ಗಾಲ್ವನ್ ಕಣಿವೆಯು ಚೀನಾ-ಭಾರತ ಗಡಿಯ ವಾಸ್ತವಿಕ ನಿಯಂತ್ರಣ ರೇಖೆಯ ಚೀನಾದ ಪಶ್ಚಿಮ ಭಾಗದಲ್ಲಿದ್ದು ಅದು ನಮ್ಮದು ಎಂದು ಚೀನ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಹೇಳಿದ್ದಾರೆ.
ಈ ಹಿಂದೆ ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ವಕ್ತಾರರು ಸಹ ಇದೇ ಹಕ್ಕು ಮಂಡಿಸಿದ್ದರು. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಮಾಲ್ಡೀವ್ಸ್ ಸೇರಿದಂತೆ ಹಲವು ದೇಶಗಳ 20 ಭಾರತೀಯ ಸೈನಿಕರ ಹತ್ಯೆಗೆ ಸಂತಾಪ ಸೂಚಿಸಿ ಹೇಳಿಕೆ ನೀಡಿದ ನಂತರ ಚೀನಾದ ಪ್ರತಿಕ್ರಿಯೆ ಬಂದಿದೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಹಲವು ವರ್ಷಗಳಿಂದ ಚೀನಾ ಪಡೆಗಳು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ ಮತ್ತು ಕರ್ತವ್ಯ ನಿರ್ವಹಿಸುತ್ತಿವೆ. ಆದರೆ 2020ರ ಏಪ್ರಿಲ್ ತಿಂಗಳಿಂದ ಭಾರತೀಯ ಪಡೆಗಳು ಗಾಲ್ವನ್ ಕಣಿವೆಯ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಏಕಪಕ್ಷೀಯವಾಗಿ ಮತ್ತು ನಿರಂತರವಾಗಿ ರಸ್ತೆಗಳು, ಸೇತುವೆಗಳು ಇತರೆ ಸೌಲಭ್ಯಗಳನ್ನು ನಿರ್ಮಿಸಿವೆ ಎಂದು ಲಿಜಿಯಾನ್ ಆರೋಪಿಸಿದ್ದಾರೆ.
ಭಾರತವು ವಾಸ್ತವಿಕ ನಿಯಂತ್ರಣ ರೇಖೆ ದಾಟಲು ಮತ್ತು ಪ್ರಚೋದನೆಗೆ ಮತ್ತಷ್ಟು ಕುಮ್ಮಕ್ಕು ನೀಡಿದೆ. ಮೇ 6ರಂದು ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ವಾಸ್ತವಿಕ ನಿಯಂತ್ರಣ ರೇಖೆ ದಾಟಿ ಚೀನಾದ ಭೂಪ್ರದೇಶಕ್ಕೆ ಅತಿಕ್ರಮಣ ಮಾಡಿರುವ ಭಾರತದ ಗಡಿ ಭದ್ರತಾ ಪಡೆಗಳು ಕೋಟೆ ಮತ್ತು ಬ್ಯಾರಿಕೇಡ್ ಗಳನ್ನು ನಿರ್ಮಿಸಿವೆ ಎಂದಿದ್ದಾರೆ.
ಇದು ಚೀನಾ ಯೋಧರು ಗಸ್ತು ತಿರುಗಲು ಅಡ್ಡಿಯಾಗಿದೆ. ನಿಯಂತ್ರಣ ಮತ್ತು ನಿರ್ವಹಣೆಯ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಪ್ರಯತ್ನದಲ್ಲಿ ಭಾರತೀಯ ಪಡೆಗಳು ಉದ್ದೇಶಪೂರಕವಾಗಿ ಪ್ರಚೋದನೆ ಮಾಡಿದರು ಎಂದು ಆರೋಪಿಸಿದ್ದಾರೆ.
ಹಾಂಗ್ ಕಾಂಗ್ ಮತ್ತು ಭಾರತ ಸೇರಿದಂತೆ ಹಲವು ಸ್ಥಳಗಳಲ್ಲಿ ಚೀನಿಯರು ಇತ್ತೀಚೆಗೆ ಕೈಗೊಂಡ ಹಲವಾರು ಕ್ರಮಗಳು “ನಿಜವಾಗಿಯೂ ರಚನಾತ್ಮಕವಾಗಿಲ್ಲ” ಎಂದು ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ವ್ಯವಹಾರಗಳ ಯುಎಸ್ ಸಹಾಯಕ ಕಾರ್ಯದರ್ಶಿ ಡೇವಿಡ್ ಸ್ಟಿಲ್ವೆಲ್ ಹೇಳಿದ್ದಾರೆ.
ಇದನ್ನೂ ಓದಿ: ಚೀನಾ ಯಾವುದೇ ಭಾರತೀಯ ಭೂಪ್ರದೇಶ ವಶಪಡಿಸಿಕೊಂಡಿಲ್ಲ, ಗಡಿಯೊಳಗೆ ಕಾಲಿಟ್ಟಿಲ್ಲ: ನರೇಂದ್ರ ಮೋದಿ


