ಕೊರೊನ ವೈರಸ್ ಇಡೀ ಜಗತ್ತಿನ ಮೇಲೆ ಒತ್ತಾಯಿಸಿದ ದೀರ್ಘಕಾಲಿಕೆ ರಜೆ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಕೆಲವು ವಲಯಗಳ ಆರ್ಥಿಕ ವ್ಯವಹಾರಗಳು ನಿಧಾನಕ್ಕೆ ಮರುಪ್ರಾರಂಭಗೊಳ್ಳುತ್ತಿವೆ. ಸಣ್ಣ ಪುಟ್ಟ ರಿಟೇಲ್ ವ್ಯಾಪಾರಕೇಂದ್ರಗಳು ಮತ್ತೆ ಕೆಲಸ ಪ್ರಾರಂಭಿಸಿವೆ. ಉತ್ಪಾದನಾ ಸಂಸ್ಥೆಗಳಿಗೆ ಕಡಿಮೆ ಸಂಖ್ಯೆಯ ಉದ್ಯೋಗಿಗಳೊಂದಿಗೆ ಚಟುವಟಿಕೆಗಳನ್ನು ಪ್ರಾರಂಭಿಸಲು ಅವಕಾಶ ನೀಡಲಾಗಿದೆ. ಆದರೆ ಹೋಟೆಲ್ ಉದ್ಯಮ, ಪ್ರವಾಸೋದ್ಯಮ, ಏರ್ಲೈನ್ ಇಂತಹ ಹಲವು ಕ್ಷೇತ್ರಗಳು ಸದ್ಯಕ್ಕೆ ಪುಟಿದೇಳುವ ಲಕ್ಷಣಗಳು ಕಾಣುತ್ತಿಲ್ಲ.
ಭಾರತದಂತಹ ದೇಶದಲ್ಲಿ ವ್ಯವಸ್ಥಿತವಾಗಿ ನೆಲೆಯೂರಿರುವ ತೀವ್ರ ಆರ್ಥಿಕ ಅಸಮಾನತೆಯ ನಡುವೆ ಕುಸಿದಿರುವ ಆರ್ಥಿಕತೆಯನ್ನು ಸರಿಪಡಿಸುವತ್ತ ಸರ್ಕಾರದ ಸದ್ಯದ ಕ್ರಮಗಳು ಹೆಚ್ಚಿನ ಭರವಸೆಯನ್ನು ನೀಡಿಲ್ಲ. ಆರ್ಥಿಕವಾಗಿ ಒಂದು ಮಟ್ಟಕ್ಕೆ ಸದೃಢವಾಗಿರುವ ಪಶ್ಚಿಮ ದೇಶಗಳು ಘೋಷಿಸಿರುವ ಆರ್ಥಿಕ ಉತ್ತೇಜನ ಪ್ಯಾಕೇಜ್‌ಗಳಿಗೆ ಹೋಲಿಸಿದರೆ ಭಾರತದಲ್ಲಿ ಸದ್ಯಕ್ಕೆ ತೆಗೆದುಕೊಂಡಿರುವ ಕ್ರಮಗಳು ಏನೇನೂ ಅಲ್ಲ. ಮುಂದೆ ಇಲ್ಲಿ ಘೋಷಿಸಬಹುದೇನೋ ಎಂದು ಊಹಿಸುವ ಎಕನಾಮಿಕ್ ಪ್ಯಾಕೇಜ್‌ಗಳು ಪ್ರತಿ ಭಾರತೀಯನ ಅಭ್ಯುದಯಕ್ಕೆ ಮತ್ತು ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಕಡುಬಡವರ ಒಳಿತಿನ ಕಡೆಗೆ ಗಮನ ಹರಿಸಬೇಕು. ಇಲ್ಲಿಂದಲಾದರೂ ಮುಂದಕ್ಕೆ ಆರ್ಥಿಕ ಅಸಮಾನತೆಯನ್ನು ತಗ್ಗಿಸುವ ಕೆಲಸವನ್ನು ಅದು ಮಾಡಬೇಕು. ಕೇವಲ ಕಾರ್ಪೋರೆಟ್ ಲಾಬಿಗೆ ಸಹಕರಿಸುವ ಎಕನಾಮಿಕ್ ಪ್ಯಾಕೇಜ್ ಅದಾಗದಿರುವಂತೆ ಸರ್ಕಾರಗಳು ಗಮನ ಹರಿಸಬೇಕು.
