Homeಕರ್ನಾಟಕಹೈಕಮಾಂಡ್ ಭಿನ್ನಮತದ ಇತಿಹಾಸ ಮತ್ತು ವರ್ತಮಾನ

ಹೈಕಮಾಂಡ್ ಭಿನ್ನಮತದ ಇತಿಹಾಸ ಮತ್ತು ವರ್ತಮಾನ

ಯಡಿಯೂರಪ್ಪನವರನ್ನು ಸಂಪೂರ್ಣ ನಿವಾರಿಸಿಕೊಳ್ಳಬೇಕೆಂದು ಬಿ.ಎಲ್.ಸಂತೋಷ್‌ರ ವಾದವಾಗಿದ್ದರೆ, ಅವರಿರುವ ಅಡ್ವಾಂಟೇಜ್ ಉಳಿಸಿಕೊಂಡೇ ಮುಂದುವರೆಯಬೇಕೆಂಬುದು ಯಡಿಯೂರಪ್ಪನವರ ಪರವಾಗಿಲ್ಲದ, ಆದರೆ ಬಿಜೆಪಿಯ ಭವಿಷ್ಯದ ಕುರಿತು ಆತಂಕ ಹೊಂದಿರುವ ಇತರರ ವಾದವಾಗಿದೆ. ಇದಕ್ಕೆ ಉತ್ತರ ದೊರಕಿದ ದಿನ ಯಡಿಯೂರಪ್ಪನವರ ಸಿಂಹಾಸನ ಪತನವಾಗುತ್ತದೆಂದು ತರ್ಕಿಸುವುದೂ ಸುಲಭವಲ್ಲ.

- Advertisement -
- Advertisement -

ಕರ್ನಾಟಕದ ಖ್ಯಾತ ರಾಜಕೀಯ ವಿಶ್ಲೇಷಕ ಮತ್ತು ಚಿಂತಕ ಎ.ನಾರಾಯಣ ಅವರು ಪ್ರಜಾವಾಣಿಯ ಫೇಸ್‌ಬುಕ್‌ನ ಸಂವಾದದಲ್ಲಿ ಮಾತಾಡುತ್ತಾ ’ದೇವರಾಜ ಅರಸರ ವಿರುದ್ಧ ಅವರ ಪಕ್ಷದ ಹೈಕಮಾಂಡ್‌ ಕುಮ್ಮಕ್ಕು ನೀಡಿ ಸೃಷ್ಟಿಸಿದ ಭಿನ್ನಮತದ ನಂತರ ಇದೇ ಎರಡನೆಯದ್ದು’ ಎಂದು ಯಡಿಯೂರಪ್ಪನವರ ವಿರುದ್ಧದ ಭಿನ್ನಮತವನ್ನು ವಿಶ್ಲೇಷಿಸಿದ್ದಾರೆ. ಹೈಕಮಾಂಡ್‌ಅಥವಾ ಅದರ ಒಂದು ಗುಂಪು ತಾನೇ ಕುಮ್ಮಕ್ಕು ನೀಡಿ ಭಿನ್ನಮತ ಸೃಷ್ಟಿಸಿದ್ದು ಎಂದಾಗ ಇದು ನಿಜ. ಆದರೆ ಅಖಿಲ ಭಾರತ ವ್ಯಾಪ್ತಿಯ ಪಕ್ಷಗಳಲ್ಲಿ ದೆಹಲಿಯ ಮತ್ತು ರಾಜ್ಯಗಳ ನಾಯಕತ್ವದ ಮಧ್ಯೆ ಬಿರುಕು ತಲೆದೋರಿದ್ದು ಅಥವಾ ರಾಜ್ಯದಲ್ಲಿ ಹುಟ್ಟಿಕೊಂಡ ಭಿನ್ನ ಗುಂಪಿಗೆ ನೀರೆರೆದು ಪೋಷಿಸುವುದು ಅಪರೂಪವೇನಲ್ಲ.

