ಕನ್ನಡದ ಜನಪರ ನಟ ಚೇತನ್ ಟ್ವೀಟ್‌ನಲ್ಲಿ ಹೊಸದೇನನ್ನೂ ಹೇಳಿಲ್ಲ. ಆದರೆ ಅವರು ಬ್ರಾಹ್ಮಣ್ಯದ ವಿರುದ್ಧ ಸದಾ ದನಿಯೆತ್ತುತ್ತಿದ್ದರು. ಹಾಗಾಗಿ ಅವರ ಮೇಲೆ ಸುಳ್ಳು ಸಾಕ್ಷಿ ಸೃಷ್ಟಿಸಿ, ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಸಲಾಗಿದೆ. ಏಕೆಂದರೆ ಕೇಶವ ಕೃಪಾದ ನೆರಳೂ ನ್ಯಾಯಾಂಗದ ಮೇಲೆಯೂ ಬಿದ್ದಿದೆ. ಕೋರ್ಟುಗಳು ಜನರ ವೈರಿಗಳಾಗುತ್ತಿವೆ ಮತ್ತು ಕೋರ್ಟುಗಳು ಜನರನ್ನು ಹಾಗೂ ಸಂವಿಧಾನವನ್ನು ನಿಂದನೆ ಮಾಡುತ್ತಿವೆ. ಚೇತನ್ ಬಂಧನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಈ ಕೂಡಲೆ ಅವರ ಮೇಲಿನ ಪ್ರಕರಣ ವಾಪಸ್ ಪಡೆಯಬೇಕು ಮತ್ತು ಸುಳ್ಳು ಸಾಕ್ಷಿ ಸೃಷ್ಟಿ ಮಾಡಿದ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸಬೇಕು. ಇದಕ್ಕಾಗಿ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗೋಣ”. ಇವಿಷ್ಟು ನಟ ಚೇತನ್ ಬಿಡುಗಡೆಗೆ ಒತ್ತಾಯಿಸಿ ಬೆಂಗಳೂರಿನ ಅಲುಮ್ನಿ ಸಭಾಂಗಣದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಕೇಳಿಬಂದ ಅಭಿಪ್ರಾಯಗಳು ಮತ್ತು ಹಕ್ಕೊತ್ತಾಯಗಳು.
ಹಿರಿಯ ವಕೀಲ್ ಎಸ್. ಬಾಲನ್ ಮಾತನಾಡಿ, “ಟ್ವೀಟ್ ಮಾಡಿದ ಕಾರಣಕ್ಕೆ ಈ ದೇಶದಲ್ಲಿ ಹಲವಾರು ನ್ಯಾಯಾಂಗ ನಿಂದನೆ ಪ್ರಕರಣಗಳು ದಾಖಲಾಗಿವೆ. ಆದರೆ ಚೇತನ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ ತಮಿಳುನಾಡಿನಲ್ಲಿ ಪೆರಿಯಾರ್ ವಿರುದ್ಧ ಸಹ ಈ ಪ್ರಕರಣ ದಾಖಲಿಸಲಾಗಿತ್ತು. ಈಗ ಚೇತನ್ ಕರ್ನಾಟಕದ ಪೆರಿಯಾರ್ ಆಗಿದ್ದಾರೆ. ಅವರನ್ನು ಯಾವುದೇ ಕಾನೂನುಗಳನ್ನು ಪಾಲಿಸದೇ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ದೂರದಾರ ಇನ್ಸ್‌ಪೆಕ್ಟರ್ ತಾನೇ ಬಂಧಿಸಿ, ತಾನೇ ವಿಚಾರಣೆ ನಡೆಸಿರುವುದು ಕಾನೂನಿನ ಉಲ್ಲಂಘನೆ. ಮನೆಯವರಿಗೂ ತಿಳಿಸದೆ ಅಕ್ರಮವಾಗಿ ಬಂಧಿಸಿ ಯಾರಿಗೂ ತಿಳಿಯದ ಸ್ಥಳದಲ್ಲಿಟ್ಟು ಕಾನೂನು ಉಲ್ಲಂಘಿಸಿದ್ದಾರೆ. ಅವರಿಗೆ ತಡವಾಗಿ ಜಾಮೀನು ಸಿಗುವಂತೆ, ಸಿಕ್ಕರೂ ಬಿಡುಗಡೆ ಮಾಡದಂತೆ ಷಡ್ಯಂತ್ರ ಹೆಣೆಯಲಾಗಿದೆ. ಇದೆಲ್ಲವೂ ಜನಪರ ಚಳವಳಿಗಳನ್ನು ಬೆದರಿಸುವ ಭಾಗವಾಗಿದೆ” ಎಂದರು.
