ಭಾರತ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ಭಾರತದಲ್ಲಿ ಸಭ್ಯವಾಗಿ, ಅಹಿಂಸಾತ್ಮಕವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಿ ವಿಶ್ವದ ಗಮನ ಸೆಳೆದಿದ್ದಾರೆ. ಪ್ರಗತಿಪರ ಚಿಂತಕರು, ಕಾನೂನು ತಜ್ಞರು ಮತ್ತು ರೈತರ ಮುಖಂಡರು ಹೊಸ ಕಾನೂನುಗಳು ಮೂಲಭೂತವಾಗಿ ಕಾರ್ಪೊರೇಟ್ ವಲಯಕ್ಕೆ ಪ್ರಯೋಜನ ಉಂಟುಮಾಡಿ ಭಾರತದ ಆರ್ಥಿಕತೆಯ ಬೆನ್ನೆಲುಬನ್ನು ಮುರಿಯುತ್ತವೆಯೆಂದು ತೀವ್ರವಾಗಿ ವಾದಿಸಿದ್ದಾರೆ. ದೊಡ್ಡ ಉದ್ದಿಮೆಗಳು ಆಹಾರ ಧಾನ್ಯಗಳು, ಹಣ್ಣು ಹಂಪಲುಗಳು ಮತ್ತು ತರಕಾರಿಗಳನ್ನು ಸಂಗ್ರಹಿಸಿ ತಮಗೆ ಬೇಕಾದ ಹಾಗೆ ಮಾರಾಟ ಮಾಡಿ ರೈತರು, ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಮತ್ತು ಭಾರತೀಯ ಸಮಾಜದ ಇತರ ಅಂಚಿನಲ್ಲಿರುವ ವರ್ಗಗಳ ಜೀವನದ ಮೇಲೆ ಮಾರಣಾಂತಿಕ ಪರಿಣಾಮ ಬೀರುವುದಾಗಿ ಚಳುವಳಿಗಾರರು ಪ್ರತಿಪಾದಿಸಿದ್ದಾರೆ. ಇದರ ಪರಿಣಾಮವಾಗಿ, ಕೆಲವು ದೊಡ್ಡ ಉದ್ದಿಮೆಗಳು ಸುಮಾರು 90%ರಷ್ಟು ಕೃಷಿ ವ್ಯವಹಾರವನ್ನು ನಿಯಂತ್ರಿಸುವ, ಆರ್ಥಿಕ ಏಕಸ್ವಾಮ್ಯ ಸಾಧಿಸುವ ಮತ್ತು ಜನಸಾಮಾನ್ಯರ ಜೀವನೋಪಾಯ ಮಾರ್ಗಗಳನ್ನು ಕಸಿದುಕೊಳ್ಳುವ ಬಹುದೊಡ್ಡ ಅಪಾಯ ಎದುರಾಗಿದೆ.
ಪಟ್ಟಭದ್ರ ಹಿತಾಸಕ್ತಿಗಳು ನಿರಂತರವಾಗಿ ಸಮಾಜ, ಆರ್ಥಿಕತೆ, ರಾಜಕಾರಣ, ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ತಮ್ಮ ಏಕಸ್ವಾಮ್ಯವನ್ನು ಸುಸ್ಥಿರಗೊಳಿಸಲು ಎಲ್ಲ ಬಗೆಯ ಪ್ರಜಾಸತ್ತಾತ್ಮಕ ಹೋರಾಟಗಳನ್ನು ಅಡ್ಡಿಪಡಿಸುತ್ತವೆ. ಜನವರಿ 26ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಬೆಂಬಲಿಗರ ಕೈವಾಡವಿರುವುದನ್ನು ದೇಶದ ಜನತೆ ಆತಂಕದಿಂದ ಗಮನಿಸಿದ್ದಾರೆ. ತಮ್ಮ ಆತ್ಮಸಾಕ್ಷಿ, ಸ್ವಂತ ಬಲ ಮತ್ತು ಸಂಪನ್ಮೂಲಗಳ ಆಧಾರದ ಮೇಲೆ ಸುಮಾರು 3 ತಿಂಗಳಿನಿಂದ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಸಾಂವಿಧಾನಿಕ ರಕ್ಷಣೆಗಳಿಗೆ ಅನುಸಾರವಾಗಿ ಅಹಿಂಸಾತ್ಮಕ ಸತ್ಯಾಗ್ರಹ ನಡೆಸುತ್ತಿರುವ ರೈತರು ವಿದೇಶಿ ಸಂಸ್ಥೆಗಳಿಂದ ಆರ್ಥಿಕ ನೆರವು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಡೆದಿರುವುದಾಗಿ ಹೊಲಸು ಹೇಳಿಕೆ ನೀಡಿ ಚಳುವಳಿಯನ್ನು ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಿರುವ ರೈತವಿರೋಧಿಗಳನ್ನು ಪ್ರಜ್ಞಾವಂತರು ಖಂಡಿಸಲೇಬೇಕು. ಪ್ರತಿಭಟನಾ ನಿರತ ರೈತರು ಅಪ್ಪಟ ದೇಶಭಕ್ತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಆಧಾರದ ಮೇಲೆ ರೈತ ವಿರೋಧಿ ಕಾನೂನುಗಳ ವಿರುದ್ಧ ದೀರ್ಘಕಾಲಿಕ ಹೋರಾಟ ನಡೆಸಲು ಪ್ರಾಮಾಣಿಕವಾಗಿ ಸಜ್ಜುಗೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆರ್ಥಿಕ ಮತ್ತು ರಾಜಕೀಯ ಏಕಸ್ವಾಮ್ಯಕ್ಕೆ ಬದ್ಧರಾಗಿ ಸಾಮಾಜಿಕ ನ್ಯಾಯ ಮತ್ತು ಪ್ರಜಾಸತ್ತಾತ್ಮಕ ಹೋರಾಟಗಳನ್ನು ಭಗ್ನಗೊಳಿಸುವ ಸ್ಥಾಪಿತ ಹಿತಾಸಕ್ತಿಗಳ ಹುನ್ನಾರಗಳನ್ನು ಪ್ರಜ್ಞಾವಂತರು ಒಕ್ಕೊರಲಿನಿಂದ ಖಂಡಿಸಬೇಕು.

