ದ್ರಾವಿಡ ಭಾಷಾ ಮೋಹಿ, ಹಿಂದಿ ಹೇರಿಕೆಯ ತೀವ್ರ ವಿರೋಧಿ, ದ್ರಾವಿಡ ಸ್ವತಂತ್ರ್ಯ ರಾಷ್ಟ್ರ ಪರಿಕಲ್ಪನೆಯನ್ನು 60 ದಶಕದಲ್ಲೇ ಪ್ರತಿಪಾದಿಸಿ ದ್ರಾವಿಡ ಸೂರ್ಯ ಎಂದೇ ಖ್ಯಾತನಾಮರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂ. ಕರುಣಾನಿಧಿಯವರು ನಮ್ಮನ್ನಗಲಿ ಎರಡು ವರ್ಷಗಳೇ ಸಂದಿದೆ.
ಆದರೆ, ಇದು ಕಾಕತಾಳೀಯವೋ ವಿಪರ್ಯಾಸವೋ ಎಂಬಂತೆ, ಹಿಂದಿ ಭಾಷಾ ವಿರೋಧಿಯಾಗಿ ಇಡೀ ದಕ್ಷಿಣ ಭಾರತದ ಪ್ರತಿನಿಧಿಯಾಗಿದ್ದ ಕರುಣಾನಿಧಿಯವರ ಹುಟ್ಟುಹಬ್ಬದ ದಿನದಂದೇ ಕೇಂದ್ರ ಸರ್ಕಾರ ಮತ್ತೆ ತ್ರಿಭಾಷಾ ನೀತಿಯನ್ನು ಜಾರಿಗೆತರುಲು ಮುಂದಾಗಿರುವುದು, ಆ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರಲು ಪ್ರಯತ್ನಿಸುತ್ತಿದೆ. ಕರುಣಾನಿಧಿ ಹಾಗೂ ತಮಿಳುನಾಡಿನಲ್ಲಿ ಹುಟ್ಟಿದ ದ್ರಾವಿಡ ಚಳುವಳಿ ಕಾರಣದಿಂದಲೇ 7 ದಶಕಗಳ ಕಾಲ ಕೇಂದ್ರ ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯನ್ನು ಕಡ್ಡಾಯ ಮಾಡಲು ಸಾಧ್ಯವಾಗಿರಲಿಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ.
ಇದನ್ನೂ ಓದಿ: ದ್ರಾವಿಡ ಚಳವಳಿ ನೇತಾರ ಅಣ್ಣಾದೊರೈ ಜನ್ಮದಿನ: #UnitedStatesOfIndia ಟ್ರೆಂಡ್
ಆದರೆ, ಇದೀಗ ದ್ರಾವಿಡ ನಾಡಲ್ಲಿ ನಾಯಕನಿಲ್ಲದ ನಿರ್ವಾತ ಸ್ಥಿತಿ ಉಂಟಾಗಿದೆ. ಪರಿಣಾಮ ಕೇಂದ್ರ ಸರ್ಕಾರ ಮತ್ತೆ ದಕ್ಷಿಣ ಭಾರತದ ಮೇಲೆ ಹಿಂದಿ ಹೇರಿಕೆಗೆ ಮುಂದಾಗಿದೆ. ಈ ನಡುವೆ ಹಿಂದಿಯನ್ನು ಒಂದು ಭಾಷೆಯಾಗಿ ಕೌಶಲವಾಗಿ ಕಲಿತರೆ ತಪ್ಪೇನು? ಎಂಬ ವಾದವೂ ನಮ್ಮ ಕನ್ನಡಿಗರ ನಡುವಿನಲ್ಲೇ ಹುಟ್ಟಿಕೊಳ್ಳುತ್ತಿರುವುದು ನಿಜಕ್ಕೂ ಆಘಾತ ಸಂಗತಿಯೇ ಸರಿ. ಏಕೆಂದರೆ ಹಿಂದಿ ಹೇರಿಕೆ ಎಂಬುದು ಇಂದು ಕೇವಲ ಭಾಷೆಯ ಕಲಿಕೆಯ ವಿಚಾರವಾಗಿರದೆ, ಒಂದು ರಾಷ್ಟ್ರ ಒಂದು ಭಾಷೆ ಹಾಗೂ ಏಕ ಸಂಸ್ಕೃತಿಯನ್ನು ಹೇರುವ ಅಘಾತಕಾರಿ ಕೃತ್ಯದ ಮೂಲಧಾತು. ಭಾರತದಂತಹ ಬಹು ಸಂಸ್ಕೃತಿಯ ರಾಷ್ಟ್ರದಲ್ಲಿ ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯೇ ಸರಿ.

