ಡಿಜಿಟಲ್ ಆಕ್ಟಿವಿಸಂ – ಏನಿದು?

ಪ್ರಪಂಚಾದ್ಯಂತ ಅಂತರ್ಜಾಲದ ವ್ಯಾಪ್ತಿ ವಿಸ್ತರಿಸುತ್ತಲೇ ಇರುವಾಗ, ನಮ್ಮ ದೈನಂದಿನ ಬದುಕಿನಲ್ಲಿ ನಾನಾ ರೀತಿಯ ಮಾರ್ಪಾಡುಗಳು ಆಗುತ್ತಲೇ ಇದೆ. ಕೈಬರಹದ ಪುಸ್ತಕದಲ್ಲಿ ನಡೆಯುತ್ತಿದ್ದ ಬ್ಯಾಂಕಿಂಗ್ ವ್ಯವಹಾರವು ಈಗ ಗಣಕೀಕೃತವಾಗಿದೆ. ತಂತಿಗಳ ಮೂಲಕ ನಡೆಯುತ್ತಿದ್ದ ಸಂವಹನ ಈಗ ತಂತಿರಹಿತ, ಕ್ವಾಂಟಮ್ ಸಂವಹನದತ್ತ ಸಾಗುತ್ತಿದೆ. ವಿದ್ಯುತ್ ಮತ್ತು ಕಚ್ಚಾ ತೈಲಗಳ ಮೂಲಕ ನಡೆಯುತ್ತಿದ್ದ ಯಾಂತ್ರಿಕ ಶಕ್ತಿ ಈಗ ಡಿಜಿಟಲ್ ಸಂವಹನದ ಮೂಲಕ ನಿಯಂತ್ರಿಸಲಾಗುತ್ತಿದೆ. ಕೋವಿಡ್ ನಂತರವಂತೂ ಶಿಕ್ಷಣ ವ್ಯವಸ್ಥೆಯೇ ಅಂತರ್ಜಾಲದಲ್ಲಿ ಮರುರೂಪ ಪಡೆದುಕೊಂಡಿದೆ.

ಬಿಲ್ ಪಾವತಿ, ರಿಚಾರ್ಜ್ ಆಯ್ಕೆಗಳು ಮೊಬೈಲಿನ ಕೈ ಬೆರಳಿನ ಕ್ಲಿಕ್‌ನಲ್ಲಿ ನಡೆಯುತ್ತಿವೆ. ಹಾಗೆಯೆ ಸಾರ್ವಜನಿಕ ಮತ್ತು ವೈಯಕ್ತಿಕ ಜೀವನದಲ್ಲಿ ಗ್ರಾಹಕ, ಉದ್ಯಮ ಮತ್ತು ವ್ಯವಹಾರಗಳಲ್ಲಿನ ಅನಿರೀಕ್ಷಿತ ಬದಲಾವಣೆಗಳ ಜೊತೆಗೆ ಡಿಜಿಟಲ್ ಪೂರ್ವ ಜಗತ್ತಿನ ಅನ್ಯಾಯಗಳು ಮತ್ತು ಅಸಮಾನತೆಗಳೂ ಡಿಜಿಟಲ್ ನಂತರದ ಜಗತ್ತಿನಲ್ಲಿ ಉಳಿದುಕೊಂಡು ದೊಡ್ಡ ಕಂದರಗಳನ್ನು ಸೃಷ್ಟಿಸಿದೆ. ಸಾರ್ವಜನಿಕ ಜೀವನ ಹೇಗೆ ಡಿಜಿಟಲೀಕರಣಗೊಂಡಿದೆಯೋ ಹಾಗೆಯೆ ಹಳೆಯ ಮಾದರಿ ಹೋರಾಟಗಳೊಂದಿಗೆ ಡಿಜಿಟಲ್ ಯುಗದ ಹೋರಾಟಗಳು ಸೃಷ್ಟಿಯಾಗಿವೆ. ಡಿಜಿಟಲ್ ಮಾಧ್ಯಮ ಮತ್ತು ತಂತ್ರಜ್ಞಾನವನ್ನು ವೈಯಕ್ತಿಕವಾಗಿ ಮತ್ತು ಸಾರ್ವಜನಿಕವಾಗಿ ಬಳಸಿ ನಾಗರಿಕ ಹಕ್ಕುಗಳ ಪ್ರತಿಪಾದನೆ, ಪ್ರಭುತ್ವದ ಪಾರದರ್ಶಕತೆಗೆ ಮತ್ತು ಅನ್ಯಾಯದ ವಿರುದ್ಧ ಹೋರಾಟಕ್ಕೆ ಡಿಜಿಟಲ್ ಆಕ್ಟಿವಿಸಂ ಸಾಕ್ಷಿಯಾಗಿದೆ.