ನಾಳೆ ಚೇತನ್ ಬಿಡುಗಡೆಯಾದ ನಂತರ ಅವರ ಮೇಲಿನ ಸುಳ್ಳು ಬಂಧನ ಮತ್ತು ಅಕ್ರಮ ಬಂಧನದ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬೇಕು. ಎರಡನೇಯದಾಗಿ ಕಾನೂನು ಉಲ್ಲಂಘನೆ ಮಾಡಿರುವ ಇನ್ಸ್‌ಪೆಕ್ಟರ್ ರವಿ ವಿರುದ್ದ ಕಮಿಷನರ್‌ಗೆ ದೂರು ದಾಖಲಿಸಿ ಬೇರೆ ಪೊಲೀಸ್ ಠಾಣೆಯಿಂದ ಸ್ವತಂತ್ರ ತನಿಖೆಗೆ ಒತ್ತಾಯಿಸಬೇಕು. ಮೂರನೇಯದಾಗಿ ಹೈಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಬೇಕು. ಈ ಪ್ರಕರಣದಲ್ಲಿ ರಾಜ್ಯವು ಸುಳ್ಳು ದೂರು ದಾಖಲಿಸಿರುವುದರಿಂದ ರಾಜ್ಯವೇ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಬೇಕು ಎಂದರು.
ಹಿರಿಯ ದಲಿತ ಮುಖಂಡರಾದ ಗೋಪಾಲ್‌ರವರು ಮಾತನಾಡಿ, “ಚೇತನ್‌ರವರು ಜೈಲಿನಲ್ಲಿ ಅನಿಲೇಶನ್ ಆಫ್ ಕ್ಯಾಸ್ಟ್ ಪುಸ್ತಕ ಓದುತ್ತಿದ್ದಾರೆ. ಜೈಲಿನಿಂದ ಹೊರಬಂದ ನಂತರ ಜಾತಿವಿನಾಶಕ್ಕಾಗಿ ಖಂಡಿತ ಹೋರಾಡಲಿದ್ದಾರೆ. ನಾವೆಲ್ಲರೂ ಅವರ ಜೊತೆಗೆ ನಿಲ್ಲೋಣ” ಎಂದರು.
ಚಿಂತಕರಾದ ಶಿವಸುಂದರ್ ಮಾತನಾಡಿ, “ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರ ಪ್ರಕರಣದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಯ ವಿರುದ್ಧ 17 ಜನ ಸಾಮಾಜಿಕ ಕಾರ್ಯಕರ್ತರು ಮತ್ತು 21 ಸಂಘಟನೆಗಳು ಹೈಕೋರ್ಟ್‌ಗೆ ಪತ್ರ ಬರೆದಿದ್ದವು. ತದನಂತರ ಅಪರ್ಣ ಭಟ್ ಎಂಬುವವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಮತ್ತು ಮಹಿಳಾ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ಒಂದು ಬಹಿರಂಗ ಪತ್ರ ಬರೆದರು. ಆಗ ಸುಪ್ರೀಂ ಕೋರ್ಟ್‌ನಿಂದ ಹೈಕೋರ್ಟ್‌ಗೆ ಒಂದು ಪತ್ರ ಬರೆಯಲಾಯಿತು. ಆಗ ಕರ್ನಾಟಕ ಸರ್ಕಾರವೇ ಅರ್ಜಿ ಹಾಕಿ ಕೃಷ್ಣ ದೀಕ್ಷಿತ್ ಅವರ ಹೇಳಿಕೆಗಳನ್ನು ತೆಗೆಯಲು ಮನವಿ ಮಾಡಿತ್ತು. ಅದನ್ನು ತೆಗೆಯಲಾಗಿದೆ. ಹೀಗಿರುವಾಗ ಆ ಕುರಿತು ಟ್ವೀಟ್ ಮಾಡಿದ್ದ ಚೇತನ್ ಮೇಲೆ ಎರಡು ವರ್ಷದ ನಂತರ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಿರುವುದು ಜನಪರ ದನಿಗಳನ್ನು ಹತ್ತಿಕ್ಕುವ ಸ್ಪಷ್ಟ ಎಚ್ಚರಿಕೆ ಬಿಟ್ಟರೆ ಬೇರೇನೂ ಅಲ್ಲ” ಎಂದರು.
