Homeಮುಖಪುಟಹಿಂದುತ್ವದ ಬೆಳವಣಿಗೆ: ಮೇಲ್ಜಾತಿಗಳ ಧ್ರುವೀಕರಣದ ಬಂಡಾಯವೇ? - ಜಾನ್ ಡ್ರೀಜ್ ವಿಶೇಷ ಲೇಖನ

ಹಿಂದುತ್ವದ ಬೆಳವಣಿಗೆ: ಮೇಲ್ಜಾತಿಗಳ ಧ್ರುವೀಕರಣದ ಬಂಡಾಯವೇ? – ಜಾನ್ ಡ್ರೀಜ್ ವಿಶೇಷ ಲೇಖನ

ಶಾಲಾ ಶಿಕ್ಷಣ ವ್ಯವಸ್ಥೆ ಸಾರ್ವಜನಿಕ ಜೀವನದ ವಲಯದಲ್ಲಿ ಮಾತ್ರ ಮೇಲ್ಜಾತಿಗಳು ತಮ್ಮ ಅಧಿಕಾರ ಮತ್ತು ಸವಲತ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕಾದ ಅನಿವಾರ್ಯ ಒದಗಿಬಂದಿದ್ದು. ಇನ್ನೊಂದು ಉದಾಹರಣೆ ಚುನಾವಣೆ ವ್ಯವಸ್ಥೆ.

- Advertisement -

ಇತ್ತೀಚಿನ ದಶಕಗಳಲ್ಲಿ ಹಿಂದು ರಾಷ್ಟ್ರೀಯವಾದ ಸ್ಫೋಟಗೊಂಡಿದ್ದು, ಈ ಬೆಳವಣಿಗೆಯು ಜಾತಿಯ ವಿನಾಶ ಹಾಗೂ ಹೆಚ್ಚಿನ ಸಮಾನತೆಯುಳ್ಳ ಸಮಾಜವನ್ನು ತರುವ ಪ್ರಯತ್ನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ಹಿನ್ನಡೆ ಒಂದು ಆಕಸ್ಮಿಕವಲ್ಲ; ಹಿಂದೂ ರಾಷ್ಟ್ರೀಯವಾದವನ್ನು ಪ್ರಜಾಪ್ರಭುತ್ವದ ಸಮಾನಾವಕಾಶಗಳ ಬೇಡಿಕೆಯ ವಿರುದ್ಧದ ಮೇಲ್ಜಾತಿಗಳ ಬಂಡಾಯ ಎಂದು ಕಾಣಬಹುದು. – ಜಾನ್ ಡ್ರೀಜ್

ಹಿಂದುತ್ವ ಮತ್ತು ಜಾತಿ

“ಹಿಂದುತ್ವ” ಎಂತಲೂ ಕರೆಯಲಾಗುವ ಹಿಂದೂ ರಾಷ್ಟ್ರೀಯತೆಯ ಮೂಲ ಪರಿಕಲ್ಪನೆಗಳ ಬಗ್ಗೆ ಅರಿಯಲು ಅಷ್ಟೇನೂ ಕಷ್ಟಪಡಬೇಕಿಲ್ಲ. ಅವುಗಳನ್ನು ವಿ.ಡಿ. ಸಾವರ್ಕರ್ ಅವರ ಪುಸ್ತಕ ‘ಎಸೆನ್ಷಿಯಲ್ಸ್ ಆಫ್ ಹಿಂದುತ್ವ’ (ಸಾವರ್ಕರ್, 1923) ದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಹಾಗೂ ತದನಂತರ ಎಮ್.ಎಸ್. ಗೋಲ್ವಾಲಕರ್ ಅವರಂತಹ ಪ್ರಾಥಮಿಕ ಹಿಂದುತ್ವ ಚಿಂತಕರಿಂದ ಇನ್ನಷ್ಟು ಬೆಳೆಸಲಾಯಿತು. ಮೂಲವಾಗಿ, ಭಾರತ ಹಿಂದೂಗಳದ್ದು ಎಂಬುದು ಅವರ ಮೂಲ ಕಲ್ಪನೆ. ಇಲ್ಲಿ ಹಿಂದೂ ಎಂಬುದನ್ನು ಕಟ್ಟುನಿಟ್ಟಿನ ಧಾರ್ಮಿಕ ನೆಲೆಯಲ್ಲಿ ವ್ಯಾಖ್ಯಾನಿಸದೇ ಸಾಂಸ್ಕೃತಿಕ ನೆಲೆಯಲ್ಲಿ ವ್ಯಾಖ್ಯಾನಿಸಲಾಗಿದೆ. ಅಂದರೆ ಅದರಲ್ಲಿ ಸಿಖ್ಖರು, ಬೌದ್ಧರು ಹಾಗೂ ಜೈನರನ್ನು ಒಳಗೊಳ್ಳಲಾಗುತ್ತದೆ ಆದರೆ ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ಒಳಗೊಳ್ಳುವುದಿಲ್ಲ. (ಏಕೆಂದರೆ ಆ ಧರ್ಮಗಳು ಹುಟ್ಟಿದ್ದು ಬೇರೆ ಕಡೆ). ಹಿಂದುತ್ವದ ಅಂತಿಮ ಗುರಿ, ಹಿಂದೂಗಳನ್ನು ಒಂದುಗೂಡಿಸುವುದು, ಹಿಂದು ಸಮಾಜಕ್ಕೆ ಮರುಜೀವ ನೀಡುವುದು ಹಾಗೂ ಭಾರತವನ್ನು ಒಂದು ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡುವುದು.

ಪ್ರಾಸಂಗಿಕವಾಗಿ, ಈ ಪರಿಕಲ್ಪನೆಗಳನ್ನು ಬೆಂಬಲಿಸಲು ಬಳಸಿದ ವಾದಗಳು ತರ್ಕಬದ್ಧ ವೈಚಾರಿಕ ಚಿಂತನೆ, ಸಾಮಾನ್ಯ ಜ್ಞಾನ ಹಾಗೂ ವೈಜ್ಞಾನಿಕ ಜ್ಞಾನದಿಂದ ಭಯಹುಟ್ಟಿಸುವ ಮಟ್ಟಿಗೆ ದೂರವಾಗಿವೆ. ಉದಾಹರಣೆಗೆ, ಹಿಂದೂಗಳೆಲ್ಲರೂ ಒಂದೇ ಜನಾಂಗದವರು, ಆರ್ಯನ್ ಜನಾಂಗದವರು ಎಂಬ ಗೋಲ್ವಾಲಕರ್ ಅವರ ವಾದ. ಇದು ನಮಗೆ ಇಂದು ಲಭ್ಯವಿರುವ ವೈಜ್ಞಾನಿಕ ಸಾಕ್ಷಾಧಾರಗಳೊಂದಿಗೆ ಗೋಲ್ವಾಲಕರ್ ಅಂದು ಸೆಣೆಸಬೇಕಾಗಲಿಲ್ಲವಾದರೂ, ಆರ್ಯನ್ನರು ಭಾರತದ ಉತ್ತರದಿಂದ ಬಂದರು, ಅದರಲ್ಲೂ ನಾರ್ತ್ ಪೋಲ್(ಉತ್ತರ ಧ್ರುವ) ಕಡೆಯಿಂದ ಬಂದರು ಎಂಬ ಅವಿಷ್ಕಾರದೊಂದಿಗೆ ಅವರು ಸೆಣೆಸಬೇಕಾಯಿತು. ಅದಕ್ಕೆ ಅವರು ಸರಳ ಉತ್ತರ ನೀಡಿದರು. ಉತ್ತರ ಧ್ರುವ ಎಂಬುದು ಭಾರತದಲ್ಲಿಯೇ ಇತ್ತು ಎಂಬ ವಾದವನ್ನು ಮಂಡಿಸಿದರು.