ಇಂತಹ ಆರ್ಥಿಕ ಹಿಂಜರಿತವನ್ನು ನೂರಾರು ವರ್ಷಗಳಿಂದ ಜಗತ್ತು ಕಂಡಿರಲಿಲ್ಲ. 2008 ರಲ್ಲಿ ಕೆಲವೇ ಕೆಲವು ಲಾಭಕೋರ ಬ್ಯಾಂಕರ್‌ಗಳು ಸೃಷ್ಟಿಸಿದ್ದ ಆರ್ಥಿಕ ಹಿಂಜರಿತವೆ ಇಡೀ ಜಗತ್ತನ್ನು ನಲುಗಿಸಿತ್ತು. ನಗದೀಕರಣದ ಸಮಸ್ಯೆಯಿಂದ ಉಂಟಾದ ಈ ಹಿಂಜರಿತದಿಂದಲೇ ಕೋಟ್ಯಂತರ ಉದ್ಯೋಗಗಳು ನಷ್ಟವಾಗಿ ಜಗತ್ತು ಸಂಕಷ್ಟಕ್ಕೆ ತುತ್ತಾಗಿತ್ತು.
ಈಗ ಉಂಟಾಗಿರುವ ಆರ್ಥಿಕ ಹಿಂಜರಿತ ವಿಭಿನ್ನವಾದದ್ದು ಮತ್ತು 2008ರ ಆರ್ಥಿಕ ಹಿಂಜರಿತ್ತಕ್ಕಿಂತಲೂ ನೂರಾರುಪಟ್ಟು ದೊಡ್ಡದಾದದ್ದು. ವಿಭಿನ್ನ ಯಾಕೆಂದರೆ ಉತ್ಪಾದನೆಯ ವ್ಯತ್ಯಯ ಮತ್ತು ಕೊಳ್ಳುವ ಸಾಮರ್ಥ್ಯ ಕುಸಿದಿರುವ ಎರಡೂ ವಿದ್ಯಮಾನಗಳು ಒಂದೇ ಬಾರಿಗೆ ಬಂದೆರಗಿವೆ. ಈ ನಿಟ್ಟಿನಲ್ಲಿ ಸರ್ಕಾರಗಳು ಅತ್ತ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಸಾಮಾನ್ಯ ಜನರ ಕೊಳ್ಳುವ ಶಕ್ತಿಯನ್ನು ವೃದ್ಧಿಸುವ ಉತ್ತೇಜನ ಚಟುವಟಿಕೆಗಳಿಗೆ ಏಕಕಾಲಕ್ಕೆ ಇಂಬು ನೀಡಬೇಕಿದೆ. ಅಲ್ಲದೆ ಈ ಸಾಂಕ್ರಾಮಿಕ ಪಿಡುಗಿನ ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವವ ಕೋಟ್ಯಂತರ ಬಡ ಜನರ ದಿನನಿತ್ಯದ ಜೀವನಕ್ಕೆ ಪರಿಹಾರ ಕೊಡುವ ಸದ್ಯದ ತುರ್ತು ಕೂಡ ಸರ್ಕಾರಕ್ಕೆ ಇದೆ.
ಸಣ್ಣ ಉದ್ದಿಮೆಗಳಲ್ಲಿ ಉದ್ಯೋಗ ನಷ್ಟ ಆಗದಂತೆ, ಆ ಉದ್ದಿಮೆಗಳು ತನ್ನ ನೌಕರರಿಗೆ ನಿರಂತರವಾಗಿ ವೇತನ ನೀಡಲು ಸಹಕರಿಸಲು, ನೋಂದಣಿಯಾಗದ ಎಷ್ಟೋ ಅಸಂಘಟಿತ ವಲಯಗಳ ಸಣ್ಣ ವ್ಯವಹಾರಗಳ ಹಿತದೃಷ್ಟಿಯಿಂದ, ಅಂತಹ ವಲಯಗಳಲ್ಲಿ ಕೆಲಸ ಮಾಡುವ ಕೋಟ್ಯಂತರ ನೌಕರರ ಹಿತದೃಷ್ಟಿಯನ್ನು ಕಾಪಾಡಲು ಸರ್ಕಾರ ವಿವಿಧ ವಲಯಗಳಿಗೆ ಆರ್ಥಿಕ ಉತ್ತೇಜನ ನೀಡುವ ಅವಶ್ಯಕತೆ ಇದೆ. ತೆರಿಗೆ ಸಂಗ್ರಹ ಸ್ವರೂಪದಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಾಗಬಹುದು. ಸಾಲಗಳ ಮರುಪಾವತಿ ವಿಷಯದಲ್ಲಿ, ಹೊಸ ಸಾಲಗಳನ್ನು ಒದಗಿಸುವ ವಿಷಯಗಳಲ್ಲಿ ಇನ್ನೂ ಹೆಚ್ಚಿನ ಬದಲಾವಣೆಗಳು ಅವಶ್ಯಕವಾಗಬಹುದು ಎಂದು ಹಲವು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಾ ಬಂದಿದ್ದಾರೆ.
ಅಮೇರಿಕಾದಲ್ಲಿ ಆರ್ಥಿಕತೆಯ ಉತ್ತೇಜನ:
ಆರ್ಥಿಕ ಸ್ಟಿಮುಲಸ್ ಪ್ಯಾಕೇಜ್ ಸಂದರ್ಭದಲ್ಲಿ ಸದ್ಯಕ್ಕೆ ಬಹಳ ಚರ್ಚೆಯಾಗಿರುವ ಮಾಡೆಲ್ ಅಮೆರಿಕಾದ್ದು. ಅಲ್ಲಿ ಈಗಾಗಲೇ ಸ್ಥಾಪಿತವಿರುವ ಒಂದು ಮಟ್ಟದ ಸಾಮಾಜಿಕ ಭದ್ರತೆಯ ಜೊತೆಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಲು ಅಮೇರಿಕಾ ಸರ್ಕಾರ ಮುಂದಾಗಿದೆ. 2 ಟ್ರಿಲಿಯನ್ ಡಾಲರ್‌ಗಳ ಬೃಹತ್ ಆರ್ಥಿಕತೆ ರಿವೈವಲ್ ಪ್ಯಾಕೇಜ್ ಘೋಷಿಸಿದ್ದು, ಇದು 2008ರ ಹಿಂಜರಿತವನ್ನು ಸರಿಪಡಿಸಲು ಘೋಷಿಸಿದ್ದ ಪ್ಯಾಕೇಜ್ ಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚು. (2008 ರಲ್ಲಿ ಅಮೇರಿಕಾ 800 ಬಿಲಿಯನ್ ಡಾಲರ್ ಉತ್ತೇಜನ ಪ್ಯಾಕೇಜ್ ಘೋಷಿಸಿತ್ತು).
ಈ ಹೊಸ ಆರ್ಥಿಕ ಪ್ಯಾಕೇಜ್ ನಿಂದ ಅಮೆರಿಕಾದ ಸುಮಾರು 93% ನಾಗರಿಕರಿಗೆ ನೇರ ನಗದು ಜಮಾ ಆಗಲಿದೆ. ವರ್ಷಕ್ಕೆ 75000 ಡಾಲರ್ ಗಳಿಗಿಂತಲೂ ಕಡಿಮೆ ವೇತನ ಪಡೆಯುವ ಎಲ್ಲರಿಗೂ 1200 ಡಾಲರ್ ನಗದು ಜಮಾ ಮಾಡಲಾಗುತ್ತಿದೆ. ನಿರುದ್ಯೋಗಿಗಳ ವಿಮೆಯನ್ನು ಹೆಚ್ಚಳಗೊಳಿಸಲಾಗಿದೆ. ಹಿಂದಿನ ವರ್ಷ ತೆರಿಗೆ ಘೋಷಣೆ ಮಾಡದೆ ಇರುವವರು ಕೂಡ ಈಗ ಸರಳ ತೆರಿಗೆಯನ್ನು ಕಟ್ಟಿದರೆ ಸರ್ಕಾರದ ಆರ್ಥಿಕ ಸಹಾಯಧನಕ್ಕೆ ಅರ್ಹರು ಎಂದು ಘೋಷಿಸಲಾಗಿದೆ. ಸಂಸ್ಥೆಗಳು ಉದ್ಯೋಗಿಗಳನ್ನು ವಜಾ ಮಾಡದೆ ಇರಲು ಹಲವು ರೀತಿಯ ಸಹಾಯಧನವನ್ನು ಘೋಷಿಸಲಾಗಿದೆ.
ನವಉದಾರವಾದದ ತುತ್ತ ತುದಿಯ ದೇಶವಾದ ಅಮೆರಿಕಾದಲ್ಲಿಯೇ ಇಂತಹ ಜನಪರವಾದ ಕಲ್ಯಾಣ ಕಾರ್ಯಕ್ರಮಕ್ಕೆ ಅಲ್ಲಿನ ಸರ್ಕಾರ ಮತ್ತು ವಿರೋಧ ಪಕ್ಷಗಳು ಕೈಜೋಡಿಸಿ ಇಂತಹ ಪ್ಯಾಕೇಜ್ ನೀಡುವ ಕಾಯ್ದೆಯನ್ನು ತ್ವರಿತವಾಗಿ ಜಾರಿಗೊಳಿಸಲು ಒಮ್ಮತವಾಗಿ ಮುಂದಾಗಿವೆ. ಅಮೇರಿಕಾ ತನ್ನ ಜಿಡಿಪಿಯ ಸುಮಾರು 10% ಅನ್ನು ಈಗ ಈ ಆರ್ಥಿಕ ಉತ್ತೇಜನಕ್ಕೆ ಘೋಷಿಸಿದೆ. ಇದಕ್ಕೆ ಹೋಲಿಸಿದರೆ ಭಾರತ ಸರ್ಕಾರ ಸದ್ಯಕ್ಕೆ ಮಾಡಿರುವ ಘೋಷಣೆ ತನ್ನ ಜಿಡಿಪಿಯ ಸುಮಾರು 1% ಗಿಂತಲೂ ಕಡಿಮೆ. ಕಾಲ ಮೀರುವುದಕ್ಕೆ ಮುಂಚೆ ಭಾರತ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯ ಸರ್ಕಾರಗಳಿಗೆ ನೀಡಬೇಕಿರುವ ಹಣವನ್ನು ಬೇಗ ಬಿಡುಗಡೆ ಮಾಡಿ ಇಂತಹ ಪರಿಹಾರ ಕಾರ್ಯಕ್ರಮಗಳ ತ್ವರಿತ ಜಾರಿಗಾಗಿ ಉತ್ತೇಜಿಸಬೇಕಿದೆ.
ಭಾರತ ಸರ್ಕಾರ ತಕ್ಷಣಕ್ಕೆ ಕೆಲವು ಪರಿಹಾರ ಕ್ರಮಗಳಿಗೆ ಮುಂದಾಗಿದ್ದರೂ ಇನ್ನು ಮುಂದೇನು ಎಂಬ ಚಿಂತೆ ಎಲ್ಲರನ್ನೂ ಭಾದಿಸುತ್ತಿದೆ. ಪಡಿತರ ಚೀಟಿ ಇರುವ ಕುಟುಂಬಗಳಿಗೆ ಹೆಚ್ಚಿನ ಆಹಾರ ಸಾಮಗ್ರಿ ಒದಗಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗೆ ಸುಮಾರು 80 ಕೋಟಿ ಜನರು ಪಲಾನುಭಾವಿಗಳಾಗಿದ್ದಾರೆ ಎನ್ನಲಾಗಿದೆ. ಉಳಿದಂತೆ ಸುಮಾರು 3 ಕೋಟಿಯಷ್ಟು ಬಡ, ಹಿರಿಯ ನಾಗರಿಕರು, ವಿಧವೆಯರು ಹೀಗೆ ವಿಶೇಷ ಅನುದಾನಿತರಿಗೆ ಸುಮಾರು 1000 ರೂ ಹಣವನ್ನು ನೇರ ಖಾತೆಗೆ ಜಮಾ ಮಾಡಿದೆ. ನರೇಗ ಕೂಲಿಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.
ಬಡ ಜನರಿಗೆ ತಕ್ಷಣಕ್ಕೆ ಇವು ಪರಿಹಾರ ಮರ್ಗದಂತೆ ಕಂಡರೂ ಮುಂದೆ ಇವರ ಉದೋಗ್ಯ ಖಾತ್ರಿಯ ಬಗ್ಗೆ, ಇವರಿಗೆ ಉದ್ಯೋಗ ಒದಗಿಸುತ್ತಿದ್ದ ವಲಯಗಳ ಬಗ್ಗೆ ಸರ್ಕಾರದ ಯೋಜನೆಗಳು ಇನ್ನೂ ರೂಪುಗೊಂಡಂತಿಲ್ಲ. ಲಕ್ಷಾಂತರ ಉದ್ಯೋಗಗಳು ಕಳೆದುಕೊಳ್ಳುತ್ತಿರುವ ವರದಿಗಳು ಪ್ರತಿ ರಾಜ್ಯದಿಂದ ಬರುತ್ತಿರುವಾಗ ಈ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮಗಳನ್ನೂ ತೆಗೆದುಕೊಂಡಿಲ್ಲ.
ಇನ್ನು ಜರ್ಮನಿಯಂತಹ ದೇಶದಲ್ಲಿ ಉದ್ದಿಮೆಗಳನ್ನು ರಕ್ಷಿಸಲು, ಅಲ್ಲಿನ ಉದ್ಯೋಗಿಗಳ ಹಿತರಕ್ಷಣೆಗಾಗಿ ಆರ್ಥಿಕ ಸಮತೋಲನ ನಿಧಿಯನ್ನು ಸೃಷ್ಟಿ ಮಾಡಿದೆ. ಸುಮಾರು 600 ಬಿಲಿಯನ್ ಯೋರೋಗಳ ಈ ನಿಧಿಯನ್ನು ಸಾಲದ ಮೂಲಕ, ಬಾಂಡ್ ಗಳ ಮೂಲಕ ಅಥವಾ ಸರ್ಕಾರದ ಸಹಯೋಗದ ಮೂಲಕ ಪ್ರತಿ ಸಂಸ್ಥೆಯ ರಚನೆ ಮತ್ತು ಅದು ಒದಗಿಸಿರುವ ಉದ್ಯೋಗಗಳ ಸಂಖ್ಯೆಯ ಆಧಾರದ ಮೇಲೆ ಪಡೆದುಕೊಳ್ಳಬಹುದಾಗಿದೆ. ಬಹುತೇಕ ಪಶ್ಚಿಮ ರಾಷ್ಟ್ರಗಳು ಸಾಮಾನ್ಯ ಜನರ ಮತ್ತು ಆರ್ಥಿಕ ಪಿರಮಿಡ್ ನಲ್ಲಿ ಕೆಳಗೆ ಇರುವವರ ಹಿತದೃಷ್ಟಿ ಮತ್ತೆ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದಕ್ಕೆ ಎಷ್ಟು ಮುಖ್ಯ ಎಂಬ ಅಂಶವನ್ನು ಅರಿತಿವೆ.
ನಮ್ಮ ದೇಶದಲ್ಲಿ ಇದರ ತದ್ವಿರುದ್ಧ ನೀತಿಗಳನ್ನು ನಾವು ಮೇಲ್ನೋಟಕ್ಕೆ ಕಾಣಬಹುದಾಗಿದೆ. ಕೊರೊನ ವ್ಯಾಪಕವಾಗಿ ಹರಡಿದ ಸಂದರ್ಭದಲ್ಲಿ ಹಲವು ರಾಜ್ಯ ಸರ್ಕಾರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದವು. ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಸಮರ್ಪಕವಾದ ಅನುದಾನ ಬಿಡುಗಡೆ ಆಗಿರಲಿಲ್ಲ. ಇಂತಹ ಸಮಯದಲ್ಲಿ ಹಲವು ರಾಜ್ಯ ಸರ್ಕಾರಗಳು ತಮ್ಮ ನೌಕರರಿಗೆ ವೇತನದಲ್ಲಿ ಕಡಿತವನ್ನು ಘೋಷಿಸಿದವು. ಸರ್ಕಾರಿ ನೌಕರಿಯ ಸೌಕರ್ಯದ ಭಾಗವಾಗಿದ್ದ ಡಿ ಎ, ಉಳಿಸಿಕೊಂಡ ರಜೆಗಳನ್ನು ನಗದು ಮಾಡಿಕೊಳ್ಳುವ ಸೌಲಭ್ಯಗಳನ್ನು ಕೆಲವು ರಾಜ್ಯ ಸರ್ಕಾರಗಳು ರದ್ದುಗೊಳಿಸಿವೆ.
ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಜನರ ಹಿತದೃಷ್ಟಿಯನ್ನು ಕಾಪಾಡುವುದಕ್ಕೆ ಹೆಚ್ಚಿನ ಆರ್ಥಿಕ ಅನುದಾನಗಳನ್ನು ಕೊಡಬಹುದಿತ್ತು. ಈ ಕಠಿಣ ಕ್ರಮಗಳು ಈ ಸಾಮಾನ್ಯ ನೌಕರರ ಕೊಳ್ಳುವ ಶಕ್ತಿಯನ್ನು ಕುಂದಿಸುವುದಲ್ಲದೆ ಪರೋಕ್ಷವಾಗಿ ಆರ್ಥಿಕ ಹಿಂಜರಿತವನ್ನು ಹೆಚ್ಚಿಸಲು ಕಾರಣವಾಗದೆ ಇರದು. ಇನ್ನುಳಿದಂತೆ ಖಾಸಗಿ ವಲಯದ ಮತ್ತು ಸ್ವತಂತ್ರ ಸಣ್ಣ ಉದ್ದಿಮೆಗಳಿಗೆ, ಅಲ್ಲಿನ ಉದ್ಯೋಗಗಳು ಕಡಿತಗೊಳ್ಳದಂತೆ ಕಾಪಾಡಲು ಯಾವುದೇ ರೀತಿಯ ಉತ್ತೇಜನಕಾರಿ ಯೋಜನೆಗಳನ್ನು ಸರ್ಕಾರಗಳು ಇನ್ನೂ ಘೋಷಿಸಿಲ್ಲ. ಆರ್ ಬಿ ಐ ರೆಪೋ ದರ ಇಳಿಸುವಂತ ಕ್ರಮಕ್ಕೆ ಮುಂದಾಗಿದ್ದರೂ ಪೂರ್ವದಲ್ಲಿದ್ದ ದರವೇ ಇತರ ದೇಶಗಳ ದರಗಳಿಗೆ ಹೋಲಿಸಿದರೆ ಅದು ದುಬಾರಿಯಾಗಿತ್ತು ಎಂಬ ಅಂಶ ಮುಖ್ಯವಾಗುತ್ತದೆ.
ಈ ಸಮಯದಲ್ಲಿ ಗಾಯದ ಮೇಲೆ ಉಪ್ಪು ಸುರಿಯುವಂತೆ ಈ ಸಾಂಕ್ರಾಮಿಕ ಪಿಡುಗು ಈಗಾಗಲೇ ಅತಿ ಹೆಚ್ಚು ಸಂಪತ್ತು ಕ್ರೋಡೀಕರಿಸಿಕೊಂಡಿರುವವರ ಜೇಬನ್ನು ಇನ್ನಷ್ಟು ತುಂಬುತ್ತಿದೆ. ಎಲ್ಲ ಸಣ್ಣ ಉದ್ದಿಮೆಗಳು, ಸಣ್ಣ ರೀಟೇಲ್ ಅಂಗಡಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರೆ ಅಮೆಜಾನ್ ನಂತಹ ಇ ಕಾಮರ್ಸ್ ದೈತ್ಯ, ಸಾಮಾಜಿಕ ಜಾಲತಾಣದ ಸೇವೆಗಳನ್ನು ಒದಗಿಸುವ ಫೇಸ್ಬುಕ್, ಗೂಗಲ್, ಆಪಲ್ ನಂತಹ ತಂತ್ರಜ್ಞಾನ ಸಂಸ್ಥೆಗಳು ಹೆಚ್ಚಿನ ಲಾಭ ಗಳಿಸುತ್ತಿವೆ. ಭಾರತದಲ್ಲಿ ರಿಲಾಯನ್ಸ್ ಸಂಸ್ಥೆಯ ಜಿಯೋದಲ್ಲಿ ಫೇಸ್ಬುಕ್ ಹೂಡಿಕೆ ಮಾಡಿದೆ. ಇದು ಈಗಿರುವ ಅಸಮಾನತೆಯನ್ನು ಇನ್ನಷ್ಟು ದೊಡ್ಡ ಕಂದಕವಾಗಿಸುವ ಅಪಾಯವನ್ನು ಸೂಚಿಸುತ್ತಿದೆ.
