ಕರೋನಾ ವೈರಸ್ ತಂದಿರುವ ಈ ಮಹಾ ವಿಪತ್ತಿನಿಂದ ಯಾವಾಗ ಹೊರಬರುತ್ತೇವೆ, ನಂತರದ ಪರಿಸ್ಥಿತಿ ಏನು ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ಈಗಾಗಲೇ ಬದುಕುಳಿಯಲು ಹರಸಾಹಸ ಪಡುತ್ತಿರುವ ರೈತರ ಮೇಲಿನ ಈ ಲಾಕ್ಡೌನ್ ಪರಿಣಾಮ ಊಹೆಗೂ ನಿಲುಕದಂತಾಗಿದ್ದು, ‘ಕಾಯಿಲೆಗಿಂತ ಶುಶ್ರುಷೆಯೇ ಭೀಕರ’ ಎನ್ನುವ ಹಾಗಾಗಿದೆ.
ಕೃಷಿವಲಯ ಎದುರಿಸುತ್ತಿರುವ ಬಿಕ್ಕಟ್ಟು, ವಲಸೆ, ರೈತರ ಆತ್ಮಹತ್ಯೆ ಇತ್ಯಾದಿಗಳ ಬಗ್ಗೆ ಪ್ರಸ್ತಾವನೆ ಅಗತ್ಯವೇ ಇಲ್ಲ. ಬೇಸತ್ತ ರಾಜ್ಯದ ರೈತರು ಈಗಾಗಲೇ ಸುಮಾರು 25 ಲಕ್ಷ ಹೆಕ್ಟರ್ (ಶೇಕಡ 16) ಕೃಷಿಭೂಮಿಯನ್ನು ಬೇಸಾಯ ಮಾಡದೆ ಬೀಳು ಬಿಟ್ಟಿರುವರು. ಜೊತೆಗೆ ಪ್ರತಿ ಸಾಲಿನಲ್ಲಿ ಕನಿಷ್ಠ ಒಂದುವರೆ ಲಕ್ಷ ಎಕರೆಯಷ್ಟು ಕೃಷಿ ಭೂಮಿ ರಾಜ್ಯದ ರೈತರ ಕೈತಪ್ಪಿ ಇತರ ಉದ್ದೇಶಗಳಿಗೆ ಪರಿವರ್ತನೆಯಾಗುತ್ತಿದೆ. ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿ ಅತಿಕ್ಷಾರ, ಲವಣ, ಫಲವತ್ತತೆ ನಾಶದಿಂದ ನಿರುಪಯುಕ್ತವಾಗುತ್ತಿದೆ. ಕರೋನಾ ಮಹಾಮಾರಿಗಿಂತ ಲಾಕ್ಡೌನ್ ಹೊಡೆತಕ್ಕೆ ಅಧಿಕ ತತ್ತರಿಸಿರುವ ರೈತಾಪಿ ವರ್ಗಕ್ಕೆ ಭರವಸೆ ನೀಡಿ ಆಹಾರ ಉತ್ಪಾದನೆಯ ಮಹತ್ಕಾರ್ಯದಿಂದ ಹಿಂಜರಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಈಗ ಸರ್ಕಾರದ ಮೇಲಿದೆ.