ಉತ್ತರ ಧ್ರುವ ಎಂಬುದು ಒಂದೇ ಕಡೆ ಇರುವಂಥದ್ದಲ್ಲ ಹಾಗೂ ಬಹಳ ಮುಂಚೆ, ವಿಶ್ವದ ಯಾವ ಭಾಗದಲ್ಲಿತ್ತೆಂದರೆ, ವರ್ತಮಾನದಲ್ಲಿ ನಾವು ಆ ಪ್ರದೇಶವನ್ನು ಬಿಹಾರ್ ಹಾಗೂ ಒರಿಸ್ಸಾ ಎಂದು ಕರೆಯುತ್ತೇವೆ. ನಂತರ ಅದು ಈಶಾನ್ಯ ದಿಕ್ಕಿಗೆ ಚಲಿಸಿತು ಹಾಗೂ ಕೆಲಸಲ ಪಶ್ಚಿಮ ದಿಕ್ಕಿಗೆ, ಕೆಲಸಲ ಉತ್ತರಕ್ಕೆ, ಹೀಗೆ ಚಲಿಸಿ, ಈಗ ಎಲ್ಲಿದೆಯೋ ಅಲ್ಲಿ ಬಂದಿದೆ.., ನಾವು ಎಂದಿಗೂ ಇಲ್ಲಿಯೇ ಇದ್ದವರು ಹಾಗೂ ಆಕ್ರ್ಟಿಕ್ ವಲಯವು ನಮ್ಮನ್ನು ಬಿಟ್ಟು ತನ್ನ ಅಂಕುಡೊಂಕಾದ ನಡೆಯಲ್ಲಿ ಉತ್ತರ ದಿಕ್ಕಿಗೆ ಚಲಿಸಿತು. (ಗೋಲ್ವಾಲ್ಕರ್, 1939; ಪುಟ 8)

ಉತ್ತರ ಧ್ರುವದ ‘ಅಂಕುಡೊಂಕಿನ ಚಲನೆ’(ಜಿಗ್‍ಜ್ಯಾಗ್ ಮಾರ್ಚ್)ಯ ಸಮಯದಲ್ಲಿ ಆರ್ಯನ್ನರು ಮಾತ್ರ ಒಂದೇ ಸ್ಥಳದಲ್ಲಿ ಹೇಗೆ ಉಳಿದುಕೊಂಡರು ಎಂಬುದುನ್ನು ಗೋಲ್ವಾಲ್ಕರ್ ಉತ್ತರಿಸುವುದಿಲ್ಲ. ಅವರು ಇಂತಹದ್ದೇ ಸಂಕುಚಿತ ವಾದಗಳನ್ನು ಬಳಸಿ, ಎಲ್ಲಾ ಹಿಂದೂಗಳಿಗೆ ಒಂದೇ ಭಾಷೆ ಎಂಬ ವಾದವನ್ನೂ ಸಮರ್ಥಿಸಿಕೊಳ್ಳುತ್ತಾರೆ.

ವಿ.ಡಿ. ಸಾವರ್ಕರ್

ಹಿಂದುತ್ವ ಯೋಜನೆಯನ್ನು ಇನ್ನೊಂದು ರೀತಿಯಲ್ಲೂ ನೋಡಬಹುದು, ಎಲ್ಲಾ ಹಿಂದೂಗಳನ್ನು ಬೆಸೆಯುತ್ತದೆ ಎಂದು ಹೇಳಲಾಗುವ (ಅವರ ಪ್ರಕಾರ) ಆ ಒಂದು ಕಾಮನ್ ಸಂಸ್ಕೃತಿಯೊಂದಿಗೆ ತಳುಕುಹಾಕಿಕೊಂಡಿರುವ ಪಾರಂಪರಿಕ ಸಾಮಾಜಿಕ ವ್ಯವಸ್ಥೆಯನ್ನು ಮರುಸ್ಥಾಪನೆ ಮಾಡುವ ಪ್ರಯತ್ನ ಎಂತಲೂ ಕಾಣಬಹುದು. ಜಾತಿಪದ್ಧತಿ ಅಥವಾ ಚಾತುರ್ವರ್ಣ ವ್ಯವಸ್ಥೆ ಎಂಬುದು ಈ ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಗ. ಉದಾಹರಣೆಗೆ, ‘ವಿ ಆರ್ ಅವರ್ ನೇಷನ್‍ಹುಡ್ ಡಿಫೈನಡ್’ ಎಂಬ ಪುಸ್ತಕದಲ್ಲಿ ಸಾವರ್ಕರ್ ಅವರು ಸ್ಪಷ್ಟವಾಗಿ ಹೇಳುವುದೇನೆಂದರೆ, ‘ಸಮಾಜದ ಹಿಂದೂ ಚೌಕಟ್ಟು’ ಎಂಬುದು ‘ವರ್ಣ ಮತ್ತು ಆಶ್ರಮಗಳಿಂದ’ ನಿರೂಪಿಸಲ್ಪಟ್ಟಿದೆ. (ಗೋಲ್ವಾಲ್ಕರ್ 1939, ಪುಟ54). ಇದೇ ವಾದವನ್ನು ವಿವರಿಸುತ್ತ ‘ಬಂಚ್ ಆಫ್ ಥಾಟ್ಸ್’ ಎಂಬ ಪುಸ್ತಕದಲ್ಲಿ (ಹಿಂದುತ್ವದ ಬುನಾದಿಯ ಪಠ್ಯಗಳಲ್ಲಿ ಒಂದು) ವರ್ಣ ವ್ಯವಸ್ಥೆಯನ್ನು ಶ್ಲಾಘಿಸುತ್ತಾರೆ, ಅದನ್ನು ಒಂದು ‘ಸಾಮರಸ್ಯದ ಸಾಮಾಜಿಕ ವ್ಯವಸ್ಥೆ’ಗೆ ಬುನಾದಿ ಎಂದು ವಿವರಿಸುತ್ತಾರೆ. ಜಾತಿ ವ್ಯವಸ್ಥೆಯ ಎಲ್ಲಾ ಸಮರ್ಥಕರಂತೆ ಇವರೂ ವರ್ಣ ವ್ಯವಸ್ಥೆಯು ಶ್ರೇಣೀಕರಣವಾಗಿರಬೇಕಿಲ್ಲ ಎಂದು ಹೇಳುತ್ತಾರೆ ಆದರೆ ಅಷ್ಟಕ್ಕೇ ನಿಲ್ಲಿಸುತ್ತಾರೆ ಹಾಗಾಗಿ ಅದಕ್ಕೆ ಹೆಚ್ಚಿನ ಅರ್ಥ ಬರುವುದಿಲ್ಲ.

ಗೋಲ್ವಾಲ್ಕರ್ ಮತ್ತು ಇತರ ಹಿಂದುತ್ವವಾದಿಗಳಿಗೆ ‘ಜಾತಿ’ಯಿಂದ ಯಾವುದೇ ಸಮಸ್ಯೆ ಇಲ್ಲ. ಅವರಿಗೆ ಸಮಸ್ಯೆ ಇರುವುದು, ಅವರೇನು ಕಾಸ್ಟಿಸಂ ಎಂದು ಕರೆಯುತ್ತಾರೋ ಅದಕ್ಕೆ. ಹಿಂದುತ್ವದ ಪರಿಭಾಷೆಯಲ್ಲಿ ಕಾಸ್ಟಿಸಂ ಎಂಬ ಪದಕ್ಕೆ ಜಾತಿ ತಾರತಮ್ಯ ಎಂಬ ಅರ್ಥ ಬರುವುದಿಲ್ಲ (ಉದಾಹರಣೆಗೆ ರೇಸಿಸಂ ಎಂದರೆ ಜನಾಂಗೀಯ ತಾರತಮ್ಯ). ಅದರ ಬದಲಿಗೆ ಆ ಪದವನ್ನು ಜಾತಿ ಸಂಘರ್ಷದ ಹಲವಾರು ಸ್ವರೂಪಗಳಿಗೆ ಬಳಸುತ್ತಾರೆ, ಉದಾಹರಣೆ ದಲಿತರು ತಮ್ಮನ್ನು ತಾವು ಪ್ರತಿಪಾದಿಸುವುದು ಹಾಗೂ ಮೀಸಲಾತಿಯ ಹಕ್ಕನ್ನು ಕೇಳುವುದು ಇತ್ಯಾದಿಗಳು ಕಾಸ್ಟಿಸಂ ಎಂಬ ಪದದ ಅಡಿಯಲ್ಲಿ ಬರುತ್ತವೆ. ಇವೆಲ್ಲ ಕಾಸ್ಟಿಸಂ ಏಕೆಂದರೆ ಇವುಗಳು ಹಿಂದೂ ಸಮಾಜವನ್ನು ಒಡೆಯುತ್ತವೆ.

ಇಂದು ಹಿಂದೂ ರಾಷ್ಟ್ರೀಯವಾದದ ಮಾರ್ಗದರ್ಶಕನ ಹೊಣೆಗಾರಿಕೆ ಹೊತ್ತು ಮುಂದುವರೆಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ಮೂಲ ಪರಿಕಲ್ಪನೆಗಳಿಗೆ ಬದ್ಧವಾಗಿದೆ. ಜಾತಿಯ ಬಗ್ಗೆ ಅವರ ಸ್ಟ್ಯಾಂಡರ್ಡ್ ನಿಲುವು ಸ್ಪಷ್ಟವಾಗಿದೆ, ಅದನ್ನು ಹೀಗೆ ವ್ಯಾಖ್ಯಾನಿಸುತ್ತಾರೆ; ಜಾತಿ ಎಂಬುದು ‘ನಮ್ಮ ದೇಶದ ಮೇಧಾವಿತನ(ಜೀನಿಯಸ್)’ದ ಒಂದು ಭಾಗ. ಇದನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಇತ್ತೀಚಿಗೆ ಇಂಡಿಯನ್ ಎಕ್ಸ್ಪ್ರೆಸ್‍ನಲ್ಲಿ (ಮಾಧವ್, 2017) ಹೇಳಿದ್ದಾರೆ ಹಾಗೂ ನಿಜವಾದ ಸಮಸ್ಯೆ ಜಾತಿಯಲ್ಲ ಆದರೆ ಜಾತೀಯತೆ(ಕಾಸ್ಟಿಸಂ) ಎಂತಲೂ ಪ್ರತಿಪಾದಿಸಿದರು.

