Homeಕರ್ನಾಟಕಮುಸ್ಲಿಮರ ನರಮೇಧಕ್ಕೆ ಎಬಿವಿಪಿ ಸದಸ್ಯೆ ಕರೆ; ಕಾನೂನು ಕ್ರಮ ಜರುಗಿಸುವುದಾಗಿ ವಿಜಯಪುರ ಎಸ್‌ಪಿ ಪ್ರತಿಕ್ರಿಯೆ

ಮುಸ್ಲಿಮರ ನರಮೇಧಕ್ಕೆ ಎಬಿವಿಪಿ ಸದಸ್ಯೆ ಕರೆ; ಕಾನೂನು ಕ್ರಮ ಜರುಗಿಸುವುದಾಗಿ ವಿಜಯಪುರ ಎಸ್‌ಪಿ ಪ್ರತಿಕ್ರಿಯೆ

- Advertisement -
- Advertisement -

ಸಂಘಪರಿವಾರದ ಸದಸ್ಯೆ ಪೂಜಾ ವೀರಶೆಟ್ಟಿ ಎಂಬವರು ಮುಸ್ಲಿಮರ ನರಹತ್ಯೆಗೆ ವಿಜಯಪುರ ಜಿಲ್ಲೆಯಲ್ಲಿ ಕರೆ ನೀಡಿರುವ ವಿಡಿಯೊ ವೈರಲ್‌ ಆಗಿದ್ದು, “ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಯುವತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಪ್ರಕರಣ ಸಂಬಂಧ ‘ನಾನುಗೌರಿ.ಕಾಂ’ ತಂಡವು ಹಲವು ಬಾರಿ ಎಚ್.ಡಿ.ಆನಂದಕುಮಾರ್‌ ಅವರನ್ನು ಸಂಪರ್ಕಿಸಲು ಯತ್ನಿಸಿತ್ತು. ಆದರೆ ಅವರು ಪ್ರತಿಕ್ರಿಯೆಗೆ ಲಭ್ಯವಾಗಿರಲಿಲ್ಲ. ಇಂದು ಸಂಪರ್ಕಕ್ಕೆ ಸಿಕ್ಕಿದ ಅವರು, ‘ನಾನುಗೌರಿ.ಕಾಂ’ನೊಂದಿಗೆ ಮಾತನಾಡಿದರು. “ಕಾನೂನು ತಜ್ಞರ ಬಳಿ ಮಾತನಾಡುತ್ತಿದ್ದೇವೆ. ಅವರ ಅಭಿಪ್ರಾಯ ತೆಗೆದುಕೊಂಡು ಸೂಕ್ತ ಕ್ರಮ ಜರುಗಿಸಲಾಗುತ್ತದೆ” ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

“ಯಾರೂ ಈವರೆಗೆ ದೂರು ನೀಡಿಲ್ಲ” ಎಂದು ಅವರು ತಿಳಿಸಿದಾಗ, “ಸುಮೊಟೊ ಪ್ರಕರಣವಾದರೂ ದಾಖಲಾಗಬಹುದಿತ್ತು. ಕ್ಷುಲ್ಲಕ ಟ್ವೀಟ್‌ವೊಂದಕ್ಕೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅವರ ಮೇಲೆ ಪ್ರಕರಣ ದಾಖಲಾಗಿದೆ. ಕರ್ನಾಟಕದಂತಹ ರಾಜ್ಯದಲ್ಲಿ ಮುಸ್ಲಿಮರ ನರಹತ್ಯೆಗೆ ಕರೆ ನೀಡಲಾಗಿದೆ. ಹರಿದ್ವಾರದಲ್ಲಿ ನರಹತ್ಯೆಗೆ ಕರೆ ನೀಡಿದ ಬಳಿಕ ಕರ್ನಾಟಕದಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಘನತೆ ಹಾಳಾಗುತ್ತಿದೆಯಲ್ಲ” ಎಂದು ಪೊಲೀಸ್ ವರಿಷ್ಠಾಧಿಕಾರಿಯವರ ಗಮನ ಸೆಳೆಯಲಾಯಿತು. “ಈ ಕುರಿತು ತನಿಖೆಯಾಗುತ್ತಿದೆ. ತಜ್ಞರ ಅಭಿಪ್ರಾಯ ತೆಗೆದುಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?

ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಖಂಡಿಸಿ ವಿಜಯಪುರ ನಗರದಲ್ಲಿ ಬಜರಂಗದಳ, ವಿಎಚ್‌ಪಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ವಿಜಯಪುರ ಎಬಿವಿಪಿ ಪ್ರತಿನಿಧಿ ಪೂಜಾ ವೀರಶೆಟ್ಟಿಯವರು ಕೋಮು ಸೌಹಾರ್ದತೆ ಕದಡಲು ಯತ್ನಿಸಿದ್ದರು.