ಆದರೆ ಕರ್ನಾಟಕದಲ್ಲಿ ಈಗ ಭುಗಿಲೆದ್ದಿರುವುದನ್ನು ದೇವರಾಜ ಅರಸರ ಕಾಲದ ಭಿನ್ನಮತದ ಜೊತೆಗೆ ಹೋಲಿಸಲು ಕಾರಣವಿದೆ. ಸ್ಥಳೀಯವಾಗಿಯೂ ಪ್ರಬಲವಾದ ಮತ್ತು ದಿಲ್ಲಿಯಲ್ಲೂ ಪ್ರಬಲ ನಾಯಕತ್ವ ಇದ್ದಾಗ, ಇಲ್ಲಿನ ಭಿನ್ನಮತಕ್ಕೆ ಕಾವು ಕೊಡುತ್ತಾ ನಿಧಾನಕ್ಕೆ ಅಧಿಕಾರ ಪಲ್ಲಟಗೊಳಿಸಲು ಯತ್ನಿಸಲಾಗುತ್ತಿದೆ. ಯಡಿಯೂರಪ್ಪನವರನ್ನು ಇಳಿಸಲು ನಡೆಯುತ್ತಿರುವುದು ಅಂತಹ ಪ್ರಯತ್ನ.

ದೇವರಾಜ ಅರಸರಿಗಿಂತ ಹಿಂದೆ ಅಂತಹ ಪ್ರಯತ್ನ ನಡೆದಿರುವುದಕ್ಕೆ ಅಷ್ಟು ಖಚಿತ ಪುರಾವೆಗಳಿಲ್ಲ. ವಿಧಾನಸೌಧದ ನಿರ್ಮಾಣ ಮುಗಿಯುವ ಹೊತ್ತಿಗೆ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ವಿರುದ್ಧ ಸ್ವಪಕ್ಷೀಯರೇ ಅವಿಶ್ವಾಸ ನಿರ್ಣಯ ಮಂಡಿಸಿದಾಗ ಅವರು ರಾಜೀನಾಮೆ ನೀಡಿ ಕಡಿದಾಳ್ ಮಂಜಪ್ಪನವರು ಎರಡೂವರೆ ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಆ ನಂತರ ನಿಜಲಿಂಗಪ್ಪನವರು ಸಿಎಂ ಆಗಿದ್ದವರು ಮಧ್ಯದಲ್ಲೇ ಅಧಿಕಾರ ಬಿಟ್ಟರು, ಎರಡನೆಯ ಬಾರಿ ಅವರು ಮತ್ತೆ ಸಿಎಂ ಆಗಬೇಕೆಂದು ಹೊರಟಾಗ ಸೋತಿದ್ದರಿಂದ ತಾತ್ಕಾಲಿಕವಾಗಿ ಎಸ್.ಆರ್.ಕಂಠಿಯವರನ್ನು ಮೂರು ತಿಂಗಳಿಗೆ ಸಿಎಂ ಮಾಡಿದ್ದರು. ’ಮಾಡಿದ್ದರು’ ಏಕೆಂದರೆ ನಿಜಲಿಂಗಪ್ಪನವರು ಅಖಿಲ ಭಾರತ ಕಾಂಗ್ರೆಸ್ಸಿನಲ್ಲೂ ದೊಡ್ಡ ನಾಯಕರಾಗಿದ್ದರು. ಎರಡನೆಯ ಬಾರಿ ಸೀಟು ಖಾಲಿ ಮಾಡಿಕೊಂಡು ಹೋಗಿದ್ದು ಅಖಿಲ ಭಾರತ ಕಾಂಗ್ರೆಸ್ಸಿನ ರಾಷ್ಟ್ರಾಧ್ಯಕ್ಷರಾಗಿ. ಕಾಂಗ್ರೆಸ್ ವಿಭಜನೆಯಾಗಿದ್ದೂ ಅವರ ಅವಧಿಯಲ್ಲೇ. ವೀರೇಂದ್ರ ಪಾಟೀಲರು ವಿಭಜನೆಯ ಕಾರಣಕ್ಕೇ
ಸಿಎಂ ಪಟ್ಟ ಕಳೆದುಕೊಂಡರು. ಇಲ್ಲೆಲ್ಲೂ ಹೈಕಮಾಂಡ್‌ಬಹಳ ವ್ಯವಸ್ಥಿತವಾಗಿ ಸ್ಥಳೀಯ ಭಿನ್ನಮತವನ್ನು ಹುಟ್ಟಿ ಬೆಳೆಸಿದ್ದು ಕಂಡು ಬರುವುದಿಲ್ಲ.