ಇದಕ್ಕಿಂತ ಹೆಚ್ಚು ಬಹಿರಂಗವಾಗಿ ಹೇಳಿಕೆ ನೀಡಿದ್ದು ಯೋಗಿ ಆದಿತ್ಯನಾಥ್. ಉತ್ತರಪ್ರದೇಶದ ಮುಖ್ಯಮಂತ್ರಿಯಾದ ಇವರು ಎನ್‍ಡಿಟಿವಿಗೆ ಮೂರು ವರ್ಷಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ಗೋಲ್ವಾಲ್ಕರ್‍ರಂತೆಯೇ ಜಾತಿ ಎಂಬುದು ‘ಸಮಾಜವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ನಿಭಾಯಿಸಲು’ ಇರುವ ಒಂದು ವಿಧಾನ ಎಂದು ವಿವರಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ಹೇಳಿದ್ದೇನೆಂದರೆ, ‘ಹೊಲಗಳಲ್ಲಿ ಒಡ್ಡುಗಳ ಮಾಡುವ ಕೆಲಸವನ್ನು ಸಮಾಜದಲ್ಲಿ ಜಾತಿ ಮಾಡುತ್ತವೆ ಹಾಗೂ ಅದನ್ನು ಸಂಘಟಿತವಾಗಿ ಮತ್ತು ವ್ಯವಸ್ಥಿತವಾಗಿ ಇಡುತ್ತವೆ.., ಜಾತಿಗಳು ಓಕೆ ಆದರೆ ಜಾತೀಯತೆ(ಕಾಸ್ಟಿಸಂ) ಅಲ್ಲ..”

ಈ ವಿಷಯವನ್ನು ಇನ್ನೊಂದು ದೃಷ್ಟಿಕೋನದಿಂದ ನೋಡಿದಾಗ, ಹಿಂದುತ್ವವಾದಿಗಳು ಒಂದು ಮೂಲಭೂತ ಸಮಸ್ಯೆಯನ್ನು ಎದುರಿಸುತ್ತಾರೆ; ಜಾತಿಯಿಂದ ವಿಭಜಿತವಾದ ಸಮಾಜವನ್ನು “ಒಗ್ಗೂಡಿಸುವುದು” ಹೇಗೆ? ಅದಕ್ಕೆ ಉತ್ತರ, ಜಾತಿ ಎಂಬುದನ್ನು ಒಂದು ವಿಭಜಿಸುವ ಸಂಸ್ಥೆಯೆಂದು ಬಿಂಬಿಸದೇ ಅದನ್ನು ಒಂದು ಹಿಂದೂಗಳನ್ನು ಒಗ್ಗೂಡಿಸುವ ಸಂಸ್ಥೆ ಎಂಬಂತೆ ಬಿಂಬಿಸುವುದು. ಈ ಪರಿಕಲ್ಪನೆ ಸ್ವಾಭಾವಿಕವಾಗಿಯೇ ಹಿಂದುಳಿದ ಜಾತಿಗಳಿಗೆ ಆಕರ್ಷಕವಾಗುವ ಸಾಧ್ಯತೆಯಿಲ್ಲ. ಹಾಗೂ ಬಹುಶಃ ಅದೇ ಕಾರಣಕ್ಕಾಗಿ ತನ್ನ ಸಂದರ್ಶನದಲ್ಲಿ ಯೋಗಿ ಆದಿತ್ಯನಾಥ್ ಹೇಳುವುಂತೆ ಇತರ ಹಿಂದುತ್ವವಾದಿಗಳು ಹೀಗೆ ಬಹಿರಂಗವಾಗಿ ಹೇಳುವುದು ವಿರಳ. ಸಾಮಾನ್ಯವಾಗಿ, ಹಿಂದುತ್ವದ ನಾಯಕರು ಜಾತಿ ಪದ್ಧತಿಯ ಬಗ್ಗೆ ಮಾತನಾಡುವುದಿಲ್ಲ ಆದರೆ ಅಲ್ಲಿ, ಅವರ ಮೌನದಲ್ಲಿ ಕಾಣುವುದು ಸಮ್ಮತಿ. ಅವರಲ್ಲಿ ಕೆಲವೇ ಕೆಲವರು ಜಾತಿ ಪದ್ಧತಿಯ ವಿರುದ್ಧ ಮಾತನಾಡಿದ್ದು ಕಂಡುಬಂದಿದೆ.

ಕೆಲವೊಮ್ಮೆ ತಾವು ಕೇವಲ ಅಸ್ಪೃಶ್ಯತೆಯ ವಿರುದ್ಧ ಮಾತನಾಡುವ ಅಥವಾ ಕೆಲಸ ಮಾಡುವ ಕಾರಣಕ್ಕೇ, ಅವರು ಜಾತಿ ಪದ್ಧತಿಯನ್ನು ವಿರೋಧಿಸುತ್ತಿದ್ದಾರೆ ಎನ್ನುವ ಅಭಿಪ್ರಾಯ ಸೃಷ್ಟಿಸಲು ಹಿಂದುತ್ವದ ನಾಯಕರು ಪ್ರಯತ್ನಿಸುತ್ತಾರೆ. ಸಾವರ್ಕರ್ ಸ್ವತಃ ಅಸ್ಪೃಶ್ಯತೆಯ ವಿರುದ್ಧವಾಗಿದ್ದರು ಹಾಗೂ ಅದರ ವಿರುದ್ಧ ಡಾ. ಅಂಬೇಡ್ಕರ್ ಅವರು ಆಯೋಜಿಸಿದ್ದ ಅಸಹಕಾರ ಚಳವಳಿ, ಮಹಾಡ್ ಸತ್ಯಾಗ್ರಹಕ್ಕೂ ಬೆಂಬಲ ನೀಡಿದ್ದರು. ಆದರೆ ಅಸ್ಪೃಶ್ಯತೆಯನ್ನು ವಿರೋಧಿಸಿದರೆ ಅದು ಜಾತಿ ಪದ್ಧತಿಯನ್ನು ವಿರೋಧಿಸಿದಂತಲ್ಲ ಎಂಬುದು ಎಲ್ಲರಿಗೂ ತಿಳಿದ ಸತ್ಯ. ಅಸ್ಪೃಶ್ಯತೆಯನ್ನು ವಿರೋಧಿಸಿತ್ತಲೇ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವ ಧೀರ್ಘ ಪರಂಪರೆಯೇ ಮೇಲ್ಜಾತಿಗಳಲ್ಲಿ ಇದೆ. ಅಸ್ಪೃಶ್ಯತೆಯನ್ನು ಅವರು ಇತ್ತೀಚಿನ ವಿಕೃತ ಬೆಳವಣಿಗೆ ಎಂದು ಕರೆದು ತಳ್ಳಿಹಾಕುತ್ತಾರೆ.

ಅನಿಶ್ಚಿತ ಅಧಿಕಾರ

ಹಿಂದುತ್ವ ಯೋಜನೆಯು ಮೇಲ್ಜಾತಿಗಳಿಗೆ ಒಳ್ಳೆಯ ಡೀಲ್ ಆಗಿದೆ, ಏಕೆಂದರೆ ಅದು ಅವರನ್ನು ಮೇಲಿನ ಸ್ಥಾನದಲ್ಲಿರಿಸುವ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಯನ್ನು ಮರುಸ್ಥಾಪಿಸುವದಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ. ಸ್ವಾಭಾವಿಕವಾಗಿಯೇ, ಆರ್‌ಎಸ್‍ಎಸ್ ಸಂಘಟನೆಯು ಮೇಲ್ಜಾತಿಗಳಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ. ಅದರ ಸಂಸ್ಥಾಪಕರೆಲ್ಲರೂ ಪ್ರಾಸಂಗಿಕವಾಗಿ ಬ್ರಾಹ್ಮಣರೇ ಆಗಿದ್ದರು. ಅದರಂತೆಯೇ, ಒಬ್ಬರನ್ನು ಹೊರತುಪಡಿಸಿ (ರಾಜೇಂದ್ರ ಸಿಂಗ್, ರಾಜಪೂತ್) ಮಿಕ್ಕ ಎಲ್ಲಾ ಸರಸಂಘಚಾಲಕರೂ ಬ್ರಾಹ್ಮಣರೇ ಆಗಿದ್ದರು. ಹಾಗೂ ಹಿಂದುತ್ವ ಚಳವಳಿಯ ಎಲ್ಲಾ ಮುಂದಾಳುಗಳು ಬ್ರಾಹ್ಮಣರೇ – ಸಾವರ್ಕರ್, ಹೆಡ್ಗೆವಾರ್, ಗೋಲ್ವಾಲ್ಕರ್, ನಾಥುರಾಮ್ ಗೋಡ್ಸೆ, ಶ್ಯಾಮ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಯ್, ಮೋಹನ್ ಭಾಗವತ್, ರಾಮ್ ಮಾಧವ್ ಮುಂತಾದವರನ್ನು ಹೆಸರಿಸಬಹುದು. ಸಮಯ ಕಳೆದಂತೆ, ಆರ್‍ಎಸ್‍ಎಸ್ ತನ್ನ ಪ್ರಭಾವವನ್ನು ಮೇಲ್ಜಾತಿಗಳನ್ನು ಮೀರಿ ಇತರ ಜಾತಿಗಳಿಗೂ ವಿಸ್ತರಿಸಿದೆ ಆದರೆ ಮೇಲ್ಜಾತಿಗಳೇ ಅವರ ಅತ್ಯಂತ ನಿಷ್ಠ ಮತ್ತು ನಂಬಿಗಸ್ಥ ನೆಲೆಯಾಗಿ ಉಳಿದಿವೆ.