ಇಂತಹ ಕಾರ್ಯಗಳಿಂದ ಭಾರತದ ಸ್ಥಳೀಯ ಪ್ರಾದೇಶಿಕ ಭಾಷೆಗಳು ಅವಸಾನದ ಹಾದಿ ಹಿಡಿಯಬೇಕಾಗುತ್ತದೆ ಎಂಬ ಕಾರಣಕ್ಕೆ ತಮಿಳುನಾಡಿನಲ್ಲಿ 30, 40 ರ ದಶಕದಲ್ಲೇ ಹಿಂದಿ ವಿರೋಧಿ ಚಳುವಳಿ, ಸ್ವತಂತ್ರ್ಯ ದ್ರಾವಿಡ ರಾಷ್ಟ್ರ ಚಳುವಳಿ ಹುಟ್ಟಿಕೊಂಡಿತ್ತು. ಚಳುವಳಿಯ ಜೊತೆಗೆ ದೊಡ್ಡ ದೊಡ್ಡ ನಾಯಕರೂ ಉದಯವಾಗಿದ್ದರು. ಈ ಚಳುವಳಿಯ ಹಿನ್ನೆಲೆ, ಪರಿಣಾಮ ಹಾಗೂ ಈ ಚಳುವಳಿ ಸೃಷ್ಟಿಸಿದ ಹೊಸ ದ್ರಾವಿಡ ರಾಜಕಾರಣದ ಪಥ ಹೀಗೆ ಎಲ್ಲಾ ಮಾಹಿತಿಯನ್ನು ಇಲ್ಲಿ ಹೆಕ್ಕಿ ನೀಡುವ ಸಣ್ಣ ಪ್ರಯತ್ನ ಇದಾಗಿದೆ.
ತಮಿಳುನಾಡಿನ ಹಿಂದಿ ವಿರೋಧಿ ಚಳುವಳಿ
ಭಾಷಾಭಿಮಾನದ ವಿಚಾರದಲ್ಲಿ ಇತರರಿಗಿಂತ ತಮಿಳುರು ತುಸು ಹೆಚ್ಚೇ ಭಾವುಕ ಜೀವಿಗಳು. ಹೊರಗಿನಿಂದ ನೋಡುವವರಿಗೆ ಅವರ ಭಾಷಾಭಿಮಾನ ಅತಿರೇಕವಾಗಿ ಕಂಡರೂ ಅತ್ಯಂತ ಪ್ರಾಚೀನ ಭಾಷೆ ಎಂಬ ಅಭಿಮಾನದಲ್ಲಿ ತಮ್ಮ ಭಾಷೆಯ ಮೇಲೆ ಅವರು ತೋರುವ ಪ್ರೀತಿ ಹಾಗೂ ಅದನ್ನು ರಕ್ಷಿಸಲು ಅವರು ತೋರುವ ಪ್ರಾಮಾಣಿಕ ಪ್ರಯತ್ನ ದೇಶದ ಎಲ್ಲಾ ಪ್ರಾದೇಶಿಕ ಭಾಷಿಕರಿಗೆ ಮಾದರಿಯಾಗಬಲ್ಲದು.