ಗ್ರೇಟಾ ಥನ್‌‌ಬರ್ಗ್,Greta Thunberg
PC: EPA-EFE / J.J. GUILLEN

ತೀರಾ ಇತ್ತೀಚಿನ ಉದಾಹರಣೆ ಹೇಳಬೇಕೆಂದರೆ, ಪ್ರಭುತ್ವ ಏಕಪಕ್ಷೀಯವಾಗಿ ತಂದ ರೈತರಿಗೆ ಮಾರಕವಾದ ಕಾಯ್ದೆಗಳ ವಿರುದ್ಧ, ಎರಡು ತಿಂಗಳ ನಂತರವೂ ದೆಹಲಿಯ ಕೊರೆಯುವ ಚಳಿಯಲ್ಲಿ ಹೋರಾಟನಿರತರಾಗಿದ್ದ ರೈತರಿಗೆ ಬೆಂಬಲ ಸೂಚಿಸಿ ರಿಹಾನ್ನ ಮಾಡಿದ ಟ್ವೀಟ್. ಅಮೆರಿಕಾದ ಪಾಪ್ ತಾರೆ ರಿಹಾನ್ನ ಫೆಬ್ರವರಿ 2ನೆ ತಾರೀಕು ಒಂದು ಟ್ವೀಟ್ ಮಾಡುತ್ತಾರೆ. ಆಕೆಯ ಟ್ವೀಟ್ ಸಾರಾಂಶ ಸರಳ. ದೆಹಲಿ ಪ್ರತಿಭಟನೆಯ ಸಿಎನ್‌ಎನ್‌ನ ಸುದ್ದಿಯೊಂದನ್ನು ತನ್ನ ಟ್ವಿಟ್ಟರ್ ಖಾತೆಗೆ ಲಗ್ಗತ್ತಿಸಿ “ನಾವು ಇದರ ಬಗ್ಗೆ ಏಕೆ ಮಾಡನಾಡುತ್ತಿಲ್ಲ?” ಎಂಬ ಪ್ರಶ್ನೆ. ಮಾರನೇ ದಿನ ಭಾರತದ ಸರ್ಕಾರ ಸಹಿತ ಪ್ರತಿಭಟನೆ ಶುರು ಆದಾಗಿನಿಂದ ಸುಮ್ಮನಿದ್ದ ಸಿನಿಮಾ ತಾರೆಯರು, ಕ್ರೀಡಾಪಟುಗಳು ರಿಹಾನ್ನ ಟ್ವಿಟಿನ ವಿರುದ್ಧ ಮುಗಿಬಿದ್ದು ಭಾರತ ವಿರುದ್ಧ ಷಡ್ಯಂತ್ರ, ಭಾರತದ ಆಂತರಿಕ ವಿಷಯದ ಬಗ್ಗೆ ಹಸ್ತಕ್ಷೇಪ ಬೇಡ ಎಂಬ ಒಂದೇ ರೀತಿಯ ಟ್ವೀಟ್‌ಗಳನ್ನೂ ಮಾಡುತ್ತಾರೆ.