ಪ್ರತಿಭಟನಾ ಸ್ಥಳಗಳಲ್ಲಿ ತಾತ್ಕಾಲಿಕ ನಾಗರೀಕ ಸೌಲಭ್ಯಗಳನ್ನು ರೈತರೇ ಸ್ವತಹ ಏರ್ಪಾಟು ಮಾಡಿಕೊಂಡು ದೀರ್ಘಾವಧಿಯವರೆಗೆ ಭಾರತದ ಆರ್ಥಿಕತೆಯ ಬೆನ್ನೆಲುಬಾದ ಕೃಷಿಯನ್ನು ರಕ್ಷಿಸಲು ಹೊರಟಿರುವುದು ಆಶಾದಾಯಕ ಸಂಗತಿಯಾಗಿದೆ. ಇವರು ಹೆದ್ದಾರಿಯುದ್ದಕ್ಕೂ ಪಾದಚಾರಿ ವ್ಯವಸ್ಥೆಯನ್ನು ದುರಸ್ಥಿಗೊಳಿಸಿ ಆಂದೋಲನ ನಡೆಸುತ್ತಿರುವ ರೈತರ ಸೌಕರ್ಯವನ್ನು ಹೆಚ್ಚಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ರೈತ ವಿರೋಧಿ ಶಕ್ತಿಗಳು ಮತ್ತು ಮಾರುಕಟ್ಟೆ ಶಕ್ತಿಗಳ ನಡುವಣ ಅನೈತಿಕ ಮೈತ್ರಿಯಿಂದಾಗಿ ಕೃಷಿ ಕ್ಷೇತ್ರವನ್ನು ದುರ್ಬಲಗೊಳಿಸಿ ಅನ್ನದಾತರ ಬದುಕನ್ನು ಅತಂತ್ರಗೊಳಿಸಲು ಹೊರಟಿರುವ ಸ್ಥಾಪಿತ ಹಿತಾಸಕ್ತಿಗಳ ಹುನ್ನಾರಗಳು ಪ್ರಗತಿಪರ ಭಾರತೀಯರ ಅಂತರರಾಷ್ಟ್ರೀಯ ಸಮುದಾಯದ ಉಗ್ರ ಖಂಡನೆಗೆ ಗುರಿಯಾಗಿದೆ.
ಸರ್ಕಾರ, ನ್ಯಾಯಾಂಗ, ಮಾಧ್ಯಮ ಮತ್ತು ನಾಗರೀಕ ಸಮಾಜಗಳು ಪ್ರತಿಭಟನಾ ನಿರತ ರೈತರ ನ್ಯಾಯೋಚಿತ ಬೇಡಿಕೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಆಲಿಸಿ ರಾಜ್ಯ ನಿರ್ದೇಶಕ ತತ್ವಗಳು ಮತ್ತು ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿರುವ ಕೃಷಿ ಕಾನೂನುಗಳನ್ನು ರದ್ಧುಗೊಳಿಸುವಂತೆ ಭಾರತ ಸರ್ಕಾರದ ಮೇಲೆ ಅಂತರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಒತ್ತಾಯ ಹೇರಿವೆ.