ಇದನ್ನೂ ಓದಿ: ನಂಗೆ ಹಿಂದಿ ಬರಲ್ಲ ಹೋಗ್ರಪ್ಪ: ಹಿಂದಿ ಹೇರಿಕೆಯ ವಿರುದ್ಧ ಬಹುಭಾಷ ನಟ ಪ್ರಕಾಶ್ ರಾಜ್ ದನಿ
ಮೆಟ್ರೋದಲ್ಲಿ ಹಿಂದಿ ಬರಹ ಸರಿಯಲ್ಲ. ಕನ್ನಡಿಗರ ಮೇಲೆ ಹಿಂದಿ ಹೇರಿಕೆ ತರವಲ್ಲ ಎಂದು ನಾವು ಈಗ ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದೇವೆ. ಮೈಲಿ ಕಲ್ಲುಗಳ ಹಿಂದಿ ಬರಹಕ್ಕೆ ಬಣ್ಣ ಬಳಿಯುತ್ತಿದ್ದೇವೆ. ಆದರೆ, ತಮಿಳುನಾಡಿನ ನಾಯಕರು ಸ್ವಾತಂತ್ರ್ಯಪೂರ್ವ ಕಾಲದಲ್ಲೇ ಹಿಂದಿ ಹೇರಿಕೆಯ ವಿರುದ್ಧ ಚಳುವಳಿ ನಡೆಸಿ ರೈಲ್ವೆ ನಿಲ್ದಾಣಗಳಲ್ಲಿನ ಹಿಂದಿ ಫಲಕಕ್ಕೆ ಬಣ್ಣ ಬಳಿದು ಪ್ರತಿಭಟಿಸಿದ್ದರು. 1937-38 ರಲ್ಲೇ ತಮಿಳುನಾಡಲ್ಲಿ ಹಿಂದಿ ವಿರೋಧಿ ಚಳುವಳಿಯನ್ನು ಕಟ್ಟಿದ ಕೀರ್ತಿ ಹೋರಾಟಗಾರ ದಕ್ಷಿಣ ಏಷ್ಯಾ ಸಂತ ಎಂದೇ ಬಣ್ಣಿಸಲಾಗುವ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಹಾಗೂ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಅಣ್ಣಾದುರೈ ಅವರಿಗೆ ಸಲ್ಲುತ್ತದೆ.

ತಮಿಳುನಾಡಿನಲ್ಲಿ ಭಾಷಾ ಚಳುವಳಿ ಕಟ್ಟಿ ದಕ್ಷಿಣ ಭಾರತದಲ್ಲಿ ಹೊಸ ರಾಜಕಾರಣದ ಪಥ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ಹೋರಾಟಗಾರ ರಾಮಸ್ವಾಮಿ ಪೆರಿಯಾರ್ ಎಂಬ ವ್ಯಕ್ತಿ ಓರ್ವ ಕನ್ನಡಿಗ ಎಂಬುದೇ ನಮ್ಮಲ್ಲಿ ಬಹುತೇಕರಿಗೆ ಅಪರಿಚಿತ ವಿಚಾರ.
1938ರಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿದ್ದ ಸಿ. ರಾಜಗೋಪಾಲಾಚಾರಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದಿ ಭಾಷೆಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಬಳಸಬೇಕು ಎಂಬ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಆಗಲೇ ಪೆರಿಯಾರ್, ಅಣ್ಣಾದುರೈ ಹಾಗೂ ಖ್ಯಾತ ಕವಿ ಭಾರತಿದಾಸನ್ ಇದನ್ನು ವಿರೋಧಿಸಿ ಚಳುವಳಿ ರೂಪಿಸಿದ್ದರು. ಫೆಬ್ರವರಿ 27, 1938ರಲ್ಲೇ ತಮಿಳುನಾಡಿನಲ್ಲಿ ಹಿಂದಿ ಭಾಷಾ ವಿರೋಧಿ ಸಮ್ಮೀಳನ ನಡೆಸಲಾಗಿತ್ತು. ಕಾಂಚೀಪುರಂನಲ್ಲಿ ನಡೆದ ಮೊದಲ ಹಿಂದಿ ಭಾಷೆ ವಿರೋಧಿ ಸಮ್ಮೇಳನದಲ್ಲಿ ಮಾತನಾಡುವ ಮೂಲಕ ಅಣ್ಣಾದೊರೈ ರಾಜ್ಯಾದ್ಯಂತ ದೊಡ್ಡ ಸಂಚಲನವೇ ಸೃಷ್ಟಿಮಾಡಿದ್ದರು.