ಎಮ್.ಎಸ್. ಗೋಲ್ವಾಲಕರ್

ಭಾರತದ ಸ್ವಾತಂತ್ರ್ಯದ ನಂತರ ಮೇಲ್ಜಾತಿಗಳ ಶ್ರೇಷ್ಠತೆಯ ಅಧಿಪತ್ಯಕ್ಕೆ ಅಪಾಯ ಬಂದಾಗ ಹಿಂದುತ್ವ ಎಂಬುದೇ ಅವರಿಗೆ ಪ್ರಾಣರಕ್ಷಕ ಲೈಫ್‍ಬೋಟ್ ಆಗಿ ಬಂದದ್ದು. ಸ್ವಾಭಾವಿಕವಾಗಿಯೇ ಸ್ವಾತಂತ್ರ್ಯ ನಂತರದ ಸಮಯದಲ್ಲೂ ಮೇಲ್ಜಾತಿಗಳು ತಮ್ಮ ಅಧಿಕಾರ ಮತ್ತು ಸವಲತ್ತುಗಳನ್ನು ಹೆಚ್ಚೂಕಡಿಮೆ ಉಳಿಸಿಕೊಂಡು ಹಾಗೇ ಮುಂದುವರೆಸಿಕೊಂಡು ಬಂದಿವೆ. ಉದಾಹರಣೆಗೆ, 2015ರಲ್ಲಿ ಅಲಾಹಾಬಾದ ನಗರದಲ್ಲಿ ಒಂದು ಸಮೀಕ್ಷೆ ನಡೆಸಲಾಯಿತು. ಆ ಸಮೀಕ್ಷೆಯ ವಸ್ತು; ‘ಅಧಿಕಾರ ಮತ್ತು ಪ್ರಭಾವದ ಸ್ಥಾನಗಳು’(ಪೊಸಿಷನ್ಸ್ ಆಫ್ ಪವರ್ ಆ್ಯಂಡ್ ಇನ್‍ಫ್ಲುಎನ್ಸ್, (POPI) (ಅದರಲ್ಲಿ ವಿಶ್ವವಿದ್ಯಾಲಯದ ಶಿಕ್ಷಕವೃಂದ, ಬಾರ್ ಅಸೋಸಿಯೇಷನ್, ಪ್ರೆಸ್ ಕ್ಲಬ್, ಉನ್ನತ ಪೊಲೀಸ್ ಹುದ್ದೆಗಳು, ಟ್ರೇಡ್ ಯುನಿಯನ್ ನಾಯಕರು, ಎನ್‍ಜಿಒ ಮುಖ್ಯಸ್ಥರು ಮುಂತಾದವರು). ಆ ಸಮೀಕ್ಷೆಯಲ್ಲಿ ನಾವು ಕಂಡದ್ದೇನೆಂದರೆ, 75% POPI ಗಳನ್ನು ಆಕ್ರಮಿಸಿದ್ದು ಮೇಲ್ಜಾತಿಗಳೇ. ಹಾಗೂ ಉತ್ತರಪ್ರದೇಶದಲ್ಲಿ ಆ ಮೇಲ್ಜಾತಿಗಳ ಪ್ರಮಾಣ ಕೇವಲ 16%ರಷ್ಟು. ಬ್ರಾಹ್ಮಣರು ಹಾಗೂ ಕಾಯಸ್ಥರೇ ಪಿಒಪಿಐಗಳ ಸುಮಾರು ಅರ್ಧದಷ್ಟಿದ್ದರು. ವಿಶೇಷವೆಂದರೆ, ಸಿವಿಕ್(ನಾಗರಿಕ ಹಕ್ಕುಗಳ) ಸಂಸ್ಥೆಗಳಲ್ಲಿ ಈ ಅಸಮತೋಲನ ಹೆಚ್ಚು ಎಂಬುದು; ಟ್ರೇಡ್ ಯುನಿಯನ್‍ಗಳಲ್ಲಿ, ಎನ್‍ಜಿಒಗಳಲ್ಲಿ ಹಾಗೂ ಪ್ರೆಸ್ ಕ್ಲಬ್‍ನಲ್ಲಿಯೇ ಸರಕಾರಿ ವಲಯಕ್ಕಿಂತ ಹೆಚ್ಚಿನ ಅಸಮತೋಲನ ಕಂಡುಬಂದಿತು. ಈ ಸಮೀಕ್ಷೆ ಕೇವಲ ಅಲಹಾಬಾದ್‍ಗೆ ಸೀಮಿತವಾಗಿದ್ದರೂ, ಇತರ ಅಧ್ಯಯನಗಳು ಈ ತರಹದ ಮೇಲ್ಜಾತಿಗಳ ಪ್ರಾಬಲ್ಯವನ್ನು ಹಲವು ವಲಯಗಳಲ್ಲೂ ಮುಂದುವರೆಯತ್ತಿದೆ ಎಂಬುದನ್ನು ಎತ್ತಿಹಿಡಿದಿವೆ- ಮೀಡಿಯಾ ಹೌಸ್‍ಗಳು, ಕಾರ್ಪೋರೇಟ್ ಬೋರ್ಡ್‍ಗಳು, ಕ್ರಿಕೆಟ್ ತಂಡಗಳು, ಹಿರಿಯ ಆಡಳಿತಾತ್ಮಕ ಸ್ಥಾನಗಳು ಮುಂತಾದವುಗಳಲ್ಲಿ.

ಹಾಗಾಗಿ, ಮೇಲ್ಜಾತಿಯ ದೋಣಿಯು ಅನೇಕ ಕಡೆಯಿಂದ ಸೋರಲಾರಂಭಿಸಿತ್ತು, ಉದಾಹರಣೆಗೆ ಶಿಕ್ಷಣ, ಇದರಲ್ಲಿ ಮೇಲ್ಜಾತಿಗಳ ಸಂಪೂರ್ಣ ಹಿಡಿತ ಇತ್ತು, 20ನೇ ಶತಮಾನದ ಆರಂಭದಲ್ಲಿ, ಸಾಕ್ಷರತೆಯು ಬ್ರಾಹ್ಮಣ ಪುರುಷರಲ್ಲಿ ಬಹುತೇಕ ಸಾಮಾನ್ಯವಾಗಿದ್ದ ಸಂದರ್ಭದಲ್ಲಿಯೇ ದಲಿತರಲ್ಲಿ ಬಹುತೇಕ ಸಂಪೂರ್ಣ ಅನಕ್ಷರತೆ ಇತ್ತು ಎಂದು ಹೇಳಬಹುದಾಗಿತ್ತು. ಅಸಮಾನತೆ ಮತ್ತು ತಾರತಮ್ಯ ಇಂದಿಗೂ ಶಿಕ್ಷಣ ವ್ಯವಸ್ಥೆಯಲ್ಲಿ ತಾಂಡವವಾಡುತ್ತಿದ್ದರೂ, ಸರಕಾರಿ ಶಾಲೆಗಳಲ್ಲಿ ದಲಿತ ಮಕ್ಕಳು ಮೇಲ್ಜಾತಿಯ ಮಕ್ಕಳೊಂದಿಗೆ ಸಮಾನ ಸ್ಥಾನಮಾನಕ್ಕೆ ಹಕ್ಕೊತ್ತಾಯ ಮಾಡಬಹುದಾಗಿದೆ. ಎಲ್ಲಾ ಜಾತಿಯ ಮಕ್ಕಳೂ ಒಂದೇ ಮಧ್ಯಾಹ್ನದ ಬಿಸಿಊಟವನ್ನು ಹಂಚಿಕೊಳ್ಳುತ್ತಾರೆ. ಆದರೆ ಈ ಪ್ರಯೋಗ (ಇನಿಷಿಯೇಟಿವ್) ಮೇಲ್ಜಾತಿಗಳಿಗೆ ಸರಿ ಹೊಂದಲಿಲ್ಲ (ಡ್ರೀಜ್, 2017). ಇತ್ತೀಚಿಗೆ ಮಧ್ಯಾಹ್ನದ ಬಿಸಿಊಟದಲ್ಲಿ ಮೊಟ್ಟೆಗಳನ್ನು ಶುರು ಮಾಡಿದ್ದೂ ಮೇಲ್ಜಾತಿಯ ಶಾಖಾಹಾರಿಗಳಿಗೆ ಅಸಹನೆ ಹುಟ್ಟಿಸಿತು. ಅವರ ಪ್ರಭಾವದಲ್ಲಿ ಬಿಜೆಪಿಯ ರಾಜ್ಯ ಸರಕಾರಗಳು ಇಂದಿಗೂ ಮೊಟ್ಟೆಗಳನ್ನು ಒಳಗೊಳ್ಳುವುದಕ್ಕೆ ಪ್ರತಿರೋಧ ತೋರುತ್ತಿವೆ.