“ಇಂಗ್ಲೆಂಡ್‌ನಲ್ಲಿನ ಕೆಲ ಪತ್ರಿಕೆಗಳು ನ್ಯಾಯಾಧೀಶರ ಕುರಿತು ಯು ಓಲ್ಡ್ ಫೂಲ್ (ಮುದುಕ ಮೂರ್ಖರು ನೀವು), ಎನಿಮೀಸ್ ಆಫ್ ದಿ ಪೀಪಲ್ (ಜನರ ಶತ್ರುಗಳು) ಎಂದು ಬರೆದಿದ್ದಾಗಲೇ ಅವುಗಳ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಲ್ಲ. ಆದರೆ ಭಾರತದಲ್ಲಿ ಜನಪರ ಹೋರಾಟಗಾರರ ಮೇಲೆ ಅದನ್ನು ಬೇಕಾಬಿಟ್ಟಿ ಬಳಸಲಾಗುತ್ತಿದೆ. ಇನ್ನೊಂದೆಡೆ ಸ್ವದೇಶಿ ಜಾಗರಣ್ ಮಂಚ್‌ನ ಅಧ್ಯಕ್ಷ ಎಸ್ ಗುರುಮೂರ್ತಿಯಂತವರು, ಅರುಣ್ ಜೇಟ್ಲಿಯಂತವರು ಮತ್ತು ವಿವೇಕ್ ಅಗ್ನಿಹೋತ್ರಿಯಂತಹ ಸಂಘ ಪರಿವಾರದ ಮುಖಂಡರು ನೇರಾನೇರ ಕೋರ್ಟ್‌ಗಳನ್ನು ಬೈಯ್ದಿದ್ದಾರೆ. ಕೋರ್ಟ್‌ಗಳ ಮೇಲೆ ಆರೋಪ ಮಾಡಿದ್ದಾರೆ. ಆದರೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಏಕೆಂದರೆ ಇಂದು ನ್ಯಾಯಾಂಗವೂ ಕೇಸರಿಕರಣಗೊಂಡಿದೆ” ಎಂದು ಆತಂಕ ವ್ಯಕ್ತಪಡಿಸಿದ ಅವರು ನಾವು ಹೆಚ್ಚು ಹೆಚ್ಚು ಮಾತನಾಡಬೇಕು, ಹೆಚ್ಚು ಹೆಚ್ಚು ಜೈಲಿಗೆ ಹೋಗಲು ಸಿದ್ಧರಾಗಬೇಕು. ಇದು ಮಾತ್ರವೇ ನಮ್ಮ ಮುಂದಿರುವ ಪರಿಹಾರವಾಗಿದೆ ಎಂದರು.