ಇದನ್ನೂ ಓದಿ: ಸೆಪ್ಟಂಬರ್ 14 ಹಿಂದಿ ದಿವಸ ಆಚರಣೆಗೆ ಕನ್ನಡಿಗರ ತೀವ್ರ ವಿರೋಧ
ಈ ಸಮ್ಮೇಳನದಿಂದಾಗಿ ತಮಿಳುನಾಡಿನಾದ್ಯಂತ ಹಿಂದಿ ಹೇರಿಕೆಯ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನ ಸೃಷ್ಟಿಯಾಯಿತು. ಅದು ದೊಡ್ಡ ಮಟ್ಟದ ಹಿಂಸಾಚಾರಕ್ಕೂ ಕಾರಣವಾಗಿ ಸಂಘಟನೆಗೆ ಸೇರಿದ ನಟರಾಜನ್ ಹಾಗೂ ತಾಳಮುತ್ತು ಎಂಬುವವರು ಪೊಲೀಸರ ಥಳಿತಕ್ಕೆ ಬಲಿಯಾಗಿದ್ದರು. ಈ ಇಬ್ಬರ ಬಲಿ ಹಿಂದಿ ವಿರೋಧಿ ಚಳುವಳಿಗೆ ಬೇರೆಯದೆ ದಿಕ್ಕು ತೋರಿಸಿತು. ಪರಿಣಾಮ ಜನರ ಹೋರಾಟಕ್ಕೆ ಮಣಿದ ಮದ್ರಾಸ್ ಪ್ರಾಂತ್ಯದ ಸರ್ಕಾರ ಕೊನೆಗೂ 1940 ರಲ್ಲಿ ಈ ಆದೇಶವನ್ನು ಹಿಂತೆಗೆದುಕೊಂಡಿತ್ತು. ಆದರೆ ಈ ಪ್ರತಿಭಟನೆ ಮತ್ತಷ್ಟು ತಾರಕಕ್ಕೇರಿದ್ದು ಮಾತ್ರ 1965 ರಲ್ಲಿ.
1965 ಎಂಬ ಹೊಸ ಪರ್ವದ ಕಾಲ ಮತ್ತು ಸ್ವತಂತ್ರ್ಯ ದ್ರಾವಿಡ ರಾಷ್ಟ್ರ ಪರಿಕಲ್ಪನೆ
1965 ರಲ್ಲಿ ಪ್ರಧಾನಿ ಜವಹರ್ ಲಾಲ್ ನೆಹರು ಮರಣಾನಂತರ ಲಾಲ್ ಬಹದ್ದೂರ್ ಶಾಸ್ತ್ರಿಯವರ ಕಾಲದಲ್ಲಿ ಮತ್ತೊಮ್ಮೆ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವ ಎಲ್ಲಾ ಪ್ರಯತ್ನಗಳು ವ್ಯಾಪಕವಾಗಿ ನಡೆದಿತ್ತು. ಕಾಂಗ್ರೆಸ್‍ನ ಈ ಪ್ರಯತ್ನಕ್ಕೆ ಎಲ್ಲಾ ರಾಜ್ಯಗಳು, ಪ್ರಾದೇಶಿಕ ಪಕ್ಷಗಳು ಮೌನ ಸಮ್ಮತಿ ನೀಡಿದ್ದವು. ಆದ್ರೆ ಆ ಒಂದು ಪ್ರಾದೇಶಿಕ ಪಕ್ಷ ಮಾತ್ರ ಹಿಂದಿ ಹೇರಿಕೆಯ ವಿರುದ್ಧ ದ್ವನಿ ಎತ್ತಿತ್ತು. ಆ ಪಕ್ಷದ ಹೆಸರೇ “ದ್ರಾವಿಡ ಮುನ್ನೇಟ್ರ ಕಳಗಂ” ತಂದೈ ಪೆರಿಯಾರ್, ಅಣ್ಣಾದೊರೈ ಹಾಗೂ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಕರುಣಾನಿಧಿ ಈ ಚಳುವಳಿಯ ಮುಂಚೂಣಿ ನಾಯಕರಾಗಿದ್ದರು.