ರೈತರು ಬೆಳೆದು ಬೆಳೆ, ಮಾರುಕಟ್ಟೆ ಇಲ್ಲದೆ ರಸ್ತೆಗೆ ಸುರಿಯುವ ಪರಿಸ್ಥಿತಿ ಜೊತೆಗೆ ಖರೀದಿಸಿದ ಲಕ್ಷಾಂತರ ಟನ್‌ಗಳಷ್ಟು ಆಹಾರ ಗೋದಾಮುಗಳಲ್ಲಿ ಕೊಳೆಯುತ್ತಿರುವುದು ಒಂದೆಡೆಯಾದರೆ ದೇಶದಲ್ಲಿ ಇಪ್ಪತ್ತು ಕೋಟಿ ಜನ ಹೊತ್ತಿನ ಕೂಳಿಗೂ ಗತಿಯಿಲ್ಲದೆ ಹಸಿವಿನಿಂದ ನರಳುತ್ತಿರುವುದು ಇನ್ನೊಂದೆಡೆ. ಆಹಾರ, ಧಾನ್ಯ, ಹಾಲು, ತರಕಾರಿ, ಹಣ್ಣು ಈ ಎಲ್ಲಾ ಪೋಷ್ಟಿಕಾಂಶಯುಕ್ತ ಆಹಾರ ರಾಜ್ಯದಲ್ಲಿ ಸಮೃದ್ಧ ಉತ್ಪಾದನೆಯಾಗುತ್ತಿದ್ದರೂ ಇವುಗಳನ್ನು ಸಮರ್ಪಕವಾಗಿ ಬಡಬಗ್ಗರಿಗೆ ಹಂಚುವ ಬಗ್ಗೆ ಕ್ರಮ ಕೈಗೊಳ್ಳದಿರುವುದುರಿಂದ ಹೈದರಾಬಾದಿನ “ರಾಷ್ಟ್ರೀಯ ಪೌಷ್ಟಿಕಾಂಶ ನಿರ್ವಹಣ ಬ್ಯೂರೋ” ವರದಿ ಪ್ರಕಾರ ರಾಜ್ಯದಲ್ಲಿ ಹಸಿವು, ಅಪೌಷ್ಟಿಕತೆ, ಮಹಿಳೆಯರಲ್ಲಿ ರಕ್ತ ಹೀನತೆ, ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಅತಿಯಾಗಿರುತ್ತದೆ. ಈ ಕ್ರೂರ ವೈರುಧ್ಯಗಳು ಇನ್ನು ಮುಂದುವರಿಯಲು ಸಾಧ್ಯವೇ ಇಲ್ಲ.

ರೈತರಿಗೆ ಬೀಜ, ಗೊಬ್ಬರ, ನೀರು, ಸಾಲ ನೀಡಿ ಬರಿದೇ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹಿಸಿದರೆ ಸಾಲದು, ರೈತರ ಉತ್ಪನಕ್ಕೆ ಯೋಗ್ಯ ಬೆಲೆ ಮತ್ತು ಮಾರುಕಟ್ಟೆ ಹಾಗೂ ಉತ್ಪಾದಿಸಿದ ಆಹಾರವನ್ನು ಕಡುಬಡವರಿಗೂ ತಲುಪಿಸಿ ಹಸಿವನ್ನು ಹೊಡೆದೋಡಿಸುವ ಸಮರ್ಥ ಹಂಚಿಕೆ ವ್ಯವಸ್ಥೆಗಳು ಇಂದು ದೇಶದ ಆದ್ಯತೆಗಳಾಗಬೇಕಾಗಿವೆ. ಹಾಗೆ, ದೇಶಕ್ಕೆ ಅನ್ನ, ಆಹಾರ ನೀಡಿರುವ ರೈತಾಪಿ ವರ್ಗ ಗೌರವಯುತ ಬದುಕು ನಡೆಸಲು ಕನಿಷ್ಠ ಆದಾಯದ ಭದ್ರತೆಯನ್ನು ನೀಡಲೇಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಅಮೂಲ್ಯ ಕೃಷಿಭೂಮಿಯ ಸದ್ಬಳಕೆ ಮಾಡುವ ನೀತಿಗಳು ಹಾಗೆ ಪರಿಸರದ ದೃಷ್ಟಿಯಿಂದ ಶುದ್ಧವಾದ ‘ಸುಸ್ಥಿರ ಕೃಷಿ’ ಪದ್ಧತಿಯನ್ನು ಹುಟ್ಟುಹಾಕಲು ಕಾಲ ಈಗ ಪಕ್ವವಾಗಿದೆ.