ಆದರೆ ಅಂತಹದ್ದೊಂದು ಪ್ರಯತ್ನ ದೇವರಾಜ ಅರಸರ ಕಾಲದಲ್ಲಿ ನಡೆಯುತ್ತದೆ. ಅದು ದೇವರಾಜ ಅರಸರ ಕಾಲವಲ್ಲ, ಇಂದಿರಾಗಾಂಧಿಯದ್ದು ಎಂಬುದನ್ನು ಸಾಬೀತುಪಡಿಸುವುದಕ್ಕಾಗಿಯೇ ನಡೆಯುತ್ತದೆ. ತುರ್ತುಸ್ಥಿತಿಯ ನಂತರ ಅಧಿಕಾರ ಕಳೆದುಕೊಳ್ಳುವ ಇಂದಿರಾಗಾಂಧಿಯವರ ಪಕ್ಷ, ಕಾಂಗ್ರೆಸ್ (ಐ)ನಲ್ಲಿ, ಇಡೀ ದೇಶದ ಪರಿಸ್ಥಿತಿಗೆ ವ್ಯತಿರಿಕ್ತವಾಗಿ ಕರ್ನಾಟಕದಲ್ಲಿ ಅತೀ ಹೆಚ್ಚು ಸಂಖ್ಯೆಯ ಎಂಪಿಗಳನ್ನು ಗೆಲ್ಲಿಸಿಕೊಟ್ಟಿದ್ದು ದೇವರಾಜ ಅರಸರು. ಸ್ವತಃ ಇಂದಿರಾಗಾಂಧಿಯವರನ್ನು ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಲೋಕಸಭೆಗೆ ಗೆಲ್ಲಿಸಿ ಕಳಿಸಿದ್ದೂ ಅವರೇ ಎಂಬಂತಾಗಿರುತ್ತದೆ. ಹೀಗಾಗಿ ’ಇಂದಿರಾಗಾಂಧಿಯವರಿಗಿಂತ ದೊಡ್ಡ ನಾಯಕರಾಗಿ ಬೆಳೆಯುವ ಮಹತ್ವಾಕಾಂಕ್ಷೆ ತೋರಿಸುತ್ತಿದ್ದಾರೆಂಬ’ ಮಾತುಗಳು ಹೈಕಮಾಂಡ್‌ಪ್ರೇರಿತ ಭಿನ್ನಮತಕ್ಕೆ ದಾರಿ ಮಾಡಿಕೊಡುತ್ತವೆ. ಅದು ಇಂದಿರಾ – ಸಂಜಯ್ ಗಾಂಧಿಯ ಆಟಾಟೋಪ ನಡೆಯುತ್ತಿದ್ದ ಕಾಲವಾಗಿತ್ತು ಮತ್ತು ಬಹುತೇಕ ಶಾಸಕರುಗಳು ದೇವರಾಜ ಅರಸರ ವಿರುದ್ಧ ನಿಲ್ಲಲು ಅದೇ ಕಾರಣವಾಗಿತ್ತು.

ಅಲ್ಲಿಂದಾಚೆಗೂ ಹಲವು ಬಾರಿ ಹೈಕಮ್ಯಾಂಡ್‌ನ ನಾಯಕರು ವರ್ಸಸ್ ರಾಜ್ಯದ ಮುಖ್ಯಮಂತ್ರಿ ಶೀತಲಸಮರ ನಡೆದ್ದಿದೆ. ರಾಮಕೃಷ್ಣ ಹೆಗಡೆಯವರು ಸಿಎಂ ಆಗಿದ್ದಾಗ, ಭಿನ್ನಮತೀಯ ನಾಯಕರಾಗಿದ್ದ ಎಚ್.ಡಿ.ದೇವೇಗೌಡರು ಜನತಾಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಂದ್ರಶೇಖರ್ ಅವರ ಜೊತೆಗೆ ಚೆನ್ನಾಗಿದ್ದರು. ಯಾವ ಮಟ್ಟಿಗೆಂದರೆ ವಿ.ಪಿ.ಸಿಂಗ್‌ರ ಜೊತೆಗೆ ಸೇರಿ ಜನತಾಪಕ್ಷವೂ ವಿಲೀನಗೊಂಡು ಬೆಂಗಳೂರಿನಲ್ಲೇ ಜನತಾದಳ ಉದಯವಾದರೂ, ದೇವೇಗೌಡರು ಮತ್ತು ಚಂದ್ರಶೇಖರ್ ಅವರು ಎಸ್‌