1953ರಲ್ಲೇ ಕಲ್ಲಕುಡಿ ಎಂಬ ತಮಿಳುನಾಡಿನ ಪುರಾತನ ನಗರಕ್ಕೆ ದಾಲ್ಮಿಯಾಪುರಂ (ಸಿಮೆಂಟ್ ಕಂಪೆನಿಯ ಹೆಸರು) ಎಂದು ಹೆಸರಿಡಲು ನಿರ್ಧರಿಸಿದ್ದ ಕೇಂದ್ರದ ವಿರುದ್ಧ ಈ ಮೂವರು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದ್ದರು. ಕರುಣಾನಿಧಿಯಂತೂ ರೈಲು ಹಳಿಗಳ ಮೇಲೆ ಮಲಗಿ ಪ್ರತಿಭಟಿಸಿ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿ 3 ತಿಂಗಳು ಸೆರೆವಾಸ ಅನುಭವಿಸಿದ್ದರು. ಇಂತಹ ಹೋರಾಟಗಾರರು ಇನ್ನೂ ಹಿಂದಿಯನ್ನು ರಾಷ್ಟ್ರಭಾಷೆ ಎಂದರೆ ಒಪ್ಪುವುದು ಸಾಧ್ಯವೇ. ಕೂಡಲೇ ತಮಿಳುನಾಡಿನಲ್ಲಿ ಅಣ್ಣಾದುರೈ ನೇತೃತ್ವದಲ್ಲಿ ಹಿಂದಿ ವಿರೋಧಿ ಚಳುವಳಿ ಆರಂಭವಾಗಿತ್ತು. ಆದರೆ ಅಣ್ಣಾ ಅವರ ಸೇನಾನಿಯಾಗಿ ಆ ಚಳುವಳಿ ಇಡೀ ತಮಿಳುನಾಡಿನಾದ್ಯಂತ ವ್ಯಾಪಿಸುವಂತೆ ಮಾಡಿದ್ದು ಇದೇ ಕರುಣಾನಿಧಿ.
ಇದನ್ನೂ ಓದಿ: ‘ಹಿಂದಿ ಹೇರಿಕೆಯು ಬ್ರಾಹ್ಮಣರಿಗೆ ಕುರಾನ್ ಕೊಟ್ಟಂತೆ’: ಪತ್ರಬರೆದ IRS ಅಧಿಕಾರಿ
ಕರುಣಾನಿಧಿಯವರ ಒಂದೇ ಒಂದು ಕೂಗಿಗೆ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಿಟ್ಟು ರಸ್ತೆಗಿಳಿದಿದ್ದರು. ಕೇಂದ್ರದ ವಿರುದ್ಧ ಘೋಷಣೆ ಕೂಗಿದ್ರು. ತಂಜಾವೂರು ಮಧುರೈಗಳಲ್ಲಿ ವಿದ್ಯಾರ್ಥಿಗಳ ಹೋರಾಟ ನಿಯಂತ್ರಣವನ್ನೂ ಮೀರಿತ್ತು. ಈ ಹೋರಾಟದ ಕಿಡಿ ಅಷ್ಟೇ ಶೀಘ್ರವಾಗಿ ಕೇರಳ, ಅಂಧ್ರಪ್ರದೇಶ ಹಾಗೂ ಅಂದಿನ ಮೈಸೂರು ರಾಜ್ಯಕ್ಕೂ ವ್ಯಾಪಿಸಿತ್ತು. “ದ್ರಾವಿಡ್ ಮುನ್ನೇಟ್ರ ಕಳಗಂ” ಸ್ಥಾಪಕ ಅಣ್ಣಾದುರೈ ದ್ರಾವಿಡರಿಗೆ ಪ್ರತ್ಯೇಕ ರಾಷ್ಟ್ರದ ಒತ್ತಾಯವನ್ನು ಕೇಂದ್ರದ ಮುಂದಿರಿಸಿದ್ದರು. ಹೋರಾಟ ತೀವ್ರ ಸ್ವರೂಪ ಪಡೆಯುತ್ತಿತ್ತು. ಪರಿಣಾಮ ಕೊನೆಗೂ ಮಣಿದ ಕೇಂದ್ರ ಸರ್ಕಾರ ಹಿಂದಿಯನ್ನು ರಾಷ್ಟ್ರಭಾಷೆ ಮಾಡುವ ತನ್ನ ನಿರ್ಧಾರವನ್ನು ಕೈಬಿಟ್ಟಿತ್ತು.
ಈ ಹೋರಾಟದಲ್ಲಿ ಕರುಣಾನಿಧಿ ತೋರಿಸಿದ ಬದ್ಧತೆಯನ್ನು ಗಮನಿಸಿದ್ದ ಅಣ್ಣಾದೊರೈ ಅವರಿಗೆ ಪಕ್ಷದಲ್ಲಿ ಖಜಾಂಚಿ ಸ್ಥಾನದ ಜತೆಗೆ ತನ್ನ ನಂತರದ ನಾಯಕ ಎಂದು ಬಿಂಬಿಸಿದ್ದರು. ಹಿಂದಿ ವಿರೋಧಿ ಚಳುವಳಿಯ ದೆಸೆಯಿಂದ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಿದ ಡಿಎಂಕೆ 1967 ರಲ್ಲಿ ಮೊದಲ ಬಾರಿಗೆ ಅಧಿಕಾರಿಕ್ಕೇರಿತ್ತು. ಭಾರತದಲ್ಲೇ ಕಾಂಗ್ರೆಸ್ಸೇತರ ಮೊದಲ ಬಹುಮತ ಸರ್ಕಾರ ತಮಿಳುನಾಡಿನಲ್ಲಿ ರಚನೆಯಾಗಿತ್ತು. ಅಣ್ಣಾದುರೈ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೇಗೇರಿದರೆ, ಕರುಣಾನಿಧಿ ಲೊಕೋಪಯೋಗಿ ಸಚಿವರಾದರು.