ಈ ಕಾರ್ಯಗಳು ಜಾಗತೀಕರಣ ಮತ್ತು ಉದಾರೀಕರಣ ನೀತಿಗಳಿಂದ ಬಲಿಷ್ಠಗೊಂಡಿರುವ ಮಾರುಕಟ್ಟೆ ಅರ್ಥವ್ಯವಸ್ಥೆಯಿಂದಾಗಲಿ ಅಥವಾ ಆ ಮೂಲಕ ಬೆಳೆದಿರುವ ಖಾಸಗಿ ವಲಯದ ಮೂಲಕವಾಗಲಿ ಸಾಧ್ಯವಿಲ್ಲ. ಜವಾಬ್ದಾರಿಯುತ ಸರಕಾರದ ನೇರ ‘ಹಸ್ತಕ್ಷೇಪದಿಂದ’ ಮಾತ್ರ “ಹಸಿದ ಹೊಟ್ಟೆಗೆ ಅನ್ನ, ರೈತರಿಗೆ ಆದಾಯ ಭದ್ರತೆ” ನೀಡಲು ಸಾಧ್ಯ ಎನ್ನುವ ಸೈದ್ಧಾಂತಿಕ ಬದ್ಧತೆ ಈಗ ಅತಿ ಮುಖ್ಯ. ಲಾಕ್ಡೌನ್ ನಂತರ ಕೃಷಿ ವಲಯದ ಮೂಲಕ ಗ್ರಾಮೀಣ ಪುನಶ್ಚೇತನಕ್ಕೆ ಕೆಳಗಿನ ಪ್ರಮುಖ ಐದು ವಿಚಾರಗಳನ್ನು ಗಂಭಿರವಾಗಿ ಪರಿಗಣಿಸಬೇಕು:
1. ಹಂಚಿಕೆ ವ್ಯವಸ್ಥೆಗೆ ಸಮಗ್ರ ಕಾಯಕಲ್ಪ: ದೇಶ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳತ್ತ ಸರಿದ ಹಾಗೆ ಹಂಚಿಕೆ ಬಗೆಗಿನ ಕಾಳಜಿ ಕಡಿಮೆಯಾಯಿತು. ಪರಿಣಾಮವಾಗಿ ಇಂದು ದೇಶದಲ್ಲಿ ಹಸಿವು, ಅಪೌಷ್ಟಿಕತೆಗಳು ಒಂದು ಕಡೆ ತಾಂಡವಾಡುತ್ತಿದ್ದರೆ ಇನ್ನೊಂದೆಡೆ ಆಹಾರ ಹಣ್ಣು-ತರಕಾರಿ, ಹಾಲಿನ ಉತ್ಪನ್ನಗಳು ಬೇಡಿಕೆ ಇಲ್ಲದೆ ಕೊಳೆಯುವಂತಾಗಿದೆ. ಈಗಂತೂ ಕರೋನ ಮಹಾ ಮಾರಿಗೆ ಜಗತ್ತೇ ನಡುಗಿ ಜನ ಬದುಕುಳಿಯಲು ಹರಸಾಹಸ ಪಡುತ್ತಿರುವಾಗ ಆಹಾರ ಉತ್ಪನ್ನಗಳ ಸಮರ್ಪಕ ವಿತರಣೆ ದೇಶದ ಪ್ರಥಮ ಆದ್ಯತೆಯಾಗಿ ಮೇಲೆದ್ದಿದೆ.
2013ರಲ್ಲಿ ಜಾರಿಗೆ ಬಂದಿರುವ ಮಹತ್ವದ “ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ” ಪೌಷ್ಠಿಕ ಆಹಾರದ ಹಂಚಿಕೆಯನ್ನು ಸಮಗ್ರವಾಗಿ ಕೈಗೊಳ್ಳುವ ಅವಕಾಶ ಒದಗಿಸಿರುತ್ತದೆ. ಇದರ ಉಪಯೋಗ ಪಡೆದು ಹಿಂದಿನ ರಾಜ್ಯ ಸರ್ಕಾರ ಪಡಿತರದ ಅಡಿಯಲ್ಲಿ ಎರಡು ಪ್ರಮುಖ ಸಿರಿಧಾನ್ಯಗಳಾದ ರಾಗಿ ಮತ್ತು ಜೋಳಗಳನ್ನು ಜೊತೆಗೆ ಪ್ರೊಟೀನ್ ಯುಕ್ತ ತೊಗರಿಯನ್ನೂ ವಿತರಿಸಿರುತ್ತದೆ. ಇವುಗಳ ಜೊತೆಗೆ ಖಾದ್ಯತೈಲ, ಇತರ ದ್ವಿದಳಧಾನ್ಯಗಳು, ತೆಂಗು, ಕೊಬ್ಬರಿ ಅಷ್ಟೇಕೆ ಈರುಳ್ಳಿ, ಟೊಮೆಟೊ, ಆಲೂಗೆಡ್ಡೆ, ಮೆಣಸು ಬಾಳೆಹಣ್ಣು ಇವೆಲ್ಲವುಗಳನ್ನು ವಿತರಿಸಲು ಅವಕಾಶವಿದೆ. ಈ ಮೂಲಕ ಬಡಬಗ್ಗರ ಆಹಾರ ಮತ್ತು ಪೌಷ್ಠಿಕ ಭದ್ರತೆಗಳೆರಡನ್ನ ಸಾಧಿಸಿ ಜೊತೆಗೆ ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಸ್ಥಿರತೆಯನ್ನೂ ತರಬಹುದಾಗಿದೆ.
