Homeಕರ್ನಾಟಕಸರ್ಕಾರ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಬೇಕಾದುದ್ದು ಹೀಗೆ..: ಬಸ್ ಪ್ರಯಾಣಿಕರ ವೇದಿಕೆಯ ಸಲಹೆಗಳು

ಸರ್ಕಾರ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಬೇಕಾದುದ್ದು ಹೀಗೆ..: ಬಸ್ ಪ್ರಯಾಣಿಕರ ವೇದಿಕೆಯ ಸಲಹೆಗಳು

ಬಡ ವರ್ಗದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪ್ರತಿಭಟನೆ ಮುಂದುವರೆಸಲು “ಬಸ್ ಓಡಿಸಲಿ, ಆದರೆ ಪ್ರತಿಭಟನೆಯ ಅಂಗವಾಗಿ ಟಿಕೆಟ್ ಹಣ ಸಂಗ್ರಹ ಮಾಡುವುದು ಬೇಡ” ಎಂಬ ಸಲಹೆಗಳು ಬಂದಿವೆ.

- Advertisement -
- Advertisement -

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು, ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಸಾರಿಗೆ ನೌಕರರಿಗೂ ನೀಡಬೇಕು ಎಂಬ ಹಕ್ಕೊತ್ತಾಯಗಳನ್ನಿಟ್ಟುಕೊಂಡು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಮತ್ತು ಸಾರಿಗೆ ನೌಕರರ ಸಂಘದೊಂದಿಗೆ ಮಾತುಕತೆ ವಿಫಲವಾಗಿದ್ದು ಮುಷ್ಕರದಿಂದಾಗಿ ಕಳೆದೆರಡು ದಿನಗಳಿಂದ ಬಸ್‌ಗಳು ರಸ್ತೆಗಿಳಿಯದೆ ಪ್ರಯಾಣಿಕರಿಗೆ ತುಸು ಸಮಸ್ಯೆಯಾಗಿದೆ.

ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಪರವಾಗಿ ವಿನಯ್ ಶ್ರೀನಿವಾಸ ಮತ್ತು ಶಹೀನ್ ಶಸಾ ಪತ್ರಿಕಾಹೇಳಿಕೆಯ ಮೂಲಕ ಕೆಲವು ಸಲಹೆಗಳನ್ನು ನೀಡಿದ್ದಾರೆ. ಸಾರಿಗೆ ನೌಕರರು ಮತ್ತು ಸರ್ಕಾರ ಎರಡಕ್ಕೂ ಮನವಿ ಮಾಡುವ ಮೂಲಕ ಸಮಸ್ಯೆಗೆ ಇತಿಶ್ರಿ ಹಾಡಬೇಕೆಂದು ಕೋರಿದ್ದಾರೆ.

ರಸ್ತೆ ಸಾರಿಗೆ ನಿಗಮದಲ್ಲಿರುವ ರಾಚನಿಕ ಸಮಸ್ಯೆಗಳು, ರಸ್ತೆ ಸಾರಿಗೆ ನಿಗಮಕ್ಕೆ ಸರ್ಕಾರದ ಬೆಂಬಲದ ಕೊರತೆ, ನೌಕರರ ಹಕ್ಕುಗಳನ್ನು ಗೌರವಿಸದಿರುವುದು, ಸಂಘಟನೆಗಳನ್ನು ಮಾನ್ಯ ಮಾಡದಿರುವುದು ಮುಂತಾದ ಕಾರಣಗಳು ಇಂದಿನ ಮುಷ್ಕರಕ್ಕೆ ಕಾರಣವಾಗಿದೆ. ಆದರೆ ರಸ್ತೆ ಸಾರಿಗೆ ಸಂಸ್ಥೆಗೆ ನೌಕರರೇ ಜೀವಾಳ, ನಾವು ಅವರೊಂದಿಗೆ ನಿಲ್ಲುತ್ತೇವೆ. ಮುಷ್ಕರ ನಿರತ ನೌಕರರ ಮೇಲೆ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳಬಾರದು. ತಕ್ಷಣವೇ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ತಿಳಿಸಿದೆ.