ಶಾಲಾ ಶಿಕ್ಷಣ ವ್ಯವಸ್ಥೆ, ಈ ಒಂದೇ ಒಂದು ಸಾರ್ವಜನಿಕ ಜೀವನದ ವಲಯದಲ್ಲಿ ಮಾತ್ರ ಮೇಲ್ಜಾತಿಗಳು ತಮ್ಮ ಅಧಿಕಾರ ಮತ್ತು ಸವಲತ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕಾದ ಅನಿವಾರ್ಯ ಒದಗಿಬಂದಿದ್ದು. ಇನ್ನೊಂದು ಉದಾಹರಣೆ, ಚುನಾವಣೆ ವ್ಯವಸ್ಥೆ. ಡಾ, ಅಂಬೇಡ್ಕರ್ ಅವರು ಇದರ ಬಗ್ಗೆ ಬರೆಯುತ್ತಾ ಹೀಗೆ ಹೇಳಿದ್ದರು, ‘ವಯಸ್ಕರಿಗೆ ಸಮಾನ ಮತದಾನದ ಹಕ್ಕು ಮತ್ತು ನಿಯಮಿತವಾಗಿ ನಡೆಯುವ ಚುನಾವಣೆಗಳು ಎಂದಿಗೂ ಆಳುವ ವರ್ಗಗಳು ಅಧಿಕಾರದ ಮತ್ತು ಪಾರುಪತ್ಯದ ಸ್ಥಾನಗಳಿಗೆ ತಲುಪಲು ಅಡ್ಡಿಗಳಲ್ಲ’ ಎಂದಿದ್ದರು. ಲೋಕಸಭೆಯಲ್ಲಿ ಮೇಲ್ಜಾತಿಗಳ ಪ್ರಾತಿನಿಧ್ಯ(29%) ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ, ಸಮಾಜದಲ್ಲಿ ಪಿಒಪಿಐಗಳಲ್ಲಿ ಇರುವ ಅತ್ಯಂತ ದೊಡ್ಡ ಪ್ರಮಾಣದ ಮೇಲ್ಜಾತಿಗಳ ಪ್ರಾಬಲ್ಯಕ್ಕಿಂತ ಅದು ತುಂಬಾ ಕಡಿಮೆ. ಸ್ಥಳೀಯ ಮಟ್ಟದಲ್ಲೂ, ಪಂಚಾಯತಿ ರಾಜ್ ಸಂಸ್ಥೆಗಳಲ್ಲಿ, ಮಹಿಳೆಯರಿಗೆ ಇರುವ ಮೀಸಲಾತಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಇರುವ ಮೀಸಲಾತಿಯಿಂದ ರಾಜಕೀಯ ವಿಷಯಗಳಲ್ಲಿ ಮೇಲ್ಜಾತಿಗಳ ಹಿಡಿತ ಸಡಿಲಗೊಂಡಿದೆ. ಅದೇ ರೀತಿಯಲ್ಲಿ, ಕಾನೂನಿನ ಕಣ್ಣಿಗೆ ಎಲ್ಲರೂ ಸಮಾನರು ಎಂಬ ತತ್ವ ಸಾಕಾರಗೊಳ್ಳದೇ ಇದ್ದರೂ, ನ್ಯಾಯಾಂಗ ವ್ಯವಸ್ಥೆಯು ಆಗೊಮ್ಮೆ ಈಗೊಮ್ಮೆ, ಮೇಲ್ಜಾತಿಗಳ ಬೇಕಾಬಿಟ್ಟಿ ಅಧಿಕಾರಗಳಿಗೆ (ಉದಾಹರಣೆಗೆ, ಭೂಕಬಳಿಕೆ, ಜೀತಪದ್ಧತಿ, ಅಸ್ಪೃಶ್ಯತೆ) ಕಡಿವಾಣ ಹಾಕುತ್ತಿರುತ್ತದೆ.

ಕೆಲವು ಆರ್ಥಿಕ ಬದಲಾವಣೆಗಳೂ ಮೇಲ್ಜಾತಿಗಳ ಪ್ರಬಲ ಸ್ಥಾನವನ್ನು ದುರ್ಬಲಗೊಳಿಸಿವೆ. ಕನಿಷ್ಟ ಗ್ರಾಮೀಣ ಭಾಗದಲ್ಲಿ ಈ ಬದಲಾವಣೆ ಕಾಣುತ್ತದೆ. ಅನೇಕ ವರ್ಷಗಳ ಹಿಂದೆ, ಈ ಪ್ರಕ್ರಿಯೆಯ ಒಂದು ಗಮನಾರ್ಹ ಉದಾಹರಣೆಯನ್ನು ಪಶ್ಚಿಮ ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯ ಪಾಲನಪುರ ಎಂಬ ಹಳ್ಳಿಯಲ್ಲಿ ಕಂಡೆ. ನಾವು ಅಲ್ಲಿಯ ಒಬ್ಬ ವ್ಯಕ್ತಿ, ಮಾನ್ ಸಿಂಗ್ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಆ ಹಳ್ಳಿಯಲ್ಲಿ ಆದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಬಗ್ಗೆ ತಮ್ಮ ಅಭಿಪ್ರಾಯ ಬರೆಯಿರಿ ಎಂದು ಕೇಳಿಕೊಂಡಾಗ, ಅವರು ಬರೆದಿದ್ದು ಹೀಗೆ, (1983ರ ಕೊನೆಯ ಭಾಗ)

1. ಕೆಳಜಾತಿಗಳು ಮೇಲ್ಜಾತಿಗಳಿಗಿಂತ ಒಳ್ಳೆಯ ಜೀವನವನ್ನು ನಡೆಸುತ್ತಿದ್ದಾರೆ. ಹಾಗಾಗಿ, ಮೇಲ್ಜಾತಿ ಜನರ ಹೃದಯಗಳಲ್ಲಿ ಕೆಳಜಾತಿಯವರ ಬಗ್ಗೆ ಹೊಟ್ಟೆಕಿಚ್ಚು ಮತ್ತು ದ್ವೇಷ ತುಂಬಿಕೊಂಡಿದೆ.

2. ಕೆಳಜಾತಿಗಳಲ್ಲಿ ಶಿಕ್ಷಣದ ಪ್ರಮಾಣ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ.

3. ಒಟ್ಟಾರೆಯಾಗಿ ನಾವೇನು ಹೇಳಬಹುದೆಂದರೆ, ಕೆಳಜಾತಿಗಳು ಮೇಲಕ್ಕೆ ಏರುತ್ತಿದ್ದಾರೆ ಹಾಗೂ ಮೇಲ್ಜಾತಿಗಳು ಕೆಳಗೆ ಇಳಿಯುತ್ತಿವೆ; ಇದಕ್ಕೆ ಕಾರಣ, ಈ ಆಧುನಿಕ ಸಮಾಜದಲ್ಲಿ ಕೆಳಜಾತಿಗಳ ಆರ್ಥಿಕ ಸ್ಥಿತಿಯು ಮೇಲ್ಜಾತಿಗಳ ಆರ್ಥಿಕ ಸ್ಥಿತಿಗಳಿಗಿಂತ ಚೆನ್ನಾಗಿದೆ ಎಂದು ತೋರುತ್ತಿದೆ.