ಪಡಿತರದ ಜೊತೆಗೆ ರಾಜ್ಯಸರ್ಕಾರದ ‘ಸಮಾಜ ಕಲ್ಯಾಣ ಇಲಾಖೆ’ಯಡಿಯಲ್ಲಿ ಅಂಗನವಾಡಿ, ಶಾಲಾಮಕ್ಕಳಿಗೆ ಮಧ್ಯಾಹ್ನದ ಊಟ, ವಿದ್ಯಾರ್ಥಿಗಳ ವಸತಿನಿಲಯ, ಸಮಗ್ರ ಶಿಶುಅಭಿವೃದ್ದಿ ಜೊತೆಗೆ “ಇಂದಿರಾ ಕ್ಯಾಂಟೀನ್”ನಂತಹ ಯೋಜನೆಗಳಡಿ ಬೃಹತ್ ಪ್ರಮಾಣದ ಆಹಾರ ಹಂಚಿಕೆ ನಡೆಯುತ್ತಿದೆ. ಕರೋನ ಮಹಾಮಾರಿ ಒಡ್ಡಿರುವ ಈ ಸಂಕಟದ ಹಿನ್ನೆಲೆಯಲ್ಲಿ ಸರ್ಕಾರ ಬಡಬಗ್ಗರ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ. ಜನರ ಆರೋಗ್ಯಕ್ಕೆ ಮೂಲ ಪೌಷ್ಟಿಕಾಂಶಯುಕ್ತ ಆಹಾರವಾಗಿರುವಾಗ, ಕರ್ನಾಟಕದಂತಹ ಪ್ರಗತಿಪರ ರಾಜ್ಯ ಒಂದು ಮೇಲಿನ ಎಲ್ಲಾ ಕ್ರಮಗಳನ್ನು ಮತ್ತಷ್ಟು ವಿಸ್ತರಿಸಿ ಕಟ್ಟಕಡೆಯ ಬಡವನಿಗೂ ಪೌಷ್ಟಿಕಾಂಶ ಆಹಾರ ಉತ್ಪನ್ನಗಳ ಹಂಚಿಕೆಯ ನೇರ ಜವಾಬ್ದಾರಿ ಹೊರಬೇಕು.
ಸರ್ಕಾರದ ನೇರ ಹಸ್ತಕ್ಷೇಪದಿಂದಲೆ ಪೆಟ್ರೋಲ್, ಡೀಸೆಲ್ ಮತ್ತು ಅಡಿಗೆ ಇಂಧನಗಳು ದೇಶದ ಮೂಲೆ ಮೂಲೆಗೆ ಸರಬರಾಜಾಗುತ್ತಿರುವ ಹಂಚಿಕೆ ವ್ಯವಸ್ಥೆ ಒಂದು ನಮ್ಮ ಮುಂದಿದೆ. ರಾಜಕೀಯ ಇಚ್ಛಾಶಕ್ತಿ ಹೊಂದಿರುವ ಸರ್ಕಾರ ಒಂದರಿಂದ ಆಹಾರ ವಸ್ತುಗಳಲ್ಲಿ ಈ ರೀತಿಯ ಸಮರ್ಥ ವ್ಯವಸ್ಥೆ ತರುವುದು ಅಸಾಧ್ಯವೇನಲ್ಲ. ಈ ಹಂಚಿಕೆಗೆ ಅಗತ್ಯವಿರುವ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಸರ್ಕಾರ ನೇರವಾಗಿ ರೈತರಿಂದ ಖರೀದಿಸುವ ನಿಟ್ಟಿನಲ್ಲಿ ಒಂದು ಸಮಗ್ರ ಶಾಸನ ರೂಪಿಸಬೇಕು.
