ಹಿಜಾಬ್‌ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವು ಸಿಖ್ ಸಮುದಾಯದ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಅನುಸರಿಸುವ ಸಲುವಾಗಿ ಪೇಟವನ್ನು ತೆಗೆಯುವಂತೆ ಸಿಖ್ ವಿದ್ಯಾರ್ಥಿಗೆ ಕೇಳಿಕೊಂಡಿದ್ದಾರೆ ಎಂದು ವರದಿಯಾದ ನಂತರ ಸಿಖ್ ಸಮುದಾಯದ ವಿದ್ಯಾರ್ಥಿಗಳು ಪೇಟ ಧರಿಸುವ ಬಗ್ಗೆ ಪೋಷಕರು ಮತ್ತು ಶಿಕ್ಷಣ ವಲಯಗಳಲ್ಲಿ ವಿವಾದ ಎದ್ದಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, “ಪೇಟ ಧರಿಸುವುದು ಸಿಖ್ ಸಮುದಾಯದ ಸಾಂವಿಧಾನಿಕ ಹಕ್ಕು. ಹೈಕೋರ್ಟ್‌ನ ಮಧ್ಯಂತರ ಆದೇಶವು ಹಿಜಾಬ್, ಕೇಸರಿ ಶಾಲ್ ಮತ್ತು ಧಾರ್ಮಿಕ ಧ್ವಜಗಳನ್ನು ಧರಿಸುವುದಕ್ಕೆ ಮಾತ್ರ ಅನ್ವಯಿಸುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟರ್ಬನ್‌ಗೂ ವಿರೋಧ ಆರಂಭ: ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಟರ್ಬನ್ ತೆಗೆಯುವಂತೆ ಸಿಖ್ ವಿದ್ಯಾರ್ಥಿನಿಗೆ ಒತ್ತಡ
“ಸಂವಿಧಾನವು ಸಿಖ್ ಸಮುದಾಯದ ಜನರಿಗೆ ಪೇಟ ಧರಿಸಲು ಹಕ್ಕನ್ನು ನೀಡಿದೆ. ಹಿಜಾಬ್ ಧರಿಸುವುದರ ಮೇಲಿನ ಅರ್ಜಿಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವು ಸಿಖ್ ಸಮುದಾಯದ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ, ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ಆಡಳಿತ ಪ್ರತಿನಿಧಿಗಳು ಸಿಖ್ ಸಮುದಾಯದ ಹುಡುಗಿಗೆ ಪೇಟವನ್ನು ತೆಗೆಯುವಂತೆ ಕೇಳಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ. ಒಂದು ನಿರ್ದಿಷ್ಟ ದಿನದಂದು ಪೇಟವಿಲ್ಲದೆಯೇ ಕಾಲೇಜಿಗೆ ಬಂದಿದ್ದಕ್ಕೆ, ಟರ್ಬನ್ ಇಲ್ಲದೆ ತರಗತಿಗಳಿಗೆ ಹಾಜರಾಗಲು ‘ಸಾಧ್ಯವೆ’ ಎಂದು ಹುಡುಗಿಯನ್ನು ಕೇಳಿದ್ದೇವೆ ಎಂದು ಕಾಲೇಜು ಅಧಿಕಾರಿಗಳು ಹೇಳಿದ್ದಾರೆ ಡಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ಕುರಿತು ಡೆಕ್ಕನ್ ಹೆರಾಲ್ಡ್‌ಗೆ ಸ್ಪಷ್ಟನೆ ನೀಡಿರುವ ಕಾಲೇಜಿನ ಆಡಳಿತಾಧಿಕಾರಿ ಡಾ.ಎಸ್.ಆರ್.ಎಂ.