1969 ರಲ್ಲಿ ಅಣ್ಣಾದೊರೈ ಮರಣಾನಂತರ ಡಿಎಂಕೆ ಅಧ್ಯಕ್ಷನಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕರುಣಾನಿಧಿ ನಂತರ 5 ಬಾರಿ ಮುಖ್ಯಮಂತ್ರಿಯಾದದ್ದು, 19 ವರ್ಷ ಆ ಹುದ್ದೆಯನ್ನು ನಿಭಾಯಿಸಿದ್ದು, ಕಪ್ಪು ಜನರ ಪ್ರತಿನಿಧಿಯಾದದ್ದು, ಎಂಜಿಆರ್ ಜಯಲಲಿತಾ ಎಂಬ ತಾರಾ ವರ್ಚಸ್ಸಿನ ನಾಯಕರ ವಿರುದ್ಧವೂ ಪ್ರವಾಹದಲ್ಲಿ ಈಜಿ ಇಂದು ತಮಿಳರ ಎದೆಯಲ್ಲಿ ಎಂದಿಗೂ ಮರೆಯಾಗದ “ಕಲೈಜ್ಞರ್” ಎಂಬ ಬಿರುದಿನೊಂದಿಗೆ ಅಜರಾಮರವಾಗಿ ಉಳಿದಿರುವುದು ಸಾಮಾನ್ಯವಾದ ವಿಚಾರವೇನಲ್ಲ.

ಇವರು ಬದುಕಿರುವವರೆಗೆ ತಮಿಳುನಾಡು ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲಿ ಹಿಂದಿ ಕಡ್ಡಾಯ ಭಾಷೆಯಾಗದಂತೆ ನೋಡಿಕೊಂಡಿದ್ದರು. ಕೇಂದ್ರದೊಂದಿಗೆ ಸತತ ಹೋರಾಟದ ಫಲವಾಗಿ ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನು ಪಡೆದಿದ್ದರು. ತರುವಾಯ ಕನ್ನಡಕ್ಕೂ ಈ ಸ್ಥಾನಮಾನ ಲಭ್ಯವಾಗಿತ್ತು. ಆದರೆ, ಇಂದು ಇಂತಹ ಭಾಷಾ ಚಳುವಳಿಯೂ ಇಲ್ಲ, ಚಳುವಳಿಯನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸುವ ನಾಯಕತ್ವವೂ ಇಲ್ಲದಂತಾಗಿದೆ. ಪರಿಣಾಮ ಹಿಂದಿ ಹಿನ್ನೆಲೆಯ ಕೇಂದ್ರ ಸರ್ಕಾರ ದಕ್ಷಿಣ ಭಾರತದ ಮೇಲೂ ಹಿಂದಿ ಹೇರಿಕೆಗೆ ಮುಂದಾಗಿದೆ. ಇದು ಸಾಕಾರವಾದರೆ, ಮುಂದೊಂದು ದಿನ ಸ್ಥಳೀಯ ಪ್ರಾದೇಶಿಕ ಭಾಷೆಗಳು ಕಣ್ಮರೆಯಾದರೂ ಅಚ್ಚರಿ ಇಲ್ಲ. ಅಷ್ಟರೊಳಗಾಗಿ ದಕ್ಷಿಣ ರಾಜ್ಯಗಳು ಎಚ್ಚೆತ್ತು ಇದರ ವಿರುದ್ಧ ಹೋರಾಟ ರೂಪಿಸಬೇಕಿದೆ.
ಇದನ್ನೂ ಓದಿ: ನಾನು ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ: ಹಿಂದಿ ಹೇರಿಕೆ ವಿರುದ್ಧ ವಿಭಿನ್ನ ಪ್ರತಿರೋಧ