2. ಸದೃಢ ಮಾರುಕಟ್ಟೆ ಮತ್ತು ಲಾಭದಾಯಕ ಬೆಲೆ : ಉತ್ಪಾದನೆಯ ಹೊರತಾಗಿ ಬೇರೇನು ಮಾಡಲು ಅಶಕ್ತನಾಗಿರಿವ ರೈತನಿಗಿಂದು ಖರೀದಿ, ಮಾರುಕಟ್ಟೆ, ಶೇಖರಣೆ, ಸಂಸ್ಕರಣೆ ಹೀಗೆ ಎಲ್ಲಾ ‘’ಕೊಯಿಲೋತ್ತರ ಸೇವೆ’’ಗಳನ್ನು ಸರ್ಕಾರವೇ ನೇರವಾಗಿ ಒದಗಿಸಬೇಕು. ಇಂದಿನ ನಿಯಂತ್ರಿತ ಮಾರುಕಟ್ಟೆ (ಎಪಿಎಂಸಿ) ವ್ಯವಸ್ಥೆಯನ್ನು ಪಟ್ಟಭದ್ರ ಹಿತಾಸಕ್ತಿಗಳಿಂದ ಬಿಡಿಸಬೇಕಾಗಿದ್ದರೆ ಸಹಕಾರಿ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ಕಾರದಿಂದ ಮುಕ್ತಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಸಾಂಘಿಕ ಚೌಕಾಸಿ ಶಕ್ತಿ ಹೆಚ್ಚಿಸಲು ಮಾಹಿತಿ ತಂತ್ರಜ್ಞಾನ ಆಧಾರಿತ ಸ್ವಾಯತ್ತ “ಡಿಜಿಟಲ್ ಸಹಕಾರಿ / ಗುಂಪು ಮಾರಾಟ ವೇದಿಕೆ” ಒಂದು ಈಗ ಅತ್ಯಗತ್ಯ. ಆಹಾರ ಉತ್ಪನ್ನಗಳ ಮಾರುಕಟ್ಟೆ, ಹಂಚಿಕೆಗೆ ಸಂಬಂಧಿಸಿದ ವಿವಿಧ ಇಲಾಖೆಗಳನ್ನು ಒಂದೇ ಸಚಿವಾಲಯದ ವ್ಯಾಪ್ತಿಗೆ ತಂದು ಮುಖ್ಯಮಂತ್ರಿಗಳೆ ನಿರ್ವಹಿಸಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ರೈತರ ಉತ್ಪನ್ನಗಳ ದಾರಣೆ ಮತ್ತು ಖರೀದಿ ಪ್ರಕ್ರಿಯೆಗಳನ್ನು ಕಾಯಿದೆ ವ್ಯಾಪ್ತಿಗೆ ತಂದು ಬೆಂಬಲ ಬೆಲೆ ಅಥವಾ ತತ್ಸಮಾನ ಬೆಲೆಯಲ್ಲೆ ರಾಜ್ಯದ ರೈತರ ಎಲ್ಲ ಉತ್ಪನ್ನಗಳ ಖರೀದಿ ಯಾಗುವ ನಿಟ್ಟಿನಲ್ಲೂ ಶಾಸನ ರೂಪಿಸಬೇಕು.
3. ರೈತರಿಗೆ ಸಮರ್ಪಕ ಆದಾಯ ವರ್ಗಾವಣೆ: ರೈತರ ಆದಾಯವನ್ನು ದ್ವಿಗುಣಗೊಳಿಸುವ ಘೋಷಣೆ ಹೊರಬಿದ್ದು ವರದಿಗಳ ಸರಮಾಲೆಯೇ ಬಂದಿದ್ದರೂ ಸ್ಪಷ್ಟ ಕಾರ್ಯಯೋಜನೆ ಇನ್ನೂ ರೂಪಿಸಬೇಕಾಗಿದೆ. ಇತ್ತೀಚೆಗಿನ ದಿನಗಳಲ್ಲಿ ರೈತಾಪಿ ವರ್ಗ ಸ್ವಲ್ಪ ನಿರೀಕ್ಷಿಸಬಹುದಾದ ಆದಾಯ ವರ್ಗಾವಣೆ ಕ್ರಮಗಳಾದ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್’, ತೆಲಂಗಾಣದ ‘ರೈತಬಂಧು’ ಒಡಿಸ್ಸಾದ ‘ಕಾಲಿಯಾ’ ಇತ್ಯಾದಿಗಳು ಚಾಲ್ತಿಗೆ ಬಂದಿರುವುದು ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ಸಮರ್ಪಕ ಆದಾಯ ವರ್ಗಾವಣೆಗೆ ‘ರೈತ ಆದಾಯ ಆಯೋಗ’ ಒಂದು ರಾಷ್ಟ್ರಮಟ್ಟದಲ್ಲಿ ಕೂಡಲೇ ಜಾರಿಗೆ ಬರಬೇಕು. ರೈತರಿಗೆ ಕೃಷಿ ಮೂಲದ ಆದಾಯವನ್ನು ಖಾತರಿಗೊಳಿಸಲು ಬೆಳೆ ವಿಮೆಗಿಂತ ‘ಆದಾಯವಿಮೆ’ ಬೇಕಾಗಿದೆ. ಈ ಎಲ್ಲ ಕ್ರಮಗಳ ಮೂಲಕ ಎಂ.ಎಸ್. ಸ್ವಾಮಿನಾಥನ್ ವರದಿಯಲ್ಲಿ ಪ್ರಸ್ತಾಪಿಸಿರುವ ಹಾಗೆ ರೈತಾಪಿ ವರ್ಗದ ಆದಾಯ ಸರಕಾರಿ ನೌಕರಿಯಲ್ಲಿ ದೊರಯುವ ಕನಿಷ್ಠ ವೇತನಕ್ಕಾದರೂ ಹತ್ತಿರವಾಗಿದ್ದು ಖಾತರಿಯಾಗಿ ದೊರೆಕುವಂತಾಗಬೇಕು.
4. ಕೃಷಿಭೂಮಿ ಸದ್ಬಳಕೆ ಮತ್ತು ಬೆಳೆ ಯೋಜನೆ: ರಾಜ್ಯದ ಜನರ ಆಹಾರ ಭದ್ರತೆ, ಸ್ಥಳೀಯ ಬೇಡಿಕೆ, ಗ್ರಾಹಕರ ಹಿತಾಸಕ್ತಿ ಮತ್ತು ಕೈಗಾರಿಕೆಗೆ ಕಚ್ಚಾ ಸಾಮಗ್ರಿ ಈ ಎಲ್ಲಾ ಅಗತ್ಯಗಳಿಗೆ ಅನುಗುಣವಾಗಿ ರೈತರು ಉತ್ಪಾದಿಸಿದರೆ ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಮತೋಲನ ಏರ್ಪಾಡಾಗಿ ಬೆಲೆ ಸ್ಥಿರತೆ ಸಾಧಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಉತ್ಪಾದನಾ ನೀತಿ ಅಗತ್ಯ, ಇದಕ್ಕೆ ಹೊಂದಿಕೊಂಡಂತೆ “ಜಿಲ್ಲಾವಾರು ಬೆಳೆ ಯೋಜನೆ” ರೂಪಿಸುವ ಜವಾಬ್ದಾರಿಯನ್ನು ರಾಜ್ಯ ಯೋಜನಾ ಮಂಡಳಿ ಹೊರಬೇಕು. ಹಾಗೆ, ಪರಿಸರ ದೃಷ್ಟಿಯಿಂದ ಶುದ್ಧವಾದ ಸಾವಯವ/ ನೈಸರ್ಗಿಕ/ಸುಸ್ಥಿರ ಕೃಷಿ ಪದ್ದತಿಗೆ ಆದ್ಯತೆ ಬರಬೇಕು. ಬೀಳುಭೂಮಿ ಸದ್ಬಳಕೆಗೆ ಕೇರಳ ಮಾದರಿಯಲ್ಲಿ ‘ಮಹಿಳಾ ಸಹಕಾರಿ ಸಂಘ’ ಪ್ರೋತ್ಸಾಹಿಸಬೇಕು. ಸಹಕಾರಿ ಕೃಷಿಯನ್ನು ಪ್ರೋತ್ಸಹಿಸುವ ಮೂಲಕ ಭೂಸುಧಾರಣೆಯ ಮುಂದಿನ ಹಂತಕ್ಕೆ ರಾಜ್ಯವನ್ನು ಕೊಂಡೊಯ್ಯಬೇಕು. ಈ ಎಲ್ಲ ಕಾರ್ಯಕ್ರಮಗಳ ಶೀಘ್ರ ಅನುಷ್ಠಾನಕ್ಕೆ ರಾಜ್ಯದಲ್ಲಿ “ಕೃಷಿ ಭೂಮಿ ಸದ್ಬಳಕೆ ಮಂಡಳಿ/ಆಯೋಗ” ಒಂದು ತುರ್ತು ಅಗತ್ಯ.
5. ಪ್ರತ್ಯೇಕ ಕೃಷಿ ಬಜೆಟ್ ಮತ್ತು ಅಧಿವೇಶನ: ಲಾಕ್ಡೌನ್‌ನಿಂದ ಜರ್ಜರಿತವಾಗಿರುವ ಕೃಷಿ ವಲಯದ ಪುನಶ್ಚೇತನಕ್ಕೆ ರಾಜ್ಯಸರ್ಕಾರ ಅತಿ ಶೀಘ್ರ ಪ್ರತ್ಯೇಕ ಕೃಷಿ ಬಜೆಟ್ ಕರೆಯಬೇಕು. ಈಗ ಹಿಂತಿರುಗಿದ ಗಮನಾರ್ಹ ಪ್ರಮಾಣದ ವಲಸೆ ಕಾರ್ಮಿಕರು ಹಳ್ಳಿಯಲ್ಲಿ ಉಳಿಯುವ ಸಾಧ್ಯತೆ ಇದೆ. ಕೃಷಿ ಯಾಂತ್ರೀಕರಣ, ಸಂಸ್ಕರಣೆಯಿಂದ ಗ್ರಾಮೀಣ ಕೈಗಾರಿಕೆ, ಉದ್ದಿಮೆಗಳಲ್ಲಿ ಈ ನುರಿತ ಕಾರ್ಮಿಕರನ್ನು ರಚನಾತ್ಮಕವಾಗಿ ಬಳಸಿಕೊಳ್ಳಲು ಇದು ಸದಾವಕಾಶ. ಹಾಗೆ, ಕೆಲವರಾದರೂ ಉನ್ನತ ಹುದ್ದೆಯಲ್ಲಿದ ಯುವಕರು ಗ್ರಾಮಗಳಲ್ಲಿ ವಾಸಿಸಿ ಅರ್ಥಪೂರ್ಣ ಬದುಕು ಕಂಡುಕೊಳ್ಳಲು ಸಿದ್ಧರಿದ್ದು ಗ್ರಾಮೀಣ ಪುನಶ್ಚೇತನಕ್ಕೆ ಪೂರಕವಾದ ನವೋದ್ಯಮದಲ್ಲಿ ಇವರನ್ನು ತೊಡಗಿಸಿಕೊಳ್ಳಲು ಇದು ಸುವರ್ಣಾವಕಾಶ. ಈ ನಿಟ್ಟಿನಲ್ಲಿ ಆಯವ್ಯಯದ ಹಣದಲ್ಲಿ ಕನಿಷ್ಠ ಶೇಕಡ 50ರಷ್ಟನ್ನು ಬಳಸಬೇಕು. ಲಾಕ್ಡೌನ್ ನಂತರದ ರೈತರ ಸಮಸ್ಯೆ ಚರ್ಚೆ ಮತ್ತು ಪರಿಹಾರಕ್ಕೆ ಪ್ರತ್ಯೇಕ ಲೋಕಸಭಾ ಅಧಿವೇಶನ ಜರುಗಿಸಲು ಕೇಂದ್ರ ಸರ್ಕಾರ ತಕ್ಷಣ ಮುಂದಾಗುವಂತೆ ಒತ್ತಡ ಹೇರಬೇಕು.
(ಲೇಖಕರು ಕೃಷಿ ಆರ್ಥಿಕ ತಜ್ಞರು ಮತ್ತು “ಕರ್ನಾಟಕ ಕೃಷಿ ಬೆಲೆ ಆಯೋಗ’’ದ ಮಾಜಿ ಅಧ್ಯಕ್ಷರು)
ಇದನ್ನೂ ಓದಿ: ಕೃಷಿ ಕ್ಷೇತ್ರದ ಸಮಸ್ಯೆಗಳು: ಡಾ.ಕಮ್ಮರಡಿಯವರ ಲೇಖನ ಸರಣಿ -ಆಹಾರ ಭದ್ರತೆ ನೀಡಿದ ರೈತರ ಪಾಡೇನು?