ಇದರಲ್ಲಿ ರಿಹಾನ್ನ ಮಾಡಿದ್ದು ವೈಯಕ್ತಿಕ ಡಿಜಿಟಲ್ ಆಕ್ಟಿವಿಸಂ, ಪ್ರಪಂಚದ ಅತ್ಯಂತ ದೊಡ್ಡ ಪ್ರತಿಭಟನೆ ಮಾಡುತ್ತಿರುವ ಭಾರತದ ರೈತರ ಬಗ್ಗೆ ನಾವು ಯಾಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆ ಅಷ್ಟೇ. 10 ಕೋಟಿಗೂ ಮೀರಿದ ಟ್ವಿಟ್ಟರ್ ಹಿಂಬಾಲಕರಿರುವ ರಿಹಾನ್ನ ಅವರ ಒಂದೇ ಒಂದು ಟ್ವೀಟಿಗೆ ಪ್ರಭುತ್ವದ ಪರವಾದ ಪ್ರಭಾವಿಗಳು ಅದರ ಸಮರ್ಥನೆಗೆ ಇಳಿಯುತ್ತಾರೆ. 170ಕ್ಕೂ ಹೆಚ್ಚು ರೈತರು ಈವರೆಗೂ ಈ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದರೂ ತುಟಿಕ್‌ಪಿಟುಕ್ ಎನ್ನದ ತಾರಾಮಣಿಗಳು, ಕ್ರೀಡಾಪಟುಗಳು ಮತ್ತು ಇತರ ಸೆಲೆಬ್ರಿಟಿಗಳು ತಮ್ಮ ದೇಶದ ಪ್ರಭುತ್ವದ ಪ್ರಮಾದವನ್ನು ಸಮರ್ಥಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿಸೇರಿಸುವಷ್ಟರಲ್ಲಿ ತಮ್ಮ ತಮ್ಮ ಪ್ರತಿಗಾಮಿ ಮನಸ್ಥಿತಿಯನ್ನು ಸಾರ್ವಜನಿಕವಾಗಿ ಹೊರಹಾಕುತ್ತಾರೆ. ಜಾಗತೀಕರಣ ಬೆಳೆಯುತ್ತ ಹೋದಂತೆ ಪ್ರಪಂಚದ ಸಮಸ್ಯೆಗಳು ಮತ್ತು ಪರಿಹಾರಗಳಿಗೆ ಕೂಡ ಸಾಮಾಜಿಕ ಮಾಧ್ಯಮಗಳು ಮತ್ತು ಡಿಜಿಟಲ್ ಸಂವಹನಗಳ ಮೂಲಕ ಈ ರೀತಿಯ ಅಂತಾರಾಷ್ಟ್ರೀಯ ಸಾಲಿಡಾರಿಟಿ ಸೃಸ್ಟಿಸುತ್ತದೆ. ಜಾಗತೀಕರಣದ ಹೆಸರಿನಲ್ಲಿ ದುಡ್ಡು ಮತ್ತು ಯಶಸ್ಸು ಕಂಡ ಕೆಲವು ಪ್ರಿವಿಲೆಜ್ಡ್ ಪ್ರಭಾವಿಗಳು ಮಾತ್ರ ಜಾಗತೀಕರಣದ ನೋವುಗಳು, ಆಕ್ರಂದನಗಳ ಸಾಲಿಡಾರಿಟಿ ಕಂಡು ಹೆದರುತ್ತಾರೆ.

ಇದೆರೀತಿ ಅಂತಾರಾಷ್ಟ್ರೀಯ ಡಿಜಿಟಲ್ ಆಕ್ಟಿವಿಸಂನಲ್ಲಿ ಹೆಚ್ಚು ಹೆಸರು ಮಾಡಿದ್ದು ವಿಕಿಲೀಕ್ಸ್ ಶುರು ಮಾಡಿದ್ದ ಡಿಜಿಟಲ್ ಪತ್ರಿಕೋದ್ಯಮಿ ಜೂಲಿಯನ್ ಅಸಾಂಜ್. “ಯುದ್ಧಗಳನ್ನು ಸುಳ್ಳುಗಳ ಮೂಲಕ ಸೃಷ್ಟಿಸಿದರೆ, ಶಾಂತಿಯನ್ನು ಸತ್ಯದ ಮೂಲಕ ಸೃಸ್ಟಿಸಬಹುದು” ಎನ್ನುತ್ತಾ, ಅಮೆರಿಕದಂತ ಸಾಮ್ರಾಜ್ಯಶಾಹಿ ರಾಷ್ಟ್ರ ಯಾವ ರೀತಿ ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮತ್ತು ದರ್ಪ ಮಾಡುತ್ತದೆ, ಭಯೋತ್ಪಾದನೆಗೆ ಸಿದ್ಧಾಂತ, ಶಸ್ತ್ರಗಳು ಮತ್ತು ಆಯುಧಗಳನ್ನು ಕೊಟ್ಟು ಹೇಗೆ ಯುದ್ಧಗಳ ಮೂಲಕ ದೇಶಗಳನ್ನು ಕಬಳಿಸುತ್ತದೆ ಎಂಬುದನ್ನು ಸಾಕ್ಷಿ ಸಮೇತ ಗೌಪ್ಯ ದಾಖಲೆಗಳ ಸುದ್ದಿ ಸೋರಿಕೆ ಮಾಡಿದ್ದಾರೆ. ಈ ರೀತಿ, ಸಾಮ್ರಾಜ್ಯಶಾಹಿ ಅಮೆರಿಕದ ಕುತಂತ್ರಗಳಿಂದ ನೊಂದಿದ್ದ ದೇಶಗಳಿಗೆ ಸಾಲಿಡಾರಿಟಿಯನ್ನು ವ್ಯಕ್ತಪಡಿಸಿದ್ದರು.