ನೌಕರರಿಗೆ ಮತ್ತು ನೌಕರ ಸಂಘಟನೆಗಳಿಗೆ ಮನವಿ

ಪ್ರಯಾಣಿಕರಾಗಿ ನಾವು ಈ ನೌಕರರು ದಿನನಿತ್ಯ ನಿರ್ವಹಿಸುವ ಶ್ರಮದ ದುಡಿಮೆಯನ್ನು ಗೌರವಿಸುತ್ತೇವೆ. ಅವರ ಹೋರಾಟಕ್ಕೆ ನಾವು ಹೆಗಲಾಗುತ್ತೇವೆ. ಆದರೆ, ಇಂದು ಈ ಸಮಸ್ಯೆ ಇತ್ಯರ್ಥವಾಗದಿದ್ದರೆ, ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೋರಾಟ ಮುಂದುವರೆಸುವ ದಾರಿಗಳನ್ನು ಕಂಡುಕೊಳ್ಳಬೇಕೆಂದು ನಾವು ಮನವಿ ಮಾಡುತ್ತಿದ್ದೇವೆ, ಏಕೆಂದರೆ ಬಹುತೇಕ ಪ್ರಯಾಣಿಕರು ಬಡವರು, ಅಂಚಿಗೆ ಸರಿಸಲ್ಪಟ್ಟವರು. ದುಡಿಮೆಗಾಗಿ ಮತ್ತು ದಿನನಿತ್ಯದ ಅಗತ್ಯಗಳಿಗಾಗಿ, ಪ್ರಯಾಣಿಸಲು ಬಸ್ ಅನ್ನೇ ಆಧರಿಸಿರುವವರು. ಆದ್ದರಿಂದ ಬಡ ವರ್ಗದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಬೇಕೆಂಬುದು ನಮ್ಮ ಮನವಿ. ಉದಾಹರಣೆಗೆ ಕೆಲವು ಪ್ರಯಾಣಿಕರು, “ಬಸ್ ಓಡಿಸಲಿ, ಆದರೆ ಪ್ರತಿಭಟನೆಯ ಅಂಗವಾಗಿ ಟಿಕೆಟ್ ಹಣ ಸಂಗ್ರಹ ಮಾಡುವುದು ಬೇಡ” ಎಂಬ ಸಲಹೆಯನ್ನೂ ನೀಡಿದ್ದಾರೆ, ಇದನ್ನು ಪರೀಶೀಲಿಸಬೇಕೆಂದು ವೇದಿಕೆ ಮನವಿ ಮಾಡಿದೆ.