ಜೆಪಿ (ಸಮಾಜವಾದಿ ಜನತಾಪಕ್ಷ)ದ ಮುಖಾಂತರ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರು! (11.34% ಮತ ಪಡೆದುಕೊಂಡು ಜನತಾದಳ ತೀವ್ರ ಸೋಲನುಭವಿಸಿ, ವೀರೇಂದ್ರ ಪಾಟೀಲರ ನೇತೃತ್ವದ ಕಾಂಗ್ರೆಸ್ 178 ಸ್ಥಾನ ಗೆಲ್ಲಲು ಕಾರಣವಾಗಿದ್ದರು). ಅದೇನೇ ಇದ್ದರೂ ಹೆಗಡೆ ಮತ್ತು ದೇವೇಗೌಡರ ನಡುವಿನ ಭಿನ್ನಮತವು ಇಲ್ಲೇ ಹುಟ್ಟಿದ್ದು. ಹಾಗೆ ನೋಡಿದರೆ ಚಂದ್ರಶೇಖರ್ ಅವರು ಕರ್ನಾಟಕದ ಜನತಾಪರಿವಾರದ ಆಗುಹೋಗುಗಳನ್ನು ನಿರ್ಧರಿಸುವಷ್ಟು ಅಥವಾ ಅಲುಗಾಡಿಸುವಷ್ಟು ಶಕ್ತಿ ಹೊಂದಿರಲಿಲ್ಲ.

 

ಆದರೆ ಹೈಕಮಾಂಡ್‌ಸ್ಥಳೀಯ ಭಿನ್ನಮತವನ್ನು ಪೋಷಿಸಿ ಬೆಳೆಸಿದ್ದು ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ. ವೀರೇಂದ್ರ ಪಾಟೀಲರ ವಿರುದ್ಧ ಪ್ರಬಲ ಭಿನ್ನಮತವೂ ಇರಲಿಲ್ಲ, ಅವರು ರಾಜೀವ್‌ಗಾಂಧಿಗೆ ತೊಡಕೂ ಆಗಿರಲಿಲ್ಲ. ಆದರೂ ಪಾರ್ಶ್ವವಾಯು ಪೀಡಿತರಾದ ಪಾಟೀಲರನ್ನು ನೋಡಲು ಬಂದ ರಾಜೀವ್‌ಗಾಂಧಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ಬದಲಿಸುವ ಮಾತಾಡಿ ಹೋಗಿದ್ದರು. 178 ಎಂಎಲ್‌ಎಗಳಿದ್ದ ಕರ್ನಾಟಕದ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕಿತ್ತುಹಾಕಿ, ಸರ್ಕಾರ ಅಲುಗಾಡಿಸಬಲ್ಲಷ್ಟು ಭಿನ್ನಮತೀಯರೇನೂ ಇರಲು ಸಾಧ್ಯವಿರಲಿಲ್ಲ. ಆದರೆ ಸಚಿವ ಸ್ಥಾನದ ಆಕಾಂಕ್ಷಿಗಳಂತೂ ವಿಪರೀತ ಇದ್ದರು.

ಬಂಗಾರಪ್ಪನವರು ಮುಖ್ಯಮಂತ್ರಿಯಾದಾಗ ಭಾರೀ ಗಾತ್ರದ ಸಂಪುಟ ರಚಿಸಿದರೂ, ಎಲ್ಲರನ್ನೂ ತೃಪ್ತಿಪಡಿಸುವುದು ಅಸಾಧ್ಯವಾಗಿತ್ತು. ಆ ಹೊತ್ತಿಗೆ ರಾಜೀವ್‌ಗಾಂಧಿ ಹತ್ಯೆಯೂ ಆಗಿ, ಪಿಎಂ ಹಾಗೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಪಿ.ವಿ.ನರಸಿಂಹರಾವ್‌ಗೂ ಬಂಗಾರಪ್ಪನವರಿಗೂ ಹೊಂದಾಣಿಕೆ ಕುದುರಲಿಲ್ಲ. ಹಾಗಾಗಿ ಒಂದೆಡೆ ಕೆಪಿಸಿಸಿ ಅಧ್ಯಕ್ಷರಾಗಿ ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ವಿ.ಕೃಷ್ಣರಾವ್ ಅವರನ್ನು ಕೂರಿಸಿದ್ದಲ್ಲದೇ, ಇಲ್ಲಿನ ಭಿನ್ನಮತವನ್ನು ಹತ್ತಿಕ್ಕಲು ಪ್ರಯತ್ನಿಸದೆ ಅದನ್ನು ಬೆಂಬಲಿಸಿದರು. ಬಂಗಾರಪ್ಪನವರ ಸಂಪುಟದಲ್ಲಿ ಸಚಿವರಾಗಿದ್ದ ವೀರಪ್ಪ ಮೊಯ್ಲಿ ’ಮೇಜರ್ ಸರ್ಜರಿ’ ಆಗಬೇಕೆಂಬ ಹೇಳಿಕೆ ನೀಡಿದರು ಮತ್ತು ಅದರಂತೆ ಬಂಗಾರಪ್ಪನವರನ್ನು ಇಳಿಸಲಾಯಿತು.