ಭಾರತ ಸರ್ಕಾರವು ಜಾರಿಗೊಳಿಸಿರುವ ಅಸಾಂವಿಧಾನಿಕ ಹಾಗೂ ಅಮಾನವೀಯ ರೈತ ವಿರೋಧಿ ಕಾನೂನುಗಳ ವಿರುದ್ಧ ಯೂರೋಪ್, ಅಮೇರಿಕಾ ಮೊದಲಾದೆಡೆ ಅಂತರರಾಷ್ಟ್ರೀಯ ಸಾರ್ವಜನಿಕ ಅಭಿಪ್ರಾಯ ಹೆಚ್ಚುತ್ತಲಿದೆ. ರಿಹಾನ್ನಾ, ಗ್ರೇಟಾ ಥನ್‌ಬರ್ಗ್ ಮೊದಲಾದ ಪ್ರಜ್ಞಾವಂತ ಹೆಣ್ಣುಮಕ್ಕಳು ಭಾರತದ ರೈತರ ಬಗ್ಗೆ ವ್ಯಕ್ತಪಡಿಸಿರುವ ಮಾನವೀಯ ಕಾಳಜಿ ಪ್ರಶಂಸನೀಯವಾಗಿದೆ. ಆದರೆ ಚಲನಚಿತ್ರ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮತ್ತು ಹಣ ಗಳಿಸಿರುವ ಸ್ವಯಂಘೋಷಿತ ಪ್ರಸಿದ್ಧ ತಾರೆಗಳೆನಿಸಿಕೊಂಡವರು ತಮ್ಮ ವರ್ಗಹಿತಾಸಕ್ತಿಯನ್ನು ನಾಚಿಕೆಯಿಲ್ಲದೆ ರಕ್ಷಿಸಿಕೊಳ್ಳಲು ಹೊರಟಿರುವುದು ಖಂಡನೀಯ. ಇವರಿಗೆ ಸಂವಿಧಾನ ನಿಷ್ಟೆಗಿಂತ ಹೆಚ್ಚಾಗಿ ವರ್ಗನಿಷ್ಟೆಯನ್ನು ಪ್ರದರ್ಶಿಸುವುದು ಇಂದು ಮುಖ್ಯವೆನಿಸಿರುವುದನ್ನು ಪ್ರಜ್ಞಾವಂತರು ಎತ್ತಿಹಿಡಿದಿದ್ದಾರೆ.

ಇತ್ತೀಚೆಗೆ ಹಿರಿಯ ಗಾಂಧಿವಾದಿ ಅಣ್ಣಾಹಜಾರೆ ರೈತ ಚಳುವಳಿಗೆ ಬೆಂಬಲ ನೀಡುವ ನಿರ್ಧಾರದಿಂದ ಹಿಂದೆ ಸರಿದಿರುವುದು ಅವರ ಆರ್‌ಎಸ್‌ಎಸ್ ನಿಷ್ಟೆಯ ಪ್ರತೀಕವಾಗಿದೆ. ಆದಾಗ್ಯೂ, ಮಹಾತ್ಮ ಗಾಂಧಿಯವರ ಮೊಮ್ಮಗಳಾದ ತಾರಾಗಾಂಧಿ ಆಂದೋಲನ ನಿರತ ರೈತರನ್ನು ಭೇಟಿಯಾಗಿ ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿರುವುದು ಆಶಾದಾಯಕ ಸಂಗತಿಯಾಗಿದೆ. ಅವರು ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ರೈತರ ನ್ಯಾಯೋಚಿತ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕೆಂಬ ಸಲಹೆಯನ್ನು ಕೇಂದ್ರ ಸರ್ಕಾರಕ್ಕೆ ಮಂಡಿಸಿದ್ದಾರೆ. ಅನೇಕ ಪ್ರಗತಿಪರ ಚಿಂತಕರು ಮತ್ತು ಸಂಘಟನೆಗಳು ದೇಶಾದ್ಯಂತ ಆಂದೋಲನ ನಡೆಸುತ್ತಿರುವ ರೈತರನ್ನು ಬಲವಾಗಿ ಬೆಂಬಲಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಹೊಣೆಗಾರಿಕೆಗಳ ಆಧಾರದ ಮೇಲೆ ದೇಶದ ರೈತ ಸಮುದಾಯವನ್ನು ರಕ್ಷಿಸುವುದು ಪ್ರಜ್ಞಾವಂತ ಭಾರತೀಯರ ಪರಮಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ನೂತನ ಸಹಸ್ರಮಾನದಲ್ಲಿ ಆರ್ಥಿಕ ಸ್ವಾತಂತ್ರ್ಯ ಮತ್ತು ಸಂವಿಧಾನ ರಕ್ಷಣೆಗಾಗಿ ಮತ್ತೊಂದು ಬೃಹತ್ ಹೋರಾಟದತ್ತ ದೇಶ ಸಾಗುತ್ತಿದೆ.
- ಡಾ.ಬಿ.ಪಿ ಮಹೇಶ ಚಂದ್ರಗುರು

(ಚಿಂತಕರು ಮತ್ತು ವಿಶ್ರಾಂತ ಪ್ರಾಧ್ಯಾಪಕರು, ಮೈಸೂರು.)
ಇದನ್ನೂ ಓದಿ: ಹತ್ರಾಸ್, ಬಿಜ್ನೋರ್ ಗಳಲ್ಲಿ ಬೃಹತ್ ಮಹಾಪಂಚಾಯತ್: ಸರ್ಕಾರದ ವಿರುದ್ಧ ರೈತರ ಗುಡುಗು