ಇದನ್ನೂ ಓದಿರಿ: ಶಿವಮೊಗ್ಗ: 7 ವರ್ಷಗಳ ಹಿಂದೆ ಕೊಲೆಯಾದ ಬಜರಂಗದಳ ಕಾರ್ಯಕರ್ತನ ತಾಯಿ ಬದುಕು ಬೀದಿಪಾಲು!

“ನಾವು ಭಾರತದವರು ಎಂಥವರು ಎಂದರೆ ನೀರು ಬೇಡ ಎಂದರೆ ಪಾನಕ ಕೊಡ್ತೀವಿ. ಹಾಲು ಬೇಡ ಅಂದರೆ ಮಜ್ಜಿಗೆ ಕೊಡ್ತೀವಿ. ನೀವು ಏನಾದರೂ ಭಾರತವನ್ನು ಹಿಜಾಬ್‌ಮಯ ಮಾಡಲು ಬಂದರೆ ಶಿವಾಜಿ ಕೈಯಲ್ಲಿನ ಕತ್ತಿ ತಗೊಂಡು ಇಂಚಿಂಚೇ ಕಡಿಯುತ್ತೇವೆ” ಎಂದು ಪ್ರಚೋದನಕಾರಿಯಾಗಿ ಪೂಜಾ ಮಾತನಾಡಿದ್ದರು.

“ಹರ್ಷಾ ಕೊಲೆ ಆರೋಪಿಗಳನ್ನು ಪೊಲೀಸರು 24 ತಾಸುಗಳಲ್ಲಿ ಬಂಧಿಸಿರುವುದು ಖುಷಿ ನೀಡಿದೆ. ಆದರೆ, ಬರಿ ಆರೋಪಿಗಳ ಬಂಧನವಾದರೆ ಸಾಲದು, ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಿಮ್ಮ ಕೈಯಲ್ಲಿ ಆಗದಿದ್ದರೆ ನಮ್ಮ ಕೈಗೆ 24 ತಾಸು ಅಲ್ಲ, ಒಂದು ತಾಸು ಅಧಿಕಾರ ಕೊಟ್ಟು ನೋಡಿ, ಆರು ಜನ ಅಲ್ಲ, ಅರವತ್ತು ಸಾವಿರ ಹಿಜಾಬ್‌ಗಳನ್ನು …” ಎಂದು ಪ್ರಚೋದಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ. (ಹೀಗೆ ಹೇಳಿದ ತಕ್ಷಣ ಪಕ್ಕದಲ್ಲಿದ್ದ ಮಹಿಳೆಯೊಬ್ಬರು ಪೂಜಾ ವೀರಶೆಟ್ಟಿಯರಿಗೆ ಭಾಷಣ ನಿಲ್ಲಿಸುವಂತೆ ಕೈ ಸನ್ನೆ ಮಾಡುತ್ತಾರೆ. ಪೂಜಾ ಭಾಷಣ ಕೇಳಿ ಪ್ರತಿಭಟನೆಯಲ್ಲಿದ್ದವರು ಉದ್ಘಾರ ಮಾಡುತ್ತಾರೆ).

ಪೂಜಾ ವೀರಶೆಟ್ಟಿ ವಿಡಿಯೊ ವೈರಲ್‌ ಆಗಿದ್ದು, ಆಲ್ಟ್‌ನ್ಯೂಸ್‌ನ ಸಹ ಸಂಸ್ಥಾಪಕರಾದ ಜುಬೈರ್ ಟ್ವೀಟ್‌ ಮಾಡಿದ್ದಾರೆ. “ಡಿಸೆಂಬರ್ 2021ರಲ್ಲಿ ಹರಿದ್ವಾರದಲ್ಲಿ ನರಮೇಧದ ಕರೆ ನಂತರ, ಬಲಪಂಥೀಯ ಗುಂಪಿನಿಂದ ಕರ್ನಾಟಕದಲ್ಲಿ ಮುಸ್ಲಿಂ ಜನಾಂಗೀಯ ಹತ್ಯೆಗೆ ಮತ್ತೊಂದು ಕರೆಯನ್ನು ಬಹಿರಂಗವಾಗಿ ನೀಡಲಾಗಿದೆ” ಎಂದು ಅವರು ವಿಷಾದಿಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿರುವ ದುರ್ಗಾ ವಾಹಿನಿ ಮುಖಂಡರಾದ ಮಂಚಾಲೇಶ್ವರಿ ತೋಣಶ್ಯಾಳ, ‘ಕೇಂದ್ರ, ರಾಜ್ಯದಲ್ಲಿ ನಮ್ಮದೇ ಬಿಜೆಪಿ ಸರ್ಕಾರಗಳಿದ್ದರೂ ಹಿಂದೂಗಳು ಬೀದಿಯಲ್ಲಿ ಹೆಣ ಇಟ್ಟುಕೊಂಡು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿರುವುದು ನಾಚಿಕೆ ಸಂಗತಿಯಾಗಿದೆ‘ ಎಂದಿದ್ದರು.