ಆ ರೀತಿಯಲ್ಲಿ ಮತ್ತೆ ಹೈಕಮ್ಯಾಂಡ್‌ಗಳು ವರ್ತಿಸಲು ಬೇಕಾದಷ್ಟು ಪ್ರಬಲವಾಗಿ ಎಂದೂ ಇರಲಿಲ್ಲ, ಮೋದಿ ಅಮಿತ್ ಶಾ ಬಿಜೆಪಿ ಮೇಲೆ ಹಾಗೂ ಸರ್ಕಾರದ ಮೇಲೆ ಅಧಿಪತ್ಯ ಸ್ಥಾಪಿಸುವವರೆಗೆ.

ಹಾಗಾಗಿ ಸ್ಥಳೀಯ ಭಿನ್ನಮತವನ್ನು ಹೇಗೋ ಮ್ಯಾನೇಜ್ ಮಾಡುವುದೋ, ಕಾಲ ನೂಕುವುದೋ ಮಾಡಬಹುದಿತ್ತೇ ಹೊರತು ತಾವೇ ಪೋಷಿಸಿದರೆ ಎಡವಟ್ಟಾಗುವ ಸಾಧ್ಯತೆಯೇ ಹೆಚ್ಚಿತ್ತು. ಅಂತಹ ಪ್ರಯತ್ನ ಯಡಿಯೂರಪ್ಪನವರು ಮೊದಲ ಸಾರಿ ಮುಖ್ಯಮಂತ್ರಿಯಾಗಿದ್ದಾಗ ನಡೆಯಿತು. ಆದರೆ ಆಗಲೂ ಅದು ಸ್ಥಳೀಯ ಭಿನ್ನಮತವನ್ನು ಮುಂದಿಟ್ಟುಕೊಂಡು ನಡೆದಿದ್ದಲ್ಲ; ಬದಲಿಗೆ ಯಡಿಯೂರಪ್ಪನವರ ಮೇರೆ ಮೀರಿದ ಭ್ರಷ್ಟಾಚಾರವು, ’ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು’ ಅಡ್ಡಿಯಾಗುತ್ತದೆಂಬ ಕಾರಣಕ್ಕೆ ಅಂದಿನ ಬಿಜೆಪಿಯ ನಾಯಕರಾಗಿದ್ದ ಅಡ್ವಾಣಿ ಭಾವಿಸಿದ್ದ ಕಾರಣಕ್ಕೆ ನಡೆಯಿತು.

ಅದರಲ್ಲೂ ಸಿಎಂ ನೇರವಾಗಿ ಜೈಲಿಗೆ ಹೋಗುವ ಸನ್ನಿವೇಶ ನಿರ್ಮಾಣವಾಗಿದ್ದರಿಂದ ಬೇರೆ ದಾರಿಯೂ ಇರಲಿಲ್ಲ.
ಹಾಗಿದ್ದೂ ಬದಲಿಸಿದ ಇಬ್ಬರೂ ಮುಖ್ಯಮಂತ್ರಿಗಳನ್ನು – ಮೊದಲು ಸದಾನಂದ ಗೌಡರು, ನಂತರ ಜಗದೀಶ್ ಶೆಟ್ಟರ್ – ಆಯ್ಕೆ ಮಾಡಿದ್ದು ಸ್ವತಃ ಯಡಿಯೂರಪ್ಪನವರೇ ಆಗಿದ್ದರು. ಆದರೆ ಈಗಿನ ಭಿನ್ನಮತದ ಸ್ವರೂಪ ಆ ರೀತಿಯದ್ದಲ್ಲವೇ ಅಲ್ಲ. ಯಾವ ಕಡೆಯಿಂದ ನೋಡಿದರೂ, ಅದಕ್ಕೆ ದೆಹಲಿಯ ಹೈಕಮಾಂಡ್‌ನ ಟಾಪ್ ಐವರಲ್ಲಿ ಒಬ್ಬರಾಗಿರುವ ಬಿ.ಎಲ್.ಸಂತೋಷ್ ಅವರ ಕುಮ್ಮಕ್ಕು ಇರುವುದು ಎದ್ದು ಕಾಣುತ್ತದೆ. ಅಂಥದ್ದೇನೂ ಇಲ್ಲವೆಂದು ನಿರಾಕರಿಸುವ ಕೆಲಸವನ್ನು ಔಪಚಾರಿಕವಾಗಿಯೂ ಯಾರೂ ಮಾಡಿಲ್ಲ. ಏಕೆಂದರೆ, ಅಂತಹ ನೇರ ಪ್ರಶ್ನೆಯನ್ನು ಯಾರೂ ಯಡಿಯೂರಪ್ಪನವರಿಗಾಗಲೀ, ಬಿ.ಎಲ್.ಸಂತೋಷ್ ಅವರಿಗಾಗಲೀ ಕೇಳಿದಂತಿಲ್ಲ. ದೆಹಲಿಗೆ ’ಸಂತೋಷ’ವಾಗಿಲ್ಲ ಎಂದಷ್ಟೇ ಬರೆಯುವುದಕ್ಕೆ ನಮ್ಮ ದಿನಪತ್ರಿಕೆಗಳೂ ಸೀಮಿತವಾಗಿವೆ.