ಅಮೆರಿಕದ ಯುದ್ಧಗಳು, ಶತ್ರು ಎಂದು ಬಿಂಬಿಸಲ್ಪಟ್ಟ ರಾಷ್ಟ್ರಗಳ ನೈಸರ್ಗಿಕ ಮತ್ತು ಖನಿಜ ಸಂಪತ್ತಿನ ಲೂಟಿ ಮಾಡುವ ವಿಧಾನ ಮತ್ತು ಅಮೆರಿಕದ ಕುತಂತ್ರಗಳು ಹೇಗೆ ಹಲವು ದೇಶಗಳ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು, ಅಂತಾರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರಿ ಯಾವ ರೀತಿಯ ಬೇಹುಗಾರಿಕೆಗಳನ್ನಾಗಲೀ, ಕಗ್ಗೊಲೆಗಳನ್ನಾಗಲೀ ಮಾಡುತ್ತದೆ ಎಂದು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಇದಕ್ಕಾಗಿ ಇವರು ಅನುಸರಿಸಿದ ವಿಧಾನ ಹ್ಯಾಕಿಂಗ್. ಹ್ಯಾಕಿಂಗ್ ಎಂದರೆ ಒಂದು ಕಂಪ್ಯೂಟರ್‌ನಲ್ಲಿ ಶೇಖರಿಸಿರುವ ಮಾಹಿತಿಯನ್ನು ಡಿಜಿಟಲ್ ಮಾರ್ಗವಾಗಿ ಒಳಹೊಕ್ಕು ಆ ಮಾಹಿತಿಯನ್ನು ಪಡೆಯುವುದು. ಇದು ಕಳ್ಳ ಕಾರ್ಯಗಳಿಗೆ ಹೆಚ್ಚಾಗಿ ಬಳಕೆಯಾದರು, ಈ ರೀತಿಯ ಪ್ರಭುತ್ವ ಹೇಳುವ ಸುಳ್ಳುಗಳಿಗೆ ಕನ್ನಡಿ ಹಿಡಿದು ಪಾರದರ್ಶಕತೆಯನ್ನು ಆಗ್ರಹಿಸಲೂ ಹ್ಯಾಕಿಂಗ್ ಬಳಸಬಹುದು ಎಂದು ತೋರಿಸಿತ್ತು. ಈಗ ಅದಕ್ಕಾಗಿ ಇಂಗ್ಲೆಂಡಿನ ಕುಖ್ಯಾತ ಸೆರೆಮನೆಯಲ್ಲಿ ಬಂಧಿಯಾಗಿದ್ದಾರೆ.