‘ಹಿಂದೂ ಯುವಕರನ್ನು ಪೋಸ್ಟ್‌ಮಾರ್ಟ್ಂಗೆ ಹಚ್ಚಿದ ಮತಾಂಧರ ಪೋಸ್ಟ್‌ಮಾರ್ಟ್ಂ ಆಗಬೇಕು. ಆಗ ಹಿಂದೂಗಳಿಗೆ ನ್ಯಾಯ ಸಿಗುತ್ತದೆ’ ಎಂದು ಹೇಳಿಕೆ ನೀಡಿದ್ದರು. “ರಾಜ್ಯದಲ್ಲಿ ಹಿಂದೂಗಳ ಒಂದೇ ಒಂದು ಕೂದಲು ಕೊಂಕಾಗದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೋಡಿಕೊಳ್ಳುವ ಭರವಸೆ ನೀಡಬೇಕು. ನಿಮಗೆ ಆ ತಾಕತ್ತು, ದಮ್‌ ಇಲ್ಲವಾದರೆ ಒಮ್ಮೆ ಉತ್ತರಪ್ರದೇಶಕ್ಕೆ ಹೋಗಿ ಯೋಗಿ ಆದಿತ್ಯಾನಾಥ ಅವರ ಬಳಿ ತರಬೇತಿ ಪಡೆದುಕೊಂಡು ಬನ್ನಿ” ಎಂದು ಸಲಹೆ ನೀಡಿದ್ದರು.

“ಹಿಂದೂಗಳು ರಕ್ತ ಹರಿಸಿ ನಿಮ್ಮನ್ನು ಅಧಿಕಾರದ ಗದ್ದುಗೆ ಮೇಲೆ ಕೂರಿಸಿರುವುದು ಆಪರೇಷನ್‌ ಕಮಲ ಮಾಡಲಿ ಎಂದಲ್ಲ. ನಮ್ಮ ಆಸೆ ಬಿಜೆಪಿ ಬಾವುಟ ಹಾರಿಸಬೇಕು ಎಂಬುದಲ್ಲ, ಕೇಸರಿ ಬಾವುಟ ಹಾರಿಸಬೇಕು ಎಂಬುದಾಗಿತ್ತು” ಎಂದು ತಿಳಿಸಿದ್ದರು.

ಪೊಲೀಸರಿಂದ ಕ್ರಮ ಯಾವಾಗ?

ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರಿಗೆ ಸಂಬಂಧಿಸಿದಂತೆ ಒಂದು ಟ್ವೀಟ್‌ ಮಾಡಿದ ಕಾರಣಕ್ಕೆ ನಟ ಚೇತನ್ ಅಹಿಂಸಾ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಯಿತು. “ಚೇತನ್‌ ಅಹಿಂಸಾ ಅವರು ಕೋಮುಗಳ ನಡುವೆ ಗಲಭೆಗೆ ಪ್ರಚೋದಿಸಿದ್ದಾರೆ, ನ್ಯಾಯಾಂಗದ ಮೇಲೆ ಅಪನಂಬಿಕೆ ಉಂಟು ಮಾಡಲು ಯತ್ನಿಸಿದ್ದಾರೆಂದು ಆರೋಪಿಸಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಬಹಿರಂಗವಾಗಿ ಒಂದು ಸಮುದಾಯದ ವಿರುದ್ಧ ದ್ವೇಷ ಕಾರುತ್ತಿರುವವರ ಕುರಿತು ಪೊಲೀಸ್ ಇಲಾಖೆ ಯಾವ ಕ್ರಮ ಜರುಗಿಸಿದೆ” ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಪ್ರಕರಣ ಸಂಬಂಧಿಸಿದಂತೆ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿಯವರು ಪ್ರತಿಕ್ರಿಯೆ ನೀಡಿದ್ದು, ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.


ಇದನ್ನೂ ಓದಿರಿ: ಹರ್ಷನ ಜೀವಕ್ಕಿರುವ ಬೆಲೆ ದಲಿತ ವ್ಯಕ್ತಿ ದಿನೇಶನ ಜೀವಕ್ಕಿಲ್ಲವೇ?: ಸುನಿಲ್ ಬಜಿಲಕೇರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...