ಜೆನೆವೀವ್, “ಬಾಲಕಿಯನ್ನು ಪೇಟ ತೆಗೆಯುವಂತೆ ಒತ್ತಾಯಿಸಿಲ್ಲ ಅಥವಾ ಪೇಟ ಧರಿಸದಂತೆ ನಿರ್ಬಂಧ ಹೇರಿಲ್ಲ. ಇತರ ಕೆಲವು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪೇಟದ ಬಗ್ಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಕೆಲವು ದಿನಗಳ ಹಿಂದೆ, ಪೇಟವನ್ನು ಧರಿಸದೆ ಕಾಲೇಜಿಗೆ ಬಂದಂತೆ ಟರ್ಬನ್ ಇಲ್ಲದೆ ತರಗತಿಗೆ ಹಾಜರಾಗಲು ಸಾಧ್ಯವೇ ಎಂದು ನಾವು ವಿದ್ಯಾರ್ಥಿಯನ್ನು ಕೇಳಿದ್ದೆವು. ಪೇಟವನ್ನು ತೆಗೆಯುವಂತೆ ನಾವು ಹುಡುಗಿಗೆ ಹೇಳಿಲ್ಲ ಅಥವಾ ಒತ್ತಾಯಿಸಲಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟರ್ಬನ್ ಆಯ್ಕೆಯಾಗಿರಬಹುದಾದರೆ, ಹಿಜಾಬ್ ಏಕೆ ಆಗಬಾರದು?: ನಟಿ ಸೋನಮ್ ಕಪೂರ್ ಪ್ರಶ್ನೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿಯ ಪೋಷಕರಾದ ಗುರುಚರಣ್ ಸಿಂಗ್, “ಕಾಲೇಜು ನಮ್ಮ ಮಗಳಿಗೆ ಪೇಟವನ್ನು ತೆಗೆಯುವಂತೆ ಒತ್ತಾಯಿಸಿಲ್ಲ. ಅವರು ಅದನ್ನು ಧರಿಸಲು ಅವಕಾಶ ಮಾಡಿಕೊಟ್ಟಿರುವುದು ನಿಜ. ಆದರೆ ಇತ್ತೀಚೆಗೆ ಆಕೆಯನ್ನು ಪ್ರತ್ಯೇಕವಾಗಿ ಕರೆದು ತರಗತಿಯಲ್ಲಿನ ಪೇಟವನ್ನು ತೆಗೆಯಬಹುದೇ ಎಂದು ಕೇಳಲಾಯಿತು”.
“ನಂತರ, ನಾನು ಪ್ರಾಂಶುಪಾಲರಿಗೆ ಇಮೇಲ್ ಬರೆದೆ. ಒಂದು ವಾರ ಕಾಲ ಕಾಲೇಜಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದರೆ ನಂತರ, ಕಾಲೇಜು ಅಧಿಕಾರಿಗಳು ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಪೇಟವನ್ನು ಧರಿಸುವುದು ನಮ್ಮ ಸಂವಿಧಾನದ ಹಕ್ಕು ಎಂದು ನಾನು ಅವರಿಗೆ ವಿವರಿಸಿದ್ದೇನೆ” ಎಂದು ಅವರು ಡೆಕ್ಕನ್ ಹೆರಾಲ್ಡ್ ತಿಳಿಸಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತರೊಬ್ಬರು, “ಮಧ್ಯಂತರ ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮತ್ತು ಶಿಕ್ಷಕಿಯರಿಗೆ ಕಿರುಕುಳ ನೀಡಿರುವುದರಲ್ಲಿ ಸಚಿವ ಬಿಸಿ ನಾಗೇಶ್ ಮತ್ತು ಇಡೀ ರಾಜ್ಯ ಸರ್ಕಾರದ ಪಾಲಿದೆ. ಸಿಖ್ ವಿದ್ಯಾರ್ಥಿಗಳಿಗೆ ಪೇಟ ಹೇಗೆ ಧಾರ್ಮಿಕ ಆಚರಣೆಯೊ, ಹಿಜಾಬ್ ಕೂಡಾ ಮುಸ್ಲಿಮರಿಗೆ ಧಾರ್ಮಿಕ ಆಚರಣೆ. ಆದರೆ ಕೇಸರಿ ಶಾಲು ದ್ವೇಷ ಮತ್ತು ಅಸಹಿಷ್ಟುತೆಯ ಆಚರಣೆ. ಇದನ್ನು ಅರ್ಥ ಮಾಡಕೊಳ್ಳದೆ, ಸಣ್ಣ ವಿಚಾರವನ್ನು ದೇಶದ ಸಮಸ್ಯೆಯಾಗಿಸಿ, ರಾಜ್ಯದ ಮೂಲಭೂತ ಸಮಸ್ಯೆಯನ್ನು ಸರ್ಕಾರ ಅಡಗಿಸಿಡಲು ಪ್ರಯತ್ನಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರ ಪರ ವಾದಿಸುತ್ತಿರುವ ವಕೀಲರನ್ನು ಟೀಕಿಸುವುದು ತಪ್ಪು: ರಾಮಕೃಷ್ಣ ಆಶ್ರಮ



ಸಿಖ್ ಜನಾಂಗಕ್ಕೆ ಇದ್ದಂತಹ ಸಂವಿಧಾನ ಮುಸ್ಲಿಂ ಜನಾಂಗಕ್ಕೆ ಅನ್ವಯಿಸುವುದಿಲ್ಲವೇ ಶ್ರೀಯುತ. ನಾಗೇಶ್ ರವರೇ….