ಈ ರೀತಿಯ ಡಿಜಿಟಲ್ ಆಕ್ಟಿವಿಸಂ ಹೆಚ್ಚಾಗಿ ಬಳಸಲಾಗುತ್ತಿದೆ. ಎರಡು ವಾರಗಳ ಹಿಂದೆ ಇದೆ ರೀತಿ ರೈತರ ಬಗ್ಗೆ ಹಸಿ ಹಸಿ ಸುಳ್ಳುಗಳನ್ನು ಬಿತ್ತರಿಸುತ್ತಿದ್ದ ಕನ್ನಡ ಸುವರ್ಣ ಚಾನೆಲ್ ಆಪ್‌ನ ರೇಟಿಂಗ್ ಕಡಿಮೆ ಮಾಡಿ ಗ್ರಾಹಕರು ಅನ್‌ಇನ್ಸ್ಟಾಲ್ ಮಾಡಿದ್ದರು. ಅದೇ ರೀತಿ ಈ ಕರಾಳ ಕಾಯ್ದೆಗಳ ಫಲಾನುಭವಿಗಳಾದ ಅಂಬಾನಿ ಮತ್ತು ಅದಾನಿ ವಿರುದ್ಧ, ರೈತರು ಇವರ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಲು ಕರೆ ಕೊಟ್ಟಾಗ ಲಕ್ಷಾನುಗಟ್ಟಲೆ ನಾಗರಿಕರು ಜಿಯೋ ಸಿಮ್‌ಗಳನ್ನೂ ಕಿತ್ತೆಸೆದು, ಅವರ ಉತ್ಪನ್ನಗಳ ಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಇವೆಲ್ಲವೂ ಡಿಜಿಟಲ್ ಮಾಧ್ಯಮದ ಮೂಲಕವೇ ಸುದ್ದಿಯಾಗುತ್ತಿವೆ ಮತ್ತು ಹೆಚ್ಚು ಹರಡುತ್ತಿವೆ. ಮುಖ್ಯವಾಹಿನಿ ಮಾಧ್ಯಮಗಳು ಹೇಗೆ ಸತ್ಯವನ್ನು ಮರೆಮಾಚುತ್ತಿದೆಯೋ ಅದಕ್ಕೆ ಪ್ರತಿಯಾಗಿ ಅಂತರ್ಜಾಲದ ಹೊಸ ಹೊಸ ಸಂವಹನಗಳ ಮೂಲಕ ಜನರು ಜಾಗೃತರಾಗುತ್ತಿದ್ದಾರೆ.

Members of Occupy Wall Street stand in triumph after a court order allowed them to reenter Zuccotti Park late Tuesday afternoon. (Photo by Carolyn Cole/Los Angeles Times via Getty Images)

ಪ್ಯಾಲೆಸ್ತೀನ್ ಪರ ಕಾರ್ಯಕರ್ತರು ಇಸ್ರೇಲ್ ವಿರುದ್ಧದ ಬಹಿಷ್ಕಾರ ಮತ್ತು ನಿರ್ಬಂಧಗಳು (BDS), ಅರಬ್ ವಸಂತದ ಕ್ರಾಂತಿಗಳು, ಮಹಿಳೆಯರ ವಿರುದ್ಧ ನಿಂದನೆ ಮತ್ತು ದೌರ್ಜನ್ಯದ ವಿರುದ್ಧ ಮಿ ಟೂ ಚಳುವಳಿ, ಅಸಮಾನತೆಯ ವಿರುದ್ಧದ Occupy Wallstreet, ಮಕ್ಕಳನ್ನು ಕಾರ್ಮಿಕರನ್ನಾಗಿ ದುಡಿಸುತ್ತಿರುವ ಕಂಪನಿ ಮತ್ತು ಬ್ರಾಂಡ್ ವಿರುದ್ಧದ ಕ್ಯಾಂಪೇನ್ ಇತ್ಯಾದಿ ಡಿಜಿಟಲ್ ಆಕ್ಟಿವಿಸಂನ ಪ್ರಮುಖ ಚಳವಳಿಗಳು.