ಮೊದಲಿಗೆ ಇದನ್ನು ಓದಿದಾಗ ನನಗೆ ಅವರು ಹೇಳಿದ್ದು ಅರ್ಥವಾಗಲಿಲ್ಲ, ಆದರೆ ಮಾನ್‍ಸಿಂಗ್‍ನ ಭಾಷೆಯಲ್ಲಿ ಕೆಳಜಾತಿ ಅಂದರೆ ದಲಿತರಲ್ಲ, ಅದರ ಬದಲಿಗೆ ತನ್ನ ಜಾತಿಯನ್ನು ಕೆಳಜಾತಿ ಎಂದು ಕರೆಯುತ್ತಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಂಡಾಗ ನನಗೆ ಅವರು ಹೇಳುತ್ತಿದ್ದದ್ದು ಗೊತ್ತಾಯಿತು. ಮಾನ್‍ಸಿಂಗ್ ಮುರಾವ್ (ಉತ್ತರಪ್ರದೇಶದ ಒಂದು ಇತರ ಹಿಂದುಳಿದ ವರ್ಗ) ಎಂಬ ಸಮುದಾಯದ ವ್ಯಕ್ತಿ, ಹಾಗೂ ನಮ್ಮ ಅಧ್ಯಯನದಿಂದ ತಿಳಿದ ಅಂಶಗಳೊಂದಿಗೆ ಮಾನ್‍ಸಿಂಗ್ ಹೇಳಿದ್ದು ತಾಳೆಯಾಯಿತು. ಮುರಾವ್ (ಮೌರ್ಯ ಎಂತಲೂ ಕರೆಯಲಾಗುತ್ತದೆ) ಒಂದು ಕೃಷಿಕರ ಜಾತಿ, ಜಮೀನ್‍ದಾರಿ ಪದ್ಧತಿ ನಿರ್ಮೂಲನೆಯ ನಂತರ ಹಾಗೂ ಹಸಿರು ಕ್ರಾಂತಿಯ ಸಮಯದಲ್ಲಿ ಈ ಸಮುದಾಯದವರು ನಿರಂತರವಾಗಿ ಏಳಿಗೆ ಕಂಡು ಸಂಪನ್ನರಾದರು, ಠಾಕೂರರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಏಳಿಗೆ ಕಂಡಿದ್ದರು ಎಂತಲೂ ಹೇಳಬಹುದು. ಠಾಕೂರರು, ಸೋಂಭೇರಿ ಜಮೀನ್‍ದಾರರ (ಸಾಂಪ್ರದಾಯಿಕವಾಗಿ, ಅವರುಗಳು ನೇಗಿಲನ್ನು ಮುಟ್ಟುವಂತಿಲ್ಲ) ತೋರಿಕೆಯನ್ನು ಮುಂದುವರೆಸಲು ಹೆಣಗಾಡುತ್ತಿರುವ ಸಮಯದಲ್ಲಿಯೇ ಮುರಾವ್ ಜನರು ವಿವಿಧ ಬಗೆಯ ಬೆಳೆಗಳನ್ನು ಬೆಳೆಯುವುದು, ಟ್ಯೂಬ್‍ವೆಲ್‍ಗಳನ್ನು ಹಾಕಿಸುವುದು, ಇನ್ನೂ ಹೆಚ್ಚಿನ ಭೂಮಿಯನ್ನು ಖರೀದಿಸುವುದು ಹಾಗೂ ಮಾನ್ ಸಿಂಗ್ ಸುಳಿವು ನೀಡಿದಂತೆ ಶಿಕ್ಷಣದಲ್ಲೂ ಠಾಕೂರರನ್ನು ಸಮಗಟ್ಟುವ ಕೆಲಸ ಮಾಡಿದರು. ಠಾಕೂರರು ತಮ್ಮ ತಿರಸ್ಕಾರದ ಅಸಮಾಧಾನವನ್ನು ತೋಡಿಕೊಳ್ಳದೇ ಇರಲಿಲ್ಲ.

ಪಾಲನಪುರ ಒಂದೇ ಹಳ್ಳಿ ಮಾತ್ರವಲ್ಲ, ಅನೇಕ ಹಳ್ಳಿಗಳ ಅಧ್ಯಯನದಲ್ಲಿ ಇಂತಹ ಮಾದರಿಗಳು ಕಂಡುಬಂದಿವೆ. ನಾನು ಇಲ್ಲಿ ಮೇಲ್ಜಾತಿಗಳ ಆರ್ಥಿಕ ಕುಸಿತ ಎಂಬುದು ಸ್ವಾತಂತ್ರ್ಯೋತ್ತರದ ಸಮಯದ ಗ್ರಾಮೀಣ ಭಾರತದ ಸಾರ್ವತ್ರಿಕ ಮಾದರಿ ಎಂದು ಹೇಳುತ್ತಿಲ್ಲ ಆದರೆ ಅನೇಕ ಕಡೆ ಸಾಮಾನ್ಯ ಮಾದರಿಯಾಗಿ ಕಂಡುಬಂದಿದೆ.

ಚಿಕ್ಕದಾಗಿ ಹೇಳಬೇಕೆಂದರೆ, ಆರ್ಥಿಕ ಮತ್ತು ಸಾಮಾಜಿಕ ಜೀವನದ ಅನೇಕ ಆಯಾಮಗಳಲ್ಲಿ ಮೇಲ್ಜಾತಿಗಳೇ ಗಟ್ಟಿ ಹಿಡಿತವನ್ನು ಇಂದಿಗೂ ಸಾಧಿಸಿದ್ದರೂ, ಇತರ ಕೆಲವು ಆಯಾಮಗಳಲ್ಲಿ ಹಿನ್ನಡೆ ಕಾಣುತ್ತಿದ್ದಾರೆ ಅಥವಾ ಹಿನ್ನಡೆ ಕಾಣುವ ಅಪಾಯದಲ್ಲಿದ್ದಾರೆ. ತಮ್ಮ ಸವಲತ್ತಿನ ನಷ್ಟವು ತುಲನಾತ್ಮಕವಾಗಿ ತುಂಬಾ ಚಿಕ್ಕದಿದ್ದರೂ, ಅದನ್ನೊಂದು ಅತ್ಯಂತ ದೊಡ್ಡ ನಷ್ಟ ಎಂತಲೇ ಗ್ರಹಿಸಬಹುದಾಗಿದೆ.

ಪ್ರತೀಕಾರ

ಇತ್ತೀಚಿನ ದಶಕಗಳಲ್ಲಿ ಮೇಲ್ಜಾತಿಗಳಿಗೆ, ಅವರ ಸವಲತ್ತುಗಳಿಗೆ ಒಡ್ಡಿದ ಎಲ್ಲಾ ಸವಾಲುಗಳಲ್ಲಿ, ಮೇಲ್ಜಾತಿಗಳು ಎಲ್ಲಕ್ಕಿಂತ ಹೆಚ್ಚು ದ್ವೇಷಿಸುವುದು ಶಿಕ್ಷಣದಲ್ಲಿ ಹಾಗೂ ಸಾರ್ವಜನಿಕ ಉದ್ಯೋಗ ವಲಯದಲ್ಲಿ ಇರುವ ಮೀಸಲಾತಿಯ ವ್ಯವಸ್ಥೆ. ಈ ಮೀಸಲಾತಿಯ ನೀತಿಗಳು ಎಷ್ಟರ ಮಟ್ಟಿಗೆ ಮೇಲ್ಜಾತಿಗಳ ಶಿಕ್ಷಣದ ಹಾಗೂ ಉದ್ಯೋಗದ ಅವಕಾಶಗಳನ್ನು ಕಡಿಮೆ ಮಾಡಿವೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ – ಮೀಸಲಾತಿಯ ನಿಯಮಗಳನ್ನು ಪರಿಪೂರ್ಣವಾಗಿ ಅಳವಡಿಸಿಲ್ಲ ಹಾಗೂ ಸಾರ್ವಜನಿಕ ವಲಯಗಳಲ್ಲಿ ಮಾತ್ರ ಅವುಗಳು ಅನ್ವಯವಾಗುತ್ತವೆ. ಇಷ್ಟೆಲ್ಲ ಇದ್ದರೂ, ಈ ಮೀಸಲಾತಿಯ ನೀತಿಗಳು ನಿಸ್ಸಂಶಯವಾಗಿ ಮೇಲ್ಜಾತಿಗಳಲ್ಲಿ ಒಂದು ಸಾಮಾನ್ಯ ಗ್ರಹಿಕೆಯನ್ನು ಸೃಷ್ಟಿಸಿವೆ; ಅದೇನೆಂದರೆ, ಮೀಸಲಾತಿಯಿಂದ “ತಮ್ಮ” ಉದ್ಯೋಗಗಳನ್ನು ಹಾಗೂ ಡಿಗ್ರಿಗಳನ್ನು ಎಸ್‍ಸಿ, ಎಸ್‍ಟಿ ಹಾಗೂ ಒಬಿಸಿಗಳು ಕಸಿದುಕೊಳ್ಳುತ್ತಿದ್ದಾರೆ ಎಂದು.