ಅಂತಹ ದೊಡ್ಡ ಪ್ರಭಾವವೇನೂ ಇಲ್ಲದ ಬಸನಗೌಡ ಯತ್ನಾಳ್ ನಿರಂತರವಾಗಿ ಯಡಿಯೂರಪ್ಪನವರ ಕುರಿತು ವಾಚಾಮಗೋಚರವಾಗಿ ಬಯ್ದರೂ ಇದುವರೆಗೆ ಅವರ ವಿರುದ್ಧ ಕ್ರಮ ಆಗದೇ ಇರುವುದು ಏನನ್ನು ತೋರಿಸುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ವಿರೋಧ ಪಕ್ಷಗಳವರೂ ಹೆದರುವಂತಹ ಘಾತುಕ ಲೀಡರ್‌ಶಿಪ್ ಹೊಂದಿರುವ ಬಿಜೆಪಿ ಪಕ್ಷದೊಳಗೆ ಹೈಕಮಾಂಡ್‌ನ ಬೆಂಬಲವಿಲ್ಲದೇ, ಇಂತಹ ’ಅಶಿಸ್ತ’ನ್ನು ತೋರಿಸಲು ಹೇಗೆ ಸಾಧ್ಯವಾಗುತ್ತದೆ ಎಂಬುದೂ ಸರ್ವವಿದಿತ. ಅಶಿಸ್ತಿನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ್ದು ಪಕ್ಷವೇ ಹೊರತು ಸರ್ಕಾರವಲ್ಲ. ಕರ್ನಾಟಕದಲ್ಲಿ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತೋಷ್ ಅವರದ್ದೇ ಕ್ಯಾಂಡಿಡೇಟು. ಈಶ್ವರಪ್ಪನವರು ಹಿಂದೊಮ್ಮೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಶುರು ಮಾಡಿದ್ದೂ ಅಲ್ಲದೇ, ಬೇಕಾದಾಗ ಬೇಕಾದ ರೀತಿಯಲ್ಲಿ ನಡೆದುಕೊಳ್ಳುತ್ತಲೇ, ಪಕ್ಷ ನಿಷ್ಠೆಯ ಜಪ ಮಾಡುತ್ತಾರೆ. ಸಚಿವರೊಬ್ಬರು ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವಂತಹ ವಿಶೇಷ ಘಟನೆ ಇನ್ನು ಯಾವಾಗಲೂ ನಡೆದಂತಿಲ್ಲ. ಹಾಗಾಗಿಯೇ ಕರ್ನಾಟಕದ ಬಿಜೆಪಿಯೊಳಗಿನ ಭಿನ್ನಮತಕ್ಕೆ ಮೇಲಿನವರ ಬೆಂಬಲವಿದೆ ಎಂಬುದು ಎದ್ದು ಕಾಣುತ್ತಿದ್ದರೂ, ಮಧ್ಯೆ ಮಧ್ಯೆ ಯಡಿಯೂರಪ್ಪನವರೇ ನಮ್ಮ ನಾಯಕರು ಎಂಬ ಮಂತ್ರವೂ ಸಂಬಂಧಪಟ್ಟವರಿಂದ ಉದುರುತ್ತಿರುತ್ತದೆ.