ಇದರಲ್ಲಿ ನಾವು ಇನ್ನು ಮುಂದೆ ಹೆಚ್ಚಾಗಿ ಗಮನವಹಿಸಬೇಕಿರುವುದು ಸಾಮಾಜಿಕ ಮಾಧ್ಯಮಗಳು ಮತ್ತು ಅದನ್ನು ಜನಕ್ಕೆ ತಲುಪಿಸಲು ಸಾಧ್ಯಮಾಡುವ ಅಂತರ್ಜಾಲದ ನಿಯಂತ್ರಣದ ಬಗ್ಗೆ ಪ್ರಭುತ್ವ ನಡೆಸುವ ಸಂಚುಗಳನ್ನು. ಪ್ರಭುತ್ವ ಮತ್ತು ಆಳುವ ವರ್ಗಗಳು ಹೆಚ್ಚಾಗಿ ಸುಳ್ಳುಗಳನ್ನು ಹೇಳುವುದಿಲ್ಲ ಆದರೆ ಅರೆ ಸತ್ಯಗಳನ್ನು ಹರಿಯಬಿಡುತ್ತವೆ. ಜನರ ಒಗ್ಗಟ್ಟನ್ನು ಮುರಿದು ದಿಕ್ಕು ತಪ್ಪಿಸುವುದೇ ಅದರ ಕೆಲಸ. ಉದಾಹರಣೆಗೆ ಗಣರಾಜ್ಯೋತ್ಸವದ ದಿನ 99% ಟ್ರ್ಯಾಕ್ಟರ್ ಪ್ರತಿಭಟನೆ ಶಾಂತಿಯುತವಾಗಿದ್ದರು 1% ತನ್ನದೇ ಷಡ್ಯಂತ್ರದಿಂದ ಮಾಡಿದ ಕೆಂಪುಕೋಟೆ ಘಟನೆಯನ್ನು, ತಾನು ನಿಯಂತ್ರಿಸುತ್ತಿರುವ ಮಾಧ್ಯಮಗಳ ಮೂಲಕ ಸತ್ಯವನ್ನು ತಿರುಚಿ ಇಡೀ ಪ್ರತಿಭಟನೆಯ ಸ್ವರೂಪದ ಬಗ್ಗೆ ತಪ್ಪು ಮಾಹಿತಿ ನೀಡಲು ಪ್ರಯತ್ನಿಸಿದ್ದು.

ರೈತರ ಪರವಾಗಿ ಟ್ವೀಟ್ ಮಾಡುತ್ತಿದ್ದ ಅಕೌಂಟ್‌ಗಳನ್ನು ತಡೆಹಿಡಿಯಲು ಸೂಚನೆ ನೀಡಿದ್ದು, ರೈತ ಎಂಬ ಪದ ಉಪಯೋಗಿಸಿದ ಸ್ಟೇಟಸ್ ಮತ್ತು ಟ್ವೀಟ್‌ಗಳನ್ನು ಹೆಚ್ಚು ಜನಕ್ಕೆ ತಲುಪದೇ ಇರುವಂತೆ ಮಾಡುವುದು ನಡೆಯುತ್ತಿದೆ. ಆದ್ದರಿಂದ ಜನರ ಮಧ್ಯೆ ಪಾರದರ್ಶಕವಾಗಿ, ಸತ್ಯ ಹೇಳುವ ಬಗೆಯನ್ನು ಜನರೇ ಕಂಡುಕೊಳ್ಳಬೇಕಿದೆ. ವಾಟ್ಸಾಪ್‌ನಲ್ಲಿ ಹರಿಬಿಡುವ ಹಸಿ ಹಸಿ ಸುಳ್ಳುಗಳನ್ನೇ ಸತ್ಯವೆಂದು ನಂಬಿಸಿರುವ ಈ ಕಾಲಘಟ್ಟದಲ್ಲಿ ಹಳೆಯ ರೀತಿಯ ಸಂವಹನೆ ಮತ್ತು ಡಿಜಿಟಲ್ ಯುಗದ ಸಂವಹನೆಗೆ ಕೊಂಡಿ ಬೆಸೆದು ಒಂದು ಜನರ ಮಾಧ್ಯಮವನ್ನು ಸೃಷ್ಟಿಸಬೇಕಿದೆ. ಕತ್ತಲೆಯ ಸುಳ್ಳನ್ನು ಸತ್ಯದ ಕಿರಣಗಳಿಂದ ಬೆತ್ತಲೆ ಮಾಡಬೇಕಿದೆ.


ಇದನ್ನೂ ಓದಿ: ಕೋಮುವಾದ ಮತ್ತು ಜನದ್ರೋಹಿ ಮೀಡಿಯಾವನ್ನು ಬೆತ್ತಲು ಮಾಡಿದ ರೈತ ಚಳವಳಿ: ಡಿ. ಉಮಾಪತಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಭರತ್ ಹೆಬ್ಬಾಳ್
+ posts

LEAVE A REPLY

Please enter your comment!
Please enter your name here