ನಾವು ನೋಡಿದ ಹಾಗೆ, ಬಿಜೆಪಿಯು ಮರುಜೀವ(ಜೀವ) ಪಡೆದುಕೊಂಡಿದ್ದು 1990ರಲ್ಲಿ ವಿ.ಪಿ. ಸಿಂಗ್ ಸರಕಾರವು ಒಬಿಸಿ ಮೀಸಲಾತಿಯ ವಿಷಯದಲ್ಲಿ ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸಲು ತನ್ನ ಬದ್ಧತೆಯನ್ನು ಪ್ರದರ್ಶಿಸಿದಾಗ. ಇದು ಕೇವಲ ಹಿಂದೂ (ಮೇಲ್ಜಾತಿಗಳು ಅತ್ಯಂತ ಕ್ರೋಧದಲ್ಲಿದ್ದ ಸಮಯ) ಸಮಾಜವನ್ನು ಒಡೆದುಹಾಕುವ ಅಪಾಯವನ್ನಷ್ಟೇ ಒಡ್ಡಲಿಲ್ಲ, ಅದರೊಂದಿಗೆ ಭಾರತದ ಜನಸಂಖ್ಯೆಯ 40% ಇರುವ ಒಬಿಸಿಗಳನ್ನು ಮಂಡಲ್ ವರದಿಯ ಶಿಫಾರಸ್ಸುಗಳನ್ನು ವಿರೋಧಿಸಿದ ಬಿಜೆಪಿಯಿಂದ ದೂರ ಮಾಡುವ ಅಪಾಯವನ್ನು ತಂದಿತ್ತು. ಅಯೋಧ್ಯೆಗೆ ಎಲ್.ಕೆ. ಅಡ್ವಾಣಿಯ ರಥಯಾತ್ರೆ, ಅದಾದ ನಂತರದ ಘಟನೆಗಳು(1992 ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸವನ್ನು ಒಳಗೊಂಡಂತೆ) ‘ಕಾಸ್ಟಿಸಂ’ನ ಈ ಅಪಾಯವನ್ನು ತಳ್ಳಿಹಾಕಲು ಸಹಾಯಕವಾದವು. ಹಾಗೂ ಬಿಜೆಪಿ ಮತ್ತು ಮೇಲ್ಜಾತಿಗಳ ನಾಯಕತ್ವದಲ್ಲಿ ಮುಸ್ಲಿಮ್ ವಿರೋಧಿ ವೇದಿಕೆಯಲ್ಲಿ ಎಲ್ಲಾ ಹಿಂದೂಗಳನ್ನು ಒಗ್ಗೂಡಿಸಲು ನೆರವಾದವು.

ಹಿಂದೂ ಸಮಾಜದ ಮೇಲೆ ತಮ್ಮ ನಿಯಂತ್ರಣವನ್ನು ಮರುಸ್ಥಾಪಿಸಲು ಹಾಗೂ ತಮ್ಮ ಸವಲತ್ತುಗಳಿಗೆ ಅಪಾಯ ಬಂದಾಗ ಅದನ್ನು ಹತ್ತಿಕ್ಕಲು ಮೇಲ್ಜಾತಿಗಳ ಕೈಬಲಪಡಿಸಲು ಹಿಂದುತ್ವವು ನೆರವಾದ ಗಮನಾರ್ಹ ಉದಾಹರಣೆ ಇದು. ವಾಸ್ತವದಲ್ಲಿ ಇದೇ ಇಂದಿನ ಹಿಂದುತ್ವ ಆಂದೋಲನದ ಮುಖ್ಯ ಉದ್ದೇಶ ಎಂದು ಕಾಣುತ್ತಿದೆ. ಈ ಆಂದೋಲನದ ಪ್ರಮುಖ ವಿರೋಧಿಗಳು ಕೇವಲ ಮುಸ್ಲಿಮರಲ್ಲ, ಅವರೊಂದಿಗೆ, ಕ್ರಿಶ್ಚಿಯನ್ನರು, ದಲಿತರು, ಆದಿವಾಸಿಗಳು, ಕಮ್ಯುನಿಸ್ಟರು, ಜಾತ್ಯತೀತವಾದಿಗಳು, ವಿಚಾರವಾದಿಗಳು (ರ್ಯಾಶನಲಿಸ್ಟ್‍ಗಳು), ಸ್ತ್ರೀವಾದಿಗಳು, ಸಂಕ್ಷಿಪ್ತವಾಗಿ ಬ್ರಾಹ್ಮಣವಾದಿ ಸಾಮಾಜಿಕ ವ್ಯವಸ್ಥೆಯ ಮರುಸ್ಥಾಪನೆಗೆ ವಿರುದ್ಧವಾದ ಎಲ್ಲರೂ ವಿರೋಧಿಗಳಾಗುತ್ತಾರೆ. ಇದನ್ನು ಸಾಮಾನ್ಯವಾಗಿ ಬಹುಸಂಖ್ಯಾತರ ಆಂದೋಲನ ಎಂದು ಕರೆಯಲಾಗುತ್ತಿದ್ದರೂ, ಹಿಂದುತ್ವವನ್ನು ಶೋಷಕ ಅಲ್ಪಸಂಖ್ಯಾತರ ಆಂದೋಲನ ಎಂದು ಕರೆದರೆ ಹೆಚ್ಚು ಸೂಕ್ತ.

ಹಿಂದುತ್ವ ಆಂದೋಲನದ (ಅಥವಾ ಇತ್ತೀಚಿನ ಸಮಯದಲ್ಲಿ ಅದರ ಕ್ಷಿಪ್ರ ವೃದ್ಧಿಯ) ಬಗ್ಗೆ ಮೇಲೆ ಹೇಳಿದ ಈ ವ್ಯಾಖ್ಯಾನಕ್ಕೆ ಒಂದು ಸಂಭಾವ್ಯ ಆಕ್ಷೇಪವೆಂದರೆ, ದಲಿತರು ದೊಡ್ಡ ಸಂಖ್ಯೆರಲ್ಲಿ ಈ ಆಂದೋಲನವನ್ನು ಬೆಂಬಲಿಸುತ್ತಿರುವುದು. ಆದರೆ ಈ ಆಕ್ಷೇಪವನ್ನು ಸುಲಭವಾಗಿ ಎದುರಿಸಬಹುದು. ಮೊದಲನೆಯದಾಗಿ, ಆರ್‌ಎಸ್‍ಎಸ್ ಮತ್ತು ಹಿಂದುತ್ವವಾದವನ್ನು ದಲಿತರು ನಿಜವಾಗಿಯೂ ಬೆಂಬಲಿಸುತ್ತಾರೆ ಎಂಬುದು ಅನುಮಾನಕರ. ಹೌದು ಅನೇಕ ದಲಿತರು 2019ರಲ್ಲಿ ಬಿಜೆಪಿಗೆ ಮತ ನೀಡಿದ್ದಾರೆ ಆದರೆ ಅದರರ್ಥ ಅವರೆಲ್ಲರೂ ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದಲ್ಲ- ಬಿಜೆಪಿಗೆ ಮತ ಹಾಕಲು ಅನೇಕ ಇತರ ಸಂಭಾವ್ಯ ಕಾರಣಗಳಿವೆ. ಎರಡನೆಯದಾಗಿ, ದಲಿತರು ಹಿಂದುತ್ವದ ಬೆಂಬಲಿಗರಾಗದೇ ಇದ್ದರೂ ಹಿಂದುತ್ವ ಆಂದೋಲನದ ಕೆಲವು ಆಯಾಮಗಳು ಅವರಿಗೆ ಆಕರ್ಷಕ ಅನಿಸಬಹುದು. ಉದಾಹರಣೆಗೆ, ಆರ್‍ಎಸ್‍ಎಸ್ ಸಂಘಟನೆಯು ಹಿಂದುಳಿದ ಗುಂಪುಗಳನ್ನೇ ಗುರಿಯಾಗಿಸಿ, ಆ ಸ್ಥಳಗಳಲ್ಲಿ ಶಾಲೆಗಳ ನೆಟ್‍ವರ್ಕ್ ಸ್ಥಾಪಿಸುವುದು ಹಾಗೂ ಇತರೆ ರೀತಿಯ ಸಮಾಜ ಸೇವೆ ಮಾಡಿದ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಮೂರನೆಯದಾಗಿ, ದಲಿತರ ಬೆಂಬಲವನ್ನು ಪಡೆಯಲು ಆರ್‌ಎಸ್‍ಎಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೇವಲ ಸಮಾಜ ಸೇವೆ ಅಲ್ಲದೇ ಡಾ. ಅಂಬೇಡ್ಕರ್ ಅವರನ್ನು ತನ್ನ ತೆಕ್ಕೆಗೆ ಪಡೆಯುವ ಮೂಲಕ, ಪ್ರೊಪಗಾಂಡಾ ಮೂಲಕವೂ ದಲಿತರ ಬೆಂಬಲವನ್ನು ಪಡೆಯಲು ಯತ್ನಿಸಿದೆ. ವಸ್ತುನಿಷ್ಟವಾಗಿ ನೋಡಿದರೆ, ಹಿಂದುತ್ವ ಮತ್ತು ಡಾ. ಅಂಬೇಡ್ಕರ್ ಅವರ ಮಧ್ಯೆ ಯಾವುದೇ ಸಮಾನ ನೆಲೆ ಸಾಧ್ಯವಿಲ್ಲ, ಆದರೂ ಒಂದಲ್ಲ ಒಂದು ರೀತಿಯಲ್ಲಿ ನಿಯತವಾಗಿ ಆರ್‌ಎಸ್‍ಎಸ್ ಅಂಬೇಡ್ಕರ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರತಿಪಾದನೆ ಮಾಡುತ್ತಲೇ ಇರುತ್ತದೆ.