PC : Prajavani

ಇದಕ್ಕೆ ಕಾರಣವೂ ಸ್ಪಷ್ಟವಿದೆ. ಯಡಿಯೂರಪ್ಪನವರು ಯಾರ ಅಂಕೆಗೂ ಸಿಗದ ನಾಯಕರಾಗಿ ಬೆಳೆಯುವುದು ಬಿಜೆಪಿಯ ದೊಡ್ಡವರಿಗೆ ಇಷ್ಟವಿಲ್ಲ. ಯಡಿಯೂರಪ್ಪನವರಿಗೆ ವಿಜಯೇಂದ್ರ ಉತ್ತರಾಧಿಕಾರಿ ಇರಬಹುದಾದರೂ, ಕರ್ನಾಟಕದ ಸಿಎಂ ಪಟ್ಟಕ್ಕೆ ವಿಜಯೇಂದ್ರ ಬಿಜೆಪಿಯ ದೃಷ್ಟಿಯಿಂದ ಉತ್ತರಾಧಿಕಾರಿ ಅಲ್ಲ ಎಂಬುದೂ ಬಿಜೆಪಿ ಹೈಕಮ್ಯಾಡ್‌ನ ತೀರ್ಮಾನವಾಗಿದೆ. ಆದರೆ ಯಡಿಯೂರಪ್ಪನವರನ್ನು ಕಳೆದುಕೊಂಡರೆ ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ವಿಶೇಷ ಬುದ್ಧಿಮತ್ತೆಯ ಅಗತ್ಯವಿಲ್ಲ. ಇವೆರಡರ ನಡುವಿನ ಬ್ಯಾಲೆನ್ಸ್ ಎಲ್ಲಿ ಎಂಬುದರ ಕುರಿತು ಹೈಕಮಾಂಡ್‌ನ ವಿವಿಧ ಧುರೀಣರಲ್ಲಿ ಒಮ್ಮತವಿಲ್ಲ. ಯಡಿಯೂರಪ್ಪನವರನ್ನು ಸಂಪೂರ್ಣ ನಿವಾರಿಸಿಕೊಳ್ಳಬೇಕೆಂದು ಬಿ.ಎಲ್.ಸಂತೋಷ್‌ರ ವಾದವಾಗಿದ್ದರೆ, ಅವರಿರುವ ಅಡ್ವಾಂಟೇಜ್ ಉಳಿಸಿಕೊಂಡೇ ಮುಂದುವರೆಯಬೇಕೆಂಬುದು ಯಡಿಯೂರಪ್ಪನವರ ಪರವಾಗಿಲ್ಲದ, ಆದರೆ ಬಿಜೆಪಿಯ ಭವಿಷ್ಯದ ಕುರಿತು ಆತಂಕ ಹೊಂದಿರುವ ಇತರರ ವಾದವಾಗಿದೆ. ಇದಕ್ಕೆ ಉತ್ತರ ದೊರಕಿದ ದಿನ ಯಡಿಯೂರಪ್ಪನವರ ಸಿಂಹಾಸನ ಪತನವಾಗುತ್ತದೆಂದು ತರ್ಕಿಸುವುದೂ ಸುಲಭವಲ್ಲ. ಏಕೆಂದರೆ ಸ್ವತಃ ಯಡಿಯೂರಪ್ಪನವರು ಮೊನ್ನೆ ಪತ್ರಕರ್ತರ ಮುಂದೆ ಹೇಳಿದಷ್ಟು ಸಲೀಸಾಗಿ ರಂಗಮಂಚದಿಂದ ಇಳಿದುಹೋಗುವವರಲ್ಲ.

