ವಲಸೆ ಕಾರ್ಮಿಕರ ಮೇಲಿನ ಸರ್ಕಾರದ ಶೋಷಣೆ ನಿರಂತರವಾಗಿ ಮುಂದುವರೆದಿದೆ. ಕಳೆದ ಸೋಮವಾರ ಉಚಿತ ರೈಲು ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ ಎಂದು ಬಡಾಯಿ ಕೊಚ್ಚಿಕೊಂಡಿದ್ದ ಕೇಂದ್ರ ಸರ್ಕಾರ ಕಾರ್ಮಿಕರಿಂದ ಹಣ ವಸೂಲಿ ಮಾಡಿಯೇ ರೈಲು ಓಡಿಸುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ವಲಸೆ ಕಾರ್ಮಿಕರನ್ನು ಮೆಜೆಸ್ಟಿಕ್‌ನಿಂದ ಮಾಲೂರು, ಚಿಕ್ಕಬಾಣಾವರ ಸೇರಿದಂತೆ ಹಲವು ರೈಲು ನಿಲ್ದಾಣಕ್ಕೆ ಕರೆದೊಯ್ಯುವ ಬಿಎಂಟಿಸಿ ಬಸ್‌ಗಳಿಗೂ ದುಪ್ಪಟ್ಟು/ಮೂರು ಪಟ್ಟು ಹಣ ವಸೂಲಿ ಮಾಡಿಯೇ ಅವನ್ನು ರೈಲಿಗೆ ಹತ್ತಿಸಲಾಗುತ್ತಿದ್ದು, ಈಗಾಗಲೇ ಬೆಂದು ಬಸವಳಿದಿರುವ ಕಾರ್ಮಿಕರ ಮತ್ತಷ್ಟು ಶೋಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ

ಮೇ 1 ರಂದು ರೈಲು ಸೇವೆ ಒದಗಿಸುತ್ತೇವೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ ಆಗ ಕಾರ್ಮಿಕರು ಟಿಕೆಟ್ ಖರೀದಿಸುವುದು ಕಡ್ಡಾಯವಾಗಿತ್ತು. ಇದನ್ನು ವಿರೋಧಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕಾರ್ಮಿಕರ ಟಿಕೆಟ್ ಹಣವನ್ನು ಕಾಂಗ್ರೆಸ್ ಪಕ್ಷ ಭರಿಸಲಿದೆ ಎಂದು ಘೋಷಿಸಿದ್ದರು.
ಇದನ್ನೂ ಓದಿ: ದೇಶದಾದ್ಯಂತ ಕಾರ್ಮಿಕರ ರೈಲು ಪ್ರಯಾಣದರವನ್ನು ಕಾಂಗ್ರೆಸ್ ಭರಿಸಲಿದೆ: ಸೋನಿಯಾ ಗಾಂಧಿ
ಆಗ ಸ್ಪಷ್ಟನೆ ನೀಡಿದ್ದ ಕೇಂದ್ರ ಸರ್ಕಾರ ತಾನು ಶೇ.85% ಹಣ ಒದಗಿಸುವುದಾಗಿಯೂ ರಾಜ್ಯ ಸರ್ಕಾರಗಳು ಶೇ.15% ಕಟ್ಟಿದರೆ ಸಾಕುಕ, ಉಚಿತ ರೈಲು ಪ್ರಯಾಣ ಎಂದು ಘೋಷಿಸಿತ್ತು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ರವರು ಟ್ರೈನ್ ಪ್ರಯಾಣ ಉಚಿತವಾಗಿದೆ ಎಂದು ಘೋಷಿಸಿದ್ದರು. ಈಗ ನೋಡಿದರೆ ಕರ್ನಾಟಕದ ಬೆಂಗಳೂರಿನಿಂದ ಹೊರಡುತ್ತಿರುವ ಎಲ್ಲಾ ವಲಸೆ ಕಾರ್ಮಿಕರಿಂದ ಟಿಕೆಟ್‌ಗಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ಕಷ್ಟದಲ್ಲಿರುವ ವಲಸೆ ಕಾರ್ಮಿಕರು ಟಿಕೆಟ್ ಹಣ ಭರಿಸಲಾಗದೇ ಒಡ್ಡಾಡುವ ಪರಿಸ್ಥಿತಿ ಬಂದಿದೆ.
ಪಿಎಂ ಕೇರ್ಸ್ ಹಣ ಎಲ್ಲಿಗೋಗುತ್ತಿದೆ?
ವಲಸೆ ಕಾರ್ಮಿಕರು ರೈಲು ಇಲ್ಲದೇ, ಇದ್ದರೂ ದುಡ್ಡು ಇಲ್ಲದೇ ಕಾಲ್ನಡಿಗೆಯಲ್ಲಿ ತಮ್ಮ ಊರುಗಳಿಗೆ ಹೊರಟಿರುವ ದೃಶ್ಯಗಳು ಮನಕಲಕುತ್ತಿವೆ. ಇಂತಹ ಸಂದರ್ಭದಲ್ಲಿ ಅವರ ಸಹಾಯಕ್ಕೆ ನಿಲ್ಲಬೇಕಿದ್ದ ಕೇಂದ್ರ ಸರ್ಕಾರ ಅವರ ಬಳಿಯೇ ಲೂಟಿಗಿಳಿದಿದೆ. ಸರ್ಕಾರದ ಪಿಎಂ ಕೇರ್ಸ್ ನಿಧಿಗೆ ಸಾವಿರಾರು ಕೋಟಿ ಹಣ ಹರಿದುಬಂದಿದ್ದರು ಅದರ ಮಾಹಿತಿ ನೀಡುತ್ತಿಲ್ಲ ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ. ಅದರಿಂದ ಹಣ ತೆಗೆದು ಕಾರ್ಮಿಕರ ರೈಲು ಪ್ರಯಾಣಕ್ಕೆ ನೀಡಬೇಕು ಎಂಬ ಆಗ್ರಹ ಜೋರಾಗಿ ಕೇಳಿಬಂದಿದೆ.
ಅಲ್ಲದೇ ಒಂದು ರೈಲಿನಲ್ಲಿ ಕೇವಲ 1200 ಜನರನ್ನು ಮಾತ್ರ ಕರೆದೊಯ್ಯಲಾಗುತ್ತಿದೆ. ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು 5-6 ಲಕ್ಷ ಜನ ವಲಸೆ ಕಾರ್ಮಿಕರು ಸಿಕ್ಕಿಕೊಂಡಿದ್ದು ಅವರೆಲ್ಲರನ್ನು ಅವರ ಸ್ವಂತ ಊರುಗಳಿಗೆ ತಲುಪಿಸಲು ಕನಿಷ್ಟ 2 ತಿಂಗಳು ಸಮಯ ಬೇಕಾಗುತ್ತದೆ. ಇದು ಕಾರ್ಮಿಕರ ಹತಾಶೆಯನ್ನು ಹೆಚ್ಚಿಸಲಿದೆ. ಹಾಗಾಗಿ ಸರ್ಕಾರ ಹೆಚ್ಚು ರೈಲುಗಳನ್ನು ಓಡಿಸಬೇಕೆಂದ ಆಗ್ರಹ ಕೇಳಿಬಂದಿದೆ.
ಒಟ್ಟಾರೆಯಾಗಿ ಲಾಕ್‌ಡೌನ್ ದಿಸೆಯಿಂದ ವಲಸೆ ಕಾರ್ಮಿಕರ ಬದುಕು ಅನಿಶ್ಚಿತವಾಗಿದೆ. ಸರ್ಕಾರ ದಿನಕ್ಕೊಂದು ನಿಯಮಗಳನ್ನು ತರುವ ಮೂಲಕ ವಲಸೆ ಕಾರ್ಮಿಕರನ್ನು ಇಕ್ಕಟ್ಟಿಗೆ ಸಿಉಕಿಸಿದೆ ಎಂಬ ಆರೋಪವು ಸಹ ಕೇಳಿಬಂದಿದೆ.
ಇದನ್ನೂ ಓದಿ; ಕೊರೊನ ಸಮಯದ ಮತ್ತು ಕೊರೊನೋತ್ತರ ಆರ್ಥಿಕ ಪುನಶ್ಚೇತನಕ್ಕೆ ನಮ್ಮ ಸರ್ಕಾರ ಮಾಡುತ್ತಿರುವುದೇನು?
ವಲಸೆ ಕಾರ್ಮಿಕರನ್ನು ಊರಿಗೆ ಕಳಿಸಿಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಮಾಡಿವೆ? ಕರ್ನಾಟಕದ ಪರಿಸ್ಥಿತಿ ಏನು? ನಾನುಗೌರಿ.ಕಾಂ ವರದಿ
Posted by Naanu Gauri on Sunday, May 10, 2020