ಮೋಹನ್ ಭಾಗವಾತ್

ಕೊನೆಯದಾಗಿ, ಹಿಂದುತ್ವವು ಜಾತಿ ನಿರ್ಮೂಲನೆಗೆ ಎದ್ದು ನಿಲ್ಲುವುದಿಲ್ಲ ಎಂದು ಚರ್ಚಾಸ್ಪದವಾದರೂ, ಜಾತಿಯ ಬಗ್ಗೆ ಅದರ ನಿಲುವು ಮತ್ತು ಆಚರಣೆಯು ಇಂದು ಅಸ್ತಿತ್ವದಲ್ಲಿರುವ ಜಾತಿ ವ್ಯವಸ್ಥೆಗಿಂತ ಕಡಿಮೆ ದಬ್ಬಾಳಿಕೆಯನ್ನು ಹೊಂದಿದೆ ಎನ್ನುವುದು. ಕೆಲವು ದಲಿತರು, ಒಟ್ಟಾರೆ ಸಮಾಜದಲ್ಲಿ ತಮ್ಮನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ, ಅದಕ್ಕಿಂತ ಚೆನ್ನಾಗಿ ಆರ್‌ಎಸ್‍ಎಸ್‍ನಲ್ಲಿ ತಮ್ಮನ್ನು ನಡೆಸಿಕೊಳ್ಳುತ್ತಾರೆ ಎಂತಲೂ ಭಾವಿಸಿರಬಹುದು. ಒಬ್ಬ ಆರ್‌ಎ‌ಸ್‌ಎಸ್‌ ಸಮರ್ಥಕರು ಹೀಗೆ ಹೇಳುತ್ತಾರೆ, “ಹಿಂದುತ್ವ ಮತ್ತು ಒಂದು ಸಮಾನ ಹಿಂದೂ ಗುರುತಿನ ಭರವಸೆಯು ಎಂದಿಗೂ ಅನೇಕ ದಲಿತ ಮತ್ತು ಒಬಿಸಿ ಜಾತಿಗಳಿಗೆ ಆಕರ್ಷಕವಾಗಿದೆ ಏಕೆಂದರೆ, ಅದು ಅವರ ದುರ್ಬಲ ಜಾತಿಯ ಸಂಕುಚಿತ ಗುರುತಿನಿಂದ ಸ್ವಾತಂತ್ರ್ಯ ನೀಡುತ್ತದೆ ಹಾಗೂ ಅವರನ್ನು ಬಲಶಾಲಿಯಾದ ಹಿಂದೂ ಸಮುದಾಯದ ತೆಕ್ಕೆಗೆ ತೆಗೆದುಕೊಳ್ಳುತ್ತದೆ.”(ಸಿಂಗ್ 2019). ಆದರೆ ಹೆಚ್ಚಿನ ಸಮಯದಲ್ಲಿ ಈ ‘ಭರವಸೆ’ಯು ಭ್ರಮೆ ಎಂದು ಸಾಬೀತುಗೊಂಡಿದೆ; ಉದಾಹರಣೆಗೆ, ಆರ್‍ಎಸ್‍ಎಸ್‍ನಲ್ಲಿ ಒಬ್ಬ ದಲಿತನಾಗಿ ಭಂವರ್ ಮೇಘವಂಶಿಯವರ ಅನುಭವಗಳನ್ನು ನೋಡಬಹುದು. (ಮೇಘವಂಶಿ, 2020)

ಈ ಮುಂಚೆಯೇ ಹೇಳಿದಂತೆ, ಹಿಂದೂ ರಾಷ್ಟ್ರೀಯವಾದವನ್ನು ಬಿಜೆಪಿಯ ಚುನಾವಣಾ ಯಶಸ್ಸಿನೊಂದಿಗೆ ಸಮೀಕರಿಸಿ ಗೊಂದಲ ಮಾಡಿಕೊಳ್ಳಬಾರದು. ಆದಾಗ್ಯೂ, 2019ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಯ ವ್ಯಾಪಕವಾದ ಬೃಹತ್ ಗೆಲುವು ಆರ್‌ಎಸ್‍ಎಸ್‍ನ ಗೆಲುವೂ ಹೌದು. ಸರಕಾರದ ಉನ್ನತ ಹುದ್ದೆಗಳಲ್ಲಿ ಹೆಚ್ಚಿನ ಹುದ್ದೆಗಳನ್ನು (ಪ್ರಧಾನಮಂತ್ರಿ, ಉಪರಾಷ್ಟ್ರಪತಿ, ಲೋಕಸಭಾ ಸ್ಪೀಕರ್. ಪ್ರಮುಖ ಸಚಿವರು, ಹೆಚ್ಚಿನ ರಾಜ್ಯಪಾಲರು ಇತ್ಯಾದಿ.) ಆಕ್ರಮಿಸಿಕೊಂಡಿದ್ದು ಆರ್‍ಎಸ್‍ಎಸ್‍ನ ಹಾಲಿ ಅಥವಾ ಮಾಜಿ ಸದಸ್ಯರು, ಅವರೆಲ್ಲ ಅದರ ಹಿಂದು ರಾಷ್ಟ್ರೀಯವಾದ ಸಿದ್ಧಾಂತಕ್ಕೆ ಗಟ್ಟಿಯಾಗಿ ಬದ್ಧರಾಗಿರುವವರು. ಪ್ರಜಾಪ್ರಭುತ್ವದ ವಿರುದ್ಧದ ಮೇಲ್ಜಾತಿಗಳ ಮೌನ ಬಂಡಾಯವು ಈಗ ನೇರ ರೂಪ ಪಡೆದುಕೊಳ್ಳುತ್ತಿದೆ; ಅಭಿವ್ಯಕ್ತಿ ಸ್ವಾತಂತ್ರ ಹಾಗೂ ಭಿನ್ನಾಭಿಪ್ರಾಯದ ಮೇಲಿನ ದಾಳಿಯಿಂದ ಶುರುವಾಗಿ, ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ನೇರ ದಾಳಿಯು ಈ ಹೊಸ ರೂಪದ ಲಕ್ಷಣವಾಗಿದೆ. ಪ್ರಜಾಪ್ರಭುತ್ವದ ಹಿನ್ನಡೆ ಮತ್ತು ಜಾತಿಯ ನಿರಂತರತೆ ಒಂದಕ್ಕೊಂದು ಪೂರಕವಾಗಿ ಬೆಳೆಯುವ ಅಪಾಯದಲ್ಲಿವೆ.

  • ಜಾನ್‌ ಡ್ರೀಜ್,
  • Image Courtesy: The Hindu
  • ಬೆಲ್ಜಿಯಂನಲ್ಲಿ ಹುಟ್ಟಿದ ಇವರು, ಭಾರತಕ್ಕೆ ಓದಲು ಬಂದವರು. ನಂತರ ಇಲ್ಲೇ ಉಳಿದರಷ್ಟೇ ಅಲ್ಲ, ಇಲ್ಲಿನ ಶೋಷಿತರಲ್ಲಿ ಶೋಷಿತರ ಜೊತೆಗೆ ನಿಂತರು. ಚಿಂತನೆ ಮತ್ತು ಬದುಕಿನಲ್ಲಿಯೂ ಕೂಡ. ಇಲ್ಲಿನ ಆಕ್ಟಿವಿಸ್ಟ್ ಒಬ್ಬರನ್ನು ಮದುವೆಯಾಗಿರುವ ಇವರು, ಭಾರತದ ಎರಡು ವಿಶ್ವವಿದ್ಯಾಲಯಗಳಲ್ಲಿ ಗೌರವ ಪ್ರಾಧ್ಯಾಪಕರು.

ಅನುವಾದ: ರಾಜಶೇಖರ್ ಅಕ್ಕಿ


ಇದನ್ನು ಓದಿ: ಸಂಗಾತಿಗಳೇ, ನಾವು ಆಸ್ತಿ ಸಂಬಂಧಗಳ ಕುರಿತು ಮಾತನಾಡೋಣ : ಬರ್ಟೋಲ್ಟ್ ಬ್ರೆಕ್ಟ್

ಜಾನ್ ಡ್ರೀಜ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial