‘ಎಚ್.ಎಸ್.ದೊರೆಸ್ವಾಮಿ ಅನುಯಾಯಿಗಳ ಬಳಗ’ದ ವತಿಯಿಂದ ಹಿರಿಯ ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿ ಅವರ ಮೊದಲನೇ ವರ್ಷದ ಸ್ಮರಣೆ ಮತ್ತು ಶ್ರದ್ಧಾಂಜಲಿ ಸಮರ್ಪಣೆ ಕಾರ್ಯಕ್ರಮವು ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಮಹಾತ್ಮ ಗಾಂಧೀ ಉದ್ಯಾನವನದಲ್ಲಿ ಗುರುವಾರ ನಡೆಯಿತು. ಪಾಲ್ಗೊಂಡಿದ್ದ ಅವರ ಅಭಿಮಾನಿಗಳು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ದೊರೆಸ್ವಾಮಿಯವರಿಗೆ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ದೊರೆಸ್ವಾಮಿ ಅವರ ಅನುಯಾಯಿಗಳು, ಒಡನಾಡಿಗಳು, ವಿವಿಧ ಸಂಘಟನೆಗಳ ಮುಖಂಡರು, ಪೌರಕಾರ್ಮಿಕರು, ಭೂಮಿ-ವಸತಿಗಾಗಿ ಹೋರಾಟ ನಡೆಸುತ್ತಿರುವ ವಸತಿ ವಂಚಿತರು ಹಾಗೂ ಸಾಮಾಜಿಕ ಚಿಂತಕರು ಪಾಲ್ಗೊಂಡಿದ್ದರು.
ದೊರೆಸ್ವಾಮಿಯವರ ಹೋರಾಟದ ಬದುಕು, ಆಶಯ, ಗಾಢವಾದ ಪ್ರಜಾತಾಂತ್ರಿಕ ನಡವಳಿಕೆ, ಅಚಲ ನಂಬಿಕೆ, ಅವರಿಂದ ಪಡೆದ ಹೋರಾಟದ ಸ್ಫೂರ್ತಿ ಮುಂತಾಗಿ, ದೊರೆಸ್ವಾಮಿ ಅವರನ್ನು ಆದರ್ಶವಾಗಿಸಿಕೊಂಡು ಹೋರಾಟದ ಬದುಕು ನಡೆಸುತ್ತಿರುವ ಹೋರಾಟಗಾರರು, ಅಭಿಮಾನಿಗಳು, ತಮ್ಮ ಅನುಭವ ಮತ್ತು ದೊರೆಸ್ವಾಮಿ ಅವರೊಟ್ಟಿಗಿದ್ದ ಒಡನಾಟದ ಬಗ್ಗೆ ಹಂಚಿಕೊಂಡರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನಿವೃತ್ತ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ದೊರೆಸ್ವಾಮಿ ಅವರು ತನ್ನನ್ನು ಕರೆದು -ಸೆಂಥಿಲ್, ಇನ್ನುಮುಂದೆ ಈ ಹೋರಾಟಗಳನ್ನು ಮುಂದುವರಿಸುವ ಹೊಣೆ ನಿಮ್ಮಂಥ ಯುವ ಪೀಳಿಗೆಯದು ಎಂದಿದ್ದರು- ಎಂದು ನೆನಪಿಸಿಕೊಂಡರು.

ದೊರೆಸ್ವಾಮಿಯವರೊಂದಿಗಿನ ತಮ್ಮ ಅನುಭವಗಳನ್ನು ವಿವರಿಸಿ ಮಾತನಾಡಿದ ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ್, “ದೊರೆಸ್ವಾಮಿ ಅವರು ರಾಜ್ಯದಾದ್ಯಂತ ಎಲ್ಲಾ ಜನಪರ ಹೋರಾಟಗಳ ಶಕ್ತಿಯಾಗಿದ್ದರು. ಕೋಮುವಾದದ ವಿರುದ್ಧ ಅವರದು ರಾಜಿಯಿಲ್ಲದ ಹೋರಾಟವಾಗಿತ್ತು” ಎಂದು ಬಣ್ಣಿಸಿದರು.
ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್ ಮಾತನಾಡಿ, “ದೊರೆಸ್ವಾಮಿಯವರು ಕೊನೆಯ ದಿನಗಳಲ್ಲಿ ಆಸ್ಪತ್ರೆಯ ಐಸಿಯುನಲ್ಲಿದ್ದಾಗಲೂ ನಾವು ಸೋತಿಲ್ಲ, ಸೋಲುವುದೂ ಇಲ್ಲ; ಹೋರಾಟಕ್ಕೆ ಸೋಲೆಂಬುದಿಲ್ಲ ಎಂದು ಅತ್ಯಂತ ಆತ್ಮವಿಶ್ವಾಸದಿಂದ ಹೇಳುತ್ತಿದ್ದರು. ಅವರು ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿಕೊಂಡು ಹೋಗುತ್ತೇವೆ” ಎಂಬ ಸಂಕಲ್ಪ ಮಾಡಿದರು.