ಕರ್ನಾಟಕ ಜನಶಕ್ತಿಯ ಮಲ್ಲಿಗೆ ಮಾತನಾಡಿ, “ಇಂದು ರಾಜ್ಯದಲ್ಲಿ ಮೊದಲ ತಲೆಮಾರಿನ ಮತಗಳನ್ನು ಬಾಚಿಕೊಳ್ಳಲು ಇಲ್ಲದ ಹಿಜಾಬ್ ವಿವಾದವನ್ನು ಮುನ್ನೆಲೆಗೆ ತರಲಾಗಿದೆ. ಎಲ್ಲೆಡೆ ಕೋಮು ದಳ್ಳೂರಿಗಳನ್ನು ಬಿತ್ತಲಾಗುತ್ತಿದೆ. ನಮ್ಮ ಕರ್ನಾಟಕವನ್ನು ಉತ್ತರ ಪ್ರದೇಶದಂತೆ ಮಾಡಲು ಯತ್ನಿಸಲಾಗುತ್ತಿದೆ. ಇದರ ಭಾಗವಾಗಿ ಚೇತನ್ ರಂತೆ ಬ್ರಾಹ್ಮಣ್ಯದ ವಿರುದ್ಧ ಮಾತನಾಡುವವರನ್ನು, ಸತ್ಯ ಹೇಳುವವರನ್ನು ಜೈಲಿಗೆ ಹಾಕಲಾಗುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಬೇಕಿದೆ. ಹಾಗಾಗಿ ರಾಜ್ಯದ ಎಲ್ಲಾ ಎಲ್ಲಾ ಸಚಿವರನ್ನು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಒತ್ತಡ ಹೇರಬೇಕಿದೆ. ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟವನ್ನು ಉಳಿಸಿಕೊಳ್ಳಲು ಒಗ್ಗಟ್ಟಿನ ಪ್ರಯತ್ನ ಮಾಡೋಣ ಎಂದರು.
ಒಟ್ಟಾರೆ ಸಭೆಯಲ್ಲಿ “ಚೇತನ್ ಬಂಧನ ಬಹಳ ಆಘಾತಕಾರಿಯಾಗಿದ್ದು, ಕರ್ನಾಟಕದಲ್ಲಿರುವ ದಲಿತ, ಬಹುಜನರ ಪರವಾಗಿರುವ ದನಿಗಳನ್ನು ಅಡಗಿಸುವ ಪ್ರಯತ್ನವಾಗಿದೆ. ಇದರ ವಿರುದ್ಧ ಎಲ್ಲಾ ಜನಪರ ಸಂಘಟನೆ, ವ್ಯಕ್ತಿಗಳು ಸೇರಿ ಒಗ್ಗೂಡಿ ಚೇತನ್ ಮೇಲಿನ ಪ್ರಕರಣವನ್ನು ಬೇಷರತ್ ಆಗಿ ಸರ್ಕಾರ ವಾಪಸ್ ಪಡೆಯಬೇಕೆಂದು ಆಗ್ರಹ ಹೇರಬೇಕಿದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಮಂತ್ರಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಲು ಉನ್ನತ ಮಟ್ಟದ ಗಣ್ಯ ಹೋರಾಟಗಾರರ ಸಮಿತಿ ಮಾಡಲು ತೀರ್ಮಾನ ಮಾಡಲಾಯಿತು.
ಸಭೆಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಮೇಘ, ಜ್ಯೋತಿ ಅನಂತ ಸುಬ್ಬರಾವ್, ಹೋರಾಟಗಾರರಾದ ಡಿ.ರಾಜಗೋಪಾಲ್, ವಕೀಲರಾದ ನರಸಿಂಹಮೂರ್ತಿ, ಅನಂತ್ ನಾಯಕ್, ಪತ್ರಕರ್ತರಾದ ನವೀನ್ ಸೂರಿಂಜೆ, ದೊಡ್ಡಿಪಾಳ್ಯ ನರಸಿಂಹ ಮೂರ್ತಿ ಸೇರಿದಂತೆ ಹಲವರಿದ್ದರು.
ಇದನ್ನೂ ಓದಿ: ನಟ ಚೇತನ್ ಟ್ವೀಟ್‌ನಲ್ಲಿ ತಪ್ಪೇನಿದೆ? ದನಿಯೆತ್ತಿದ ನಟಿ ರಮ್ಯಾ ದಿವ್ಯಸ್ಪಂದನ



Arrest this semi crack Kerala Kutti also and kick him to Kerala where number of issues of left paty