ಈ ಪರಿಸ್ಥಿತಿಯ ನಿರ್ವಹಣೆಗಾಗಿ ಸರ್ಕಾರಕ್ಕೆ ಮನವಿ

ಈ ಮುಷ್ಕರವು ಸಂಸ್ಥೆಯೊಳಗೆ ಇದ್ದ ರಾಚನಿಕ ಸಮಸ್ಯೆ, ಕೋವಿಡ್ ಸಂದರ್ಭದ ಬಿಕ್ಕಟ್ಟು, ಹಲವಾರು ಸಮಸ್ಯೆಗಳನ್ನು ಇತ್ಯರ್ಥಗೊಳಿಸದೇ ಇದ್ದದ್ದು, ಈ ಎಲ್ಲದರ ಒಟ್ಟು ಫಲಿತವಾಗಿದೆ. ಮುಷ್ಕರಕ್ಕೆ ಕರೆಕೊಟ್ಟವರನ್ನೂ ಸೇರಿದಂತೆ ಸರ್ಕಾರವು ನೌಕರರ ಪ್ರತಿನಿಧಿಗಳ ವಿಶ್ವಾಸವನ್ನು ಗಳಿಸಿ ಅವರೊಂದಿಗೆ ಮಾತುಕತೆ ನಡೆಸಬೇಕು. ಎಸ್ಮಾ ಜಾರಿಗೊಳಿಸುವಂತಹ ಕ್ರಮಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ. ನೌಕರರ ಮತ್ತು ಪ್ರಯಾಣಿಕರ ಹಿತಾಸಕ್ತಿಗಾಗಿ ಸರ್ಕಾರವು ಈ ಬಿಕ್ಕಟ್ಟನ್ನು ಅನುನಯದಿಂದ ಬಗೆಹರಿಸಬೇಕಾಗಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ಸರ್ಕಾರವು ಸಾರಿಗೆ ಸಂಸ್ಥೆಗಳಿಗೆ ಗಣನೀಯವಾಗಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಿ ಅವುಗಳ ಆರ್ಥಿಕ ಪುನಶ್ಚೇತನಕ್ಕಾಗಿ ಯೋಚಿಸಲು ಈ ಸಮಯವು ಸುಸಂದರ್ಭವಾಗಿದೆ. ಇದರಿಂದ ಸಂಸ್ಥೆಗಳು ತಮ್ಮ ನೌಕರರಿಗೆ ಸೌಲಭ್ಯಗಳನ್ನು ಒದಗಿಸಲು ಮಾತ್ರವಲ್ಲ, ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಸಾಮಾನ್ಯ ಜನರ ಹಿತಾಸಕ್ತಿಗಾಗಿ, ಅವರಿಗೆ ಕೈಗೆಟುವಂತಹ ಸೇವೆ ಒದಗಿಸುವ ದೃಷ್ಟಿಯಿಂದ ಸಾರಿಗೆ ಸಂಸ್ಥೆಗಳನ್ನು ಬಲಗೊಳಿಸಬೇಕಿದೆ. ನೌಕರರ ಬೇಡಿಕೆಗಳ ಬಗ್ಗೆ ಮತ್ತು ಅವರ ಕಲ್ಯಾಣದ ಬಗ್ಗೆ ಚರ್ಚಿಸಲು, ಜಂಟಿ ಸದನ ಸಮಿತಿ ಅಥವಾ ನೌಕರರು, ಸಂಸ್ಥೆಯ ಪ್ರತಿನಿಧಿಗಳು ಮತ್ತು ಸರ್ಕಾರದ ಪ್ರತಿನಿಧಿಗಳನ್ನೊಳಗೊಂಡ ತ್ರಿಪಕ್ಷೀಯ ಸಮಿತಿಯೊಂದನ್ನು ರಚಿಸಬೇಕು ಎಂದು ವೇದಿಕೆ ಒತ್ತಾಯಿಸಿದೆ.

ಬಸ್ ಮತ್ತು ಪ್ರಯಾಣಿಕರು ಇಬ್ಬರೂ ಈ ನಗರದ ಕೇಂದ್ರಬಿಂದು. ನಮ್ಮನ್ನು ನಿರ್ಲಕ್ಷಿಸಬೇಡಿ, ಬಸ್ ಸೇವೆಯನ್ನು ಉತ್ತೇಜಿಸಿ, ಈ ಸೇವೆಯಲ್ಲಿ ನೌಕರರು ಪ್ರಮುಖ ಭಾಗೀದಾರರು, ಮತ್ತು ಅವರು ನಮ್ಮ ಜೊತೆಗಾರರು. ಅವರ ಕಾಳಜಿಯನ್ನು ನಿರ್ಲಕ್ಷಿಸಬೇಡಿ, ಪ್ರಯಾಣಿಕರ ಹಿತಾಸಕ್ತಿಗಾಗಿ ಮತ್ತು ಆರೋಗ್ಯಕರ ಬಸ್ ವ್ಯವಸ್ಥೆಗಾಗಿ, ಸರ್ಕಾರವು ಈ ಕೂಡಲೇ ಹತಾಶರಾಗಿರುವ ನೌಕರರತ್ತ ಧಾವಿಸಲಿ ಮತ್ತು ಅವರ ಅಳಲುಗಳನ್ನು ಆಲಿಸಿ, ತತ್ ಕ್ಷಣವೇ ಪರಿಹರಿಸಲಿ ಎಂದು ವೇದಿಕೆಯ ವಿನಯ್ ಶ್ರೀನಿವಾಸ, ಶಹೀನ್ ಶಸಾ ಆಶಿಸಿದ್ದಾರೆ.


ಇದನ್ನೂ ಓದಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ: ಬೆಂಗಳೂರಿನಲ್ಲಿ ಬೃಹತ್ ಹೋರಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...