ಈ ಸಂದರ್ಭದಲ್ಲಿ ಭಾರತದಂತಹ ದೇಶದಲ್ಲಿ ಅಸಮಾನತೆ ಕಡಿಮೆ ಮಾಡುವಂತಹ ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರಗಳು ಮುಂದಾಗಬೇಕು. ಬಡವರು, ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ಉದ್ದಿಮೆಗಳಂತಹ ವಲಯದವರು ಆರ್ಥಿಕ ಪುನಶ್ಚೇತರಿಕೆಯಲ್ಲಿ ಭಾಗಿಯಾಗುವಂತೆ ಉತ್ತೇಜನ ನೀಡಬೇಕು. ಅದಕ್ಕೆ ತಕ್ಕನಾದ ಆರ್ಥಿಕ ವಿಶೇಷ ಪ್ಯಾಕೇಜ್ ಗಳನ್ನು ಘೋಷಿಸಬೇಕು. ಇದಕ್ಕೆ ಬೇಕಾದ ಸಂಪನ್ಮೂಲಗಳನ್ನು ಈಗಾಗಲೇ ಬೃಹತ್ ಸಂಪತ್ತು ಕ್ರೋಡೀಕರಿಸಿರುವ ದೊಡ್ಡ ದೊಡ್ಡ ಸಂಸ್ಥೆಗಳಿಂದ ಯಾವುದಾದರೂ ರೂಪದಲ್ಲಿ ಪಡೆಯುವುದಕ್ಕೆ ಯೋಜನೆಗಳನ್ನು ರೂಪಿಸಬೇಕು. ಒಂದು ಮಟ್ಟದಲ್ಲಿ ಸರಿದೂಗಿಸುವ, ಸಂಪತ್ತನ್ನು ಸಮಾನವಾಗಿ ಹಂಚುವ ನಿಜ ಅರ್ಥದ ಅರ್ಥಶಾಸ್ತ್ರವನ್ನು ಪ್ರಯೋಗಿಸಲು ಇನ್ನಾದರೂ ಪ್ರಜಾಪ್ರಭುತ್ವದ ಸರ್ಕಾರಗಳು ಮುಂದಾಗಬೇಕು.
ಆರ್ಥಿಕ ತಜ್ಞರು ಇದಕ್ಕಾಗಿ ಹಲವು ಸಲಹೆಗಳನ್ನು ಕೊಡುತ್ತಾ ಬಂದಿದ್ದಾರೆ. ಸರ್ಕಾರಗಳು ಇಲ್ಲಿಯವರೆಗೂ ಎಡವಿರುವ ವಲಯಗಳಲ್ಲಿ ಹೂಡಿಕೆ ಮಾಡಿ ಅದರಿಂದ ಆರ್ಥಿಕ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಡುವುದರ ಜೊತೆಗೆ ಭವಿಷ್ಯದ ಸ್ವಸ್ಥ ಸಮಾಜಕ್ಕೂ ಕಾರಣವಾಗಬಹುದು. ಉದಾಹರಣೆಗೆ ಆರೋಗ್ಯ ಕ್ಷೇತ್ರಕ್ಕೆ ನಮ್ಮ ದೇಶದ ಇಡೀ ಬಜೆಟ್ ನ ಅತೀ ಸಣ್ಣ ಭಾಗ ಮಾತ್ರ ಖರ್ಚು ಮಾಡಲಾಗುತ್ತದೆ. ಇದು ನಮ್ಮ ಜಿಡಿಪಿಯ 1.5% ಗಿಂತಲೂ ಕಡಿಮೆ ಇದೆ. ಇಂದು ಕೋವಿಡ್ ಸಮಸ್ಯೆ ಇಷ್ಟು ಗಂಭೀರವಾಗಿರುವುದು ಆರೋಗ್ಯ ಕ್ಷೇತ್ರದ ದುಬಾರಿ ಖಾಸಗೀಕರಣ ಮತ್ತು ಇದರಲ್ಲಿ ಸರ್ಕಾರದ ಪಾಲುದಾರಿಕೆ ಇಲ್ಲದಿರುವುದು.
