ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಒಂದು ವರ್ಷ ತುಂಬಿದೆ. ಈ ಬಗ್ಗೆ ಶುಕ್ರವಾರದಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಪ್ರತಿಕ್ರಿಯಿಸಿ, “ರೈತರ ಅಚಲವಾದ ಸತ್ಯಾಗ್ರಹ, 700 ರೈತರ ಹುತಾತ್ಮತೆ ಮತ್ತು ಬಿಜೆಪಿಯ ದುರಹಂಕಾರಕ್ಕಾಗಿ ಈ ಆಂದೋಲನವನ್ನು ನೆನಪಿಟ್ಟುಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ 26 ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, “ರೈತರ ಚಳವಳಿಯ ಒಂದು ವರ್ಷ. ರೈತರ ಅಚಲ ಸತ್ಯಾಗ್ರಹ, 700 ರೈತರ ಹುತಾತ್ಮತೆ, ನಿರ್ದಯ ಬಿಜೆಪಿ ಸರ್ಕಾರದ ದುರಹಂಕಾರ ಮತ್ತು ‘ಅನ್ನದಾತರ’ ಮೇಲಿನ ದೌರ್ಜನ್ಯಕ್ಕಾಗಿ ನೆನಪಿಟ್ಟುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರೈತ ಹೋರಾಟಕ್ಕೆ ಐತಿಹಾಸಿಕ ಗೆಲುವು ಸವೆಸಿದ ಹಾದಿಯ ಕ್ರೊನಾಲಜಿ ಹೀಗಿತ್ತು
“ಆದರೆ ರೈತನ ಜಯಘೋಷ ಹಿಂದೆಯು ಭಾರತದಲ್ಲಿ ಸದಾ ಇತ್ತು, ಈಗಲೂ ಇದೆ, ಮುಂದೆಯು ಇರುತ್ತದೆ. ಇದಕ್ಕೆ ಸಾಕ್ಷಿ ರೈತರ ಹೋರಾಟಕ್ಕೆ ಸಿಕ್ಕ ಜಯ. ಜೈ ಕಿಸಾನ್” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಪ್ರಧಾನಿ ಮೋದಿ ಕಳೆದ ಶುಕ್ರವಾರ ಅನಿರೀಕ್ಷಿತವಾಗಿ ಮೂರು ನೂತನ ಕೃಷಿ ಕಾನೂನನ್ನು ವಾಪಾಸು ಪಡೆಯುವುದಾಗಿ ಘೋಷಣೆ ಮಾಡಿದ್ದರು. ಅದರೆ, ಸರ್ಕಾರವು ಸಂಸತ್ತಿನಲ್ಲಿ ಔಪಚಾರಿಕವಾಗಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೆ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ರೈತ ಮುಖಂಡರು ಹೇಳಿದ್ದಾರೆ.
ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಾರಿಗೆ ತಂದ ಮೂರು ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: ರೈತ ಹೋರಾಟಕ್ಕೆ ಒಂದು ವರ್ಷ: ರಾಜ್ಯದಲ್ಲಿ ನಡೆದ ಪ್ರತಿಭಟನೆ ಚಿತ್ರಗಳಲ್ಲಿ ನೋಡಿ


