ಉತ್ತರ ಕನ್ನಡದ ಪ್ರಸಿದ್ದ ಪ್ರವಾಸಿ ಮತ್ತು ಧಾರ್ಮಿಕ ತಾಣ ಮುರುಡೇಶ್ವರದ ಪ್ರಮುಖ ಆಕರ್ಷಣೆಯರನಿಸಿರುವ ಶಿವನ ಪ್ರತಿಮೆಯನ್ನು ವಿರೂಪಗೊಳಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಉಗ್ರವಾದಿ ಸಂಘಟನೆ ಐಎಸ್‌ಐಎಸ್ ಇಂಥದೊಂದು ಚಿತ್ರ ತನ್ನ ಆನ್ ಲೈನ್ ಮುಖವಾಣಿ ವಾಯ್ಸ್ ಆಪ್ ಹಿಂದ್‌ನಲ್ಲಿ ಪ್ರಕಟಿಸಿದೆಯೆಂದು ವ್ಯವಸ್ಥಿತವಾಗಿ ಪುಕಾರು ಹಬ್ಬಿಸಲಾಗಿತ್ತು. ಆದರೆ ವಿಶ್ವ ಪ್ರಸಿದ್ದ ಮುರುಡೇಶ್ವನ ವಿಗ್ರಹ ಭಗ್ನಗೊಳಿಸಿದ ಚಿತ್ರ ಐಸಿಸ್ ಪತ್ರಿಕೆಯಲ್ಲಿ ಬಂದಿಲ್ಲವೆಂಬುದು ಬಹಿರಂಗವಾಗಿದೆ. ಕಳೆದ ಅಸೆಂಬ್ಲಿ ಚುನಾವಣೆ ಬಳಿಕ ಶಾಂತವಾಗಿರುವ ಕರಾವಳಿಯನ್ನು ಕದಡಿ ಮುಂಬರುವ ಚುನಾವಣೆಗೆ ತಯಾರಿಗೆ ಮತಾಂಧ ಶಕ್ತಿಗಳು ನಡೆಸಿರುವ ಹುನ್ನಾರವಿದು ಎಂಬ ಅಭಿಪ್ರಾಯ ವ್ಯಾಪಕವಾಗಿ ಮೂಡಿದೆ.
ಇದಕ್ಕೊಂದು ಹಿನ್ನಲೆಯೂ ಇದೆ. ಕೆಲ ತಿಂಗಳ ಹಿಂದೆ ಭಾರತದಲ್ಲಿ ಐಸಿಸ್‌ನ ಮುಖವಾಣಿಯಾಗಿರುವ ವಾಯ್ಸ್ ಆಫ್ ಹಿಂದ್‌ನ ಸಂಪರ್ಕದಲ್ಲಿದ್ದಾರೆ ಎಂಬ ಆರೋಪದಲ್ಲಿ ದೇಶದ ಹಲವೆಡೆ ದಾಳಿ ಮಾಡಿ ಕೆಲವರನ್ನು ಬಂಧಿಸಲಾಗಿತ್ತು. ಇದರಲ್ಲಿ ಭಟ್ಕಳದ ಯುವಕನೊಬ್ಬನಿದ್ದ. ಇದನ್ನು ಬಳಸಿಕೊಂಡು ಭಟ್ಕಳ ತಾಲೂಕಿನ ಮುರುಡೇಶ್ವರದ ಶಿವನ ಮೂರ್ತಿಯನ್ನು ಐಸಿಸ್‌ನವರು ವಿಕಾರಗೊಳಿಸಿ ಪ್ರಕಟಿಸಿದ್ದಾರೆಂದು ಸುಳ್ಳು ಪ್ರಚಾರ ಮಾಡಲು ಪ್ರಯತ್ನಿಸಲಾಗಿದೆ ಎನ್ನಲಾಗಿದೆ. ವಾಯ್ಸ್ ಆಫ್ ಹಿಂದ್‌ನಲ್ಲಿ ಬಂದಿದೆಯೆಂಬಂತೆ ‘ಸೃಷ್ಟಿಸಲಾದ’ ಚಿತ್ರದಲ್ಲಿ ಶಿವನ ಶಿರವನ್ನು ಛೇದಗೊಳಿಸಿ ಅಲ್ಲಿ ಐಸಿಸ್ ಬಾವುಟ ಹಾರಿಸಲಾಗಿತ್ತು. ಅಲ್ಲದೆ ತಪ್ಪು ದೇವರನ್ನು ಒಡೆಯುವ ಸಮಯ ಬಂದಿದೆಯೆಂದು ಬರೆಯಲಾಗಿತ್ತು. ಆದರೆ ಅಂತಹ ಯಾವ ಘಟನೆಯೂ ಮುರುಡೇಶ್ವರದಲ್ಲಿ ನಡೆದಿಲ್ಲ. ಕೇವಲ ಫೋಟೊಶಾಪ್ ಮಾಡಿ ಹರಿಯಬಿಡಲಾಗಿತ್ತು.