ಬಹುಶಃ ನಮ್ಮ ದೇಶದಲ್ಲಿ ಸಾವಿರ ಜನಕ್ಕೆ ಇರುವ ಆಸ್ಪತ್ರೆಗಳ ಹಾಸಿಗೆಯ ಅನುಪಾತ ಇಷ್ಟು ದಯನೀಯವಾಗಿ ಇಲ್ಲದೆ ಹೋಗಿದ್ದರೆ ಇಂತಹ ಕಠಿಣ ಲಾಕ್ ಡೌನ್‌ಗೆ ಮೊರೆ ಹೋಗುವ ಅಗತ್ಯ ಇರುತ್ತಿರಲಿಲ್ಲವೇನೋ. ಖಾಸಗಿ ವಿಮೆ ಆಧಾರಿತ ಮತ್ತು ಖಾಸಗಿ ಒಡೆತನದ ಆಸ್ಪತ್ರೆಗಳು ಬೆಳೆದಿರುವುದು ಕೊರೊನ ದಿನಗಳಲ್ಲಿ ದುಬಾರಿ ಎನಿಸಿದೆ. ಇನ್ನಾದರೂ ಆಸ್ಪತ್ರೆಯಂತಹ ಮೂಲಭೂತ ಸೌಕರ್ಯಕ್ಕೆ ಸರ್ಕಾರ ಈ ಸಮಯದಲ್ಲಿ ಹೂಡಿಕೆ ಮಾಡುವ ಮೂಲಕ, ಅದರ ಮೂಲ ಅಗತ್ಯ ಉತ್ಪಾದನೆಗೆ ಸಹಕಾರಿಯಾಗಿ, ಉದ್ಯೋಗಗಳನ್ನು ಸೃಷ್ಟಿ ಮಾಡಿ ಆರ್ಥಿಕ ಪುನಶ್ಚೇತನಕ್ಕೆ ಪೂರಕವಾಗಿ ಕೆಲಸ ಮಾಡಬಾರದೇಕೆ? ಪ್ರತಿ ಜಿಲ್ಲೆ ತಾಲೂಕುಗಳಲ್ಲಿ ಅತ್ಯಾಧುನಿಕ ಸುಸಜ್ಜಿತ ಆಸ್ಪತೆಗಳನ್ನು ಕಟ್ಟಲು ಈ ಸಮಯದಲ್ಲಿ ಮುಂದಾಗಬಾರದೇಕೆ?
ಅಮರ್ತ್ಯ ಸೇನ್, ರಘುರಾಮ್ ರಾಜನ್, ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡುಫ್ಲೋ, ಜಾನ್ ಡ್ರೀಜ್ ನಂತಹ ವಿಶ್ವವಿಖ್ಯಾತ ಆರ್ಥಿಕ ತಜ್ಞರು ಇಂತಹ ಸಮಯದಲ್ಲಿ ಸರ್ಕಾರಗಳು ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ, ಜನಪರ ಯೋಜನೆಗಳ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುತ್ತಲೇ ಇದ್ದಾರೆ. ಇವರ ಮಾತುಗಳನ್ನು ಕೇಳಿಕೊಂಡು ತ್ವರಿತವಾಗಿ ಕೆಲಸ ಮಾಡುವ ಮನಸ್ಥಿತಿಯನ್ನು ಸರ್ಕಾರದ ಉನ್ನತ ಸಚಿವರು ಮತ್ತು ಅಧಿಕಾರಿಗಳು ರೂಪಿಸಿಕೊಳ್ಳಬೇಕಿದೆ. ಆರ್ಥಿಕ ಕುಸಿತಕ್ಕೆ ಕೊರೊನವನ್ನು ದೂರುವುದು ಸುಲಭ ಮಾರ್ಗ ಎಂದು ಕೈಕಟ್ಟಿ ಕೂತರೆ ಅದಕ್ಕೆ ಬೆಲೆ ತೆತ್ತಬೇಕಾದ ದಿನಗಳು ತ್ವರಿತವಾಗಿಯೇ ಬರಬಹುದು.
ಇದನ್ನೂ ಓದಿ: ಆರ್ಥಿಕ ಪುನರುಜ್ಜೀವನಕ್ಕೆ 15 ಲಕ್ಷ ಕೋಟಿ ರೂಗಳ ಪ್ಯಾಕೇಜ್ ಬೇಕಿದೆ : ಸಿಐಐ
ವಿಡಿಯೊ ನೋಡಿ: ಸದ್ದು…ಈ ಸುದ್ದಿಗಳೇನಾದವು ? 6 ನೇ ಸಂಚಿಕೆ