ನಿಜವೇನೆಂದರೆ ಕರ್ನಾಟಕದ ಇಂದಿನ ರಾಜಕಾರಣಿಗಳಲ್ಲೇ ಅತ್ಯಂತ ಚಾಣಾಕ್ಷರು ಇದೇ ಯಡಿಯೂರಪ್ಪ. ವಿವಿಧ ಸಮುದಾಯಗಳನ್ನು ಗೆದ್ದುಕೊಂಡು ಸೋಷಿಯಲ್ ಇಂಜಿನಿಯರಿಂಗ್ ನಡೆಸಿದ್ದು ಕೇವಲ ಆರೆಸ್ಸೆಸ್ ಮಾತ್ರವಲ್ಲ. ಅವರ ಮೊದಲ ಅವಧಿಯಲ್ಲಿ ರಾಜ್ಯದಲ್ಲಿ ಸರ್ಕಾರೀ ಕೃಪಾಪೋಷಿತ ಸಮ್ಮೇಳನ ನಡೆಸದ ಜಾತಿಯಿಲ್ಲ, ಅನುದಾನ ಪಡೆಯದ ಮಠವಿಲ್ಲ ಎಂಬುದನ್ನು ಗಮನಿಸಬೇಕು. ಆದರೆ ಅವರ ಚಾಣಾಕ್ಷತೆ ಇರುವುದು ಇದರಲ್ಲಲ್ಲ; ಹೈಕಮಾಂಡ್‌ಅನ್ನು ನಿಭಾಯಿಸುತ್ತಿರುವ ಅವರ ವೈಖರಿಯಲ್ಲಿ ಅದನ್ನು ಕಾಣಬಹುದು. ತನ್ನ ಅಗತ್ಯ ಈ ಪಕ್ಷಕ್ಕೆ ಎಷ್ಟಿದೆ ಎಂಬುದನ್ನು ಅರಿತಿರುವ ಅವರು ಅದನ್ನು ಸಂಪೂರ್ಣ ಎನ್‌ಕ್ಯಾಶ್ ಮಾಡಿಕೊಳ್ಳುತ್ತಿದ್ದಾರೆ, ಅಕ್ಷರಶಃ ಕರ್ನಾಟಕದ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯೂ, ಅವರ ಕುಟುಂಬವೂ ಮಾಡದಷ್ಟು ಬ್ರಹ್ಮಾಂಡ ಭ್ರಷ್ಟಾಚಾರವು ಈಗ ನಡೆಯುತ್ತಿದೆ. ಮುಖ್ಯಮಂತ್ರಿ ಪಟ್ಟದ ಮೇಲೆ ಒಬ್ಬರು ಕೂತಿದ್ದಾಗ ಅವರ ಕುಟುಂಬದ ಇನ್ನೊಬ್ಬರು ತಮ್ಮದೇ ರೀತಿಯಲ್ಲಿ ಅಧಿಕಾರ ಚಲಾಯಿಸುವುದೂ ಹೊಸತೇನಲ್ಲ.

PC : ANDOLANA

ದೇವರಾಜ ಅರಸರ ಅಳಿಯ ನಟರಾಜ್‌ರಿಂದ ಹಿಡಿದು, ದೇವೇಗೌಡರ ಕುಟುಂಬದವರೆಗೆ. ಆದರೆ, ಅಕ್ಷರಶಃ ಮುಖ್ಯಮಂತ್ರಿ ಕೆಲಸ ಮತ್ತು ಕೆಲವು ಖಾತೆಗಳಿಗೆ ಮಂತ್ರಿ, ಅವರ ಮಗನೇ ಹೊರತು ಮತ್ಯಾರೂ ಅಲ್ಲ. ಆ ಎಲ್ಲಾ ಅಧಿಕಾರವನ್ನೂ ತಿಜೋರಿ ಹಿಗ್ಗಿಸಲು ಬಳಸಲಾಗುತ್ತಿದೆ. ಇದೂ ಸಹಾ ಹೈಕಮಾಂಡ್‌ನ ಕೆಲವರಿಗೆ ಅಸೂಯೆ, ಆತಂಕ ಹುಟ್ಟಿಸಿರಲಿಕ್ಕೆ ಸಾಕು. ಹೈಕಮಾಂಡ್‌ಗೆ ಇದರಲ್ಲಿ ಯಾವ ಪಾಲೂ ಸಿಗದೇ ಅಥವಾ ದೇಶದಾದ್ಯಂತ ಬಿಜೆಪಿ ಪಕ್ಷವು ಹರಿಸುತ್ತಿರುವ ಹಣದ ಹೊಳೆಗೆ ಇಲ್ಲಿಂದಲೂ ನದಿ ತಿರುಗಿಸದೇ ಇದ್ದಿದ್ದರೆ ಯಡಿಯೂರಪ್ಪನವರನ್ನು ಮುಂದುವರೆಯಲು ಬಿಡುತ್ತಿರಲಿಲ್ಲ. ಅಂತಹ ಹಲವು ದಾರಗಳು ಯಡಿಯೂರಪ್ಪನವರ ಕೈಯ್ಯಲ್ಲಿ ಇರುವುದರಿಂದಲೇ ಬೇರೆ ಸೂತ್ರದಾರರು ಅವರನ್ನು ಪತನಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಯಾವಾಗ ಇದರ ಸಮತೋಲನ ಪೂರ್ಣ ಇನ್ನೊಂದು ಕಡೆಗೆ ವಾಲುತ್ತದೋ ಅಲ್ಲಿಯವರೆಗೆ ಅವರ ಅಧಿಕಾರ ಸೇಫ್.

ದೇಶದ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಒಂದಾದ ಕರ್ನಾಟಕದ ಜನರು ಇವೆಲ್ಲದರಿಂದ ಸಂಕಷ್ಟಕ್ಕೆ ದೂಡಲ್ಪಡುತ್ತಿರುವುದು ಮಾತ್ರ ದುರಂತದ ಸಂಗತಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...