ವಾಯ್ಸ್ ಆಫ್ ಹಿಂದ್‌ನಲ್ಲಿ ಇಂತಹ ಫೋಟೋ ಆಗಲಿ ಒಕ್ಕಣಿಕೆಯಾಗಲಿ ಬಂದಿಲ್ಲವೆಂದು ಉತ್ತರ ಕನ್ನಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಧೃಡಪಡಿಸದ್ದಾರೆ. ಯಾವ ಮೂಲದಿಂದ ಇದನ್ನು ಹರಿಬಿಡಲಾಗಿದೆಯೆಂಬುದನ್ನು ಹುಡುಕಲಾಗುತ್ತಿದೆ: ಸೈಬರ್ ಕ್ರೈಮ್ ಪೊಲೀಸರ ನೆರವು ಪಡೆಲಾಗುತ್ತಿದೆ ಎಂದು ಹೇಳಿದ್ದಾರೆ. ಕಳೆದ ಫೆಬ್ರವರಿಯಲ್ಲೇ ಮುರುಡೇಶ್ವರದ ವಿಶ್ವ ವಿಖ್ಯಾತ 123 ಅಡಿಯ ಶಿವ ಪ್ರತಿಮೆಯನ್ನು ವಿರೂಪಗೊಳಿಸಿದಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠಾಪಿಸಲಾಗಿತ್ತೆಂಬ ಮಾಹಿತಿ ಪೊಲೀಸರಿಗೆ ದೊರಕಿದೆ ಎನ್ನಲಾಗಿದೆ. ಶಿವನ ಮೂರ್ತಿ ಭಗ್ನಗೊಳಿಸಿದಂತೆ ಚಿತ್ರ ರೂಪಿಸಿ, ಪ್ರಚೋದನಾತ್ಮಕ ಬರಹ ಹಾಕಿದ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗಿದು ಪಕ್ಕಾ ಆಗಿದೆ.
ಕೆಲವು ದಿನಗಳ ಹಿಂದೆ ಮಡಿಕೇರಿಯಲ್ಲಿ ನಡೆದ ಪ್ರತಿಭಟನೆಯೊಂದರ ಹೊತ್ತಲ್ಲಿ “ಅಂಬೇಡ್ಕರ್ ಜಿಂದಾಬಾದ್ ಎಂದು ಹಾಕಿದ ಘೋಷಣೆಯನ್ನು ತಿರುಚಿ ಪಾಕಿಸ್ತಾನ್ ಜಿಂದಾಬಾದ್” ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಈ ಪ್ರಕರಣದಲ್ಲಿ ಓರ್ವ ಪತ್ರಕರ್ತನೂ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು. ಇದರ ಬೆನ್ನಿಗೆ ಮುರುಡೇಶ್ವರ ಪ್ರತಿಮೆ ವಿರೂಪ ಪ್ರಕರಣ ನಡೆದಿರುವುದರ ಹಿಂದೆ ರಾಜಕೀಯ ಹಿಕಮತ್ತು ಅಡಗಿದೆಯೆಂಬ ಚರ್ಚೆ ಹಟ್ಟುಹಾಕಿದೆ. ಮುಂದಿನ ಒಂದು ವರ್ಷ ಚುನಾವಣಾ ವರ್ಷವಾಗಿರುವುದರಿಂದ ಕರಾವಳಿಯಲ್ಲಿ ಆತಂಕ ಶುರುವಾಗಿದೆ.
ಮೊದಲು ವಿವಿಧ ಜಾತಿ-ಕೋಮುಗಳ ನಡುವೆ ಮನಸ್ತಾಪ ಉಂಟಾಗುವಂತ ಕೃತಕ ಚಿತ್ರ, ಪ್ರಚೋದನಾತ್ಮಕ ಬರಹ ತಯಾರಿಸಿ ಅದನ್ನು ನೈಜವೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು, ನಂತರ ಮುಖ್ಯವಾಹಿನಿಯ ಮಾದ್ಯಮಗಳಲ್ಲಿ ಸುದ್ದಿ ಬರುವಂತೆ ನೋಡಿಕೊಳ್ಳುವುದು ಎಲೆಕ್ಷನ್ ತಂತ್ರಗಾರಿಕೆ ಎಂಬ ಮಾತು ಕೇಳಿಬರುತ್ತಿದೆ!



So this is the latest method to get votes