ತೆರೆಯಬೇಕಾಗಿತ್ತು. ಈಗ ಅವಕಾಶವನ್ನು ನೀಡಿದ್ದೇವೆ ಎಂದು ಹೈಕೋರ್ಟ್ ಹೇಳಿದೆ.
ದಕ್ಷಿಣ ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಮಸೀದಿ ಬಂಗ್ಲೆ ವಾಲಿಯನ್ನು ಕಳೆದ ಮಾರ್ಚ್‌ನಲ್ಲಿ ಮುಚ್ಚಲಾಯಿತು. ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಶುರುವಾದ ಸಂದರ್ಭದಲ್ಲಿ ನಡೆದ ತಬ್ಲಿಘಿ ಜಮಾಅತ್ ಪಂಥದ ಸಮಾವೇಶದ ಬಗ್ಗೆ ಭಾರಿ ವಿವಾದ ಉಂಟಾಗಿತ್ತು. ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ತಬ್ಲಿಘಿ ಸದಸ್ಯರನ್ನು ದೂಷಿಸಿ ಅನೇಕ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ರಂಜಾನ್ ಸಮಯದಲ್ಲಿ ಮರ್ಕಜ್ ಒಳಗೆ ಜನರು ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ದೆಹಲಿ ವಕ್ಫ್ ಮಂಡಳಿ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು.
ಏಪ್ರಿಲ್ 12ರಿಂದ ಈ ಕುರಿತಂತೆ ವಿಚಾರಣೆ ನಡೆದಿದೆ. ಕೇಂದ್ರವು ಮೊದಲು ಮರ್ಕಜ್‌ನಲ್ಲಿ ನಮಾಜ್‌ಗೆ ಅನುಮತಿಸಬಹುದು ಎಂದು ಒಪ್ಪಿಕೊಂಡಿತು. ಆದರೆ ಒಂದು ದಿನದ ನಂತರ, ರಾಜಧಾನಿಯಲ್ಲಿ ಹೊಸ ವಿಪತ್ತು ನಿಯಮಗಳ ಅಡಿಯಲ್ಲಿ ಎಲ್ಲಾ ಧಾರ್ಮಿಕ ಸಭೆಗಳನ್ನು ನಿಷೇಧಿಸಲಾಗಿರುವುದರಿಂದ ಮಸೀದಿಯಲ್ಲಿ ಯಾರನ್ನೂ ಅನುಮತಿಸಬಾರದು ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು.
ಪೊಲೀಸರು ಪರಿಶೀಲಿಸಿದ 200 ಜನರ ಪಟ್ಟಿಯಿಂದ ಒಂದೇ ಸಮಯದಲ್ಲಿ ಕೇವಲ 20 ಜನರಿಗೆ ಪ್ರಾರ್ಥನೆಗಾಗಿ ಸಂಕೀರ್ಣವನ್ನು ಪ್ರವೇಶಿಸಲು ಅವಕಾಶ ನೀಡಬಹುದು ಎಂಬ ಕೇಂದ್ರದ ಹೇಳಿಕೆಗೆ ನ್ಯಾಯಾಲಯ ತೀವ್ರವಾಗಿ ಆಕ್ಷೇಪಿಸಿತ್ತು.
“ನಿಮ್ಮ ಅಧಿಸೂಚನೆಗಳಲ್ಲಿ, ಧಾರ್ಮಿಕ ಸ್ಥಳಗಳಿಗಾಗಿ ಒಂದು ಬಾರಿಗೆ 20 ಜನಕ್ಕೆ ಮೊಟಕುಗೊಳಿಸಿದ್ದೀರಾ?’ ಎಂದು ಪ್ರಶ್ನಿಸಿದ್ದ ಕೋರ್ಟ್, ಕೋವಿಡ್ ನಿಯಮಗಳನ್ನು ಧಿಕ್ಕರಿಸಿ ಉತ್ತರಾಖಂಡದ ಹರಿದ್ವಾರದ ಮಹಾಕುಂಭ ಮೇಳದಲ್ಲಿ ಭಾರಿ ಜನಸಂದಣಿ ಸೇರಲು ಅನುಮತಿ ನೀಡಿದ ಕ್ರಮವನ್ನು ಉಲ್ಲೇಖಿಸಿದ್ದ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ವಕ್ಫ್ ಮಂಡಳಿಯು ಕುಂಭ ಮೇಳ ನಡೆಯುತ್ತಿರುವುದನ್ನು ತನ್ನ ಒಂದು ವಾದದಲ್ಲಿ ಉಲ್ಲೇಖಿಸಿ, ಈ ಎರಡು ಮಾನದಂಡಗಳನ್ನು ಪ್ರಶ್ನೆ ಮಾಡಿತ್ತು.
ಆದರೆ ಮೊನ್ನೆ ಬಾಂಬೇ ಹೈಕೋರ್ಟ್ ಅಲ್ಲಿನ ಜುಮ್ಮಾ ಮಸೀದಿಯಲ್ಲಿ 50 ಜನರಿಗೂ ನಮಾಜ್‌ಗೆ ಅನುಮತಿ ನೀಡಿಲ್ಲ ಎಂಬುದು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಕೊರೊನಾ ಆತಂಕ: ರಂಜಾನ್ ಪ್ರಾರ್ಥನೆಗೆ ಅನುಮತಿ ನೀಡದ ಬಾಂಬೆ ಹೈಕೋರ್ಟ್



Court is not in a position to give justice. Thousands of people gathered in kumbamela in the covid time.