ಹೋರಾಟಗಾರರಾದ ಸಿರಿಮನೆ ನಾಗರಾಜ್ ಮಾತನಾಡಿ, “ಸ್ವಾತಂತ್ರ್ಯ ಹೋರಾಟ 1947ರ ಆಗಸ್ಟ್ 14ರ ರಾತ್ರಿಗೆ ಮುಗಿಯಲಿಲ್ಲ. ಈ ದೇಶದಲ್ಲಿ ಬಡತನ ಸಂಪೂರ್ಣವಾಗಿ ನಿವಾರಣೆ ಆಗಬೇಕು, ಕಟ್ಟಕಡೆಯ ಮನುಷ್ಯನ ಕಣ್ಣೀರನ್ನೂ ಒರೆಸುವುದೇ ಸ್ವಾತಂತ್ರ್ಯದ ಗುರಿ ಎಂದು ಬಯಸಿದ್ದ ಗಾಂಧೀಜಿಯವರ ಆಶಯ ಸಾಕಾರವಾಗುವವರೆಗೂ ಸ್ವಾತಂತ್ರ್ಯ ಹೋರಾಟ ಮುಂದುವರಿಯುತ್ತದೆ ಎಂದು ಹೇಳುತ್ತಿದ್ದ ದೊರೆಸ್ವಾಮಿಯವರ ಧ್ಯೇಯವನ್ನು ನಾವೆಲ್ಲರೂ ಒಗ್ಗೂಡಿ ಈಡೇರಿಸೋಣ” ಎಂದು ತಿಳಿಸಿದರು.
ಕರ್ನಾಟಕ ಜನಶಕ್ತಿಯ ಗೌರಿ ಅವರು ಮಾತನಾಡಿ, “ದೊರೆಸ್ವಾಮಿಯವರು ಇಡೀ ರಾಜ್ಯದ ಭೂಮಿ ಮತ್ತು ವಸತಿ ವಂಚಿತರಿಗಾಗಿ ತನ್ನ ಕೊನೆಯ ಉಸಿರಿರುವವರೆಗೆ ಹೋರಾಟ ನಡೆಸಿದರು. ಅವರ ಹೋರಾಟದ ಛಲವನ್ನು ನಾವು ಆದಷ್ಟೂ ಮೈಗೂಡಿಸಿಕೊಂಡು ಭೂಮಿ ವಸತಿ ಇಲ್ಲದವರಿಗಾಗಿ ಹೋರಾಟ ಮುಂದುವರಿಸಬೇಕಾಗಿದೆ. ಅದೇ ದೊರೆಸ್ವಾಮಿಯವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ಕೊಪ್ಪಳ: ಮಾದಿಗ ಸಮುದಾಯದ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಕಾರಟಗಿ ಬಂದ್‌ಗೆ ಕರೆ
ಅಧ್ಯಕ್ಷತೆಯ ಮಾತುಗಳನ್ನಾಡಿದ ಹಿರಿಯ ಪತ್ರಕರ್ತರಾದ ಡಾ.ವಿಜಯಮ್ಮ, “ದೊರೆಸ್ವಾಮಿಯವರ ಹೋರಾಟದ ಬದುಕು ಮತ್ತು ಅವರು ಭಾಗವಹಿಸಿದ ಎಲ್ಲಾ ಹೋರಾಟ, ಚಳವಳಿಗಳ ಕುರಿತು ಒಂದು ಪುಸ್ತಕವನ್ನು ಒಂದು ವರ್ಷದೊಳಗಾಗಿಯಾದರೂ ಹೊರತರಬೇಕು. ಅವರ ಬದುಕು, ಚಿಂತನೆ, ಹೋರಾಟಗಳ ಒಂದು ಚಿತ್ರಣವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ. ಆ ಜವಾಬ್ದಾರಿ ನಮ್ಮ ಮೇಲಿದೆ” ಎಂದು ಆಶಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಸಾಮಾಜಿಕ ಚಳವಳಿಗಾರರಾದ ವೆಂಕಟೇಶ್, ಅಜಯ್, ನರಸಿಂಹಮೂರ್ತಿ, ಕರ್ನಾಟಕ ಜನಾಂದೋಲನ ಸಂಘಟನೆಯ ಕೆ.ಮರಿಯಪ್ಪ, ಸಮಾಜವಾದಿ ಮುಖಂಡ ರಾಬಿನ್ ಮ್ಯಾಥ್ಯೂ, ‘ಸೋಲಾರ್’ ಖ್ಯಾತಿಯ ಸೈಯದ್ ಸಿದ್ದಿಕಿ ಸೇರಿದಂತೆ ಮೊದಲಾದ ಗಣ್ಯರು ದೊರೆಸ್ವಾಮಿಯವರಿಗೆ ನುಡಿನಮನ ಸಲ್ಲಿಸಿದರು.
ದೊರೆಸ್ವಾಮಿಯವರು ನಿಧನರಾದಾಗ ಬರೆದಿದ್ದ ಕವನವನ್ನು ಚಿಂತಕರಾದ ಶಿವಸುಂದರ್ ವಾಚಿಸಿದರು. ಜ್ಞಾನವಿಜ್ಞಾನ ಸಮಿತಿಯ ಪ್ರಭಾ ಬೆಳವಂಗಲ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ನಾಗೇಶ್ವರರಾವ್ ವಂದನಾರ್ಪಣೆ ಮಾಡಿದರು.


